ನಾನು ರಾಜಕೀಯ ಬಿಟ್ಟಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಬಿಜೆಪಿ ವಿರುದ್ಧ ಉಮಾ ಭಾರತಿ ಸಮರ?
ಭೋಪಾಲ್, ಸೆಪ್ಟೆಂಬರ್ 13: ಬಿಜೆಪಿ ನಾಯಕತ್ವದ ಜೊತೆ ಮುನಿಸಿಕೊಂಡಿರುವ ಹಿರಿಯ ನಾಯಕಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. 'ನಾನು ರಾಜಕೀಯವನ್ನು ತೊರೆದಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಸೃಷ್ಟಿಸಿದ್ದಾರೆ.
ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ನಾನು ದೀರ್ಘಕಾಲದಿಂದ ಕೆಲಸ ಮಾಡುತ್ತಿದ್ದೆ. ಆ ಹಿನ್ನೆಲೆಯಲ್ಲಿ ಐದು ವರ್ಷಗಳ ವಿರಾಮವನ್ನು ತೆಗೆದುಕೊಂಡಿದ್ದೇನೆ. ಈಗ ಮತ್ತೆ ಚುನಾವಣಾ ರಾಜಕಾರಣಕ್ಕೆ ಬರುತ್ತೇನೆ' ಎಂದು ಹೇಳಿದ್ದಾರೆ.

'ದೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದ ಕಾರಣ (ಕಳೆದ ಬಾರಿ) ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದೆ. ಐದು ವರ್ಷಗಳ ಕಾಲ ವಿರಾಮ ತೆಗೆದುಕೊಳ್ಳಲು ಯೋಚಿಸಿದೆ. ನಾನು ರಾಜಕೀಯ ಬಿಟ್ಟಿದ್ದೇನೆ ಎಂಬುದಾಗಿ ಜನ ಭಾವಿಸಿದ್ದಾರೆ. ಆದರೆ ನಾನು ರಾಜಕೀಯ ಬಿಟ್ಟಿಲ್ಲ' ಎಂದು ತಿಳಿಸಿದ್ದಾರೆ.
ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ ಮತ್ತು ಲಲಿತ್‌ಪುರ-ಸಿಂಗ್ರೌಲಿ ರೈಲು ಮಾರ್ಗ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿದ ಉಮಾಭಾರತಿ, ತಾನು ರಾಜಕೀಯದಲ್ಲಿರುವುದರಿಂದ ಈ ಯೋಜನೆಗಳು ಸಾಕಾರಗೊಂಡವು ಎಂದು ಹೇಳಿದ್ದಾರೆ.
'ನನಗೆ 75 ವರ್ಷವಾಗಲಿ ಅಥವಾ 85 ವರ್ಷವಾಗಲಿ ನಾನು ಸಕ್ರಿಯ ರಾಜಕಾರಣದಲ್ಲಿಯೇ ಉಳಿದು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನಗೆ ರಾಜಕೀಯ ಎಂದರೆ ತುಂಬಾ ಇಷ್ಟವಾಗುತ್ತದೆ' ಎಂದು ತಿಳಿಸಿದ್ದಾರೆ.
ಈ ವರ್ಷ ನವೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಿಗದಿಯಾಗಿದೆ. ಈಗ ಉಮಾಭಾರತಿ ನೀಡಿರುವ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಉಮಾಭಾರತಿ ಅವರು ಕೊನೆಯ ಬಾರಿಗೆ 2014 ರಲ್ಲಿ ಝಾನ್ಸಿ (ಉತ್ತರ ಪ್ರದೇಶ) ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಗೆದ್ದ ನಂತರ ಕೇಂದ್ರದಲ್ಲಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
ಈ ತಿಂಗಳ ಆರಂಭದಲ್ಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆರಂಭಿಸಿರುವ 'ಜನ ಆಶೀರ್ವಾದ್ ಯಾತ್ರೆ'ಗೆ ಉಮಾ ಭಾರತಿಯನ್ನು ಆಹ್ವಾನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕತ್ವದೊಂದಿಗೆ ಉಮಾಭಾರತಿ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ, ಉಮಾಭಾರತಿ ಅವರು ಸಕ್ರಿಯ ರಾಜಕಾರಣಕ್ಕೆ ಮರಳಿದರೆ, ಬಿಜೆಪಿ ವಿರುದ್ಧ ಸಮರ ಸಾರುವರೇ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಮಧ್ಯಪ್ರದೇಶದ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ, ಬಿಜೆಪಿ ವಿರೋಧ ಅಲೆ ಇದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುವುದಾಗಿ ಸಮೀಕ್ಷೆಗಳು ತಿಳಿಸಿವೆ. ಒಂದು ವೇಳೆ, ಉಮಾಭಾರತಿ ಅವರು ಬಿಜೆಪಿ ವಿರುದ್ಧ ಬಂಡಾಯವೆದ್ದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು ನಿಶ್ಚಿತವಾಗಿದೆ.












Click it and Unblock the Notifications