ಕೊಹ್ಲಿ ಯಾರಿಗೂ ಏನೂ ಸಾಬೀತುಪಡಿಸುವ ಅಗತ್ಯವಿಲ್ಲ: ಅಶ್ವಿನ್ ಬಾಯಲ್ಲಿ ಈ ಮಾತೇ? ಎಂದು ಶಾಕ್ ಆದ ವಿರಾಟ್ ಫ್ಯಾನ್ಸ್
R.Ashwin: ಐಪಿಎಲ್ 2026ರ ಹಬ್ಬದ ನಡುವೆ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಪಡೆದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಡ್‌ಕಾಸ್ಟ್‌ನಲ್ಲಿ ಮಯಾಂತಿ ಲ್ಯಾಂಗರ್ ಅವರೊಂದಿಗೆ ಮಾತನಾಡುತ್ತಾ ಕೊಹ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಆರ್. ಅಶ್ವಿನ್ ಕೊಹ್ಲಿ ಪರ ಬ್ಯಾಟ್ ಬೀಸಿ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದ ನಂತರ ತಾವು ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದ್ದಾಗಿ ಕೊಹ್ಲಿ ತಿಳಿಸಿದ್ದಾರೆ. "ನಾನು ನನ್ನ ಸಾಮರ್ಥ್ಯವನ್ನು ಪ್ರತಿ ಪಂದ್ಯದ ನಂತರವೂ ಸಾಬೀತುಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ನನಗೆ ಅನಿಸಿತು. ಅಂತಹ ವಾತಾವರಣದಲ್ಲಿ ಇರಲು ನನಗೆ ಇಷ್ಟವಿರಲಿಲ್ಲ. ದಶಕಗಳ ಕಾಲ ದೇಶಕ್ಕಾಗಿ ಆಡಿದ ಮೇಲೂ ಪದೇ ಪದೇ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಲು ಕೇಳಿದರೆ ಆ ಜಾಗದಲ್ಲಿ ನಾನು ಇರಲಾರೆ" ಎಂದು ಕೊಹ್ಲಿ ನೇರವಾಗಿಯೇ ಹೇಳಿದ್ದಾರೆ. ಈ ಹೇಳಿಕೆಯು ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೊಹ್ಲಿ ಹೇಳಿಕೆಗೆ ಆರ್.ಅಶ್ವಿನ್ ಬೆಂಬಲ
ಕೊಹ್ಲಿ ಅವರ ಈ ಹೇಳಿಕೆಗೆ ಟೆಸ್ಟ್ ಕ್ರಿಕೆಟ್‌ನ ಮತ್ತೊಬ್ಬ ದಿಗ್ಗಜ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. "ತಮ್ಮ ಸಾಮರ್ಥ್ಯವನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿರುವುದು ನೂರಕ್ಕೆ ನೂರು ಸರಿ. ಇಷ್ಟು ವರ್ಷಗಳ ಕಾಲ ಭಾರತಕ್ಕಾಗಿ ತುಂಬಾ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಮೇಲೆ ಅವರು ಇನ್ನಾರ ಮುಂದೆ ಸಾಬೀತುಪಡಿಸಬೇಕು? ನನಗೂ ಕೂಡ ಇಂತಹದ್ದೇ ಭಾವನೇ ಮೂಡಿತ್ತು," ಎಂದು ಆರ್. ಅಶ್ವಿನ್ ಅಶ್ವಿನ್ ಒಪ್ಪಿಕೊಂಡಿದ್ದಾರೆ.
