ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್ ಅಧಿಕಾರಿ ಡಿಕೆ ರವಿ ಸಾವು : ಪ್ರಮುಖ ಬೆಳವಣಿಗೆಗಳು

|
Google Oneindia Kannada News

ಬೆಂಗಳೂರು, ಮಾ. 17 : ರಿಯಲ್‌ ಎಸ್ಟೇಟ್‌ ಮಾಫಿಯಾ ಹಾಗೂ ಅಕ್ರಮ ಮರಳು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಕುಣಿಗಲ್ ಸಮೀಪದ ಹುಲಿಯೂರುದುರ್ಗ ಮೂಲದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ (35) ಅವರು ಸೋಮವಾರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು. [ಈ ಸಾವು ನ್ಯಾಯವೇ ಮತಹಾಕಿ]

ಕೋರಮಂಗಲ ಬಳಿಯ ತಾವರೆಕೆರೆ ರಸ್ತೆಯಲ್ಲಿರುವ ಪ್ರೆಸ್ಟೀಜ್ ಗ್ರೂಪ್‌ಗೆ ಸೇರಿದ 'ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್'ನಲ್ಲಿ ಸೋಮವಾರ ಸಂಜೆ ಡಿ.ಕೆ.ರವಿ ಅವರ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯಿಂದ ಡಿ.ಕೆ.ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದರು. ಮಂಗಳವಾರ ನಡೆದ ಪ್ರಮುಖ ಬೆಳವಣಿಗೆಗಳ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ ನೋಡಿ..... [ಡಿಕೆ ರವಿ ನಿಗೂಢ ಸಾವು, ತನಿಖೆ ಹೇಗೆ?]

ಸಮಯ 7.11 : ಡಿಕೆ ರವಿ ಅವರ ಪಾರ್ಥಿವ ಶರೀರ ಹುಟ್ಟೂರು ದೊಡ್ಡಕೊಪ್ಪಲಿಗೆ ಆಗಮಿಸಿದೆ. 10 ಸಾವಿರಕ್ಕೂ ಅಧಿಕ ಜನರು ಅಲ್ಲಿ ಸೇರಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸಮಯ 7.03 : ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಹೇಳಿದ್ದಾರೆ.

ಸಮಯ 6.42 : ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಂತ್ಯಕ್ರಿಯೆಗೆ ಕೋಲಾರದ ಮಣ್ಣನ್ನು ಬಳಸುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಅಭಿಮಾನಿಗಳು ಕೋಲಾರದ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಸಮಯ 6.36 : ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಧರಣಿನಿರತರೊಂದಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಾತುಕತೆ ನಡೆಸುತ್ತಿದ್ದಾರೆ.

ಸಮಯ 6.18 : ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ಸಿಟಿ ರವಿ, ಶಾಸಕರಾದ ಪ್ರಿಯ ಕೃಷ್ಣ ಮುಂತಾದವರು ಡಿಕೆ ರವಿ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ.

ಸಮಯ 6 ಗಂಟೆ : ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ದೊಡ್ಡಕೊಪ್ಪಲು ಗ್ರಾಮದಲ್ಲಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಮಯ 5.40 : ದೊಡ್ಡಕೊಪ್ಪಲು ಗ್ರಾಮದಲ್ಲಿ ಡಿಕೆ ರವಿ ಅವರ ಸಹೋದರ ಅಂತ್ಯಕ್ರಿಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

ಸಮಯ 5.20 : ಕಲವೇ ಕ್ಷಣದಲ್ಲಿ ಡಿಕೆ ರವಿ ಅವರ ಪಾರ್ಥಿವ ಶರೀರ ಹುಲಿಯೂರು ದುರ್ಗ ತಲುಪಲಿದೆ. ಸಾವಿರಾರು ಜನರು ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆಯಲು ಕಾಯುತ್ತಿದ್ದಾರೆ.

dk ravi kunigal

ಸಮಯ 5 ಗಂಟೆ : ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿವೆ. ಧರಣಿ ಹಿನ್ನಲೆಯಲ್ಲಿ ವಿಧಾನಸಭೆ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಗಿದೆ.

