PBKS vs RCB: ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿಗೆ ಹೊಸ ನಾಯಕ
RCB Vs PBKS IPL 2026: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆಯಲಿರುವ ಐಪಿಎಲ್ 2026ರ 61ನೇ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಿಂದ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಹೊರಗುಳಿದಿದ್ದು, ಅವರ ಸ್ಥಾನವನ್ನು ಜಿತೇಶ್ ಶರ್ಮಾ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆಯೇ ಹಂಗಾಮಿ ನಾಯಕ ಜಿತೇಶ್ ಶರ್ಮಾ ಅವರ ನೇತೃತ್ವದಲ್ಲಿ ಆರ್‌ಸಿಬಿ ಮೊದಲು ಬ್ಯಾಟ್ ಬೀಸಲು ಸಜ್ಜಾಗಿದೆ. ಈ ಪಂದ್ಯ ಎರಡೂ ತಂಡಗಳಿಗೂ ಬಹುಮುಖ್ಯವಾಗಿದ್ದು, ಭಾರೀ ಕುತೂಹಲ ಹುಟ್ಟುಹಾಕಿದೆ. ಅದರಲ್ಲೂ ಗಾಯದ ಕಾರಣ ರಜತ್ ಪಾಟಿದಾರ್ ಹೊರಗುಳಿದಿರುವುದು ಆರ್‌ಸಿಗೆ ಸ್ವಲ್ಪ ಮಟ್ಟಗೆ ಪೆಟ್ಟು ಬಿದ್ದಂತಾಗಿದೆ.

ಶ್ರೇಯಸ್ ಅಯ್ಯರ್ ಪಡೆಗೆ ಅಗ್ನಿ ಪರೀಕ್ಷೆ
ಟೂರ್ನಿಯ ಆರಂಭದಲ್ಲಿ ಸತತವಾಗಿ ಗೆದ್ದು ಅಬ್ಬರಿಸಿದ್ದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ನಂತರ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿ ಭಾರೀ ಹಿನ್ನಡೆ ಅನುಭವಿಸಿದೆ. ಸದ್ಯ ತಂಡ ಪ್ಲೇ-ಆಫ್ ಕನಸನ್ನು ನನಸು ಮಾಡಿಕೊಳ್ಳುವ ಭರವಸೆಯಲ್ಲಿದೆ. ಈ ರೇಸ್‌ನಲ್ಲಿ ಉಳಿಯಬೇಕಾದರೆ ಇಂದಿನ ಪಂದ್ಯದಲ್ಲಿ ಜಯ ಸಾಧಿಸುವುದು ಪಂಜಾಬ್‌ಗೆ ಅತ್ಯಂತ ಅನಿವಾರ್ಯವಾಗಿದೆ.
ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲೆ
ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಫಾರ್ಮ್‌ನಲ್ಲಿದೆ. ಆಡಿರುವ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂದು ಪಂಜಾಬ್ ವಿರುದ್ಧ ಜಯಗಳಿಸಿದರೆ ಅಧಿಕೃತವಾಗಿ ಪ್ಲೇ-ಆಫ್ ಹಂತಕ್ಕೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಪಂದ್ಯದ ಪ್ರಮುಖ ಆಕರ್ಷಣೆ ವಿರಾಟ್ ಕೊಹ್ಲಿ. ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿರುವ ಕೊಹ್ಲಿ ಅವರು ಅದೇ ಫಾರ್ಮ್ ಅನ್ನು ಧರ್ಮಶಾಲಾದಲ್ಲೂ ಮುಂದುವರಿಸುವ ಹುಮ್ಮಸ್ಸಿನಲ್ಲಿದ್ದಾರೆ.
ಆರ್‌ಸಿಬಿ, ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ ಹಾಗೂ ವಿಕೆಟ್ ಕೀಪರ್), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಸುಯಾಶ್ ಶರ್ಮಾ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಪ್ರಭ್‌ಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಕೂಪರ್ ಕನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಗೆ, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯಜ್ವೇಂದ್ರ ಚಹಾಲ್.












Click it and Unblock the Notifications