ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂಮರಿಗೆ ಕೊಡುತ್ತಾರೆ ಎಂದ ಮೋದಿ: ಸಿದ್ದರಾಮಯ್ಯ ಏನಂದ್ರು?
ಬೆಂಗಳೂರು, ಏಪ್ರಿಲ್ 22: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಆಸ್ತಿ ಹಂಚಿಕೆ ಮಾಡುತ್ತಾರೆ, ಮಹಿಳೆಯರ ಮಾಂಗಲ್ಯವನ್ನು ಮುಸ್ಲಿಂ ಮರಿಗೆ ಕೊಡುತ್ತಾರೆ ಎಂದು ಪ್ರಧಾನಮಂತ್ರಿ ಆರೋಪ ಮಾಡಿದ್ದಾರೆ. ಪ್ರಧಾನಿಯಾಗಿ ಅವರು ಇಷ್ಟು ಕೆಳಮಟ್ಟದಲ್ಲಿ ಮಾತನಾಡ ಬಾರದಿತ್ತು. ಹಿಂದೂಗಳ ಮಂಗಳಸೂತ್ರವನ್ನು ತೆಗೆದು ಮುಸ್ಲಿಮರಿಗೆ ನೀಡುತ್ತಾರೆ ಎನ್ನುವುದು ಅವರ ಸ್ಥಾನಕ್ಕೆ ಅಗೌರವ ತರುವಂಥ ಮಾತುಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಕುರಿತು ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿಯಾಗಿ ಎಲ್ಲಾ ಜನಾಂಗವನ್ನು ಸಮಾನವಾಗಿ ನೋಡಿಕೊಳ್ಳುವ ಕರ್ತವ್ಯ ಅವರದ್ದು. ಇಂಥ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಸಮಾನವಾಗಿ ಆಸ್ತಿ ಹಂಚಿಕೆಯಾಗುವುದು ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣವಾಗಬೇಕಾದರೆ ಎಲ್ಲಾರೂ ಮುಖ್ಯವಾಹಿನಿಗೆ ಬರಬೇಕು. ಕೆಲವೇ ಜನರ ಕೈಯಲ್ಲಿ ಅಧಿಕಾರ, ಸಂಪತ್ತು ಇದ್ದರೆ ಇದು ಆಗುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಅಸಮಾನತೆ ಹೋಗಬೇಕಾದರೆ ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಇರಬಾರದು, ಹಂಚಿಕೆಯಾಗಬೇಕೆಂದು ಹೇಳಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ನಮಗೆ ನಂಬಿಕೆ ಇದೆ ಎಂದರು.

ಬಿಜೆಪಿ ಕಳಸವಿದ್ದಂತೆ ಕಾಂಗ್ರೆಸ್ ಕಪ್ಪು ನೀಡುತ್ತದೆ ಎಂದು ಬಿಜೆಪಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ದೇಶದ ಪ್ರಧಾನಮಂತ್ರಿ ಇಂದಿನವರೆಗೆ ಹೇಳಿರುವುದನ್ನು ಅನುಷ್ಠಾನಕ್ಕೆ ತಂದಿಲ್ಲ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗಿದೆ, 15 ಮೇ ಹಣಕಾಸು ಆಯೋಗದ ಶಿಫಾರಸ್ಸು, ಬರಗಾಲಕ್ಕೆ ಪರಿಹಾರ ಕೊಟ್ಟಿಲ್ಲ, 15 ಲಕ್ಷ ಎಲ್ಲರ ಖಾತೆಗೆ ಬಂತೇ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ? ರೈತರ ಆದಾಯ ದುಪ್ಪಟ್ಟು ಆಗಿದೆಯೇ? ಅಚ್ಚೇ ದಿನ್ ಬಂದಿದೆಯೇ? ಎಂಡಿ ಪ್ರಶ್ನಿಸಿದರು. ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ಜಾಹಿರಾತು ಬಿಡುಗಡೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಜಾಹಿರಾತಿಗೆ ಪ್ರತಿಯಾಗಿ ಬಿಜೆಪಿಯವರು ಕಾಂಗ್ರೆಸ್ ಡೇಂಜರ್ ಎಂಬ ಜಾಹಿರಾತು ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹೆಣ್ಣುಮಕ್ಕಳಿಗೆ ಉಚಿತ ಬಸ್ ಸೌಲಭ್ಯ , ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಗಳು ಡೇಂಜರ್ ಆಗುತ್ತವೆಯೇ? ಸಮಾಜವನ್ನು ಒಡೆಯುವಂತಹ ಕಾರ್ಯಗಳು, ಮತಗಳ ಧ್ರುವೀಕರಣ ಮಾಡುವುದು ಅಪಾಯಕಾರಿಯೇ ಹೊರತು, ವಿವಿಧತೆಯಲ್ಲಿ ಏಕತೆಯನ್ನು ತರುವುದು ಡೇಂಜರ್ ಅಲ್ಲ. ದೇಶಕ್ಕೆ ಬಿಜೆಪಿ ಪಕ್ಷವೇ ಡೇಂಜರ್ ಹೊರತು, ಕಾಂಗ್ರೆಸ್ ಪಕ್ಷ ಅಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೆ, ಭ್ರಷ್ಟಾಚಾರ ಹೆಚ್ಚಾಗಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಪ್ರಕಾರ ರೇಡ್ ಮಾಡುವುದನ್ನು ನಾವು ಎಂದೂ ವಿರೋಧಿಸುವುದಿಲ್ಲ. ಆದರೆ ಬಿಜೆಪಿಯಲ್ಲಿ ಶ್ರೀಮಂತರಿಲ್ಲವೇ, ಯಡಿಯೂರಪ್ಪ , ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ ? ಶೋಭಾ ಕರಂದ್ಲಾಜೆ, ಅಶೋಕ್, ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಿಜೆಪಿಯವರ ಮೇಲೆ, ಅವರ ಮೇಲೆ ರೇಡ್ ಗಳು ಏಕೆ ಆಗುತ್ತಿಲ್ಲ. ಆದಾಯ ತೆರಿಗೆಯನ್ನು ಸರಿಯಾಗಿ ಕಟ್ಟದವರ ಮೇಲೆ ಕ್ರಮವಾಗಲಿ, ಆದರೆ ಒಬ್ಬರ ಮೇಲೆ ರೇಡ್ ಮಾಡಿ ಮತ್ತೊಬ್ಬರನ್ನು ಬಿಡುವ ಬದಲು, ಆದಾಯಮೀರಿ ಆಸ್ತಿ ಸಂಪಾದಿಸಿದ ಎಲ್ಲರ ಮೇಲೆ ಕಾನೂನು ಕ್ರಮವಾಗಬೇಕು ಎಂದರು.












Click it and Unblock the Notifications