ಹೊಸ ಚರ್ಚೆ ಹುಟ್ಟುಹಾಕಿದ ಆರ್.ಅಶ್ವಿನ್
ಹಿರಿಯ ಆಟಗಾರರು ಪ್ರತಿ ಪಂದ್ಯದ ನಂತರವೂ ಟೀಕೆಗಳಿಗೆ ಮತ್ತು ಮೌಲ್ಯಮಾಪನಕ್ಕೆ ಒಳಗಾಗುವುದು ಅವರ ಮಾನಸಿಕ ನೆಮ್ಮದಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಶ್ವಿನ್ ವಿವರಿಸಿದ್ದಾರೆ. "ಯುವಕರಾಗಿದ್ದಾಗ ನಾವು ಜಗತ್ತಿಗೆ ಉತ್ತರ ನೀಡಲು ಬಯಸುತ್ತೇವೆ. ಆದರೆ ವಯಸ್ಸಾದಂತೆ ಹೋರಾಟವು ನಮ್ಮೊಳಗಿನ ಜೊತೆಗೇ ಇರುತ್ತದೆ ಎಂದು ಅರಿವಾಗುತ್ತದೆ. ವಿರಾಟ್ ಈಗ ಆ ಪರಿಪಕ್ವತೆಯ ಹಂತಕ್ಕೆ ತಲುಪಿದ್ದಾರೆ," ಎಂದು ಅವರು ಹೇಳಿದ್ದಾರೆ. ಅಶ್ವಿನ್ ಅವರ ಈ ಮಾತುಗಳು ಕೊಹ್ಲಿಯವರ ನಿರ್ಧಾರಕ್ಕೆ ಇನ್ನಷ್ಟು ತೂಕ ನೀಡಿವೆ ಮತ್ತು ಹಿರಿಯ ಆಟಗಾರರ ಮೇಲೆ ಹೇರುವ ಒತ್ತಡದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿವೆ.
2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಭಾಗವಹಿಸುವಿಕೆಯ ಬಗ್ಗೆ ಕೇಳಿಬರುತ್ತಿರುವ ಸತತ ವದಂತಿಗಳ ಕುರಿತೂ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಕ್ರಿಕೆಟ್ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಉತ್ತರಿಸಿರುವ ಅವರು, ಭವಿಷ್ಯದ ಬಗ್ಗೆ ಈಗಲೇ ತೀರ್ಮಾನಿಸುವ ಬದಲು ಸದ್ಯದ ಆಟದತ್ತ ಗಮನ ಹರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಉತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಸದ್ಯ ಐಪಿಎಲ್ 2026ರಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ತಮ್ಮ ಫಿಟ್‌ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲದಂತೆ ಆಡುತ್ತಿದ್ದಾರೆ. ಆದರೆ 2027ರ ವಿಶ್ವಕಪ್ ವೇಳೆಗೆ ಅವರ ಆಯ್ಕೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಈ ಹೇಳಿಕೆಯ ಮೂಲಕ ಅವರು ಒಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದ್ದಾರೆ. "ಮೊದಲ ದಿನವೇ ತಂಡಕ್ಕೆ ನನ್ನ ಅಗತ್ಯವಿಲ್ಲ ಎಂದು ನೇರವಾಗಿ ಹೇಳಿಬಿಡಿ. ಆದರೆ ನಾನು ಪದೇ ಪದೇ ನನ್ನ ಮೌಲ್ಯ ಮತ್ತು ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆಯನ್ನು ನನಗೆ ಯಾರಾದರೂ ಉಂಟುಮಾಡುತ್ತಿದ್ದರೆ ನಾನು ಅಂತಹ ಪರಿಸ್ಥಿತಿಯಲ್ಲಿ ಇರಲು ಬಯಸುವುದಿಲ್ಲ," ಎಂದು ಕೊಹ್ಲಿ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆಯಾಗಿ ಕೊಹ್ಲಿ ಮತ್ತು ಅಶ್ವಿನ್ ಅವರ ಈ ಮಾತುಗಳು ಕ್ರಿಕೆಟ್ ವಲಯದಲ್ಲಿ ಹಿರಿಯ ಆಟಗಾರರಿಗೆ ನೀಡಬೇಕಾದ ಗೌರವ ಮತ್ತು ಅವರ ಮಾನಸಿಕ ಆರೋಗ್ಯದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications