ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ
ಬೆಂಗಳೂರು: ಸಿಲಿಕಾನ್ ಸಿಟಿಯ ಬಹುದಿನಗಳ ಬೇಡಿಕೆಯಾದ ಸಂಚಾರ ದಟ್ಟಣೆ ನಿವಾರಣೆಗೆ ಕರ್ನಾಟಕ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರ್ಜರಿ ಕೊಡುಗೆ ನೀಡಿದ್ದಾರೆ. ನಮ್ಮ ಮೆಟ್ರೋ ಜಾಲವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಬೆಂಗಳೂರಿಗರಿಗೆ ಸುಗಮ ಪ್ರಯಾಣದ ಭರವಸೆ ನೀಡಿದ್ದಾರೆ. ಪ್ರಸ್ತುತ ಪ್ರಗತಿಯಲ್ಲಿರುವ ವಿವಿಧ ಹಂತದ ಮೆಟ್ರೋ ಕಾಮಗಾರಿಗಳನ್ನು ಚುರುಕುಗೊಳಿಸಿ, ಹೆಚ್ಚುವರಿ 41 ಕಿಲೋಮೀಟರ್ ಮಾರ್ಗವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ.
ಮೆಟ್ರೋ ಜಾಲ ವಿಸ್ತರಣೆಯಾಗುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಒತ್ತಡ ಕಡಿಮೆಯಾಗಲಿದ್ದು, ಐಟಿ ಹಬ್ ಮತ್ತು ವಾಣಿಜ್ಯ ಪ್ರದೇಶಗಳಿಗೆ ಸಂಪರ್ಕ ಸುಲಭವಾಗಲಿದೆ. ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮೋದನೆಯ ಬೆನ್ನಲ್ಲೇ, ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನ ಮತ್ತು ಭೂಸ್ವಾಧೀನ ಪ್ರಕ್ರಿಯೆಗಳಿಗೆ ವೇಗ ನೀಡಲು ನಿರ್ಧರಿಸಿದೆ. ಈಗಾಗಲೇ ಕಾರ್ಯಾಚರಣೆಯಲ್ಲಿರುವ ಮಾರ್ಗಗಳಿಗೆ ಈ ಹೆಚ್ಚುವರಿ 41 ಕಿ.ಮೀ ಸೇರ್ಪಡೆಯಾಗುವುದರಿಂದ ನಗರದ ಹೊರವಲಯದ ನಿವಾಸಿಗಳಿಗೂ ಮೆಟ್ರೋ ಸೌಲಭ್ಯ ಹತ್ತಿರವಾಗಲಿದೆ.

ರಸ್ತೆ ಮಾರ್ಗದ ಮೂಲಕ ಗಂಟೆಗಟ್ಟಲೆ ಪ್ರಯಾಣಿಸುವ ಬದಲು, ಮೆಟ್ರೋ ವಿಸ್ತರಣೆಯಿಂದ ಪ್ರಯಾಣದ ಸಮಯ ಶೇ 50ಕ್ಕಿಂತ ಹೆಚ್ಚು ಉಳಿತಾಯವಾಗಲಿದೆ. ಸಾರ್ವಜನಿಕ ಸಾರಿಗೆಗೆ ಉತ್ತೇಜನ ನೀಡುವುದರಿಂದ ನಗರದಲ್ಲಿ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಬಜೆಟ್‌ನಲ್ಲಿ ಘೋಷಿಸಿರುವಂತೆ ಕಾಮಗಾರಿಗಳು ಸಕಾಲದಲ್ಲಿ ಪೂರ್ಣಗೊಂಡರೆ, ಬೆಂಗಳೂರು ವಿಶ್ವದರ್ಜೆಯ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ನಗರಗಳ ಸಾಲಿಗೆ ಮತ್ತಷ್ಟು ಹತ್ತಿರವಾಗಲಿದೆ. ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಕೊನೆಯ ಹಂತದ ಸಂಪರ್ಕ ಸುಧಾರಣೆಗೂ ಸರ್ಕಾರ ಒತ್ತು ನೀಡಬೇಕೆಂದು ಬೆಂಗಳೂರಿಗರು ಆಶಿಸಿದ್ದಾರೆ.
ಸಿಲಿಕಾನ್ ಸಿಟಿಯ ಜೀವನಾಡಿಯಾಗಿರುವ 'ನಮ್ಮ ಮೆಟ್ರೋ' ಪ್ರಸ್ತುತ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲವಾಗಿ ಹೊರಹೊಮ್ಮಿದೆ. 2026ರ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೋ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ವಿವರಿಸುತ್ತಾ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಹಂಚಿಕೆಯ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡರು.
ಪ್ರಸ್ತುತ ಬೆಂಗಳೂರಿನಲ್ಲಿ 96 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ಕಾರ್ಯನಿರ್ವಹಿಸುತ್ತಿದೆ. ಪ್ರತಿ ದಿನ ಸುಮಾರು 10 ಲಕ್ಷ ಜನರಿಗೆ ಈ ಜಾಲವು ಪ್ರಯೋಜನಕಾರಿಯಾಗಿದೆ. ಇಲ್ಲಿಯವರೆಗೆ ಮೆಟ್ರೋ ಯೋಜನೆಗಾಗಿ ಒಟ್ಟು 67,460 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದರು.
ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರವೇ ಸಿಂಹಪಾಲನ್ನು ನೀಡುತ್ತಿರುವುದನ್ನು ಸಿಎಂ ಅಂಕಿ-ಅಂಶಗಳ ಸಮೇತ ವಿವರಿಸಿದರು. ರಾಜ್ಯ ಸರ್ಕಾರದ ಪಾಲು 59,376 ಕೋಟಿ ರೂ. (ಶೇ. 88), ಕೇಂದ್ರ ಸರ್ಕಾರದ ಪಾಲು 8,084 ಕೋಟಿ ರೂ. (ಶೇ 12) ಕೇಂದ್ರದ ಪಾಲು ಕೇವಲ ಶೇ. 12ರಷ್ಟಿದ್ದರೂ, ರಾಜ್ಯ ಸರ್ಕಾರವು ನಗರದ ಹಿತದೃಷ್ಟಿಯಿಂದ ಶೇ 88ರಷ್ಟು ಬೃಹತ್ ಮೊತ್ತವನ್ನು ಭರಿಸುತ್ತಿದೆ ಎಂದರು.
ನಗರದ ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಲು ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ದೊಡ್ಡ ಗುರಿಯನ್ನು ಹೊಂದಿದೆ. 2026-27ರ ಅವಧಿಯಲ್ಲಿ ಒಟ್ಟು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಹೊಸ ಮಾರ್ಗಗಳು ಚಾಲನೆಗೆ ಬಂದರೆ, ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷದಿಂದ 15 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇನ್ನು ಹೊರ ವರ್ತುಲ ರಸ್ತೆಯ (ಒಆರ್‌ಆರ್) ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ. ನಡಿಗೆ ಮಾರ್ಗವನ್ನು 160 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದರು.












Click it and Unblock the Notifications