ನಾನು ಸೋತೆ, ಚೆನ್ನೈ ಬಿಡುತ್ತಿದ್ದೇನೆ: ನಟ ರವಿ ಮೋಹನ್ ಸಂಸಾರ ಒಡೆದ ಆರೋಪಕ್ಕೆ ಬೇಸತ್ತು ಗಾಯಕಿ ಕೆನಿಶಾ ಪೋಸ್ಟ್
ದಕ್ಷಿಣ ಭಾರತದ ಖ್ಯಾತ ನಟ ರವಿ ಮೋಹನ್ (ಜಯಂ ರವಿ) ಅವರ ವೈವಾಹಿಕ ಜೀವನದ ಏರುಪೇರು ಹಾಗೂ ವಿಚ್ಛೇದನದ ವಿವಾದದ ನಡುವೆ ಕೇಳಿಬಂದಿದ್ದ ಗಾಯಕಿ ಕೆನಿಶಾ ಫ್ರಾನ್ಸಿಸ್ (Keneeshaa Francis) ಅವರ ಹೆಸರು ಸದ್ಯ ಸಿನಿರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ನಟನ ಸಂಸಾರ ಒಡೆಯಲು ಇವರೇ ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲಿಂಗ್‌ಗೆ ಒಳಗಾಗಿದ್ದ ಕೆನಿಶಾ, ಈಗ ಹಠಾತ್ ಆಗಿ ಸೋಶಿಯಲ್ ಮೀಡಿಯಾ ತೊರೆದಿದ್ದಲ್ಲದೆ ಚೆನ್ನೈ ನಗರವನ್ನೇ ತೊರೆಯುತ್ತಿರುವುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ಅವರ ವಿಚ್ಛೇದನದ ಸುದ್ದಿಯ ಬೆನ್ನಲ್ಲೇ, ರವಿ ಮತ್ತು ಕೆನಿಶಾ ನಡುವಿನ ಆಪ್ತತೆ ಸಾರ್ವಜನಿಕವಾಗಿ ಚರ್ಚೆಗೆ ಬಂದಿತ್ತು. ಇವರಿಬ್ಬರ ಫೋಟೋಗಳು ವೈರಲ್ ಆದಾಗ ನೆಟ್ಟಿಗರು ಕೆನಿಶಾ ಅವರನ್ನು ತೀವ್ರವಾಗಿ ನಿಂದಿಸಿದ್ದರು. ಇದಕ್ಕೆ ಬೇಸತ್ತು ಕೆನಿಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಕಾಮೆಂಟ್ ಸೆಕ್ಷನ್ ಆಫ್ ಮಾಡಿ, ಸುದೀರ್ಘ ವಿದಾಯದ ಪತ್ರ ಬರೆದಿದ್ದಾರೆ.

