Amulya: ಬೆಂಗಳೂರಿನ ಈ ದುಬಾರಿ ಏರಿಯಾದಲ್ಲಿ ಓಪನ್ ಆಯ್ತು ನಟಿ ಅಮೂಲ್ಯ ಒಡೆತನದ ಸ್ವರ್ಗದಂತ ಪಬ್
ಸ್ಯಾಂಡಲ್‌ವುಡ್‌ನ ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಜಗದೀಶ್ ತಮ್ಮ ಕೆರಿಯರ್‌ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ರಂಗದಲ್ಲಿ ಸದ್ಯ ಸಕ್ರಿಯವಾಗಿ ನಟಿಸುವುದು ಕಡಿಮೆಯಾಗಿದ್ದರೂ, ಉದ್ಯಮಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಅಮೂಲ್ಯ, ಬೆಂಗಳೂರಿನ ದುಬಾರಿ ಏರಿಯಾಗಳಲ್ಲಿ ಒಂದಾದ ರಾಜರಾಜೇಶ್ವರಿ ನಗರದಲ್ಲಿ (RR Nagar) ಐಷಾರಾಮಿ ಮತ್ತು ನಯನಮನೋಹರವಾದ ಪಬ್ ತೆರೆದಿದ್ದಾರೆ. ಸ್ವರ್ಗವೇ ಧರೆಗಿಳಿದಂತೆ ಕಾಣುವ ಈ ಪಬ್‌ನ ಅದ್ಧೂರಿ ಉದ್ಘಾಟನಾ ಸಮಾರಂಭಕ್ಕೆ ಇಡೀ ಸ್ಯಾಂಡಲ್‌ವುಡ್ ತಾರಾಗಣವೇ ಹರಿದುಬಂದಿತ್ತು.
ನಟಿ ಅಮೂಲ್ಯ ಅವರ ಈ ಕನಸಿನ ಯೋಜನೆಗೆ ಅವರ ಪತಿ ಜಗದೀಶ್ ಬೆಂಬಲ ನೀಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ತಲೆಎತ್ತಿರುವ ಈ ಪ್ರೀಮಿಯಂ ಪಬ್‌ಗೆ ʻಜೀರೋ ಡಿಗ್ರಿ ಆನ್ ದಿ ಹಿಲ್ʼ (Zero Degree on the Hill) ಎಂದು ಹೆಸರಿಡಲಾಗಿದೆ. ಇದರ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಸಾಕ್ಷಿಯಾದರು.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ದಂಪತಿ, ಶರಣ್, ಹಿರಿಯ ನಟಿ ಶ್ರುತಿ ಮತ್ತು ಪುತ್ರಿ ಗೌರಿ, ಮಾಳವಿಕಾ ಅವಿನಾಶ್, ಮಯೂರಿ, ಲೂಸ್ ಮಾದ ಯೋಗಿ, ಸತೀಶ್ ನೀನಾಸಂ, ಡಾಲಿ ಧನಂಜಯ್, ಆರಾಧನಾ ರಾಮ್, ದಿಶಾ ಮದನ್, ಪ್ರಗತಿ ಶೆಟ್ಟಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಭಾಗವಹಿಸಿ ಅಮೂಲ್ಯ-ಜಗದೀಶ್ ದಂಪತಿಗೆ ಶುಭ ಹಾರೈಸಿದರು.
ಗುಡ್ಡದ ಮೇಲಿದೆ ಈ ಸುಂದರ ಲೋಕ
ಹೆಸರೇ ಸೂಚಿಸುವಂತೆ ʻಜೀರೋ ಡಿಗ್ರಿ ಆನ್ ದಿ ಹಿಲ್ʼ ಪಬ್ ಆರ್.ಆರ್. ನಗರದ ಸುಂದರವಾದ ಗುಡ್ಡದ ಮಾದರಿಯ ಎತ್ತರದ ಪ್ರದೇಶದಲ್ಲಿದೆ. ಈ ಎತ್ತರವಾದ ಜಾಗದಿಂದ ಇಡೀ ಬೆಂಗಳೂರು ನಗರದ ಸುಂದರ ನೋಟ ಕಣ್ಣಿಗೆ ಕಟ್ಟುವಂತೆ ಕಾಣುತ್ತದೆ. ಪ್ರಕೃತಿಯ ತಂಗಾಳಿ ಮತ್ತು ಸಿಟಿ ಲೈಟಿಂಗ್ಸ್ ಸವಿಯುತ್ತಾ ದಿನ ಕಳೆಯಲು ಇದು ಅತ್ಯಂತ ಸೂಕ್ತವಾದ ತಾಣವಾಗಿದೆ. ಈ ಪಬ್‌ನ ಇಂಟೀರಿಯರ್ ಡಿಸೈನ್ ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸುವಂತಿದೆ. ಅತ್ಯಂತ ಆಧುನಿಕ ಹಾಗೂ ಕ್ಲಾಸಿಕ್ ಶೈಲಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದ್ದು, ಅತ್ಯಾಧುನಿಕ ಲೈಟಿಂಗ್ ಮತ್ತು ವಿಶಾಲವಾದ ಸಿಟ್ಟಿಂಗ್ ಏರಿಯಾ ಪ್ರೀಮಿಯಂ ಲುಕ್ ನೀಡುತ್ತದೆ.
