ವೈಭವ್ ಸೂರ್ಯವಂಶಿ ಕೈಬಿಟ್ಟಿರುವುದು ಅರ್ಹತೆಗೆ ಸಿಕ್ಕ ಜಯ: ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹಿಂಗ್ ಅನ್ನೋದಾ?
Sanjay Manjrekar: ಬೆಲ್‌ಫಾಸ್ಟ್‌ನಲ್ಲಿ ಶುಕ್ರವಾರ (ಜೂನ್ 26) ನಡೆಯುತ್ತಿರುವ ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಪಂದ್ಯದಲ್ಲಿ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕಣಕ್ಕಿಯಲಿದ್ದಾರೆ ಎಂದು ಇಡೀ ಜಗತ್ತೇ ಕಾತರದಿಂದ ಕಾಯುತ್ತಿತ್ತು. ಆದರೆ ಅವರನ್ನು ಪ್ಲೇಯಿಂಗ್ 11ನಿಂದ ಹೊರಗಿಡಲಾಗಿದೆ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಟ್ವಿಟ್ ಮಾಡಿದ್ದು, ಅಚ್ಚರಿ ಸಂದೇಶವನ್ನ ರವಾನೆ ಮಾಡಿದ್ದಾರೆ.
ಬೆಲ್‌ಫಾಸ್ಟ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಸ್ಥಾನ ಸಿಗದೆ ಬೆಂಚ್ ಕಾಯಿಸಬೇಕಾಗಿ ಬಂದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಆಶ್ಚರ್ಯ ಮೂಡಿಸಿತ್ತು. ಆದರೆ ಭಾರತ ತಂಡದ ಈ ಧೈರ್ಯದ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಹಾಗೂ ಪ್ರಸಿದ್ಧ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಅವರು ಬೆಂಬಲಿಸಿದ್ದಾರೆ.

ಸಂಜಯ್ ಮಂಜ್ರೇಕರ್ ಟ್ವಿಟ್‌ನಲ್ಲಿ ಏನಿದೆ?
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮ್ಯಾನೇಜ್‌ಮೆಂಟ್ ಇಂತಹದ್ದೊಂದು ಕಠಿಣ ನಿರ್ಧಾರ ಕೈಗೊಂಡಿದ್ದಕ್ಕಾಗಿ ಸಂಜಯ್ ಮಂಜ್ರೇಕರ್ ಸಾಮಾಜಿಕ ಜಾಲತಾಣ ಟ್ವಿಟರ್‌ನನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 'ಪ್ರಸ್ತುತ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಸ್ಥಾನಗಳಿಗೆ ಯಾವುದೇ ತೊಂದರೆ ಮಾಡದೆ ಭಾರತ ತಂಡ ಉತ್ತಮ ನಿರ್ಧಾರ ಕೈಗೊಂಡಿದೆ. ಹೊರಗಿನ ಗದ್ದಲಗಳು ಕೇವಲ ಹೊರಗಿನ ಗದ್ದಲಗಳಾಗಿಯೇ ಉಳಿಯಬೇಕು. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವಾಗಲೂ ಸಂಯಮ ಮತ್ತು ಕ್ರಿಕೆಟಿಗನ ಪ್ರದರ್ಶನಕ್ಕೆ ಮೊದಲ ಆದ್ಯತೆ ಸಿಗಬೇಕು,' ಎಂದು ಹೇಳಿದ್ದಾರೆ.
'ಅನುಭವಿ ಆಟಗಾರರನ್ನ ಹೊರಗಿಡುವುದು ಸರಿಯಲ್ಲ'
ಸೋನಿಟಿವಿ ವಾಹಿನಿಯೊಂದಿಗೆ ಮಾತನಾಡಿದ ಮಂಜ್ರೇಕರ್ ಅವರು, ಕೇವಲ ಒಬ್ಬ ಯುವ ಆಟಗಾರನ ಮೇಲಿರುವ ಉತ್ಸಾಹಕ್ಕಾಗಿ ಹಿರಿಯ ಆಟಗಾರರನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. 'ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲು ಹೇಗೆ ಸಾಧ್ಯ? ಮತ್ತೊಂದೆಡೆ ಸಂಜು ಸ್ಯಾಮ್ಸನ್ ಸಹ ಇತ್ತೀಚಿನ ಪಂದ್ಯಗಳಲ್ಲಿ ಸತತವಾಗಿ ಉತ್ತಮ ರನ್ ಗಳಿಸಿ ಅಬ್ಬರಿಸಿದ್ದಾರೆ. ನಾವು ಒಬ್ಬ 15 ವರ್ಷದ ಬಾಲಕನ ಆಟ ನೋಡಲು ಉತ್ಸುಕರಾಗಿದ್ದೇವೆ ಎಂಬ ಒಂದೇ ಕಾರಣಕ್ಕೆ ಅವರನ್ನು ಹೊರಗಿಡುವುದು ಅನ್ಯಾಯವಾಗುತ್ತದೆ,' ಎಂದು ಅವರು ಸ್ಪಷ್ಟಪಡಿಸಿದರು.
