ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್‌ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ
Bengaluru Second International Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿರುವ ಕಾರಣದಿಂದ ನಗರದ ಸಮೀಪ ಮತ್ತೊಂದು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ವೇಳೆ ಮಹತ್ವದ ಘೋಷಣೆ ಮಾಡಿದ್ದಾರೆ.
ದೇಶದ 3ನೇ ಅತಿ ದೊಡ್ಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಟ್ಟಣೆಯನ್ನು ತಗ್ಗಿಸಲು ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಭಿಪ್ರಾಯವನ್ನು ಪಡೆದು, ಶೀಘ್ರದಲ್ಲೇ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಆದ್ಯತೆ
ರಾಜ್ಯದಲ್ಲಿನ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಈವರೆಗೂ 1,593 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ 200 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಲಾಗಿದೆ. ಇದು ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಸಹಕಾರಿಯಾಗಲಿದೆ.
ವಿಜಯಪುರ, ಶಿವಮೊಗ್ಗದಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್
ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ತಾಂತ್ರಿಕ ನೈಪುಣ್ಯತೆಯನ್ನು ಉತ್ತೇಜಿಸಲು ಸರ್ಕಾರವು ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳಲ್ಲಿ 'ಫ್ಲೈಟ್ ಟ್ರೈನಿಂಗ್ ಸ್ಕೂಲ್' (ವಿಮಾನ ಚಾಲನಾ ತರಬೇತಿ ಶಾಲೆ) ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಪೈಲಟ್ ತರಬೇತಿ ಪಡೆಯಲು ಇಚ್ಛಿಸುವ ರಾಜ್ಯದ ಯುವಜನತೆಗೆ ಸ್ಥಳೀಯವಾಗಿಯೇ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ಲಭ್ಯವಾಗಲಿದೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರ ಈ ಬಾರಿಯ ಬಜೆಟ್ ರಾಜ್ಯದ ವಾಯುಯಾನ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ಭರವಸೆ ಮೂಡಿಸಿದೆ.
ಪ್ರಯಾಣಿಕರ ದಟ್ಟಣೆ ನಿಯಂತ್ರಣ
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸುವುದರಿಂದ ನಗರದ ಅಭಿವೃದ್ಧಿಗೆ ಹಲವು ರೀತಿಯಲ್ಲಿ ಬಲ ಸಿಗಲಿದೆ. ಮುಖ್ಯವಾಗಿ, ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಇದು ಅತ್ಯಗತ್ಯವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿರುವ ಒತ್ತಡವನ್ನು ತಗ್ಗಿಸಿ, ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡುತ್ತದೆ.
ಏನೆಲ್ಲ ಪ್ರಯೋಜನಗಳಾಗಲಿವೆ?
* ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿ: ಹೊಸ ವಿಮಾನ ನಿಲ್ದಾಣದ ನಿರ್ಮಾಣವು ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಲೆ ಎತ್ತಲಿದ್ದು, ಸ್ಥಳೀಯ ಆರ್ಥಿಕತೆಗೆ ಭಾರಿ ಉತ್ತೇಜನ ಸಿಗಲಿದೆ.
* ನಗರದ ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ನಿಲ್ದಾಣ ಬಂದರೆ, ಆ ಭಾಗದ ಜನರಿಗೆ ವಿಮಾನ ನಿಲ್ದಾಣ ತಲುಪಲು ಸುಲಭವಾಗುತ್ತದೆ. ದೇವನಹಳ್ಳಿಯ ನಿಲ್ದಾಣಕ್ಕೆ ಹೋಗುವ ದೀರ್ಘ ಪ್ರಯಾಣ ತಪ್ಪಿ, ಸಮಯ ಮತ್ತು ಇಂಧನ ಉಳಿತಾಯ ಆಗುತ್ತದೆ.
* ಹೊಸ ವಿಮಾನ ನಿಲ್ದಾಣವು ಸರಕು ಸಾಗಣೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ರಫ್ತು ಮತ್ತು ಆಮದು ವಹಿವಾಟಿಗೆ ವೇಗ ನೀಡಲಿದೆ, ಇದರಿಂದ ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಲಾಭವಾಗಲಿದೆ.
* ವಿಮಾನ ನಿಲ್ದಾಣದ ಸುತ್ತಮುತ್ತ ಮೂಲಸೌಕರ್ಯಗಳಾದ ರಸ್ತೆ, ಮೆಟ್ರೋ ಮತ್ತು ಇತರ ಸಾರಿಗೆ ಸಂಪರ್ಕಗಳು ಅಭಿವೃದ್ಧಿಯಾಗಲಿವೆ. ಇದು ನಗರದ ಸಮಗ್ರ ವಿಸ್ತರಣೆಗೆ ಮತ್ತು ಅಭಿವೃದ್ಧಿಗೆ ಪೂರಕ ಆಗಲಿದೆ. ಒಟ್ಟಿನಲ್ಲಿ ಇದರಿಂದ ಬೆಂಗಳೂರನ್ನು ಜಾಗತಿಕ ಮಟ್ಟದ ಪ್ರಮುಖ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಬಹುದು.












Click it and Unblock the Notifications