ಸಮಯ 4.28 : ಬೆಂಗಳೂರಿನಿಂದ ಹೊರಟ ಡಿಕೆ ರವಿ ಅವರ ಪಾರ್ಥಿವ ಶರೀರ ಕುಣಿಗಲ್ ತಲುಪಿದೆ. ಕುಣಿಗಲ್‌ನಲ್ಲಿ ಕೆಲವು ಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಲಕ್ಷಾಂತರ ಜನರು ಕುಣಿಗಲ್‌ನಲ್ಲಿ ಅಂತಿಮ ದರ್ಶನಕ್ಕಾಗಿ ಕಾದು ನಿಂತಿದ್ದಾರೆ. [ಡಿಕೆ ರವಿ ಊರು ದೊಡ್ಡಕೊಪ್ಪಲು ಗ್ರಾಮಕ್ಕೆ ದಾರಿ]

ಸಮಯ 4 ಗಂಟೆ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ತಿರಮಣಹಳ್ಳಿಯಲ್ಲಿ ಡಿಕೆ ರವಿ ಅವರ ಅಭಿಮಾನಿ ಗೋಪಾಲ (40) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವಿ ಅವರ ಸಾವಿನಿಂದ ಮನನೊಂದ ಗೋಪಾಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]

ಸಮಯ .3.55 : 'ಡಿಕೆ ರವಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ' ಎಂದು ಅವರ ಮಾವ ಹನುಮಂತರಾಯಪ್ಪ ಹೇಳಿದ್ದಾರೆ. ಅವರನ್ನು ನಾವು ಅಳಿಯನಂತೆ ನೋಡುತ್ತಿರಲಿಲ್ಲ, ಮನೆ ಮಗನಂತೆ ಇದ್ದರು ಎಂದು ಹೇಳಿರುವ ಅವರು, ರವಿ ಅವರ ಮೊಬೈಲ್ ಕರೆಗಳನ್ನು ಪರಿಶೀಲಿಸಿ ತನಿಖೆ ನಡೆಸಿದರೆ ಸತ್ಯ ಹೊರಗೆ ಬರುತ್ತದೆ' ಎಂದು ಮಾಧ್ಯಮಗಳಿಗೆ ತಿಳಿಸಿದರು.

ಸಮಯ 3.40 : ವಿ.ಸೋಮಣ್ಣ ಆರೋಪ ಮಾಡಿದ್ದು ಯಾವ ಸಚಿವರ ವಿರುದ್ಧ?, ಆ ಸಚಿವರು ಯಾರು? ಎಂಬ ಚರ್ಚೆ ಕರ್ನಾಟಕದಲ್ಲಿ ಈಗ ಮನೆಮಾತಾಗಿದೆ.

ಸಮಯ 3.35 : 'ಡಿಕೆ ರವಿ ಅವರ ಮೇಲೆ ರಾಜ್ಯದ ಪ್ರಭಾವಿ ಸಚಿವರೊಬ್ಬರು ಒತ್ತಡ ಹೇರಿದ್ದರು' ಎಂದು ಬಿಜೆಪಿ ಸದಸ್ಯ ವಿ.ಸೋಮಣ್ಣ ವಿಧಾನಪರಿಷತ್ತಿನಲ್ಲಿ ಹೇಳಿದರು. 'ಸಚಿವರು 40 ಕೋಟಿ ತೆರಿಗೆ ಕಟ್ಟಬೇಕಾಗಿತ್ತು, ಅದನ್ನು ಸಚಿವರು ಒತ್ತಡ ಹೇರಿ 40 ಲಕ್ಷ ಪಾವತಿಸುವಂತೆ ಮಾಡಿದರು, ಸಚಿವರ ಒತ್ತಡವೇ ರವಿ ಅವರ ಸಾವಿಗೆ ಕಾರಣವಾಯಿತೇ?' ಎಂದು ಪ್ರಶ್ನಿಸಿರುವ ಸೋಮಣ್ಣ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಸಮಯ 3.30 : ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವಿನ ಪ್ರಕರಣ ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ. ಡಿಕೆ ರವಿ ಅವರ ಸಾವು ಕರ್ನಾಟಕ ಸರ್ಕಾರದ ದೊಡ್ಡ ವೈಫಲ್ಯ ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಜೋಶಿ ಲೋಕಸಭೆಯಲ್ಲಿ ಒತ್ತಾಯಿಸಿದ್ದಾರೆ.

ಸಮಯ 3.10 : ಡಿಕೆ ರವಿ ಆತ್ಮಹತ್ಯೆಯಲ್ಲ ಕೊಲೆ, ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಹೇಳಿದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.

dk ravi house bangalore

ಸಮಯ 3 ಗಂಟೆ : ಡಿಕೆ ರವಿ ಅವರ ಮೃತದೇಹವನ್ನು ತುಮಕೂರು ಜಿಲ್ಲೆಯ ದೊಡ್ಡಕೊಪ್ಪಲುಗೆ ತೆಗೆದುಕೊಂಡು ಹೋಗಲಾಗುತ್ತಿದೆ. ದೊಡ್ಡಕೊಪ್ಪಲುವಿನಲ್ಲಿರುವ ಡಿಕೆ ರವಿ ಅವರ ಜಮೀನಿನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಮಯ 2.30 : ಕೋಲಾರ ಜಿಲ್ಲೆ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಡಿಕೆ ರವಿಅವರಿಗೆ ಅಂತಿಮ ನಮನ ಸಲ್ಲಿಸುವಾಗ ಬಿಕ್ಕಿ ಬಿಕ್ಕಿ ಅತ್ತರು.