ಯುವ ಆಟಗಾರರಿಗೆ ಮಹತ್ವದ ಸಂದೇಶ
ಭಾರತೀಯ ಕ್ರಿಕೆಟ್ ಮಂಡಳಿಯು ವಿಶ್ವಕಪ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನೇ ಈ ಪ್ರವಾಸದಿಂದ ಹೊರಗಿಟ್ಟು ವಿಶ್ರಾಂತಿ ನೀಡಿದೆ. ಅಂತಹ ಸಂದರ್ಭದಲ್ಲಿ ತಂಡವು ಕೇವಲ ಆಟಗಾರನ ಸದ್ಯದ ಅರ್ಹತೆಗೆ ಮಾತ್ರ ಬೆಲೆ ನೀಡುತ್ತಿದೆ ಎಂಬುದು ಮಂಜ್ರೇಕರ್ ಅವರ ಅಭಿಪ್ರಾಯವಾಗಿದೆ. ಮುಂದುವರಿದು ಮಾತನಾಡಿದ ಅವರು, 'ಟೀಮ್ ಇಂಡಿಯಾ ಸರಿಯಾದ ಹಾದಿಯಲ್ಲಿದ್ದು, ಇದು ಆಟಗಾರರಿಗೆ ಸೂಕ್ತ ಸಂದೇಶ ರವಾನಿಸುತ್ತದೆ. ಯುವ ಆಟಗಾರನ ಸುತ್ತ ಸೃಷ್ಟಿಯಾಗಿರುವ ಯಾವುದೇ ಉತ್ಸಾಹಕ್ಕೆ ಮ್ಯಾನೇಜ್‌ಮೆಂಟ್ ಮಣಿಯದೇ ಇರುವುದು ಸಂತಸ ತಂದಿದೆ. ವೈಭವ್ ಸೂರ್ಯವಂಶಿ ಅವರಿಗೆ ಇನ್ನೂ ಸಾಕಷ್ಟು ವಯಸ್ಸಿದೆ, ಸಮಯವಿದೆ. ಅವರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ,' ಎಂದು ಮಂಜ್ರೇಕರ್ ಸಲಹೆ ನೀಡಿದ್ದಾರೆ.
ವೈಭವ್ ಸೂರ್ಯವಂಶಿ ಅವರು ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿರುವುದು ಹಾಗೂ ಶ್ರೀಲಂಕಾ ಎ ವಿರುದ್ಧ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಲಿಸ್ಟ್-ಎ ದಾಖಲೆ ಬರೆದಿದ್ದಾರೆ. ಆದರೂ ಸದ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯಲು ಅವರು ಕಾಯುವುದು ಅನಿವಾರ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಯಾರಿಗೆ ಆಗಲಿ ಅವಕಾಶಗಳು ಸುಲಭವಾಗಿ ಸಿಗಬಾರದು, ಬದಲಿಗೆ ಕಷ್ಟಪಟ್ಟು ಕಾದು ಇದನ್ನು ಗಿಟ್ಟಿಸಿಕೊಳ್ಳಬೇಕು. ಆಗ ಆ ಆಟಗಾರನ ಮಹತ್ವದ ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ. ಇದೀಗ ವೈಭವ್ ಸೂರ್ಯವಂಶಿ ಸಹ ಇದನ್ನೇ ಪಾಲನೆ ಮಾಡಲೇಬೇಕಿದೆ.












Click it and Unblock the Notifications