ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ: ಬಿಎಂಟಿಸಿ ಕಾರ್ಯಾಗಾರದಲ್ಲಿ ಜಾಗೃತಿ, ಲಾರ್ವಾ ಸಮೀಕ್ಷೆ ಪ್ರಾತ್ಯಕ್ಷಿಕೆ
ಬೆಂಗಳೂರು: ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ (ಮೇ 16) ಪ್ರಯುಕ್ತ ಇಂದು ಭಾನುವಾರ (ಮೇ 17) ಬೆಂಗಳೂರು ಪೂರ್ವ ನಗರ ಪಾಲಿಕೆಯ ವ್ಯಾಪ್ತಿಯ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಅಂಗವಾಗಿ ದೂರವಾಣಿ ನಗರದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೇಂದ್ರೀಯ ಕಾರ್ಯಾಗಾರ-02 ರಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಲಾರ್ವಾ ಸಮೀಕ್ಷೆ ಪ್ರಾತ್ಯಕ್ಷಿಕೆ ಪ್ರಚುರಪಡಿಸಲಾಯಿತು.
ಡೆಂಗ್ಯೂ ಜಾಗೃತಿ ಕಾರ್ಯಕ್ರಮವನ್ನು ಬಿಎಂಟಿಸಿಯ ವಿಭಾಗೀಯ ತಾಂತ್ರಿಕ ಅಭಿಯಂತರರಾದ ಸತೀಶ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಗಾರದ ನೂರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಡೆಂಗ್ಯೂ ಜ್ವರದ ಕುರಿತು ಸಮಗ್ರ ಆರೋಗ್ಯ ಶಿಕ್ಷಣ ನೀಡಿ ಅರಿವು ಮೂಡಿಸಲಾಯಿತು. ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾದ ಗುರುರಾಜ್ ರವರು ಡೆಂಗ್ಯೂ ಜ್ವರದ ಲಕ್ಷಣಗಳು, ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳು ಹಾಗೂ ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರದ ಕುರಿತು ವಿವರವಾಗಿ ಮಾಹಿತಿ ನೀಡಿದರು.

ಮನೆಗಳಲ್ಲಿ ಮಾತ್ರವಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವುದು ಮತ್ತು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವುದು ಅತ್ಯಂತ ಮುಖ್ಯವೆಂದು ತಿಳಿಸಿದರು.
ಲಾರ್ವಾ ಸಮೀಕ್ಷೆ ಪ್ರಾತ್ಯಕ್ಷಿಕೆ
ಇದೇ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಶೈಲ ಕನ್ನಾಳ ಅವರು ಜೀವಂತ ಲಾರ್ವೆಗಳ ಪ್ರಾತ್ಯಕ್ಷಿಕೆಯ ಮೂಲಕ ಸೊಳ್ಳೆಗಳ ಜೀವನ ಚಕ್ರದ ಕುರಿತು ಕಾರ್ಯಾಗಾರದ ಸಿಬ್ಬಂದಿಗಳಿಗೆ ಅರಿವು ಮೂಡಿಸಿದರು. ಸೊಳ್ಳೆಗಳ ಉತ್ಪತ್ತಿ ಸ್ಥಳಗಳನ್ನು ಗುರುತಿಸುವುದು ಹಾಗೂ ಅವುಗಳನ್ನು ನಿಯಂತ್ರಿಸುವ ವಿಧಾನಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.
ಕಾರ್ಯಾಗಾರ ಆವರಣದಲ್ಲಿ ಬೆಂಕಿ ನಂದಿಸಲು ಉಪಯೋಗಿಸುವ ನೀರಿನ ಡ್ರಮ್‌ಗಳು, ಬಕೆಟ್‌ಗಳು, ಟೈರ್‌ಗಳು ಸೇರಿದಂತೆ ವಿವಿಧ ಘನ ತ್ಯಾಜ್ಯ ವಸ್ತುಗಳಲ್ಲಿ ತೀವ್ರತರ ಲಾರ್ವಾ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯನ್ನು ಆರೋಗ್ಯ ನಿರೀಕ್ಷಣಾಧಿಕಾರಿ ಕಿರಣ್ ಅವರ ಸಹಕಾರದೊಂದಿಗೆ ಕೈಗೊಳ್ಳಲಾಗಿದ್ದು, ಲಾರ್ವಾ ಉತ್ಪತ್ತಿ ಕಂಡುಬಂದ ಪ್ರದೇಶಗಳಲ್ಲಿ ಲಾರ್ವಾ ನಾಶಕ ರಾಸಾಯನಿಕ ದ್ರಾವಣ ABATE ಅನ್ನು ಸಿಂಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಡೆಂಗ್ಯೂ ತಡೆಗಟ್ಟುವಲ್ಲಿ ಸಾರ್ವಜನಿಕರ ಜಾಗೃತಿ ಮತ್ತು ಸಮೂಹ ಸಹಭಾಗಿತ್ವ ಅತ್ಯಂತ ಅಗತ್ಯವಾಗಿದ್ದು, ಸ್ವಚ್ಛತೆ ಕಾಪಾಡುವ ಮೂಲಕ ಸೊಳ್ಳೆಜನಿತ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
ತ್ಯಾಜ್ಯ ಸುರಿಯುವ ಬ್ಲಾಕ್ ಸ್ಪಾಟ್ ನಗರಕ್ಕೆ ಮಾರಕ
ಸ್ವಚ್ಛ ಭಾರತ್ ಮಿಷನ್ ಅರ್ಬನ್ 2.0 ಅಡಿ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಜಲಮೂಲಗಳ ಸಂರಕ್ಷಣೆ, ತ್ಯಾಜ್ಯ ವಿಂಗಡಣೆ ಹಾಗೂ ಸಮರ್ಪಕ ನಿರ್ವಹಣೆ, ಏಕಬಳಕೆ ಪ್ಲಾಸ್ಟಿಕ್ ನಿಷೇಧ, ಪ್ಲಾಸ್ಟಿಕ್ ಮರುಬಳಕೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಕುರಿತು ಬೆಂಗಳೂರು ನಗರದ ಚರ್ಚ್ ಸ್ಟ್ರೀಟ್ ನಲ್ಲಿ "ಸಮುದಾಯ ಬೀದಿ ನಾಟಕ" ನಡೆಸಲಾಯಿತು.
ಈ ವೇಳೆ ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ಅವರು, ನಾಟಕ ವೀಕ್ಷಿಸಿ ಮಾತನಾಡಿದ ಅವರು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಬೆಂಗಳೂರು ನಗರವನ್ನಾಗಿ ಬದಲಾಯಿಸಲು ನಾಗರೀಕರ ಸಹಕಾರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ಸಂಘ- ಸಂಸ್ಥೆಗಳು, ಎನ್.ಜಿ.ಓ ಗಳು, ಅಪಾರ್ಟ್ ಮೆಂಟ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಪಾಲಿಕೆಯೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.














Click it and Unblock the Notifications