ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ SIR ಗಣತಿ ಪೂರ್ಣಗೊಳಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್
ವಿಶೇಷ ತೀವ್ರ ಪರಿಷ್ಕರಣೆ 2026 ರ ಭಾಗವಾಗಿ, ಮತದಾರರ ಪಟ್ಟಿಯನ್ನು ದೋಷಮುಕ್ತ ಹಾಗೂ ಸಮಗ್ರವಾಗಿ ರೂಪಿಸುವ ಮಹತ್ವದ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ನಾಗರಿಕರು ತಮ್ಮ ಗಣತಿ ನಮೂನೆಯನ್ನು ಈಗ ಆನ್‌ಲೈನ್ ಮೂಲಕ ಸುಲಭವಾಗಿ ಸಲ್ಲಿಸಬಹುದಾಗಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಚುನಾವಣಾ ಆಯೋಗವು ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಯಾವುದೇ ಗೊಂದಲವಿಲ್ಲದೆ ಆನ್‌ಲೈನ್‌ನಲ್ಲಿ ಗಣತಿ ನಮೂನೆಯನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ಕುರಿತು ಹಂತ-ಹಂತದ ಸಂಪೂರ್ಣ ಮಾರ್ಗದರ್ಶಿಯನ್ನು ಇಲ್ಲಿ ನೀಡಲಾಗಿದೆ.

ಮತದಾರರ ಸೇವಾ ಪೋರ್ಟಲ್‌ಗೆ ಲಾಗಿನ್ ಆಗುವ ವಿಧಾನ
ಆನ್‌ಲೈನ್ ಮೂಲಕ ಎಸ್‌ಐಆರ್ 2026 ಗಣತಿ ನಮೂನೆಯನ್ನು ಸಲ್ಲಿಸಲು, ಮತದಾರರು ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಬಹುದು.
1. ಮೊದಲಿಗೆ, ಭಾರತೀಯ ಚುನಾವಣಾ ಆಯೋಗದ ಅಧಿಕೃತ 'ಮತದಾರರ ಸೇವಾ ಪೋರ್ಟಲ್'ಗೆ ಭೇಟಿ ನೀಡಿ. ಸ್ಮಾರ್ಟ್‌ಫೋನ್ ಬಳಕೆದಾರರು 'ECINET' ಮೊಬೈಲ್ ಆ್ಯಪ್ ಅನ್ನು ಸಹ ಡೌನ್‌ಲೋಡ್ ಮಾಡಿ ಬಳಸಬಹುದು.
2. ಪೋರ್ಟಲ್ ಅಥವಾ ಆ್ಯಪ್ ತೆರೆದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಬೇಕು. ಒಂದು ವೇಳೆ ನೀವು ಹೊಸ ಬಳಕೆದಾರರಾಗಿದ್ದರೆ, 'ಸೈನ್ ಅಪ್' ಆಯ್ಕೆಯ ಮೂಲಕ ಹೊಸ ಖಾತೆಯನ್ನು ರಚಿಸಿಕೊಂಡು ನಂತರ ಲಾಗಿನ್ ಆಗಬಹುದು.
ಆನ್‌ಲೈನ್ ಸಲ್ಲಿಕೆ ಪ್ರಕ್ರಿಯೆ ಮತ್ತು ಒಟಿಪಿ ದೃಢೀಕರಣ
* ಲಾಗಿನ್ ಆದ ಬಳಿಕ ಮುಖಪುಟದಲ್ಲಿ ಅಂದರೆ ಡ್ಯಾಶ್‌ಬೋರ್ಡ್‌ನಲ್ಲಿ "ಗಣತಿ ನಮೂನೆಯನ್ನು ಭರ್ತಿ ಮಾಡಿ" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ, ಡ್ರಾಪ್‌ಡೌನ್ ಮೆನುವಿನಿಂದ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಎಪಿಕ್ ನಂಬರ್ (ವೋಟರ್ ಐಡಿ ಸಂಖ್ಯೆ) ಅನ್ನು ನಮೂದಿಸಿ ಸರ್ಚ್ ಮಾಡಿ.