ಸಮಯ 2.15 : ಡಿಕೆ ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ತನಿಖೆಗೆ ವಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಮಯ 2 ಗಂಟೆ : ಹಿಂದೂ ಧಾರ್ಮಿಕ ಪದ್ಧತಿಯಂತೆ ಡಿಕೆ ರವಿ ಅವರ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ರವಿ ಅವರ ಮಾವ ಹನುಮಂತರಾಯಪ್ಪ ಅವರು ಹೇಳಿದ್ದಾರೆ.

ಸಮಯ 1.45 : ವಿಶೇಷ ಆಂಬ್ಯುಲೆನ್ಸ್ ಮೂಲಕ ಡಿಕೆ ರವಿ ಅವರ ಮೃತದೇಹವನ್ನು ನಾಗರಭಾವಿಯಿಂದ ಅವರ ಹುಟ್ಟೂರು ದೊಡ್ಡಕೊಪ್ಪಲುಗೆ ತೆಗೆದುಕೊಂಡು ಹೋಗಲಾಗಿದೆ. ತುಮಕೂರು ಎಸ್ಪಿ ಕಾರ್ತಿಕ್ ರೆಡ್ಡಿ ಅವರ ನೇತೃತ್ವದಲ್ಲಿ ತುಮಕೂರಿನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

IAS officer

ಸಮಯ 1.24 : ಡಿಕೆ ರವಿ ಅವರ ಸಾವಿನ ಕುರಿತು ಗೃಹ ಸಚಿವ ಕೆಜೆ ಜಾರ್ಜ್ ವಿಧಾನಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ಅವರ ನೇತೃತ್ವದಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಸಚಿವರು ತಪ್ಪು ಉತ್ತರ ನೀಡಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದು ಲಿಖಿತ ಉತ್ತರದ ಹಾಳೆಯನ್ನು ಹರಿದುಹಾಕಿದ್ದಾರೆ.

kj george

ಸಮಯ 1 ಗಂಟೆ : ಡಿಕೆ ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಗೃಹ ಸಚಿವ ಕೆಜೆ ಜಾರ್ಜ್‌ ಉತ್ತರ ನೀಡುತ್ತಾರೆ ಎಂದು ಸಿದ್ದರಾಮುಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ಪ್ರತಿಪಕ್ಷಗಳು ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

cm. dk ravi

ಸಮಯ 12.30 : ವಿಧಾನಸಭೆಯಲ್ಲಿ ಡಿಕೆ ರವಿ ಅವರ ಸಾವಿನ ಕುರಿತು ಚರ್ಚೆ ನಡೆಯುತ್ತಿದ್ದರೆ ಅರಣ್ಯ ಸಚಿವ ರಮಾನಾಥ ರೈ ಮತ್ತು ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರು ನಿದ್ದೆಗೆ ಜಾರಿದ್ದರು.

ಸಮಯ 12.10 : ಡಿಕೆ ರವಿ ಅವರ ಮೃತದೇಹ ಮರಣೋತ್ತರ ಪರೀಕ್ಷೆ ನಂತರ ನಾಗರಭಾವಿಯಲ್ಲಿರುವ ಮಾವನ ಮನೆ ತಲುಪಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. [ಪ್ರತಿಕ್ರಿಯೆ: ಮಾಫಿಯಾಗಳ ದಾಹಕ್ಕೆ ದಕ್ಷ ಅಧಿಕಾರಿ ಬಲಿ]

ಸಮಯ 11.45 : ವಿಧಾನಸಭೆಯಲ್ಲಿ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ವಿಷಯ ಪ್ರಸ್ತಾಪಿಸಿದ ಪತಿಪಕ್ಷ ಬಿಜೆಪಿ, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್. [ಡಿಕೆ ರವಿ ಸಾವು : ಯಾರು, ಏನು ಹೇಳಿದರು]

dk ravi house

ಸಮಯ 11.17 : ವಿಕ್ಟೋರಿಯಾ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದು ಮೃತ ದೇಹದ ಅಂತಿಮ ದರ್ಶನ ಪಡೆದಿದ್ದಾರೆ.

