ಕರ್ನಾಟಕದಲ್ಲಿ ಗೆದ್ದು ದಾಖಲೆ ಬರೆಯಲಿದೆಯಾ ಕಾಂಗ್ರೆಸ್?

ಬೆಂಗಳೂರು, ಮಾರ್ಚ್ 29: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಕಲರವ ಜೋರಾಗಿದೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಮತ್ತಷ್ಟು ಅಬ್ಬರದೊಂದಿದೆ ಪ್ರಚಾರಕ್ಕೆ ಇಳಿದಿವೆ. ಇವೆಲ್ಲದರ ನಡುವೆ ಈ ಬಾರಿ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆಯಾ ಅಥವಾ ಅತಂತ್ರ ವಿಧಾನಸಭೆಯೋ ಎಂಬ ಪ್ರಶ್ನೆ ಉದ್ಭವಿಸಿದೆ.
ಇಲ್ಲಿಯವರೆಗೆ ಮೂರು ಸಮೀಕ್ಷೆಗಳು ಬಂದಿದ್ದು ಇದರಲ್ಲಿ ಎರಡು ಸಮೀಕ್ಷೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಹೇಳಿವೆ. ಒಂದು ಮಾತ್ರ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಹೇಳಿದೆ.
ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ ಸಿದ್ದರಾಮಯ್ಯ
ಒಂದೊಮ್ಮೆ ಆಡಳಿತರೂಢ ಕಾಂಗ್ರೆಸ್ ನಿಜವಾಗಿಯೂ ಅಧಿಕಾರಕ್ಕೆ ಬಂದಲ್ಲಿ 1985ರ ನಂತರ ಮೊದಲ ಬಾರಿಗೆ ಆಡಳಿತರೂಢ ಪಕ್ಷವೊಂದು ಅಧಿಕಾರಕ್ಕೆ ಬಂದಂತೆ ಆಗಲಿದೆ. ಈ ದಾಖಲೆ ಬರೆಯಲು ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರು ತುದಿಗಾಲ ಮೇಲೆ ನಿಂತಿದ್ದರೆ, ಈ ನಾಗಾಲೋಟಕ್ಕೆ ತಡೆ ಹಾಕಬೇಕು ಎಂದು ಬಿಜೆಪಿ ಹೊರಟಿದೆ.
ಸಿ-ಪೋರ್ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ 126ಸ್ಥಾನಗಳು ಸಿಗಲಿವೆ ಎಂದು ಹೇಳಿದೆ. 2013ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಇದರ ಅರ್ಥ. ವಿಶೇಷ ಎಂದರೆ ಇದೇ ಸಂಸ್ಥೆ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. 119-120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಅದರಂತೆ ಕಾಂಗ್ರೆಸ್ 122 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ 2008ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಇದೇ ಸಮೀಕ್ಷೆ ಹೇಳಿತ್ತು. ಹಾಗಾಗಿ ಈ ಬಾರಿಯೂ ಈ ಸಂಸ್ಥೆಯ ಸಮೀಕ್ಷೆ ನಿಜವಾಗಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸಿ-ಫೋರ್ ಸಮೀಕ್ಷೆ: 126 ಸ್ಥಾನಗಳಲ್ಲಿ ಕಾಂಗ್ರೆಸಿಗೆ ಗೆಲುವು
ಆದರೆ ಉಳಿದೆರಡು ಸಂಸ್ಥೆಗಳು ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ, ಜೆಡಿಎಸ್ ನಿರ್ಣಾಯಕ ಪಕ್ಷವಾಗಲಿದೆ ಎಂದು ಹೇಳಿವೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇಲ್ಲಿ ಪ್ರಬಲ ಪೈಪೋಟಿ ಇದೆ. ಆದರೆ ಇಬ್ಬರಿಗೂ ಬಹುಮತ ಸಿಗುವುದಿಲ್ಲ ಎಂದು ಸಿಎಚ್ಎಸ್ ಸಮೀಕ್ಷೆ ಹೇಳಿದೆ. ಕಾಂಗ್ರೆಸ್ 77-81, ಬಿಜೆಪಿ 73-76 ಮತ್ತು ಜೆಡಿಎಸ್ 64-66 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಿಎಚ್ಎಸ್ ಸಮೀಕ್ಷೆ ಹೇಳಿದೆ.
ಇನ್ನು ಟಿವಿ9 - ಸಿ ವೋಟರ್ ಸಮೀಕ್ಷೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನಗಳನ್ನು ನೀಡಿದೆ, ಆದರೆ ಬಹುಮತ ಸಿಗುವುದು ಕಷ್ಟ ಎಂದು ಹೇಳಿದೆ. ಕಾಂಗ್ರೆಸ್ 102, ಬಿಜೆಪಿ 92 ಮತ್ತು ಜೆಡಿಎಸ್ 25 ಸ್ಥಾನಗಳನ್ನು ಗೆಲ್ಲಲಿದೆ ಎಂದು ಇದು ಹೇಳಿದೆ.