ಮೌನವಾಗಿ ಹೋಗುತ್ತಿದ್ದೇನೆ
"ನಾನು ಹೇಳಬಾರದಿದ್ದಕ್ಕಿಂತ ಹೆಚ್ಚು ವಿಷಯಗಳನ್ನು ಈಗಾಗಲೇ ಹೇಳಿದ್ದೇನೆ. ಈ ಕಥೆಯೊಳಗೆ ನಾನು ಪ್ರೀತಿಯಿಂದ ಹೆಜ್ಜೆ ಇಟ್ಟಿದ್ದೆ, ಆದರೆ ಈಗ ಸಂಪೂರ್ಣ ಮೌನವಾಗಿ ಇಲ್ಲಿಂದ ಹೊರನಡೆಯುತ್ತಿದ್ದೇನೆ. ಅಹಂಕಾರ, ತೀರ್ಪುಗಳು ಮತ್ತು ಸೃಷ್ಟಿಮಾಡಿದ ಸುಳ್ಳು ಕಥೆಗಳ ನಡುವೆ ಒಳ್ಳೆಯತನಕ್ಕೆ ಜಾಗವಿಲ್ಲದಂತಾಗಿದೆ" ಎಂದು ಕೆನಿಶಾ ಬೇಸರ ವ್ಯಕ್ತಪಡಿಸಿದ್ದಾರೆ.
ಅವನನ್ನು ಜಗತ್ತಿಗೆ ಬಿಟ್ಟುಕೊಡುತ್ತಿದ್ದೇನೆ
"ಸಾರ್ವಜನಿಕರು, ಸಿನಿಮಾ ರಂಗ ಹಾಗೂ ಆತನನ್ನು ಪ್ರೀತಿಸುವ-ದ್ವೇಷಿಸುವ ಎಲ್ಲರಿಗೂ ನಾನು ಹೇಳುವುದಿಷ್ಟೇ, ಇನ್ಮುಂದೆ ಆತ ನಿಮಗೇ ಸೇರಿದವನು. ನಾನು ಯಾರ ಪರವಾಗಿಯೂ ವಾದ ಮಾಡಲ್ಲ, ನನ್ನದಲ್ಲದ ಯುದ್ಧವನ್ನು ನಾನಿನ್ನು ಮುಂದುವರಿಸಲ್ಲ. ಈ ಜಾಗ ಕೇವಲ ಸುಳ್ಳುಗಾರರು, ವಂಚಕರು ಮತ್ತು ಮ್ಯಾನಿಪುಲೇಟರ್‌ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅರ್ಥವಾಗಿದೆ. ಹಾಗಾಗಿ ಆತನನ್ನು ಸಂಪೂರ್ಣವಾಗಿ ಮುಕ್ತಗೊಳಿಸುತ್ತಿದ್ದೇನೆ" ಎಂದು ರವಿ ಮೋಹನ್ ಹೆಸರನ್ನು ಉಲ್ಲೇಖಿಸದೆ ಕೆನಿಶಾ ಬರೆದಿದ್ದಾರೆ.
"ನೀವೆಲ್ಲರೂ ಅಂದುಕೊಂಡಿದ್ದೇ ಗೆದ್ದಿದೆ. ನಾನು ಚೆನ್ನೈ ನಗರವನ್ನು ತೊರೆದಿದ್ದೇನೆ, ನಾನು ಸೋಲೊಪ್ಪಿಕೊಂಡಿದ್ದೇನೆ. ನನ್ನ ಇಷ್ಟು ದಿನದ ಬದುಕಿನ ಭಾಗವಾಗಿದ್ದ ಸಂಗೀತ, ನನ್ನ ಥೆರಪಿ ವೃತ್ತಿ ಸೇರಿದಂತೆ ಎಲ್ಲವನ್ನೂ ನಾನು ಕೈಬಿಡುತ್ತಿದ್ದೇನೆ. ದೇವರು ಸೃಷ್ಟಿಸಿದ್ದನ್ನು ಮನುಷ್ಯ ಮುರಿಯಬಲ್ಲ ಎಂಬುದನ್ನು ನಾನೀಗ ನಂಬುತ್ತಿದ್ದೇನೆ" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

ಹಿನ್ನೆಲೆ ಏನು?
ನಟ ರವಿ ಮೋಹನ್ ತಮ್ಮ ಪತ್ನಿ ಆರತಿ ಅವರಿಗೆ ತಿಳಿಸದೆಯೇ ಸಾಮಾಜಿಕ ಜಾಲತಾಣಗಳ ಮೂಲಕ ಏಕಪಕ್ಷೀಯವಾಗಿ ವಿಚ್ಛೇದನ ಘೋಷಿಸಿದ್ದರು ಎಂದು ಆರತಿ ಈ ಹಿಂದೆ ಆರೋಪಿಸಿದ್ದರು. ಇದೇ ಸಮಯದಲ್ಲಿ ರವಿ ಮೋಹನ್ ಅವರು ಗೋವಾದಲ್ಲಿ ಗಾಯಕಿ ಕೆನಿಶಾ ಅವರೊಂದಿಗೆ ಆಪ್ತವಾಗಿ ಕಾಲ ಕಳೆದಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಿತ್ತು. ಸದ್ಯ ಕೆನಿಶಾ ಅವರ ಈ ಹಠಾತ್ ನಿರ್ಧಾರ ಮತ್ತು ಚೆನ್ನೈ ತೊರೆದಿರುವ ನಡೆ ಕಾಲಿವುಡ್ ಅಂಗಳದಲ್ಲಿ ಹೊಸ ಚರ್ಚೆಗಳಿಗೆ ಗ್ರಾಸವಾಗಿದೆ.













Click it and Unblock the Notifications