ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
ಬೆಂಗಳೂರು, ಏಪ್ರಿಲ್ 24: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಈಗ ಹೇಳಿ ಮೋದಿ ಯಾರ ಪರ ಎಂದು ಸಿ.ಎಂ.ಸಿದ್ದರಾಮಯ್ಯ ಪ್ರಶ್ನಿಸಿದರು.
ಮೋದಿ ಹತ್ತತ್ತು ವರ್ಷ ಪ್ರಧಾನಿಯಾಗಿ ಭಾರತೀಯರಲ್ಲಿ ಭ್ರಮೆ ಹುಟ್ಟಿಸಿದ್ದು ಬಿಟ್ಟರೆ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ ಎಂದರು. ವರ್ಷಕ್ಕೆ 2 ಕೋಟಿಯಂತೆ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಮಾಡಬೇಕಿತ್ತು. ಆದರೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸದ ಮೋದಿ ಕೆಲಸ ಕೇಳಿದ ವಿದ್ಯಾವಂತರಿಗೆ ಹೋಗಿ ಪಕೋಡ ಮಾರಾಟ ಮಾಡಿ ಅಂದರು ಎಂದು ವಾಗ್ದಾಳಿ ನಡೆಸಿದರು.

ನನ್ನ ಕೈಗೆ ಅಧಿಕಾರ ಕೊಡಿ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ್ರು. ಹತ್ತು ವರ್ಷದಲ್ಲಿ ಹದಿನೈದು ಪೈಸೆಯನ್ನೂ ಹಾಕಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದೋರು ರೈತ ಖರ್ಚು ಮೂರು ಪಟ್ಟು ಮಾಡಿಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಆದರೆ ಮೋದಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ಹಾಗಾದ್ರೆ ಮೋದಿ ಯಾರ ಪರ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.
ಮೋದಿ ಬಂದ ಮೇಲೆ ಜನ ಸಾಮಾನ್ಯರ, ಮಧ್ಯಮ ವರ್ಗದವರ ಮೇಲೆ ತೆರಿಗೆ ಭಾರ ಹೆಚ್ಚಾಯಿತು. ಉದ್ಯಮಿಗಳ ತೆರಿಗೆ ಭಾರ ಕಡಿಮೆ ಆಯಿತು. ಆದ್ದರಿಂದ ಮೋದಿ ಜನದ್ರೋಹಿ ತಾನೆ ಎಂದು ಪ್ರಶ್ನಿಸಿದರು. ಹೀಗೆ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ ಎಂದರು. ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಕಾಡುಗೊಲ್ಲ ಸಮುದಾಯವನ್ನು ST ಪಟ್ಟಿಗೆ ಸೇರಿಸಬೇಕು ಎನ್ನುವ ಬೇಡಿಕೆಗೆ ನಾವು ಸಂಪೂರ್ಣವಾಗಿ ಸ್ಪಂದಿಸಿದ್ದೇವೆ. ಈ ಬಗ್ಗೆ ಕೇಂದ್ರಕ್ಕೂ ಶಿಫಾರಸ್ಸು ಮಾಡಿದ್ದಾಗಿದೆ. ಆದರೆ ಈ ವರೆಗೂ ಇದಕ್ಕೆ ಏಕೆ ಸ್ಪಂದಿಸುತ್ತಿಲ್ಲ ಎಂದು ಸಿಎಂ ಪ್ರಶ್ನಿಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ. ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಆಗ್ರಹಕ್ಕೆ ಧ್ವನಿಗೂಡಿಸಿ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಯವರು, ತಮ್ಮ ಭಾಷಣದಲ್ಲೂ ಇದೇ ಮಾತನ್ನು ಪುನರುಚ್ಛರಿಸಿದರು. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ ಎಂದು ಭರವಸೆ ನೀಡಿದರು.












Click it and Unblock the Notifications