Rajath: ಬಿಗ್‌ಬಾಸ್ ರಜತ್ ವಿರುದ್ಧ ಮತ್ತೆರಡು ದೂರು ದಾಖಲು: ಪೊಲೀಸರಿಂದ ವಿಚಾರಣೆಗೆ ಸಿದ್ಧತೆ
ಬೆಂಗಳೂರು: ಬಿಗ್‌ಬಾಸ್ ಖ್ಯಾತಿಯ ರಜತ್ ಕಿಶನ್ (ಬುಜ್ಜಿ) ವಿರುದ್ಧ ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಹಾಗೂ ಡಾಗ್ ಸತೀಶ್ ಅವರಿಗೆ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಕೆ.ಆರ್.ಪುರ ಪೊಲೀಸರಿಗೆ ದೂರು ನೀಡಿದ್ದಾರೆ. ರಜತ್ ವಿರುದ್ಧ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ರಜತ್ ಅವರಿಗೆ ನೋಟಿಸ್ ನೀಡಲು ಕೆ.ಆರ್.ಪುರಂ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಆರೋಪ?
ಬಿಗ್‌ಬಾಸ್ ಮಾಜಿ ಸ್ಪರ್ಧಿ 'ಡಾಗ್ ಸತೀಶ್' (ಸತೀಶ್ ಕ್ಯಾಡಬಮ್ಸ್) ಜೊತೆಗಿನ ಸ್ನೇಹವನ್ನು ಬಿಡುವಂತೆ ರಜತ್ ಅವರು ಗಿರೀಶ್ ಕುಮಾರ್ ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಫೋನ್ ಮೂಲಕ ಗಿರೀಶ್ ಅವರಿಗೆ ಸಂಪರ್ಕಿಸಿದ ರಜತ್, ತೊಂದರೆ ಕೊಡುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಿರೀಶ್ ಅವರ ಕಾರಿನ ಫೋಟೋವನ್ನು ಅವರಿಗೆ ಕಳುಹಿಸಿ, ಅವರ ಚಲನವಲನದ ಮೇಲೆ ಕಣ್ಣಿಟ್ಟಿರುವುದಾಗಿ ಹೇಳುವ ಮೂಲಕ ಮಾನಸಿಕವಾಗಿ ಆತಂಕ ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ದೂರುದಾರ ಗಿರೀಶ್ ಕುಮಾರ್ ಅವರ ಕಾರಿನ ಫೋಟೋವನ್ನು ಅವರದ್ದೇ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ರಜತ್ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. "ಸರ್, ಇದು ರಜತ್ ಬುಜ್ಜಿ, ಕಾಲ್ ಮಾಡ್ತಿದ್ದೀನಿ ಕಾಲ್ ಬ್ಯಾಕ್ ಮಾಡ್ತೀರಾ.. ಇಲ್ಲ ನಾವೇ ಒಳಗೆ ಕಳಿಸಬೇಕಾ?" ಎಂದು ಸಂದೇಶ ಕಳುಹಿಸುವ ಮೂಲಕ ನೇರವಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಜತ್ ವಿರುದ್ಧ ಕೇಳಿಬಂದಿರುವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ದೂರುದಾರರು ಸಲ್ಲಿಸಿರುವ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಪೊಲೀಸರು ಈಗಾಗಲೇ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಪ್ರಕರಣದ ಆಳ-ಅಗಲಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ದೂರುದಾರ ಗಿರೀಶ್ ಕುಮಾರ್ ಅವರು ಪೊಲೀಸರಿಗೆ ನೀಡಿರುವ ಆಡಿಯೋ ರೆಕಾರ್ಡಿಂಗ್‌ಗಳು, ವಾಟ್ಸಾಪ್ ಸಂದೇಶಗಳು ಮತ್ತು ಫೋಟೋಗಳನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ದಾಖಲೆಗಳಲ್ಲಿರುವ ಧ್ವನಿ ಮತ್ತು ಸಂದೇಶಗಳು ರಜತ್ ಅವರದ್ದೇ ಎಂಬ ಬಗ್ಗೆ ತಾಂತ್ರಿಕ ತನಿಖೆ ನಡೆಯುತ್ತಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ದೂರಿನಲ್ಲಿರುವ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಕೆ.ಆರ್.ಪುರ ಪೊಲೀಸರು ಶೀಘ್ರದಲ್ಲೇ ರಜತ್ ಅವರಿಗೆ ಅಧಿಕೃತ ನೋಟಿಸ್ ನೀಡಲು ನಿರ್ಧರಿಸಿದ್ದಾರೆ. ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಿ, ಈ ಬೆದರಿಕೆಯ ಹಿಂದಿನ ಉದ್ದೇಶಗಳ ಬಗ್ಗೆ ರಜತ್ ಅವರನ್ನು ನೇರವಾಗಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರೆಯಲ್ಲಿ ಮಾತನಾಡಿ ಬೆದರಿಕೆ ಹಾಕಿರುವುದು ನಿಜವಾಗಿಯೂ ರಜತ್ ಅವರೇನಾ ಅಥವಾ ಬೇರೆ ಯಾರಾದರೂ ಅವರ ಹೆಸರನ್ನು ಬಳಸುತ್ತಿದ್ದಾರಾ ಎಂಬ ಬಗ್ಗೆಯೂ ಪೊಲೀಸರು ವೈಜ್ಞಾನಿಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಡಾಗ್ ಸತೀಶ್‌ಗೂ ಕೊಲೆ ಬೆದರಿಕೆ
ರಜತ್ ಅವರಿಗೆ ಈ ಹಿಂದೆಯೂ ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ ಸೇರಿದಂತೆ ಕೆಲವು ಕಾನೂನು ಸಂಕಷ್ಟಗಳು ಎದುರಾಗಿದ್ದವು. ಈಗ ಈ ಹೊಸ ಪ್ರಕರಣವು ಅವರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್‌ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ರಜತ್ ವಿರುದ್ಧ ಮತ್ತೊಂದು ಪ್ರಕರಣ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.












Click it and Unblock the Notifications