ಕುಮಾರಸ್ವಾಮಿ ಚಿತ್ತ ಚಿಕ್ಕಬಳ್ಳಾಪುರದತ್ತ, ಯಾಕಂತ?

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 04 : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಅವರು ರಾಮನಗರ ವಿಧಾನಸಭೆ ಕ್ಷೇತ್ರವನ್ನು ತೊರೆದು, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

ಜೆಡಿಎಸ್ ಪಕ್ಷದ ಪಾಲಿಗೆ ಭದ್ರಕೋಟೆಯಾಗಿದ್ದ ರಾಮನಗರ ಜಿಲ್ಲೆ ಬದಲಾವಣೆಯಾಗಿದೆ. ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮತ್ತೊಂದು ಕಡೆ ಡಿ.ಕೆ.ಶಿವಕುಮಾರ್ ಅವರ ವರ್ಚಸ್ಸು ಹೆಚ್ಚಾಗುತ್ತಿದೆ. ಜೆಡಿಎಸ್ ದುರ್ಬಲವಾಗುತ್ತಿದೆ. [2013ರಲ್ಲಿ ಗೆದ್ದವರು, ಸೋತವರು]

ಇದುವರೆಗೂ ಹಳೆ ಮೈಸೂರು ಭಾಗ ಜೆಡಿಎಸ್ ಪಾಲಿಗೆ ಅಕ್ಷಯ ಪಾತ್ರೆಯಾಗಿತ್ತು. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಲು ಈ ಭಾಗದಿಂದ ಆಯ್ಕೆಯಾದ ದೊಡ್ಡ ಸಂಖ್ಯೆಯ ಶಾಸಕರ ಬಲ ಕಾರಣವಾಗಿತ್ತು. ಆದರೆ, ಸದ್ಯ ಜೆಡಿಎಸ್ ಬಲ ಕುಂದುತ್ತಿದೆ. ಪಕ್ಕದ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗಿಶ್ವರ್ ಮೇಲುಗೈ ಸಾಧಿಸುತ್ತಿದ್ದಾರೆ. [ಕೋಲಾರ, ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಬೇಡಿಕೆಗಳು]

hd kumaraswamy

ಬೆಂಗಳೂರು ಗ್ರಾಮಾಂತರ ಸಂಪೂರ್ಣವಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಹಿಡಿತದಲ್ಲಿದೆ. ಮಾಗಡಿ ಶಾಸಕ ಬಾಲಕೃಷ್ಣ, ಮಂಡ್ಯದ ನಾಗಮಂಗಲ ಶಾಸಕ ಚೆಲುವರಾಯ ಸ್ವಾಮಿ ಅವರು ಜೆಡಿಎಸ್ ಬಿಡಲಿದ್ದಾರೆ ಎಂಬ ಸುದ್ದಿಗಳಿವೆ. ಆದ್ದರಿಂದ, ಕುಮಾರಸ್ವಾಮಿ ಅವರು ಚಿಕಬಳ್ಳಾಪುರದ್ತ ಮುಖ ಮಾಡಿದ್ದಾರೆ. [ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಆಸ್ತಿ ವಿವರ ಬಹಿರಂಗ]

ಚಿಕ್ಕಬಳ್ಳಾಪುರದಲ್ಲಿ ಸೋತಿದ್ದರು : 2013ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು 25,398 ಮತಗಳ ಅಂತರದಿಂದ ಗೆದ್ದಿದ್ದರು. ನಂತರ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. [ಚಿಕ್ಕಬಳ್ಳಾಪುರದಲ್ಲಿ ಎಚ್ಡಿಕೆಗೆ ಹೀನಾಯ ಸೋಲು]

ರಾಮನಗರದಿಂದ 2004, 2008 ಹಾಗೂ 2013ರಲ್ಲಿ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ ಅವರು 2014ರ ನಡೆದ ಲೋಕಸಭೆ ಚುನಾವಣೆಗೆ ಚಿಕ್ಕಬಳ್ಳಾಪುರದಿಂದ ಕಣಕ್ಕಿಳಿಯಲು ಬಯಸಿದಾಗ ರಾಮನಗರದ ಜನರು ವಿರೋಧಿಸಿದ್ದರು. ಆದರೆ, ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸಿದ್ದರು. ಇನ್ನು ಮುಂದೆ ರಾಮನಗರದಿಂದ ಸ್ಪರ್ಧಿಸಿದರೆ ಗೆಲ್ಲಿಸುವುದಿಲ್ಲ ಎಂದು ಜನರು ಹೇಳಿದ್ದರು. ಜೆಡಿಎಸ್ ಕಾರ್ಯಕರ್ತರು ಪಕ್ಷದ ಚಟುವಟಿಕೆಯಿಂದ ದೂರವುಳಿದಿದ್ದಾರೆ.

ಇನ್ನು ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ರಚಿಸಿದ 2 ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ ಎಂಬ ಭರವಸೆ ನೀಡುವ ಜೊತೆಗೆ, ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಲು ಕುಮಾರಸ್ವಾಮಿ ನಿರ್ಧರಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಡಾ.ಕೆ. ಸುಧಾಕರ್ ಸದ್ಯದ ಸ್ಥಿತಿಯಲ್ಲಿ ಪ್ರಭಾವಿಯಾಗಿ ಕಂಡು ಬಂದರೂ, ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಆಂಜಿನಪ್ಪ ಕಳೆದ ವಿಧಾನಸಭೆ ಚುನಾವಣೆ ನಂತರ ಸುಧಾಕರ್ ವಿರುದ್ಧ ಮುನಿಸಿಕೊಂಡು ಪಕ್ಷ ತೊರೆದಿದ್ದಾರೆ.

kumaraswamy

ದಶಕದಿಂದ ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದ ಕಾರ್ಯಕರ್ತರಾಗಿ ದುಡಿದಿದ್ದ ಆಂಜಿನಪ್ಪ ಇದೀಗ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ. ಕಾಂಗ್ರೆಸ್‌ನ ಕೆಲವು ಮುಖಂಡರು ಇವರೊಂದಿಗೆ ಕೈಜೋಡಿಸಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿಲ್ಲ.

ಕಾಂಗ್ರೆಸ್ ಅಧಿಕಾರದಲ್ಲಿದ್ದರೂ, ಜಿಲ್ಲೆಯ ಸಮಸ್ಯೆ ನಿವಾರಣೆ ಮಾಡುವಲ್ಲಿ ಹೆಚ್ಚಿನ ಒಲವು ತೋರಿಸಿಲ್ಲ. ಇದೆಲ್ಲದರಿಂದ ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಕುಮಾರಸ್ವಾಮಿ ಅವರ ನಂಬಿಕೆ. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯಾವಕಾಶವಿದೆ. ಅಲ್ಲಿಯ ತನಕ ಏನು ನಡೆಯುವುದೋ? ಕಾದು ನೋಡೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS state president H.D.Kumaraswamy may contest for 2018 assembly election form Chikkaballapur. Kumaraswamy elected for assembly in 2013 form Ramanagara constituency.
Please Wait while comments are loading...