ಜೀವ ಭಯದಲ್ಲಿರುವ ಹ್ಯಾಕರ್ ಶ್ರೀಕಿಗೆ ಪೊಲೀಸ್ ಭದ್ರತೆ
ಬೆಂಗಳೂರು, ನ. 17 : ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವ ಬಿಟ್‌ಕಾಯಿನ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಹ್ಯಾಕರ್ ಶ್ರೀಕೃಷ್ಣನಿಗೆ ಜೀವ ಭಯ ಇರುವ ಹಿನ್ನೆಲೆಯಲ್ಲಿ ಆತನಿಗೆ ಪೊಲೀಸ್ ಭದ್ರತೆ ಒದಗಿಸಲು ಪೊಲೀಸ್ ಆಯುಕ್ತ ಕಮಲಪಂತ್ ಸೂಚನೆ ನೀಡಿದ್ದಾರೆ. ಆದರೆ ಹ್ಯಾಕರ್ ಶ್ರೀಕೃಷ್ಣನೇ ಪೊಲೀಸರ ಕೈಗೆ ಸಿಗುತ್ತಿಲ್ಲ ಎಂಬ ವಿಚಾರ ಹೊರ ಬಿದ್ದಿದೆ.
ಬಿಟ್‌ಕಾಯಿನ್ ಹಗರಣದ ಕೇಂದ್ರ ಬಿಂದು ಹ್ಯಾಕರ್ ಶ್ರೀಕೃಷ್ಣ. ಹ್ಯಾಕರ್ ಶ್ರೀಕೃಷ್ಣನ ಮೇಲೆ ಈ ಬಿಟ್‌ಕಾಯಿನ್ ಅಕ್ರಮ ನಿಂತಿದೆ. ಮುಂದಿನ ದಿನಗಳಲ್ಲಿ ಆತನ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹ್ಯಾಕರ್ ಶ್ರೀಕೃಷ್ಣಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಾಗೂ ಗನ್ ಮ್ಯಾನ್ ಭದ್ರತೆ ಒದಗಿಸಲು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ಭದ್ರತೆ ಒದಗಿಸುವ ಸಂಬಂಧ ಪೊಲಿಸ್ ಸಬ್‌ಇನ್ಸ್ ಪೆಕ್ಟರ್ ಹ್ಯಾಕರ್ ಶ್ರೀಕೃಷ್ಣ ಅವರ ಮನೆಗೆ ಪದೇ ಪದೇ ಭೇಟಿ ನೀಡಿದರೂ ಆತ ಸಂಪರ್ಕಕ್ಕೆ ಸಿಕ್ಕಿಲ್ಲ.
ಬಿಟ್‌ಕಾಯಿನ್ ಹ್ಯಾಕಿಂಗ್ನಲ್ಲಿ ಶ್ರೀಕಿ ಪಾತ್ರವಿದೆ ಎಂದ ಸೈಬರ್ ಐಡಿ ಟೆಕ್ ಲ್ಯಾಬ್!
ಹ್ಯಾಕರ್ ಶ್ರೀಕೃಷ್ಣ ಅವರ ಪೋಷಕರನ್ನು ಸಂಪರ್ಕಿಸಿರುವ ಸ್ಥಳೀಯ ಪೊಲೀಸರು ಭದ್ರತೆ ಒದಗಿಸುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ರಾಯಲ್ ಅರ್ಕೀಡ್ ಹೋಟೆಲ್‌ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆ ಬಳಿಕ ಆಟೋದಲ್ಲಿ ತೆರಳಿದ್ದ ಶ್ರೀಕಿ ಪೋಷಕರನ್ನು ಸಂಪರ್ಕಿಸಿಲ್ಲ. ಎಲ್ಲಿ ಹೋಗಿದ್ದಾನೆ ಎಂಬ ಮಾಹಿತಿ ಪೊಲೀಸರಿಗೂ ಇಲ್ಲ. ಮನೆಯಿಂದ ಹೊರ ಹೋದವನು ವಾಪಸು ಬಂದಿಲ್ಲ ಎಂಬ ಸಂಗತಿಯನ್ನು ಪೋಷಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹ್ಯಾಕರ್ ಶ್ರೀಕಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಶ್ರೀಕಿ ಫೋನ್ ಬಳಸುವುದಿಲ್ಲ:
ಹ್ಯಾಕರ್ ಶ್ರೀಕೃಷ್ಣ ಮೊಬೈಲ್ ಬಳಸುವುದಿಲ್ಲ. ಒಂದು ಕಡೆ ಇರುವುದಿಲ್ಲ. ಬೆಂಗಳೂರಿನ ಹೋಟೆಲ್‌ಗಳಲ್ಲಿ ತಂಗಿದರೂ ಆತನ ಹೆಸರಿನಲ್ಲಿ ರೂಮ್ ಬುಕ್ ಮಾಡುವುದಿಲ್ಲ. ತನ್ನ ಸಣ್ಣ ಹೆಜ್ಜೆ ಗುರುತನ್ನು ಬಿಡುವುದಿಲ್ಲ. ಹೀಗಾಗಿ ಅವನನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಿದೆ. ರಾಯಲ್ ಆರ್ಕೀಡ್ ಹೋಟೆಲ್ ಗಲಾಟೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಶ್ರಿಕೃಷ್ಣ ಬಿಡುಗಡೆ ಬಳಿಕ ಆಟೋದಲ್ಲಿ ತೆರಳಿದ್ದ. ಬಿಟ್ ಕಾಯಿನ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದ. ಆ ಬಳಿಕ ಕಣ್ಮರೆಯಾಗಿರುವ ಹ್ಯಾಕರ್ ಶ್ರೀಕೃಷ್ಣ ಮತ್ತೆ ಎಲ್ಲಿದ್ದಾನೆ ಎಂಬ ವಿಚಾರ ಯಾರಿಗೂ ಗೊತ್ತಿಲ್ಲ.