ವಿನ್ಯಾಸಕ್ಕೆ ಯೂತ್ ಫಿದಾ
ಪಬ್‌ನ ಒಳಗಡೆ ನೀರು ಹರಿಯುವ ಮತ್ತು ಐಷಾರಾಮಿ ಪೂಲ್ ಮಾದರಿಯ ವಿನ್ಯಾಸವನ್ನು ಮಾಡಲಾಗಿದ್ದು, ಇದು ಇಲ್ಲಿಗೆ ಬರುವ ಗ್ರಾಹಕರಿಗೆ ಸಂಪೂರ್ಣ ರಿಫ್ರೆಶಿಂಗ್ ಮತ್ತು ಸ್ವರ್ದ ಅನುಭವ ನೀಡುತ್ತದೆ. ಬೆಳ್ಳಿತೆರೆಯಲ್ಲಿ ಮಿಂಚಿದ್ದ ನಟಿ ಅಮೂಲ್ಯ, ಈಗ ಉದ್ಯಮ ರಂಗದಲ್ಲೂ ಯಶಸ್ಸಿನತ್ತ ಹೆಜ್ಜೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಪಬ್ ಉದ್ಘಾಟನಾ ಸಮಾರಂಭದ ಫೋಟೋ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪಬ್‌ನ ವಿಡಿಯೋ ನೋಡಿ ಜನ ಹುಬ್ಬೇರಿಸಿದ್ದಾರೆ.
ರಾಜರಾಜೇಶ್ವರಿ ನಗರ ಈಗಾಗಲೇ ಹಲವು ಸ್ಟಾರ್ ನಟ-ನಟಿಯರ ಮತ್ತು ಗಣ್ಯರ ಫೇವರೇಟ್ ಜಾಗವಾಗಿ ಗುರುತಿಸಿಕೊಂಡಿದೆ. ಈಗ ಅಮೂಲ್ಯ ಅವರ ಈ ಹೈ-ಫೈ ಪಬ್ ಆರಂಭವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಇದು ಸ್ಯಾಂಡಲ್‌ವುಡ್ ತಾರೆಯರ ವೀಕೆಂಡ್ ಹ್ಯಾಂಗೌಟ್ ಮತ್ತು ಪಾರ್ಟಿಗಳಿಗೆ ಪ್ರಮುಖ ಹಬ್ ಆಗಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಈ ಪಬ್‌ನ ಒಳಾಂಗಣ ವಿನ್ಯಾಸವನ್ನು ಕೇವಲ ಪಾರ್ಟಿ ಪ್ರಿಯರನ್ನು ಮಾತ್ರವಲ್ಲದೆ, ಇಂದಿನ ಯೂತ್ಸ್ ಮತ್ತು ಇನ್‌ಸ್ಟಾಗ್ರಾಮ್ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಪ್ರತಿಯೊಂದು ಮೂಲೆಯೂ ಅತ್ಯಂತ ಸುಂದರವಾದ ಲೈಟಿಂಗ್ಸ್ ಹೊಂದಿದ್ದು, ಪಬ್‌ನ ಒಳಗೆ ನಿರ್ಮಿಸಲಾಗಿರುವ ಕೃತಕ ಜಲಪಾತ ಹಾಗೂ ಪೂಲ್ ಮಾದರಿಯ ವಿನ್ಯಾಸವು ರೀಲ್ಸ್ ಮಾಡಲು ಅತ್ಯುತ್ತಮ ಬ್ಯಾಕ್‌ಗ್ರೌಂಡ್ ನೀಡುತ್ತದೆ.
'ಚೆಲುವಿನ ಚಿತ್ತಾರ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಅಮೂಲ್ಯ ಅವರು ಮದುವೆಯ ನಂತರ ಹಾಗೂ ತಾಯಿಯಾದ ಬಳಿಕ ಬೆಳ್ಳಿತೆರೆಯಿಂದ ಸಂಪೂರ್ಣ ದೂರ ಸರಿದಿದ್ದರು. ಅವರು ಮತ್ತೆ ಸಿನಿಮಾಗೆ ಬರಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ, ಅಮೂಲ್ಯ ಈಗ ಉದ್ಯಮಿಯಾಗಿ ಗ್ರಾಂಡ್ ಎಂಟ್ರಿ ಕೊಟ್ಟಿರುವುದು ಒಂದು ದೊಡ್ಡ ಸರ್ಪ್ರೈಸ್ ನೀಡಿದಂತಾಗಿದೆ. ಸಿನಿಮಾ ಮಾಡದಿದ್ದರೂ ಬ್ಯುಸಿನೆಸ್ ವುಮನ್ ಆಗಿ ಅವರು ಯಶಸ್ವಿಯಾಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.













Click it and Unblock the Notifications