ಸಮಯ 11.16 : ಹುಲಿಯೂರುದುರ್ಗದಲ್ಲಿರುವ ಡಿಕೆ ರವಿ ಅವರ ಜಮೀನಿನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಸಮಯ 11.15 : ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಕೆ ರವಿ ಅವರ ಮೃತದೇಹವನ್ನು ನಾಗರಭಾವಿಯಲ್ಲಿರುವ ಮಾವನ ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ.

ಸಮಯ 11.09 : ಐಎಎಸ್ ಅಧಿಕಾರಿ ಡಿಕೆ ರವಿ ಸಾವನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಮಯ 11 ಗಂಟೆ : ಕೋಲಾರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು, ಪೊಲೀಸರಿಂದ ಅಶ್ರುವಾಯು ಪ್ರಯೋಗ

ಸಮಯ 10.45 : ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿಕೆ ರವಿ ವರ್ಗಾವಣೆಗೆ ವರ್ತೂರು ಪ್ರಕಾಶ್ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಕೋಲಾರದ ಭೈರೇಗೌಡ ನಗರದಲ್ಲಿರುವ ಶಾಸಕರ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸಮಯ 10.14 : ಕೋಲಾರದಲ್ಲಿ ಖಾಸಗಿ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

cm last tribute

ಸಮಯ 10 ಗಂಟೆ : ಡಿಕೆ ರವಿ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದೆ. ಶೀಘ್ರದಲ್ಲೇ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ.

ಸಮಯ 9.23 : ಡಿಕೆ ರವಿ ಅವರ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿರುವ ರವಿ ಅವರ ಕಚೇರಿಗೆ ಪೊಲೀಸರು ಬೀಗ ಹಾಕಿದ್ದಾರೆ.

ಸಮಯ 9.15 : ಡಿಕೆ ರವಿ ಅವರ ಸಾವಿನ ಬಗ್ಗೆ ಅವರ ಮಾವ ಮಡಿವಾಳ ಪೊಲೀಸ್ ಠಾಣೆಗೆ ಮಂಗಳವಾರ ಬೆಳಗ್ಗೆ ದೂರು ನೀಡಿದ್ದಾರೆ. ರವಿ ಅವರ ಪತ್ನಿ ಕುಸುಮಾ ಅವರ ತಂದೆ ಹನುಮಂತರಾಯಪ್ಪ ಅವರು ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಸಮಯ 9.11 : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಆರಂಭವಾಗಿದೆ

ಸಮಯ 9.09 : ಕೋಲಾರ ತಾಲೂಕಿನ ವಡಗೂರು ಬಳಿ ರವಿ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಆಗ್ರಹ

ಸಮಯ 9 ಗಂಟೆ : ಡಾ.ವೆಂಕಟರಾಘವ ಅವರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ, ಪೊಲೀಸರ ಸಮ್ಮುಖದಲ್ಲಿಯೇ ನಡೆಯಲಿದೆ ಪರೀಕ್ಷೆ

IAS officer DK Ravi

ಸಮಯ 8.30 : ಡಿಕೆ ರವಿ ಅವರ ಮರಣೋತ್ತರ ಪರೀಕ್ಷೆ ಹಿನ್ನಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್

ಸಮಯ 8 ಗಂಟೆ : ಮರಣೋತ್ತರ ಪರೀಕ್ಷೆ ನಂತರ ನಾಗರಭಾವಿಯಲ್ಲಿ ಡಿಕೆ ರವಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ

ಸಮಯ 7.45 : ಡಿಕೆ ರವಿ ಅವರ ಸಾವು ಖಂಡಿಸಿ ಇಂದು ಹುಲಿಯೂರುದುರ್ಗ, ಕೋಲಾರ ಮತ್ತು ಕುಣಿಗಲ್ ಬಂದ್‌ಗೆ ಕರೆ ನೀಡಿದ ವಿವಿಧ ಸಂಘಟನೆಗಳು

ಸಮಯ 7.30 : ಡಿಕೆ ರವಿ ಅವರ ಸಾವು ಖಂಡಿಸಿ ವಿವಿಧ ಸಂಘನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಇಂದಿನ ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ.

ಸಮಯ 7 ಗಂಟೆ : ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಿಕೆ ರವಿ ಅವರ ಮೃತದೇಹವನ್ನು ಇಡಲಾಗಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.

English summary
IAS officer D.K.Ravi posted as Karnataka's additional commissioner, commercial tax, was found dead in his apartment on Monday. Here is a Latest updates of Tuesday, March 17, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X