ಬೆದರಿಕೆ ಬಗ್ಗೆ ಪ್ರಸ್ತಾಪ:
ಬಿಟ್ ಕಾಯಿನ್ ಹಗರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡಿಕೊಂಡ ಬಳಿಕ ರಾಜಕಾರಣದಲ್ಲಿ ಈ ಪ್ರಕರಣ ದೊಡ್ಡ ಸಂಚಲನ ಹುಟ್ಟಿ ಹಾಕಿತು. ಬಿಜೆಪಿ ನಾಯಕರ ಇದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರೆ, ಕಾಂಗ್ರೆಸ್ ನಾಯಕರ ಮಕ್ಕಳೇ ಶ್ರೀಕಿಯ ಆಪ್ತರು ಎಂಬ ಆರೋಪ ಬಿಜೆಪಿಗರದ್ದು. ಇದರ ನಡುವೆ ಕೆಲವು ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಕೂಡಲೇ ಬಿಟ್ ಕಾಯಿನ್ ಹಗರಣದ ರುವಾರಿ ಹ್ಯಾಕರ್ ಶ್ರೀಕೃಷ್ಣ ಹ್ಯಾಕಿಂಗ್ ಲೀಲೆ ದೊಡ್ಡ ಸದ್ದು ಮಾಡುತ್ತಿದೆ. ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದಾಖಲೆಗಳು ಕೈಯಲ್ಲಿ ಇಲ್ಲ. ಎಲ್ಲವೂ ಹ್ಯಾಕರ್ ಶ್ರೀಕೃಷ್ಣನ ತಲೆಯಲ್ಲಿವೆ. ಈ ಪ್ರಕರಣದ ಗಂಭೀರತೆ ನೋಡಿದರೆ ಮುಂದಿನ ದಿನಗಳಲ್ಲಿ ಆತನನ್ನು ವ್ಯವಸ್ಥೆ ಮುಗಿಸಿ ಬಿಡುವ ಅಪಾಯವಿದೆ. ಆತನನ್ನು ಜೀವಂತವಾಗಿಡುವುದು ಅನುಮಾನ ಎಂಬ ಹೇಳಿಕೆ ನೀಡಿದ್ದರು. ಇದರ ಜತೆಗೆ ವಕೀಲ, ಕೆಪಿಸಿಸಿ ವಕ್ತಾರ ಸಂಕೇತ್ ಏಣಗಿ ಕೂಡ ಹ್ಯಾಕರ್ ಶ್ರೀಕಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಹ್ಯಾಕರ್ ಶ್ರೀಕಿಗೆ ರಕ್ಷಣೆ ನೀಡಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಆದರೆ, ಆತನೇ ಪೊಲೀಸರ ಕೈಗೆ ಸಿಗದೇ ಓಡಾಡುತ್ತಿದ್ದಾನೆ.
ಶ್ರೀಕಿ ಲ್ಯಾಪ್‌ಟಾಪ್ ಸಿಐಡಿ ವಶಕ್ಕೆ:
ರಾಯಲ್ ಅರ್ಕಿಡ್ ಹೋಟೆಲ್ ಗಲಾಟೆ ವೇಳೆ ಜೀವನ ಭೀಮಾ ನಗರ ಪೊಲೀಸರು ವಶಪಡಿಸಿಕೊಂಡಿದ್ದ ಹ್ಯಾಕರ್ ಶ್ರೀಕಿ ನಾಲ್ಕು ಲ್ಯಾಪ್ ಟಾಪ್ ಗಳನ್ನು ಸಿಐಡಿ ಪೊಲೀಸರ ವಶಕ್ಕೆ ನೀಡಲಾಗಿದೆ. ಲ್ಯಾಪ್ ಟಾಪ್ ನಲ್ಲಿ ಏನಿದೆ ಎಂಬುದರ ಬಗ್ಗೆ ಸಿಐಡಿ ಸೈಬರ್ ತಜ್ಞರು ಅನ್ವೇಷಣೆ ಮಾಡಲಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಹ್ಯಾಕರ್ ಶ್ರೀಕೃಷ್ಣ ಬಿಟ್ ಕಾಯಿನ್ ಹ್ಯಾಕ್ ಮಾಡಿರುವ ಅನುಮಾನ ವ್ಯಕ್ತವಾಗಿದೆ.