ಮದ್ಯದಂಗಡಿ ಮೇಲೆ ಕಲ್ಲು ತೂರಿ ಬಿಜೆಪಿ ನಾಯಕಿ ಉಮಾ ಭಾರತಿ ಆಕ್ರೋಶ
ಭೋಪಾಲ್, ಮಾರ್ಚ್ 14: ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ, ನಗರದ ಮದ್ಯದಂಗಡಿ ಮೇಲೆ ಕಲ್ಲು ತೂರಿ ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಲಾಠಿ ಹಿಡಿಯುವುದಾಗಿ ಉಮಾ ಭಾರತಿ ಹೇಳಿದ್ದರು, ಆದರೆ, ಲಾಠಿ ಬದಲು ಕಲ್ಲನ್ನು ತೆಗೆದುಕೊಂಡ ಉಮಾ ಭಾರತಿ, ಬಿಎಚ್ಇಎಲ್ ಟೌನ್ ಶಿಪ್ ನಲ್ಲಿರುವ ಮದ್ಯದಂಗಡಿಯ ಮೇಲೆ ಕಲ್ಲು ತೂರಿದ್ದಾರೆ. ಈ ವಿಚಾರವನ್ನು ಟ್ವಿಟ್ಟರ್ ನಲ್ಲೂ ಅವರು ಹಂಚಿಕೊಂಡಿದ್ದಾರೆ.
ಮಹಿಳೆಯರ ರಕ್ಷಣೆಗಾಗಿ ನಾನು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಒಂದು ವಾರದೊಳಗೆ ಮದ್ಯದಂಗಡಿ ಮುಚ್ಚುವಂತೆ ಸ್ಥಳೀಯ ಆಡಳಿತಕ್ಕೆ ತಾಕೀತು ಮಾಡಿರುವುದಾಗಿ ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

"ಬರ್ಖೇಡಾ ಪಠಾನಿ ಪ್ರದೇಶದಲ್ಲಿ ಕಾರ್ಮಿಕರ ಕಾಲೋನಿಯಲ್ಲಿ ಹಲವಾರು ಮದ್ಯದ ಅಂಗಡಿಗಳಿವೆ, ಇಂತಹ ಅಂಗಡಿಗಳಿಂದ ಕೂಲಿ ಕಾರ್ಮಿಕರ ಹಣ ಪೋಲಾಗುತ್ತದೆ. ಸರಕಾರದ ನೀತಿಗೆ ವಿರುದ್ಧವಾಗಿ ಮದ್ಯದಂಗಡಿ ಇರುವುದರಿಂದ ಇಲ್ಲಿನ ನಿವಾಸಿಗಳು, ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ" ಎಂದು ಉಮಾ ಭಾರತಿ ಟ್ವೀಟ್ ನಲ್ಲಿ ಹೇಳಿದ್ದಾರೆ.
"ಈ ಹಿಂದೆಯೂ ಅಂಗಡಿ ಮುಚ್ಚುವುದಾಗಿ ಆಡಳಿತ ಮಂಡಳಿ ಹಲವು ಬಾರಿ ಭರವಸೆ ನೀಡಿತ್ತು. ಹಲವು ವರ್ಷಗಳಿಂದ ಇದು ಕಾರ್ಯರೂಪಕ್ಕೆ ಬಂದಿಲ್ಲ"ಎಂದು ಉಮಾ ಭಾರತಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿ, ವಿಡಿಯೋವನ್ನು ಸ್ವತಃ ಹಂಚಿ ಕೊಂಡಿದ್ದಾರೆ.
ಕಳೆದ ವರ್ಷ, ಜನವರಿ 15 ರೊಳಗೆ ರಾಜ್ಯದಲ್ಲಿ ಮದ್ಯವನ್ನು ನಿಷೇಧಿಸಬೇಕು ಇಲ್ಲದಿದ್ದರೆ, ಲಾಠಿಯೊಂದಿಗೆ ಬೀದಿಗಿಳಿಯಿರಿ ಎಂದು ಉಮಾ ಭಾರತಿ ಕರೆ ನೀಡಿದ್ದರು. ಆದರೆ, ಅಂತಹ ಕ್ರಮದಿಂದ ದೂರವಿದ್ದ ಮಧ್ಯಪ್ರದೇಶ ಸರ್ಕಾರ, ಗಡುವು ನೀಡಿದ್ದ ಎರಡು ದಿನಗಳ ನಂತರ ಹೊಸ ಅಬಕಾರಿ ನೀತಿಯನ್ನು ಘೋಷಿಸಿ, ಮದ್ಯವನ್ನು ಅಗ್ಗವಾಗಿಸಿತ್ತು.
1) बरखेड़ा पठानी आझाद नगर, बीएचईएल भोपाल , यहाँ मज़दूरों की बस्ती में शराब की दुकानों की शृंखला हैं जो की एक बड़े आहाता में लोगों को शराब परोसते हैं । pic.twitter.com/dNAXrh1jRY
— Uma Bharti (@umasribharti) March 13, 2022
ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರ ವಿದೇಶಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.10-13ರಷ್ಟು ಕಡಿತಗೊಳಿಸಿತ್ತು. ಮದ್ಯದ ಅಂಗಡಿಗಳು ವಿದೇಶಿ ಮತ್ತು ದೇಶದ ಮದ್ಯವನ್ನು ಒಟ್ಟಿಗೆ ಮಾರಾಟ ಮಾಡಲು ಸಹ ಅನುಮತಿ ನೀಡಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ 2,544 ದೇಶೀಯ ಮದ್ಯ ಹಾಗೂ 1,061 ವಿದೇಶಿ ಮದ್ಯದ ಅಂಗಡಿಗಳಿವೆ.












Click it and Unblock the Notifications