* ಈ ಪ್ರಕ್ರಿಯೆಯ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿಯನ್ನು ನಮೂದಿಸಿ ದೃಢೀಕರಿಸಿದ ನಂತರ, ಮೊದಲೇ ಸ್ವಲ್ಪಮಟ್ಟಿಗೆ ಭರ್ತಿಯಾಗಿರುವ ನಿಮ್ಮ ಗಣತಿ ನಮೂನೆಯ ಡ್ರಾಫ್ಟ್ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇಲ್ಲಿ ನಿಮ್ಮ ಹೆಸರು, ಎಪಿಕ್ ನಂಬರ್, ಮತ್ತು ಆಧಾರ್ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ.
ಆಧಾರ್ ಇ-ಸೈನ್ ಮತ್ತು ಹಿಂದಿನ ಎಸ್‌ಐಆರ್ ಲಿಂಕ್
ಈ ನಮೂನೆಯಲ್ಲಿ, ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ಪೋಷಕರ ಹೆಸರು ಇರುವ ಬಗ್ಗೆ ಸೂಕ್ತ ಆಯ್ಕೆಗಳನ್ನು ಆರಿಸಬೇಕಾಗುತ್ತದೆ. ಎಲ್ಲ ವಿವರಗಳನ್ನು ಒದಗಿಸಿದ ಬಳಿಕ, ಫಾರ್ಮ್ ಅನ್ನು ಮತ್ತೊಮ್ಮೆ ಪರಿಶೀಲಿಸಿ. ಆನ್‌ಲೈನ್‌ನಲ್ಲಿ ಇದನ್ನು ಯಶಸ್ವಿಯಾಗಿ ಸಲ್ಲಿಸಲು 'ಇ-ಸೈನ್' ಮಾಡುವುದು ಅತ್ಯಗತ್ಯ.
ಇದಕ್ಕಾಗಿ ನಿಮ್ಮ ವೋಟರ್ ಐಡಿಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್‌ನಲ್ಲಿರುವ ಅಕ್ಷರಗಳು ಒಂದೇ ರೀತಿ ಇರಬೇಕು. ಮಾಹಿತಿ ಸರಿಯಾಗಿದ್ದರೆ ಮಾತ್ರ ಇ-ಸೈನ್ ಪ್ರಕ್ರಿಯೆ ಯಶಸ್ವಿಯಾಗುತ್ತದೆ. ಅಂತಿಮವಾಗಿ ಒಟಿಪಿ ದೃಢೀಕರಣದೊಂದಿಗೆ ಫಾರ್ಮ್ ಅನ್ನು ಯಶಸ್ವಿಯಾಗಿ ಸಬ್ಮಿಟ್ ಮಾಡಿ.
ಬಿಎಲ್‌ಒ ಪರಿಶೀಲನೆ
ಆನ್‌ಲೈನ್‌ನಲ್ಲಿ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ಸಿಸ್ಟಮ್‌ನಿಂದ ಒಂದು ಸ್ವೀಕೃತಿ ರಸೀದಿ ಬರುತ್ತದೆ. ಈ ಸ್ವೀಕೃತಿಯನ್ನು ತಪ್ಪದೇ ಡೌನ್‌ಲೋಡ್ ಮಾಡಿ ಸೇವ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ. ಮುಂದಿನ ದಿನಗಳಲ್ಲಿ ನಿಮ್ಮ ಬೂತ್ ಮಟ್ಟದ ಅಧಿಕಾರಿ ನಿಮ್ಮ ಮನೆಗೆ ಪರಿಶೀಲನೆಗೆ ಬಂದಾಗ, ಈ ಸ್ವೀಕೃತಿ ಪತ್ರವನ್ನು ಅವರಿಗೆ ತೋರಿಸಬೇಕು.
ಒಂದು ವೇಳೆ ಆನ್‌ಲೈನ್ ಮೂಲಕ ಫಾರ್ಮ್ ಸಲ್ಲಿಸಲು ತಾಂತ್ರಿಕ ತೊಂದರೆಯಾದರೆ, ಬಿಎಲ್‌ಒ ಅವರು ಮನೆ-ಮನೆಗೆ ಭೇಟಿ ನೀಡಿದಾಗ ಭೌತಿಕ ನಮೂನೆಗಳನ್ನು ಪಡೆದು, ಭರ್ತಿ ಮಾಡಿ ಮರಳಿ ನೀಡಬಹುದು. ಯಾವುದೇ ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಈ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ನಿಗದಿತ ಸಮಯದೊಳಗೆ ತಮ್ಮ ನಮೂನೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.












Click it and Unblock the Notifications