500 ಕೋಟಿ ಆಸ್ತಿಯಿದ್ದರೂ ಕಾಲಿಗೆ ಚಪ್ಪಲಿ, ನಷ್ಟದಲ್ಲಿದ್ದರೂ BMW ಕಾರು: ನಿಜವಾದ ಶ್ರೀಮಂತಿಕೆ ಅಂದ್ರೆ ಯಾವುದು?
ಇಂದಿನ ಕಾಲದಲ್ಲಿ ಶ್ರೀಮಂತಿಕೆ ಎಂದರೆ ಏನು? ಬ್ಯಾಂಕ್ ಅಕೌಂಟ್ನಲ್ಲಿರುವ ಕೋಟ್ಯಂತರ ಹಣವೋ ಅಥವಾ ನಾವು ಬಳಸುವ ಐಷಾರಾಮಿ ವಸ್ತುಗಳ ಪ್ರದರ್ಶನವೋ? ಈ ಪ್ರಶ್ನೆ ಈಗ ಅಂತರ್ಜಾಲದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಹೌದು, ಐಐಎಂ ಹಳೆಯ ವಿದ್ಯಾರ್ಥಿ ಅಂಕಿತ ಕೇಡಿಯಾ ಎಂಬುವವರು ಇತ್ತೀಚೆಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್, ಜನರ ಆಲೋಚನಾ ಲಹರಿಯನ್ನೇ ಬದಲಾಯಿಸುತ್ತಿದೆ. 500 ಕೋಟಿ ರೂಪಾಯಿ ಆಸ್ತಿ ಹೊಂದಿರುವ ವ್ಯಕ್ತಿಯೊಬ್ಬರ ಸರಳತೆ ಹಾಗೂ ಯಾವುದೇ ಲಾಭವಿಲ್ಲದಿದ್ದರೂ ಆಡಂಬರ ತೋರುವ ಸ್ಟಾರ್ಟ್ಅಪ್ ಸಂಸ್ಥಾಪಕನ ನಡುವಿನ ವ್ಯತ್ಯಾಸವನ್ನು ಈ ಪೋಸ್ಟ್ ತೆರೆದಿಟ್ಟಿದೆ.

500 ಕೋಟಿ ಆಸ್ತಿ, ಕಾಲಿಗೆ ಚಪ್ಪಲಿ: ಸರಳತೆಯೇ ಇವರ ಶ್ರೀಮಂತಿಕೆ
ಅಂಕಿತ ಕೇಡಿಯಾ ಅವರು ಇತ್ತೀಚೆಗೆ ತಮ್ಮ ವೃತ್ತಿಪರ ಕೆಲಸದ ನಿಮಿತ್ತ ಇಬ್ಬರು ವಿಭಿನ್ನ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಮೊದಲನೆಯವರು, ತಲತಲಾಂತರದಿಂದ ಬಂದ ಸುಮಾರು 500 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿಯ ಒಡೆಯ. ಇವರನ್ನು ಭೇಟಿಯಾಗಲು ಅಂಕಿತ ತೆರಳಿದಾಗ, ಯಾವುದಾದರೂ ಪಂಚತಾರಾ ಹೋಟೆಲ್ ಅಥವಾ ಐಷಾರಾಮಿ ಕ್ಲಬ್ನಲ್ಲಿ ಮೀಟಿಂಗ್ ಇರಬಹುದು ಎಂದು ಊಹಿಸಿದ್ದರು. ಆದರೆ, ಆ ಶ್ರೀಮಂತ ವ್ಯಕ್ತಿ ಅಂಕಿತ ಅವರನ್ನು ಕರೆದೊಯ್ದದ್ದು ಒಂದು ಸಾಧಾರಣ ದಕ್ಷಿಣ ಭಾರತೀಯ ಉಪಹಾರ ಗೃಹಕ್ಕೆ ಅಂದರೆ ಹೋಟೆಲ್ಗೆ.
ಅಲ್ಲಿ ಚಹಾ ಆರ್ಡರ್ ಮಾಡಿ, ಅತ್ಯಂತ ಸರಳವಾಗಿ "ಬೋಲೋ ಸೇಠ್" (ಹೇಳಿ ಸರ್) ಎಂದು ಮಾತು ಶುರುಮಾಡಿದರು. ಅವರ ಮೈಮೇಲೆ ಸಾಧಾರಣ ಬಟ್ಟೆ, ಕಾಲಿಗೆ ಚಪ್ಪಲಿ ಇತ್ತು. ಅವರ ಜೊತೆ ಯಾವುದೇ ಸಹಾಯಕರಾಗಲಿ, ಕಾರುಗಳ ದಂಡಾಗಲಿ ಅಥವಾ ಆಡಂಬರದ ಪ್ರದರ್ಶನವಾಗಲಿ ಇರಲಿಲ್ಲ.
ನಷ್ಟದಲ್ಲಿದ್ದರೂ BMW ಕಾರು: ಯುವ ಸಂಸ್ಥಾಪಕನ 'ಶೋ-ಆಫ್'
ಇದಾದ ಕೆಲವು ದಿನಗಳ ನಂತರ, ಅಂಕಿತ ಅವರು 30ರ ಹರೆಯದ ಯುವ ಸ್ಟಾರ್ಟ್ಅಪ್ ಸಂಸ್ಥಾಪಕನೊಬ್ಬನನ್ನು ಭೇಟಿಯಾದರು. ವಾಸ್ತವದಲ್ಲಿ ಈ ಕಂಪನಿ ಇನ್ನೂ ಯಾವುದೇ ಲಾಭ ಗಳಿಸುತ್ತಿಲ್ಲ. ಸಂಪೂರ್ಣವಾಗಿ ಹೂಡಿಕೆದಾರರ ಹಣದಲ್ಲಿಯೇ ನಡೆಯುತ್ತಿದೆ. ಆದರೆ, ಈ ಯುವಕ ಭೇಟಿಗೆ ಬಂದಿದ್ದು ಮಾತ್ರ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ. ಅಷ್ಟೇ ಅಲ್ಲ, ಒಂದು ಸಾಮಾನ್ಯ ಆನ್ಲೈನ್ ಕರೆಯಲ್ಲಿ ಸ್ಕ್ರೀನ್ ಶೇರ್ ಮಾಡಲು ಕೂಡ ಆತನಿಗೆ ತಂತ್ರಜ್ಞಾನ ನಿರ್ವಹಿಸಲು ಒಬ್ಬ ಅಸಿಸ್ಟೆಂಟ್ ಬೇಕಾಗಿತ್ತು.
ಈ ಎರಡೂ ಭೇಟಿಗಳ ಅನುಭವವನ್ನು ವಿವರಿಸಿದ ಅಂಕಿತ, "ಕೆಲವೊಮ್ಮೆ ಹಳೆಯ ಶ್ರೀಮಂತಿಕೆ ಮತ್ತು ಹೊಸ ಶ್ರೀಮಂತಿಕೆಯ ನಡುವಿನ ವ್ಯತ್ಯಾಸ ಎದ್ದು ಕಾಣುತ್ತದೆ. ಒಬ್ಬರಿಗೆ ತಾವು ಶ್ರೀಮಂತರು ಎಂಬ ನೆಮ್ಮದಿ ಇದೆ, ಮತ್ತೊಬ್ಬರಿಗೆ ತಾವು ಶ್ರೀಮಂತರು ಎಂದು ಇಡೀ ಜಗತ್ತಿಗೆ ತೋರಿಸಿಕೊಳ್ಳುವ ತವಕ ಇದೆ" ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ: ಯಾರು ಸರಿ, ಯಾರು ತಪ್ಪು?
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ತಮ್ಮದೇ ಆದ ಭಿನ್ನ-ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ನಿಜವಾದ ಶ್ರೀಮಂತರು ಆಡಂಬರ ಮಾಡುವುದಿಲ್ಲ ಎಂದು ಮೊದಲ ವ್ಯಕ್ತಿಯನ್ನು ಹೊಗಳಿದ್ದಾರೆ. ಆದರೆ, ಇನ್ನು ಕೆಲವರು ಯುವ ಸ್ಟಾರ್ಟ್ಅಪ್ ಸಂಸ್ಥಾಪಕನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬಳಕೆದಾರರೊಬ್ಬರು ಕಮೆಂಟ್ ಮಾಡಿ, "ವಯಸ್ಸಾದ ವ್ಯಕ್ತಿಗೆ ಈಗಾಗಲೇ ಸಮಾಜದಲ್ಲಿ ಒಂದು ಸ್ಥಾನಮಾನ ಸಿಕ್ಕಿದೆ, ಆಸ್ತಿ ಇದೆ. ಅವರಿಗೆ ಆಡಂಬರದ ಅಗತ್ಯವಿಲ್ಲ. ಆದರೆ ಯುವಕ ಇನ್ನೂ ಬೆಳೆಯುವ ಹಂತದಲ್ಲಿದ್ದಾನೆ. ಆತ ಐಷಾರಾಮಿ ಕಾರಿನಲ್ಲಿ ಬರದಿದ್ದರೆ, ಆತನನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಮತ್ತು ಹೂಡಿಕೆದಾರರು ಫಂಡ್ ನೀಡುವುದಿಲ್ಲ. ಅದು ಆತನ ಅನಿವಾರ್ಯತೆ" ಎಂದು ಬರೆದಿದ್ದಾರೆ.
Recently, I consulted a guy with generational wealth and a net worth of over ₹500 crore.
— Ankit Kedia (@Ankittskedia) June 24, 2026
When he asked me to meet, I was expecting a fancy 5-star hotel or some luxury club.
Instead, he took me to a simple South Indian breakfast place, ordered tea, sat down, and said, "Bolo…
ಮತ್ತೊಬ್ಬರು, "ಹಣವಿದ್ದ ಮೇಲೆ ಅದನ್ನು ಅನುಭವಿಸಬೇಕು, ಬರೀ ಕೂಡಿಟ್ಟುಕೊಂಡರೆ ಏನು ಪ್ರಯೋಜನ? ಶ್ರೀಮಂತಿಕೆ ಎಂಬುದು ಕಾಲ ಮತ್ತು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ" ಎಂದಿದ್ದಾರೆ. ಒಟ್ಟಿನಲ್ಲಿ, ಯಶಸ್ಸು ಮತ್ತು ಹಣವನ್ನು ಸಮಾಜದಲ್ಲಿ ಹೇಗೆ ಪ್ರದರ್ಶಿಸಬೇಕು ಎಂಬ ಬಗ್ಗೆ ಈ ಘಟನೆ ಒಂದು ನೈಜ ಚಿತ್ರಣವನ್ನು ನೀಡಿದೆ.












Click it and Unblock the Notifications