ಜೂನಿಯರ್ ಎನ್‌ಟಿಆರ್-ಪ್ರಶಾಂತ್ ನೀಲ್ ಸಿನಿಮಾಗೆ 'ಡ್ರ್ಯಾಗನ್' ಟೈಟಲ್ ಫಿಕ್ಸ್? ಗ್ಲಿಂಪ್ಸ್ ರನ್‌ಟೈಮ್ ನೋಡಿ ಫ್ಯಾನ್ಸ್ ಶಾಕ್
ನಟ ಜೂನಿಯರ್ ಎನ್‌ಟಿಆರ್ ಮತ್ತು ಸ್ಯಾಂಡಲ್‌ವುಡ್ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ಕೊನೆಗೂ ಅಧಿಕೃತ ಶೀರ್ಷಿಕೆಯನ್ನು ಪಡೆದುಕೊಂಡಿದೆ. ಇದುವರೆಗೆ 'NTRNeel' ಎಂದು ಕರೆಯಲ್ಪಡುತ್ತಿದ್ದ ಈ ಚಿತ್ರಕ್ಕೆ 'ಡ್ರ್ಯಾಗನ್' (Dragon) ಎಂದು ಹೆಸರಿಡಲಾಗಿದ್ದು, ಸೆನ್ಸಾರ್ ಮಂಡಳಿಯ (CBFC) ವೆಬ್‌ಸೈಟ್ ಮೂಲಕ ಈ ಮಹತ್ವದ ಅಪ್‌ಡೇಟ್ ಸೋರಿಕೆಯಾಗಿದೆ. ಚಿತ್ರದ ಮೊದಲ ಝಲಕ್ (Glimpse) ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಅದಕ್ಕೆ "ಗ್ಲಿಂಪ್ಸ್ ಆಫ್ ಡ್ರ್ಯಾಗನ್" ಎಂದು ಪ್ರಮಾಣೀಕರಿಸಲಾಗಿದೆ. ಇದು ಚಿತ್ರದ ಶೀರ್ಷಿಕೆಯನ್ನು ಬಹುತೇಕ ಖಚಿತಪಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.
ಶಾಕ್ ನೀಡಿದ ರನ್‌ಟೈಮ್
ಈ ಗ್ಲಿಂಪ್ಸ್‌ನ ರನ್‌ಟೈಮ್ ಬರೋಬ್ಬರಿ 4 ನಿಮಿಷ 35 ಸೆಕೆಂಡುಗಳು ಇರಲಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಟೀಸರ್‌ಗಳು 1 ನಿಮಿಷ ಹಾಗೂ ಟ್ರೈಲರ್‌ಗಳು 3 ನಿಮಿಷ ಇರುತ್ತವೆ. ಆದರೆ, ಪ್ರಶಾಂತ್ ನೀಲ್ ಬರೋಬ್ಬರಿ ನಾಲ್ಕು ನಿಮಿಷಗಳ ಸುದೀರ್ಘ ಗ್ಲಿಂಪ್ಸ್ ರೆಡಿ ಮಾಡಿರುವುದು ಇಡೀ ಸಿನಿರಂಗ ಬೆಚ್ಚಿಬೀಳುವಂತೆ ಮಾಡಿದೆ. ಚಿತ್ರದ ತೀವ್ರ ಆಕ್ಷನ್ ಬ್ಲಾಕ್‌ಗಳು ಹಾಗೂ ಹಿಂಸಾತ್ಮಕ ದೃಶ್ಯಗಳ ಕಾರಣದಿಂದಾಗಿ ಸೆನ್ಸಾರ್ ಮಂಡಳಿಯು ಇದಕ್ಕೆ 'U/A 16+' ಸರ್ಟಿಫಿಕೇಟ್ ನೀಡಿದೆ. ಪ್ರಶಾಂತ್ ನೀಲ್ ಶೈಲಿಯ ರಕ್ತಸಿಕ್ತ ಮಾಸ್ ಚಿತ್ರದಲ್ಲಿರಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ಬರ್ತ್‌ಡೇ ಗಿಫ್ಟ್
ಮೇ 20ರಂದು ಜೂನಿಯರ್ ಎನ್‌ಟಿಆರ್ ಅವರ ಹುಟ್ಟುಹಬ್ಬವಿದ್ದು, ಅದರ ಮುನ್ನಾದಿನ ಅಂದರೆ ಮೇ 19ರ ಮಧ್ಯರಾತ್ರಿ 12 ಗಂಟೆಗೆ ಈ ಬಿಗ್ ಗ್ಲಿಂಪ್ಸ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ಬೃಹತ್ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡದ ಕರಾವಳಿ ಬೆಡಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ಸ್ಟಾರ್ ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದಾರೆ. ವಿಲನ್ ಪಾತ್ರದಿಂದ ಟೊವಿನೋ ಥಾಮಸ್ ಹೊರನಡೆದಿದ್ದು, ಸದ್ಯ ಅವರ ಜಾಗಕ್ಕೆ ಬಾಲಿವುಡ್‌ನ ಶಾಹಿದ್ ಕಪೂರ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. 'ಕೆಜಿಎಫ್' ಮತ್ತು 'ಸಲಾರ್' ಖ್ಯಾತಿಯ ರವಿ ಬಸ್ರೂರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಎರಡು ಭಾಗಗಳಲ್ಲಿ 'ಡ್ರ್ಯಾಗನ್'?
'ಡ್ರ್ಯಾಗನ್' ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂಬ ಬಲವಾದ ವದಂತಿ ಹರಿದಾಡುತ್ತಿದೆ. ಮೇ 19ರಂದು ಬಿಡುಗಡೆಯಾಗಲಿರುವ ಗ್ಲಿಂಪ್ಸ್‌ನಲ್ಲಿ ಈ ಬಗ್ಗೆ ಅಧಿಕೃತ ಸ್ಪಷ್ಟನೆ ಸಿಗುವ ನಿರೀಕ್ಷೆಯಿದೆ. ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಜೂನ್ 11ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ಸಡಗರ ಕೇವಲ ಪ್ರಶಾಂತ್ ನೀಲ್ ಅವರ 'ಡ್ರ್ಯಾಗನ್' ಚಿತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅಂದು ತಾರಕ್ ಅವರ ಮುಂಬರುವ ಇನ್ನೂ ಎರಡು ಬಿಗ್ ಬಜೆಟ್ ಸಿನಿಮಾಗಳ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ವರದಿಗಳು ತಿಳಿಸಿವೆ. ಬ್ಲಾಕ್‌ಬಸ್ಟರ್ 'ದೇವರ' ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್ 'ದೇವರ 2' ಚಿತ್ರದ ಶೂಟಿಂಗ್ ಹಾಗೂ ಪ್ರಿ-ಪ್ರೊಡಕ್ಷನ್ ಕುರಿತು ಚಿತ್ರತಂಡದಿಂದ ಮಹತ್ವದ ಪ್ರಕಟಣೆ ಸಿಗಲಿದೆ. ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಹೊಸ ಚಿತ್ರಕ್ಕೆ 'ಗಾಡ್ ಆಫ್ ವಾರ್' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿದ್ದು, ಈ ಪ್ರಾಜೆಕ್ಟ್ ಬಗ್ಗೆಯೂ ಮೇ 20ರಂದು ಬಿಗ್ ಅನೌನ್ಸ್‌ಮೆಂಟ್ ಸಿಗುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ ಮೇ 20 ರಂದು ಎನ್‌ಟಿಆರ್ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಅಪ್‌ಡೇಟ್‌ಗಳ ಮೂಲಕ ಹಬ್ಬದೂಟ ಸಿಗುವುದು ಗ್ಯಾರಂಟಿಯಾಗಿದೆ.













Click it and Unblock the Notifications