Priyanka Gandhi V/s Amit Shah: ಕದನ ಕಣ ಬೆಂಗಳೂರು ದಕ್ಷಿಣದಲ್ಲಿ ಪ್ರಿಯಾಂಕಾ ಗಾಂಧಿ, ಅಮಿತ್ ಶಾ ಮುಖಾಮುಖಿ!
ಬೆಂಗಳೂರು, ಏಪ್ರಿಲ್. 23: ಎರಡನೇ ಹಂತದ ಮತದಾನಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಮತದಾರರನ್ನು ತಮ್ಮ ಪಕ್ಷದ ಪರವಾಗಿ ಸೆಳೆಯಲು ಎಲ್ಲಾ ಕಸರತ್ತು ಮಾಡುತ್ತಿವೆ. ಇಂದು, ಎರಡು ಪಕ್ಷಗಳ ದೊಡ್ಡ ನಾಯಕರು ಈ ಬಾರಿ ಸಕತ್ ಹೈವೋಲ್ಟೇಜ್ ಕಣವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳನ್ನು ನಡೆಸಲಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ಅಮಿತ್ ಶಾ ಇಬ್ಬರು ಕೂಡ ಒಂದೇ ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

ರಾಜಕೀಯ ಪಕ್ಷಗಳು ಹಂಚಿಕೊಂಡ ವೇಳಾಪಟ್ಟಿಯ ಪ್ರಕಾರ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಚಿತ್ರದುರ್ಗ ಮತ್ತು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಭೆಗಳನ್ನು ನಡೆಸಲಿದ್ದು, ಅಮಿತ್ ಶಾ ಕೂಡ ಅದೇ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಮತ ಮತ್ತು ಬೆಂಬಲವನ್ನು ಕೋರಲಿದ್ದಾರೆ.
ಚಿತ್ರದುರ್ಗ ಕ್ಷೇತ್ರದಲ್ಲಿ 73 ವರ್ಷದ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ ವಿರುದ್ಧ 68 ವರ್ಷದ ಬಿಎನ್ ಚಂದ್ರಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಚಂದ್ರಪ್ಪ ಅವರು ಈ ಹಿಂದೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಈಗ ಸಂಸತ್ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಕರ್ನಾಟಕ ಘಟಕದ ಪ್ರಕಾರ, ಪ್ರಿಯಾಂಕಾ ಗಾಂಧಿ ಅವರು ಜಿಲ್ಲಾ ಕೇಂದ್ರವಾದ ಚಿತ್ರದುರ್ಗದ ಓಲ್ಡ್ ಮಿಡಲ್ ಸ್ಕೂಲ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇನ್ನು, ಬಿಜೆಪಿ ಸಂಸದ ಮತ್ತು ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಟಫ್ ಫೈಟ್ ಕೊಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರನ್ನು ಬೆಂಬಲಿಸಿ ಸಂಜೆ ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ಆಟದ ಮೈದಾನ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಮಾತನಾಡಲಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮೈದಾನದಲ್ಲಿ ಸಂಜೆ 6 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ.

ಮತ್ತೊಂದೆಡೆ, ಅದೇ ಸಮಯದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ರೋಡ್ ಶೋ ನಿಗದಿಯಾಗಿದೆ. ಹೀಗಾಗಿ ಇಬ್ಬರು ಘಟಾನುಘಟಿ ನಾಯಕರು ಮುಖಾಮುಖಿಯಾಗಲಿದ್ದಾರೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ಸೌಮ್ಯ ರೆಡ್ಡಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದು, ರಾಜ್ಯದ ಸಿಎಂ, ಡಿಸಿಎಂ ಜೊತೆಗೆ ರಾಷ್ಟರೀಯ ನಾಯಕರು ಅವರಿಗೆ ಸಾಥ್ ನೀಡಿದ್ದಾರೆ.
ಎರಡನೇ ಹಂತದ ಮತದಾನವು 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 89 ಕ್ಷೇತ್ರಗಳಲ್ಲಿ ಏಪ್ರಿಲ್ 26 , 2024 ರಂದು ನಡೆಯಲಿದೆ.












Click it and Unblock the Notifications