Shreyas Iyer: ವೈಭವ್ ಸೂರ್ಯವಂಶಿಗೆ ಕೈಕೊಟ್ಟ ಅದೃಷ್ಟ, ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?
Shreyas Iyer: ಭಾರತ ಮತ್ತು ಐರ್ಲೆಂಡ್ ನಡುವೆ 2 ಪಂದ್ಯಗಳ ಟಿ20 ಸರಣಿ ಇಂದಿನಿಂದ (ಜೂನ್ 26) ಆರಂಭವಾಗಿದೆ. ಇನ್ನೂ ವೈಭವ್ ಸೂರ್ಯವಂಶಿ ಅವರು ಭಾರತ ತಂಡಕ್ಕೆ ಆಯ್ಕೆಯಾದ ದಿನದಿಂದಲೇ ಇಡೀ ವಿಶ್ವದ ಗಮನ ಸೆಳೆದಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಈ ಬಾಲಕ ಕಣಕ್ಕಿಳಿಯುವುದಿಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಗುರುವಾರ ನಡೆದ ದೀರ್ಘಾವಧಿಯ ನೆಟ್ಸ್ ಅಭ್ಯಾಸದ ವೇಳೆಯಲ್ಲಿ ಸೂರ್ಯವಂಶಿ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ತಂಡದ ಇತರ ಹಿರಿಯ ಕೋಚಿಂಗ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸುತ್ತಿರುವುದು ಕಂಡುಬಂದಿತ್ತು. ಆದರೂ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಪ್ಲೇಯಿಂಗ್ 11ನಲ್ಲಿ ವೈಭವ್‌ಗೆ ಸ್ಥಾನ ಸಿಗಲಿಲ್ಲ.

ವೈಭವ್‌ಗೆ ಒಲಿಯದ ಅದೃಷ್ಟ
ಒಂದು ವೇಳೆ ವೈಭವ್ ಸೂರ್ಯವಂಶಿ ಈ ಪಂದ್ಯಕ್ಕೆ ಆಯ್ಕೆಯಾಗಿದ್ದರೆ, ಕೇವಲ 15 ವರ್ಷ 91 ದಿನಗಳ ವಯಸ್ಸಿನಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಆದರೆ ಪ್ಲೇಯಿಂಗ್ 11ನಲ್ಲಿ ಸ್ಥಾನ ಸಿಗದ ಕಾರಣ ಈ ಸಾಧನೆ ಕೈತಪ್ಪಿದ್ದು, ಮುಂದಿನ ಪಂದ್ಯದಲ್ಲಾದರೂ ಅವಕಾಶ ಸಿಕ್ಕರೆ ಇದು ನೆರವೇರಲಿದೆ.
ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಿಷ್ಟು
'ವೈಭವ್ ಸೂರ್ಯವಂಶಿ ಅವರು ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ಅದ್ಭುತ ಆಟಗಾರ, ಆದರೆ ನಮ್ಮ ತಂಡಕ್ಕಾಗಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದ ಕೆಲವು ಅದ್ಭುತ ಆಟಗಾರರು ನಮ್ಮೊಂದಿಗಿದ್ದಾರೆ, ಹಾಗಾಗಿ ನಾವು ಅವರನ್ನೇ ಬೆಂಬಲಿಸುತ್ತಿದ್ದೇವೆ. ಸೂಕ್ತ ಸಮಯ ಬಂದಾಗ ಅವರಿಗೆ ಖಂಡಿತವಾಗಿಯೂ ಅವಕಾಶ ಸಿಗಲಿದೆ,' ಎಂದು ಭಾರತ ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್ ಟಾಸ್ ವೇಳೆ ಹೇಳಿದರು. ಈ ಪಂದ್ಯದಲ್ಲಿ ಅಯ್ಯರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.
ಚಿಕ್ಕ ವಯಸ್ಸಿಗೆ ಅಂತಾರಾಷ್ಟ್ರೀಯ ತಂಡಕ್ಕೆ ಕಾಲಿಟ್ಟವರು
ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆ ಶಫಾಲಿ ವರ್ಮಾ (15 ವರ್ಷ, 239 ದಿನ) ಅವರ ಹೆಸರಿನಲ್ಲಿದೆ. ಇನ್ನು ಪುರುಷರ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ (16 ವರ್ಷ, 205 ದಿನ) ಈ ದಾಖಲೆಯನ್ನು ಹೊಂದಿದ್ದಾರೆ. ಇದೀಗ ಇಂದಿ ಪಂದ್ಯದಲ್ಲಿ ಅವಕಾಶ ಸಿಕ್ಕಿದ್ದರೆ ವೈಭವ್ ಕೂಡ ಈ ಸಾಲಿಗೆ ಸೇರುತ್ತಿದ್ದರು.
ವೈಭವ್‌ಗೆ ಪ್ಲೇಯಿಂಗ್ 11ನಲ್ಲಿ ಸಿಗದ ಅವಕಾಶ
ವೈಭವ್ ಸೂರ್ಯವಂಶಿ ಅವರಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗದೇ ಇರುವುದಕ್ಕೆ ಭಾರತ ತಂಡ ಹೊಂದಿರುವ ಬಲಿಷ್ಠ ಟಾಪ್-ಆರ್ಡರ್ ಮುಖ್ಯ ಕಾರಣವಾಗಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಇತ್ತೀಚಿನ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು. ಹಾಗಾಗಿ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಇವರಲ್ಲಿ ಯಾರನ್ನಾದರೂ ಒಬ್ಬರನ್ನು ಕೈಬಿಡುವುದು ಮ್ಯಾನೇಜ್‌ಮೆಂಟ್‌ಗೆ ಅತ್ಯಂತ ದೊಡ್ಡ ತೀರ್ಮಾನವಾಗುತ್ತಿತ್ತು.
ಸಿತಾಂಶು ಕೋಟಕ್ ಹೇಳಿದ್ದೇನು?
ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು ಈ ಬಗ್ಗೆ ಮಾತನಾಡಿದ್ದು, 'ಅವರಿಗೆ ಸಿಗಬೇಕಾದ ಮನ್ನಣೆ ಮತ್ತು ಅವಕಾಶಗಳು ಖಂಡಿತವಾಗಿಯೂ ಸಿಗಲಿವೆ ಎಂಬ ನಂಬಿಕೆ ನನಗಿದೆ. ಹಾಗಾಗಿ ಕೇವಲ ಅವರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕಾಗಿ, ಈಗಾಗಲೇ ರನ್ ಗಳಿಸುತ್ತಿರುವ ಮತ್ತೊಬ್ಬ ಆಟಗಾರನನ್ನು ನಾವು ತಂಡದಿಂದ ಕೈಬಿಡುವುದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ,' ಎಂದು ಹೇಳಿದ್ದಾರೆ.
'ಮತ್ತೊಬ್ಬ ಆಟಗಾರನಿಗೆ ಅನ್ಯಾಯ ಮಾಡುವುದು ಮತ್ತು ಯಾರಿಗೋ ಒಬ್ಬರಿಗೆ ಅವಕಾಶ ನೀಡಲು ಪ್ರಯತ್ನಿಸುವುದು ಸರಿಯಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಜ್ಜಾಗಿರುವ ಇಷ್ಟೊಂದು ದೊಡ್ಡ ಪ್ರಮಾಣದ ಟಿ20 ಪ್ರತಿಭೆಗಳು ಲಭ್ಯವಿದ್ದಾರೆ. ಆದ್ದರಿಂದ ಆಯ್ಕೆಗಾರರ ಕೆಲಸವೂ ಕೂಡ ಅತ್ಯಂತ ಕಠಿಣವಾಗಿದೆ,' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಭಾರತದಲ್ಲಿ ಎಷ್ಟೊಂದು ಅದ್ಭುತ ಪ್ರತಿಭೆಗಳಿದ್ದಾರೆ ಎಂದರೆ ಅದು ಆಯ್ಕೆಗಾರರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಅಷ್ಟೊಂದು ದೊಡ್ಡ ತಲೆನೋವಿಲ್ಲ. ಏಕೆಂದರೆ ನಾನು ಮುಖ್ಯ ಕೋಚ್ ಅಥವಾ ನಾಯಕನಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ತಂಡವನ್ನು ಆಯ್ಕೆ ಮಾಡುವುದು ನಿಜಕ್ಕೂ ತುಂಬಾ ಕಠಿಣ ಆಗಿರುತ್ತದೆ,' ಎಂದು ಹೇಳಿದ್ದಾರೆ.
'ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿರುವವರನ್ನು ನಿರ್ಲಕ್ಷಿಸಬಾರದು ಎಂಬುದು ನನ್ನ ನಂಬಿಕೆ. ಯಾರು ಈಗಾಗಲೇ ರನ್ ಗಳಿಸುತ್ತಿದ್ದಾರೆಯೋ ಮತ್ತು ತಂಡಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿದ್ದಾರೋ ಅವರಿಗೆ ಆದ್ಯತೆ ನೀಡಬೇಕು. ಬಿಸಿಸಿಐನ ಉದ್ದೇಶವೇ ಅದೇ ಆಗಿದೆ. ಇಲ್ಲಿ ಹೊಸ ಆಟಗಾರರು ಬರುತ್ತಲಿರುತ್ತಾರೆ,' ಎಂದು ವಿಶ್ವಕಪ್ ಗೆದ್ದ ತಂಡದ ಆಟಗಾರನನ್ನು ಬೆಂಚ್ ಮೇಲೆ ಕೂರಿಸುವುದು ಎಷ್ಟು ಕಠಿಣ ಎಂಬ ಪ್ರಶ್ನೆಗೆ ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಉತ್ತರಿಸಿದರು. ಒಟ್ಟಿನಲ್ಲಿ ಇದೀಗ ವೈಭವ್ ಸೂರ್ಯವಂಶಿ ಅವರನ್ನು ಕೈಬಿಟ್ಟಿರುವುದು ಅಭಿಮಾನಿಗಳಿಗೆ ಬೇಸರ ಮೂಡಿದಂತಾಗಿದೆ.












Click it and Unblock the Notifications