2ನೇ ವಾರಕ್ಕೆ ಕಾಲಿಟ್ಟ ಯುದ್ಧ, ಶರಣಾಗುವ ತನಕ ಶಾಂತಿ ಇಲ್ಲ ಎಂದ ಅಮೆರಿಕ ಅಧ್ಯಕ್ಷರು | Operation Roaring Lion
ಇರಾನ್ ಯುದ್ಧದ ಪರಿಣಾಮ ಜಗತ್ತು ಸೂಕ್ಷ್ಮ ಪರಿಸ್ಥಿತಿಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಇನ್ನೊಂದು ಜಾಗತಿಕ ಯುದ್ಧ ಶುರುವಾಗುವ ಆತಂಕ ಆವರಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಜಾಗತಿಕ ಆರ್ಥಿಕತೆ ಕೂಡ ಸಂಕಷ್ಟಕ್ಕೆ ಸಿಲುಕಿ, ಪೆಟ್ರೋಲ್ & ಡೀಸೆಲ್ ಸೇರಿದಂತೆ ಗ್ಯಾಸ್ ಸಿಲಿಂಡರ್ ಬೆಲೆಯೂ ಮುಗಿಲು ಮುಟ್ಟುವ ಭಯ ಕಾಡುತ್ತಿದೆ. ಅದರಲ್ಲೂ ಅರಬ್ ದೇಶಗಳು ಇರಾನ್ ನಡೆಸುತ್ತಿರುವ ದಾಳಿ ಹಿನ್ನೆಲೆ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದು, ಆದಷ್ಟು ಬೇಗ ಯುದ್ಧ ನಿಲ್ಲಲಿ ಎಂಬ ಪ್ರಾರ್ಥನೆಯನ್ನ ಮಾಡುತ್ತಿದ್ದಾರೆ.
ಆದರೆ ಅಮೆರಿಕ ಹಾಗೂ ಇಸ್ರೇಲ್ ನಾಯಕರು ಈ ಬಾರಿ ಇರಾನ್‌ಗೆ ಸರಿಯಾಗಿಯೇ ಪಾಠ ಕಲಿಸಬೇಕು, ಇದೇ ಕಾರಣಕ್ಕೆ ಇರಾನ್ ಸಂಪೂರ್ಣವಾಗಿ ಶರಣಾಗುವ ತನಕ ಶಾಂತಿ ಮಾತುಕತೆ ಇಲ್ಲ ಎಂದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಇನ್ನಷ್ಟು ದೊಡ್ಡದಾಗಿ ದಾಳಿ ಮಾಡಲು ಪಕ್ಕಾ ಪ್ಲಾನ್ ಮಾಡಿ ಈಗ ಮುಂದೆ ನುಗ್ಗುತ್ತಿವೆ. ಇರಾನ್ ದೇಶದ ಕೈ ಕಟ್ಟಿಹಾಕುವ ರೀತಿ ಸೂಕ್ಷ್ಮ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಈಗ ದಾಳಿ ಮಾಡಲಾಗುತ್ತಿದೆ. ಇರಾನ್ ದೇಶದ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳನ್ನು ಧೂಳ್ ಧೂಳ್ ಮಾಡಿ ಹಾಕಿದೆ ಅಮೆರಿಕ ಹಾಗೂ ಇಸ್ರೇಲ್ ಸೇನೆ. ಹಾಗಾದರೆ ಶಾಂತಿ ಮಾತುಕತೆಯ ಕಥೆ ಏನು ಈಗ? ಅಮೆರಿಕ ಮಾಡಿರುವ ಮುಂದಿನ ತಂತ್ರ ಏನು? ಇರಾನ್ ಸೇನೆಗೆ ಕೊನೆಯ ಅವಕಾಶ ಇದೆಯಾ? ಮುಂದೆ ಓದಿ.

ಸಂಪೂರ್ಣ ಶರಣಾಗತಿಯ ಮಂತ್ರ
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಅಧಿಕೃತ ಕಚೇರಿ, ವೈಟ್ ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೀವಿಟ್ ಇರಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇರಾನ್ ಈಗಾಗಲೇ ಅಮೆರಿಕ ನಡೆಸುತ್ತಿರುವ ದಾಳಿಗೆ ಸಿಲುಕಿ ಒದ್ದಾಡಿದೆ ಎಂಬುದನ್ನು ತಿಳಿಸಿದ್ದು, ಯುದ್ಧ ನಿಲ್ಲಿಸುವ ವಿಚಾರದ ಕುರಿತಾಗಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಲೀವಿಟ್ ಹೇಳಿಕೆ ಪ್ರಕಾರ, ಅಮೆರಿಕದ ಸಶಸ್ತ್ರ ಪಡೆಗಳ ಮುಖ್ಯಸ್ಥರಾದ ಅಧ್ಯಕ್ಷರು ಇರಾನ್ ಭವಿಷ್ಯದಲ್ಲಿ ಅಮೆರಿಕ ಒಕ್ಕೂಟ ವ್ಯವಸ್ಥೆಗೆ ಯಾವುದೇ ರೀತಿಯ ಅಪಾಯ ಉಂಟುಮಾಡಲ್ಲ ಎಂಬುದು ಸ್ಪಷ್ಟವಾದ ನಂತರ ಅಷ್ಟೇ ಈ ಕಾರ್ಯಾಚರಣೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ. ಅಲ್ಲಿಯವರೆಗೆ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದು, ಇರಾನ್‌ಗೆ ಈ ಮೂಲಕ ಮತ್ತೊಮ್ಮೆ ನೇರ ಎಚ್ಚರಿಕೆ ಸಂದೇಶ ಅಮೆರಿಕ ಕಡೆಯಿಂದ ರವಾನೆಯಾಗಿದೆ.












Click it and Unblock the Notifications