ಕರ್ನಾಟಕದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಎಂ.ಎನ್.ಅನುಚೇತ್‌ಗೆ ಹೊಸ ಜವಾಬ್ದಾರಿ
IAS, IPS Officers Transfer: ರಾಜ್ಯ ಸರ್ಕಾರವು ಆಗಾಗ ಆಡಳಿಯ ಯಂತ್ರಕ್ಕೆ ಬಿಸಿ ಮುಟ್ಟಿಸುತ್ತಲಿರುತ್ತದೆ. ಇದೀಗ ಐಎಎಸ್, ಐಪಿಎಲ್ ಅಧಿಕಾರಿಗಳನ್ನಿ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ಸರ್ಕಾರದ ಮಹತ್ವದ ಆಡಳಿತಾತ್ಮಕ ಬದಲಾವಣೆಯಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದ ಅನುಚೇತ್ ಅವರನ್ನು ಈ ಹುದ್ದೆಗೆ ನಿಯೋಜನೆ ಮಾಡಲಾಗಿದೆ.

ನಿಂಬಾಳ್ಕರ್ ವರ್ಗಾವಣೆಗೊಳಿಸಿ ಸರ್ಕಾರ ಆದೇಶ
ಇಲ್ಲಿಯವರೆಗೆ ವಾರ್ತಾ ಇಲಾಖೆಯ ಆಯುಕ್ತರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಎಡಿಜಿಪಿ ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಇನ್ನೂ ಎಂ.ಎನ್.ಅನುಚೇತ್ ಅವರಿಗೆ ವಾರ್ತಾ ಇಲಾಖೆಯ ಜೊತೆಗೆ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನು ಕೂಡ ವಹಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಐಎಎಸ್ ಅಧಿಕಾರಿ ಕುಮಾರ್ ಟಿ.ಎಚ್.ಎಂ ಅವರನ್ನು ವರ್ಗಾವಣೆ ಮಾಡಲಾಗಿದೆ.
ಅನುಚೇತ್ ಹಿನ್ನೆಲೆ ಏನು?
ಮೂಲತಃ ಕೋಲಾರ ಜಿಲ್ಲೆಯವರಾದ ಅನುಚೇತ್ ಅವರು ತಾಂತ್ರಿಕ ಹಿನ್ನೆಲೆ ಹೊಂದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ 2006ರಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2008ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ 2009ರ ಬ್ಯಾಚ್‌ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಆದರು.
2011ರಲ್ಲಿ ಪುತ್ತೂರಿನ ಎಎಸ್‌ಪಿಯಾಗಿ ವೃತ್ತಿಜೀವನ ಆರಂಭಿಸಿದ ಇವರು, ಸಿಐಡಿ ಎಸ್ಪಿ ಆಗಿ ಮತ್ತು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ ಆಗಿದ್ದ ಅವಧಿಯಲ್ಲಿ ನಗರದ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿ ಗಮನ ಸೆಳೆದಿದ್ದರು.
ತನಿಖಾ ರಂಗದಲ್ಲಿ ಇವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇವರಿಗೆ ಪ್ರತಿಷ್ಠಿತ ಕೇಂದ್ರ ಗೃಹ ಸಚಿವರ ತನಿಖೆಗಾಗಿನ ಅತ್ಯುತ್ತಮ ಪದಕ ನೀಡಿ ಗೌರವಿಸಿದೆ. ಅನುಚೇತ್ ಅವರ ಈ ಹೊಸ ನೇಮಕಾತಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಒಂದೆಡೆ ತನಿಖೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ದಕ್ಷತೆ ಹೊಂದಿರುವ ಇಂತಹ ಪ್ರಭಾವಿ ಅಧಿಕಾರಿಯನ್ನು ವಾರ್ತಾ ಇಲಾಖೆಗೆ ನಿಯೋಜಿಸಿ ಪ್ರಾಮುಖ್ಯತೆ ಇಲ್ಲದಂತೆ ಮಾಡಲಾಗಿದೆ ಅಸಮಾಧಾನ ವ್ಯಕ್ತವಾಗುತ್ತಿವೆ.
ಮತ್ತೊಂದೆಡೆ ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖಾ ತಂಡದಿಂದ ಇವರು ಹಿಂದೆ ಸರಿದಿದ್ದ ನಿರ್ಧಾರ ಹಾಗೂ ಬೆಂಗಳೂರು ಟ್ರಾಫಿಕ್ ಕಮಿಷನರ್ ಆಗಿದ್ದ ಅವಧಿಯಲ್ಲಿನ ಇವರ ಕಾರ್ಯವೈಖರಿಯನ್ನು ಟೀಕಿಸಿ ಜಾಲತಾಣಗಳಲ್ಲಿ ನೆಟ್ಟಿಗರಿಂದ ಚರ್ಚೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಅನುಚೇತನ್ ಅವರಿಗೆ ಹೊಸ ಜವಾಬ್ದಾರಿ ನೀಡಿರುವುದು ಇದೀಗ ಮಿಶ್ರಪ್ರತಿಕ್ರಿಯೆಗೆ ಕಾರಣವಾಗಿದೆ.












Click it and Unblock the Notifications