ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ
Recommended Video

ಬೆಂಗಳೂರು, ಸೆ. 05: ಹಿರಿಯ ಪತ್ರಕರ್ತೆ, ಚಿಂತಕಿ, ಲಂಕೇಶ್ ಪತ್ರಿಕೆ ಸಂಪಾದಕಿ ಗೌರಿ ಲಂಕೇಶ್(55) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮಂಗಳವಾರ ರಾತ್ರಿ ಅವರ ಮನೆ ಮುಂಭಾಗದಲ್ಲೇ ಅವರ ಮೇಲೆ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿ ಕೊಂದು ಹಾಕಲಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಮುಂದೆ ನಿಂತಿದ್ದ ಗೌರಿ ಲಂಕೇಶ್ ಅವರ ಮೇಲೆ ರಾತ್ರಿ ಸುಮಾರು 8.30 ರ ವೇಳೆಗೆ ಅಪರಿಚಿತರಿಂದ ಮೂರು ಸುತ್ತಿನ ಗುಂಡು ಹಾರಿಸಲಾಗಿದೆ.

ತಲೆ, ಎದೆ ಭಾಗಕ್ಕೆ ಗುಂಡು ಹೊಕ್ಕಿದ್ದು, ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಬಂದಿದ್ದು ಪರಿಶೀಲನೆ ನಡೆಸಿದ್ದಾರೆ.
ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ : ಇದು ತುಬಾ ಆಘಾತಕಾರಿ, ಡಾ. ಎಂ. ಎಂ ಕಲಬುರ್ಗಿ ಅವರ ಹತ್ಯೆಗಿಂತಲೂ ಭೀಕರವಾಗಿದೆ.
ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಗೌರಿ ಅವರು ಸಮಾಜ ಸುಧಾರಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಲು ಶ್ರಮಿಸಿದ್ದರು.
ಎಸಿಪಿ ಕೆಂಗೇರಿ ಗೇಟ್, ಎಸಿಪಿ ಚಿಕ್ಕಪೇಟೆ, ಕ್ರೈಂ ವಿಭಾಗದ ವರಿಷ್ಠಾಧಿಕಾರಿ ಸತೀಶ್ ಅವರ ನೇತೃತ್ವದ ಮೂರು ತಂಡಗಳನ್ನು ರಚಿಸಲಾಗಿದ್ದು, ತನಿಖೆ ಆರಂಭವಾಗಿದೆ. ಬುಧವಾರ(ಸೆಪ್ಟೆಂಬರ್ 06) ದಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಅವರಿಗೆ ಜೀವ ಬೆದರಿಕೆ ಇದ್ದ ಬಗ್ಗೆ ಗುಪ್ತಚರ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications