ಹೆಲ್ಮೆಟ್ ಹಾಕದಿದ್ರೆ ಏನಾಗುತ್ತೆ ಅನ್ನೋರೆಲ್ಲ ಇಲ್ಲಿ ನೋಡಿ; ಮರದ ಕೊಂಬೆ ಬಿದ್ದು ಪ್ರಾಣಾಪಾಯ ಸ್ಥಿತಿ ತಲುಪಿದ ಬೈಕ್ ಸವಾರ
ಬೆಂಗಳೂರು: "ಯಾರಿಗೆ ಗೊತ್ತು ರೀ, ನಮ್ಮ ಹಣೆಬರಹ ಚೆನ್ನಾಗಿದ್ರೆ ಏನೂ ಆಗಲ್ಲ, ಬರೀ ಶೋಕಿಗೆ ಹೆಲ್ಮೆಟ್ ಹಾಕಬೇಕಾ?" ಎಂದು ಉಡಾಫೆಯಿಂದ ಮಾತನಾಡುವ ಬೈಕ್ ಸವಾರರೇ ಒಮ್ಮೆ ಇಲ್ಲಿ ನೋಡಿ. ನಮ್ಮ ಜಾಗರೂಕತೆಯಲ್ಲಿ ನಾವಿದ್ದರೂ, ವಿಧಿಯ ಆಟ ಯಾವ ರೂಪದಲ್ಲಿ ಬರುತ್ತೆ ಅಂತ ಹೇಳಲು ಸಾಧ್ಯವಿಲ್ಲ. ಬೆಂಗಳೂರಿನ ರಾಜಾಜಿನಗರ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ದಿಢೀರನೆ ಒಣಗಿದ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿ ಸವಾರ ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಮಾಯಕ ಜೀವವೊಂದು ಆಸ್ಪತ್ರೆ ಸೇರಲು ಕಾರಣವಾದ ಆ ಘೋರ ಘಟನೆಯ ವಿವರ ಇಲ್ಲಿದೆ.
ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ ಮತ್ತು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಅಮಾಯಕ ಬಲಿಯಾಗಿರುವ ಘಟನೆಯೊಂದು ನಡೆದಿದೆ. ರಾಜಾಜಿನಗರದ ಪ್ರಮುಖ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬನ ಮೇಲೆ ಒಣಗಿದ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿ ಸವಾರ ಮೊದಲಿಗೆ ರಸ್ತೆಯಲ್ಲೇ ಕುಸಿದುಬಿದ್ದಿದ್ದಾನೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ದಿಢೀರ್ ಮುರಿದು ಬಿದ್ದ ಕೊಂಬೆ
ರಾಜಾಜಿನಗರದ ರಾಮಮಂದಿರ ರಸ್ತೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. 52 ವರ್ಷದ ಸತೀಶ್ ಎಂಬುವವರು ತಮ್ಮ ಬೈಕ್‌ನಲ್ಲಿ ಫೈನಾನ್ಸ್ ಪೇಮೆಂಟ್ ಸಂಗ್ರಹಿಸಲು ಹೋಗುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿದ್ದ ಒಣಗಿದ ಮರದಿಂದ ಬೃಹತ್ ಕೊಂಬೆಯೊಂದು ದಿಢೀರನೆ ಸತೀಶ್ ಅವರ ತಲೆ ಮೇಲೆಯೇ ಮುರಿದು ಬಿದ್ದಿದೆ. ಇದರ ರಭಸಕ್ಕೆ ಬೈಕ್ ನಿಯಂತ್ರಣ ತಪ್ಪಿ ಅವರು ರಸ್ತೆಗೆ ಬಿದ್ದಿದ್ದಾರೆ. ತಲೆಗೆ ಗಂಭೀರವಾಗಿ ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತೀಶ್ ಅವರನ್ನು ತಕ್ಷಣವೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಬೇಜವಾಬ್ದಾರಿಗೆ ಆಕ್ರೋಶ
ಈ ಘಟನೆ ತಿಳಿಯುತ್ತಿದ್ದಂತೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರಸ್ತೆ ಬದಿಯಲ್ಲಿ ಒಣಗಿದ ಮರದ ಕೊಂಬೆಗಳು ಅಪಾಯಕಾರಿಯಾಗಿ ತೂಗಾಡುತ್ತಿವೆ, ಯಾವುದಾದರೂ ದೊಡ್ಡ ಅನಾಹುತ ಆಗುವ ಮುನ್ನ ಇವುಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗಳಿಗೆ ಹತ್ತಾರು ಬಾರಿ ದೂರು ನೀಡಿದ್ದೆವು. ಆದರೆ ನಮ್ಮ ದೂರುಗಳನ್ನು ಅಧಿಕಾರಿಗಳು ಕಸದ ಬುಟ್ಟಿಗೆ ಹಾಕಿದ್ದರು. ಅವರ ಈ ಬೇಜವಾಬ್ದಾರಿತನಕ್ಕೆ ಇಂದು ಒಬ್ಬ ಅಮಾಯಕ ಜೀವ ಆಸ್ಪತ್ರೆ ಸೇರುವಂತಾಗಿದೆ" ಎಂದು ಸ್ಥಳೀಯರು ಹಿಡಿಶಾಪ ಹಾಕಿದ್ದಾರೆ. ಬೆಂಗಳೂರಿನಲ್ಲಿ ಮಳೆಗಾಲ ಅಥವಾ ಬಿರುಗಾಳಿ ಬೀಸುವ ಸಮಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇದ್ದರೂ, ಬಿಬಿಎಂಪಿ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ಸಾರ್ವಜನಿಕರ ಆತಂಕಕ್ಕೆ ಒಳಗಾಗಿದ್ದಾರೆ.
A 50-year-old man sustained critical head injuries after a dried tree branch fell on him while he was riding his two-wheeler on Ramamandira Road in Rajajinagar on Wednesday evening.
— Hate Detector 🔍 (@HateDetectors) June 26, 2026
The victim, identified as Suresh, was reportedly on his way out for his daily errands when a… https://t.co/sZrduBlNcg pic.twitter.com/o0p3xduyS3
ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವಾಗ ನಾವು ಎಷ್ಟೇ ನಿಧಾನವಾಗಿ, ಜಾಗರೂಕರಾಗಿ ಗಾಡಿ ಓಡಿಸಿದರೂ ಅಪಾಯಗಳು ಯಾವ ರೂಪದಲ್ಲಿ ಬೇಕಾದರೂ ಎದುರಾಗಬಹುದು ಎಂಬುದಕ್ಕೆ ರಾಜಾಜಿನಗರದ ಈ ಘಟನೆಯೇ ಸಾಕ್ಷಿ. ರಸ್ತೆಯಲ್ಲಿ ಹೋಗುವಾಗ ಮರದ ಕೊಂಬೆ ಬೀಳುವುದು, ಕಲ್ಲುಗಳು ತಾಗುವುದು ಅಥವಾ ರಸ್ತೆ ಗುಂಡಿಗಳಿಂದಾಗಿ ಆಯತಪ್ಪಿ ಬೀಳುವಂತಹ ಅನಿರೀಕ್ಷಿತ ಅವಘಡಗಳು ನಮ್ಮ ಕೈಯಲ್ಲಿರುವುದಿಲ್ಲ.
ಆದರೆ, ಇಂತಹ ಸಂದರ್ಭಗಳಲ್ಲಿ ನಮ್ಮ ಪ್ರಾಣವನ್ನು ಕಾಪಾಡಬಲ್ಲ ಏಕೈಕ ಕವಚ ಎಂದರೆ ಅದು 'ಐಎಸ್‌ಐ (ISI) ಮುದ್ರೆ ಇರುವ ಗುಣಮಟ್ಟದ ಹೆಲ್ಮೆಟ್'. ಕೇವಲ ಟ್ರಾಫಿಕ್ ಪೊಲೀಸರಿಂದ ಬಚಾವಾಗಲು ತಲೆಯ ಮೇಲೊಂದು ಹೆಲ್ಮೆಟ್ ಇಟ್ಟುಕೊಳ್ಳುವ ಬದಲು, ನಿಮ್ಮ ಮನೆಯಲ್ಲಿ ನಿಮಗಾಗಿ ಕಾಯುತ್ತಿರುವ ಕುಟುಂಬವನ್ನು ನೆನೆದು ಹೆಲ್ಮೆಟ್ ಧರಿಸಿ. ಹೆಲ್ಮೆಟ್ ಧರಿಸಿದಾಗ ಅದರ ಬೆಲ್ಟ್ ಅನ್ನು ಕಡ್ಡಾಯವಾಗಿ ಲಾಕ್ ಮಾಡಿ. ಇಲ್ಲದಿದ್ದರೆ ಅಪಘಾತದ ಲಘು ರಭಸಕ್ಕೂ ಹೆಲ್ಮೆಟ್ ತಲೆಯಿಂದ ಹಾರಿ ಹೋಗಿ ಯಾವುದೇ ಪ್ರಯೋಜನವಾಗುವುದಿಲ್ಲ.
ಬೈಕ್ ಓಡಿಸುವವರಷ್ಟೇ ಅಲ್ಲದೆ, ಹಿಂದೆ ಕುಳಿತುಕೊಳ್ಳುವವರಿಗೂ ಹೆಲ್ಮೆಟ್ ಅಷ್ಟೇ ಅನಿವಾರ್ಯ. ಜೀವ ಎಲ್ಲರದೂ ಒಂದೇ. ರಸ್ತೆಗಳು ಸದಾ ಅನಿರೀಕ್ಷಿತ ತಿರುವುಗಳಿಂದ ಕೂಡಿರುತ್ತವೆ. ಕ್ಷಣಾರ್ಧದ ಬೇಜವಾಬ್ದಾರಿತನ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಬಹುದು. ಇಂದಿನಿಂದಲೇ ಪ್ರತಿ ಬಾರಿ ಬೈಕ್ ಹತ್ತುವಾಗಲೂ ಹೆಲ್ಮೆಟ್ ಧರಿಸುವುದನ್ನು ಮರೆಯದಿರಿ. ನಿಮ್ಮ ಸುರಕ್ಷತೆ, ನಿಮ್ಮ ಕೈಯಲ್ಲಿದೆ.













Click it and Unblock the Notifications