ಅಯೋಧ್ಯೆಗೆ ಹೊರಟಿದ್ದ ಉಮಾ ಭಾರತಿಯನ್ನು ತಡೆದು ನಿಲ್ಲಿಸಿದರೇ ಅಮಿತ್ ಶಾ?

Written By:
Subscribe to Oneindia Kannada

ನವದೆಹಲಿ, ಏ 19: ರಾಮಜನ್ಮಭೂಮಿ - ಬಾಬ್ರಿ ಮಸೀದಿ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಬುಧವಾರ (ಏ 19) ನೀಡಿದ್ದ ತೀರ್ಪಿನ ಬೆನ್ನಲ್ಲೇ, ಆಯೋಧ್ಯೆಗೆ ಹೊರಟಿದ್ದ ಕೇಂದ್ರ ಸಚಿವೆ ಉಮಾ ಭಾರತಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಡೆದು ನಿಲ್ಲಿಸಿದ್ದಾರೆ.

ಹೌದು, ಬಾಬ್ರಿ ಮಸೀದಿ ನೆಲಸಮಗೊಂಡಾಗ ನಾನು ಅಯೋಧ್ಯೆಯಲ್ಲಿದ್ದೆ, ಸಚಿವ ಸ್ಥಾನಕ್ಕಾಗಿ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ ಎಂದು ಹೇಳಿಕೆ ನೀಡಿದ್ದ, ಕೇಂದ್ರ ಜಲಸಂಪನ್ಮೂಲ ಖಾತೆಯ ಸಚಿವೆ ಉಮಾ ಭಾರತಿ, ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಈ ರೀತಿಯ ಹೇಳಿಕೆಯನ್ನು ನೀಡಿದ್ದರು. (ಜೈಲಿಗೆ ಹೋಗಲು ಸಿದ್ಧ : ಉಮಾ ಭಾರತಿ)

ಪಕ್ಷದ ಫೈರ್ ಬ್ರಾಂಡ್ ಲೇಡಿ ಉಮಾ ಹೇಳಿಕೆಯ ಬೆನ್ನಲ್ಲೇ, ಪಕ್ಷದ ಕಚೇರಿಗೆ ಉಮಾ ಅವರನ್ನು ಕರೆಸಿಕೊಂಡ ಅಮಿತ್ ಶಾ, ಅಯೋಧ್ಯೆಗೆ ಪೂಜೆ ಸಲ್ಲಿಸಲು ಹೋಗುವ ನಿರ್ಧಾರ ಈ ಕೂಡಲೇ ಕೈಬಿಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

After Meeting With Amit Shah, Uma Bharti Cancels Ayodhya Visit

ಅಮಿತ್ ಶಾ ಭೇಟಿಯ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ರಾಷ್ಟ್ರಾಧ್ಯಕ್ಷರ ಸೂಚನೆಯ ಮೇರೆಗೆ ಅಯೋಧ್ಯಾ ಭೇಟಿ ರದ್ದು ಪಡಿಸಿರುವುದಾಗಿ ಉಮಾ ಭಾರತಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ನಂತರ ಪತ್ರಿಕಾಗೋಷ್ಠಿಯಲ್ಲಿ ಭಾವೋದ್ವೇಗಕ್ಕೊಳಗಾಗಿ ಮಾತನಾಡುತ್ತಿದ್ದ ಉಮಾ, ತ್ರಿವರ್ಣ ಧ್ವಜ, ಹಸು, ಗಂಗೆ, ಅಯೋಧ್ಯೆ ವಿಚಾರದಲ್ಲಿ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ದ. ಇಂದು ರಾತ್ರಿ (ಏ 19) ಕೈಫಾಯತ್ ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣಿಸಿ, ನಾಳೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದೇನೆಂದು ಉಮಾ ಹೇಳಿದ್ದರು.

ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಲಹೆಯ ಮೇರೆಗೆ ಅಮಿತ್ ಶಾ, ಉಮಾ ಅವರನ್ನು ಅಯೋಧ್ಯೆಗೆ ಹೋಗದಂತೆ ತಡೆದಿದ್ದಾರೆ ಎನ್ನಲಾಗುತ್ತಿದೆ.

ದೆಹಲಿಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುವ ಉಮಾ ಭಾರತಿ, ಚುನಾವಣೆಯ ಕಾರಣ ನೀಡಿ ಅಯೋಧ್ಯೆಗೆ ಹೋಗಲಾಗಿಲ್ಲ ಎನ್ನುವ ಹೇಳಿಕೆ ನೀಡುವ ಸಾಧ್ಯತೆಯಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister Uma Bharti has cancelled the visit to Ayodhya in Uttar Pradesh that she had announced a few hours ago after meeting with BJP National President Amit Shah.
Please Wait while comments are loading...