ನರೇಗಾ ಯೋಜನೆ; ಆರು ತಿಂಗಳ ನಂತರವೂ ತಗ್ಗಿಲ್ಲ ಬೇಡಿಕೆ
ನವದೆಹಲಿ, ಫೆಬ್ರವರಿ 18: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ತಗ್ಗುತ್ತಿದ್ದ ಹಿನ್ನೆಲೆಯಲ್ಲಿ ಆರು ತಿಂಗಳಿನಿಂದ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆರ್ಥಿಕ ಸುಧಾರಣೆ ಅಗತ್ಯದೊಂದಿಗೆ ಹಂತ ಹಂತವಾಗಿ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸಕ್ಕೆ ಬೇಡಿಕೆಯೂ ನಿರಂತರವಾಗಿ ಏರಿದೆ.
ಸುಮಾರು ಎರಡು ಕೋಟಿಗೂ ಅಧಿಕ ಕುಟುಂಬಗಳು ಪ್ರತಿ ತಿಂಗಳು ಈ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪಡೆಯುತ್ತಿವೆ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿನ ಪ್ರಕರಣಗಳು ಉತ್ತುಂಗದಲ್ಲಿದ್ದ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ನರೇಗಾ ಯೋಜನೆ ಪಡೆಯುತ್ತಿದ್ದ ಕುಟುಂಬಗಳ ಸಂಖ್ಯೆ ಡಿಸೆಂಬರ್, ಜನವರಿಯಲ್ಲಿಯೂ ಹಾಗೇ ಮುಂದುವರೆದಿದೆ.
ನರೇಗಾ ಯೋಜನೆ ದಿನದ ಕೂಲಿ 202 ರೂ.ಗೆ ಏರಿಕೆ
2006ರಿಂದ ಯೋಜನೆ ಪರಿಚಿತಗೊಂಡ ನಂತರ ಇದೇ ಮೊದಲ ಬಾರಿ ನರೇಗಾ ಯೋಜನೆಗೆ ಇಷ್ಟು ಬೇಡಿಕೆ ಕಂಡುಬಂದಿದೆ. ದೇಶಾದ್ಯಂತ 7.17 ಕೋಟಿ ಕುಟುಂಬಗಳು ಫೆಬ್ರವರಿ 17ರವರೆಗೂ ಈ ಯೋಜನೆಯಡಿಯಲ್ಲಿ ದಾಖಲಾಗಿವೆ. ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ನರೇಗಾದಡಿಯಲ್ಲಿ ಕೆಲಸ ಪಡೆದುಕೊಂಡವರ ಸಂಖ್ಯೆ ಹೆಚ್ಚಿದೆ.
ಕೊರೊನಾ ಲಾಕ್ ಡೌನ್ ಸಂದರ್ಭ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಿದ್ದು, ನರೇಗಾಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೇಡಿಕೆ ಬಂದಿದೆ. ಜೂನ್ 2020ರಲ್ಲಿ ಅತಿ ಹೆಚ್ಚು ಜನರು ಯೋಜನೆಯಡಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. 2019ಕ್ಕೆ ಹೋಲಿಸಿದರೆ ಯೋಜನೆಯಲ್ಲಿ 80% ಹೆಚ್ಚಳವಾಗಿರುವುದಾಗಿ ತಿಳಿದುಬಂದಿದೆ.