'ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ'; ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ
ಕೋಲಾರ, ಏಪ್ರಿಲ್ 21: ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಚುನಾವಣೆ ಘೋಷಣೆಯಾದ ಬಳಿಕ ರಾಜ್ಯಕ್ಕೆ ನಿರಂತರವಾಗಿ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಲಘು ಹೇಳಿಕೆ ನೀಡಿದ್ದಾರೆ.
ಹೌದು, ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರು, ಪ್ರಧಾನಿಯವರನ್ನು 'ಶನಿ'ಗೆ ಹೋಲಿಸಿ, ಜೂನ್ 4ಕ್ಕೆ ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈಮುಗಿದು ಬೇಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದಾರೆ. ಇನ್ನು ಕಾಂಗ್ರೆಸ್ ಹಿರಿಯ ನಾಯಕನ ಲಘು ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ ಎಂದಿದ್ದಾರೆ. ಇಂದಿರಾಗಾಂಧಿ ಕೂತಿದ್ದ ಸೀಟಲ್ಲಿ ಬಂದು ಕೂತುಬಿಟ್ಟೆ. ಎಲ್ಲಾ ಜಾತಿ ಜನಾಂಗದವರಿಗೆ ಆತ್ಮಸ್ಥೈರ್ಯ ತುಂಬಿದ್ದರು ಇಂದಿರಾ ಗಾಂಧಿ ಎಂತಹವರ ಜಾಗಕ್ಕೆ ಎಂತಹವನು ಬಂದು ಕೂತಿದ್ದಾನೆ ಅಂತ ರಮೇಶ್ ಕುಮಾರ್ ಲೇವಡಿ ಮಾಡಿದ್ದಾರೆ. ಇನ್ನೂ ಸಂತೆಯಲ್ಲಿ ಹಾವಾಡಿಗ ಸುಳ್ಳು ಹೇಳೋದು ಕೇಳಿದ್ದೆವೆ. ಆದರೆ ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ ಅಂತ ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಪ್ರಧಾನ ಮಂತ್ರಿ, ಒಬ್ಬ ಮುಖ್ಯಮಂತ್ರಿ ಮೂರು ಸೀಟುಗಳನ್ನ ತೆಗೆದುಕೊಂಡಿದ್ದಾರೆ ಈ ಬಾರಿ. ಅದರಲ್ಲೂ ಒಂದು ಮಗನಿಗೆ ಇನ್ನೊಂದು ಮೊಮ್ಮಗನಿಗೆ ಎಂದು ವ್ಯಂಗ್ಯವಾಡಿದ್ದಾರೆ. ಅಳಿಯನನ್ನು ನಿಮ್ಮ ಲೆಕ್ಕದಲ್ಲಿ ಕೊಡಿ ಎಂದು ಅಲ್ಲಿಗೆ ಕಳಿಸಿದ್ರು. ಇವರ ಹಣೆಬರಹಕ್ಕೆ ಅವರತ್ರ ಹೋಗಿ ಸಲಾಂ ಹೊಡೆಯುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ರಮೇಶ್ ಕುಮಾರ್ ಶನಿಗೆ ಹೋಲಿಸಿದ ವಿಚಾರಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದ್ದು, ಮಾಜಿ ಸ್ವೀಕರ್ ರಮೇಶ್ ಕುಮಾರ್ ಹೇಳಿರೋದ್ರಲ್ಲಿ ಏನೂ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಮೇಶ್ ಕುಮಾರ್ ಅವರು ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿಯವರು ರಮೇಶ್ ಕುಮಾರ್ ಮತ್ತು ಕಾಂಗ್ರೆಸ್ ಗೆ ಶನಿಯಾಗಿದ್ದಾರೆ. ಯಾರು ಭಷ್ಟಾಚಾರ ಮಾಡುತ್ತಾರೆ, ಯಾರು ದೇಶವಿರೊಧಿ ಚಟುವಟಿಕೆ ಮಾಡುತ್ತಾರೆ. ಯಾರು ಜನವಿರೋಧಿ ಕೆಲಸ ಮಾಡುತ್ತಾರೆ ಅವರಿಗೆ ಮೋದಿಯವರು ಶನಿಯಾಗಿ ಕಾಡುತ್ತಾರೆ. ದೇಶಭಕ್ತರಿಗೆ, ಯುವಕರಿಗೆ, ಹೆಣ್ಣುಮಕ್ಕಳಿಗೆ ಅವರು ವರವನ್ನು ಕೊಡುತ್ತಾರೆ. ರಮೇಶ್ ಕುಮಾರ್ ಅವರಿಗೆ ಅದರ ಒಳ ಮರ್ಮ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆ ಜೊತೆಗೆ ರಾಜ್ಯ ಸರ್ಕಾರವೂ ರೈತರಿಗೆ 4 ಸಾವಿರ ರೂ. ನೀಡುತ್ತಿತ್ತು. ರಾಜ್ಯ ಸರ್ಕಾರ ಅದನ್ನು ಕಡಿತ ಮಾಡಿ, ರೈತರಿಗೆ ಚಂಬು ಕೊಟ್ಟಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ರೈತ ವಿದ್ಯಾನಿಧಿ ಯೋಜನೆ ಅಡಿಯಲ್ಲಿ 13 ಲಕ್ಷ ವಿದ್ಯಾರ್ಥಿಗಳಿ ಸ್ಕಾಲರ್ ಶಿಪ್ ಕೊಡಲಾಗಿತ್ತು, ಅದನ್ನು ನಿಲ್ಲಿಸಿದ್ದಾರೆ. ದಲಿತ ಸಮುದಾಯಕ್ಕೆ ಮೀಸಲಿಟ್ಟಿದ್ದ ಎಸ್ಸಿಪಿ ಟಿಎಸ್ಪಿಯ 11380 ಕೋಟಿ ಎಸ್ಸಿಎಸ್ಟಿ ಅನುದಾನವನ್ನ ಗ್ಯಾರಂಟಿಗೆ ಬಳಕೆ ಮಾಡಿಕೊಂಡಿದ್ದಾರೆ. ಇದೆಲ್ಲ ಮಾಡಿ ರಾಜ್ಯದ ಜನತೆಗೆ ಚೊಂಬು ಕೊಟ್ಟಿದ್ದು ರಾಜ್ಯ ಸರ್ಕಾರ ಎಂದು ಬೊಮ್ಮಾಯಿ ಆರೋಪಿಸಿದರು.












Click it and Unblock the Notifications