Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್
Hotel Gas Bill: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ಪರಿಣಾಮ ಭಾರತದ ಹೋಟೆಲ್ ಉದ್ಯಮ ಮತ್ತು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಾರಂಭಿಸಿದೆ. ಜಾಗತಿಕ ಇಂಧನ ಪೂರೈಕೆ ಉಂಟಾಗಿರುವ ವ್ಯತ್ಯಯದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಕೊರತೆ ಎದುರಾಗಿದ್ದು, ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ. ಈ ಅನಿರೀಕ್ಷಿತ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕೆಲ ಕಡೆ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಗ್ರಾಹಕರ ಬಿಲ್‌ನಲ್ಲಿ ಗ್ಯಾಸ್ ಚಾರ್ಜ್ ಸೇರಿಸುತ್ತಿದ್ದಾರೆ. ಇದೀಗ ಹೋಟೆಲ್‌ವೊಂದರಲ್ಲಿ 'ಗ್ಯಾಸ್ ಸರ್‌ಚಾರ್ಜ್' ಜೊತೆ 1,110 ರೂಪಾಯಿ ಬಿಲ್ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವನೌರಿ ಹೋಟೆಲ್‌ನಲ್ಲಿ ನಡೆದ ಈ ಇತ್ತೀಚಿನ ಘಟನೆಯು ಹೋಟೆಲ್ ಬಿಲ್ಲಿಂಗ್ ಪಾರದರ್ಶಕತೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಗ್ರಾಹಕರೊಬ್ಬರಿಗೆ ನೀಡಲಾದ ₹1,110 ಮೊತ್ತದ ಬಿಲ್‌ನಲ್ಲಿ ₹100 ಹೆಚ್ಚುವರಿ ಅನಿಲ ಶುಲ್ಕವನ್ನು ಸೇರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

"ಆಹಾರದ ಜೊತೆ ಈ ರೀತಿ ಪ್ರತ್ಯೇಕ ಗ್ಯಾಸ್‌ಚಾರ್ಜ್ ವಿಧಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಉಲ್ಲಂಘನೆ" ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಅಘೋಷಿತವಾಗಿ ವಿಧಿಸಲಾಗುತ್ತಿರುವ ಇಂತಹ ಶುಲ್ಕಗಳು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ಹೋಟೆಲ್ ಬಿಲ್ಲಿಂಗ್ ಮಾನದಂಡಗಳ ಕುರಿತು ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಬಿಲ್‌ನಲ್ಲಿ 'ಗ್ಯಾಸ್ ಸರ್‌ಚಾರ್ಜ್'
ಪುಣೆಯ ವನೌರಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಊಟ ಮಾಡಿದ ಗ್ರಾಹಕರೊಬ್ಬರಿ(ನಿತಿನ್ ಜಗತಾಪ್)ಗೆ, ಒಟ್ಟು 1,110 ರೂಪಾಯಿ ಬಿಲ್‌ನಲ್ಲಿ ಹೆಚ್ಚುವರಿಯಾಗಿ 100 ರೂಪಾಯಿಗಳನ್ನು 'ಗ್ಯಾಸ್ ಸರ್‌ಚಾರ್ಜ್' ಹೆಸರಿನಲ್ಲಿ ವಿಧಿಸಲಾಗಿತ್ತು. ಈ ಬಗ್ಗೆ ಗ್ರಾಹಕರು ಪ್ರಶ್ನಿಸಿದಾಗ, ಎಲ್‌ಪಿಜಿ ಸಿಲಿಂಡರ್ ಪಡೆಯುವಲ್ಲಿ ಆಗುತ್ತಿರುವ ತೊಂದರೆಗಳು ಮತ್ತು ಹೆಚ್ಚುತ್ತಿರುವ ನಿರ್ವಹಣಾ ವೆಚ್ಚದ ಕಾರಣದಿಂದ ಈ ಶುಲ್ಕ ವಿಧಿಸಲಾಗಿದೆ ಎಂದು ಹೋಟೆಲ್ ಸಿಬ್ಬಂದಿ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಪಿಯುನ್ಯೂಸ್‌ಕಾರ್ ವೆಬ್‌ಸೈಟ್ ವರದಿ ಮಾಡಿದೆ.
ಜನಾಕ್ರೋಶಕ್ಕೆ ಕಾರಣವಾದ ಹೋಟೆಲ್ ಬಿಲ್
ಗ್ರಾಹಕರು ಈ ಬಿಲ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಇದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಗ್ರಾಹಕರಿಗೆ ಮೊದಲೇ ತಿಳಿಸದೆ ಇಂತಹ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಗ್ರಾಹಕ ಸಂರಕ್ಷಣಾ ನಿಯಮಗಳ ಅಡಿಯಲ್ಲಿ ಇಂತಹ ಅಘೋಷಿತ ಶುಲ್ಕಗಳನ್ನು ವಿಧಿಸುವುದು ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಹೋಟೆಲ್ ಉದ್ಯಮದಲ್ಲಿನ ಬಿಲ್ಲಿಂಗ್ ನಿಯಮಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭಿಸಿದೆ. ಪ್ರಸ್ತುತ ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಆದರೆ, ಔಪಚಾರಿಕ ದೂರು ದಾಖಲಾದರೆ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಹಾಗಾದ್ರೆ ಆಹಾರ ಸೇರಿದಂತೆ ಎಷ್ಟು ಮೊತ್ತದ ಗ್ಯಾಸ್ ಬಿಲ್ ವಿಧಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಿಲ್‌ನಲ್ಲಿ ಆಹಾರದ ಜೊತೆ ಗ್ಯಾಸ್ ಶುಲ್ಕ
* ಚಿಕನ್ ತಂದೂರಿ (Half) - 200 ರೂಪಾಯಿ
* ಚಿಕನ್ ತಂದೂರಿ ಕಬಾಬ್ (1) - 340 ರೂಪಾಯಿ
* ಚಿಕನ್ ಲಾಲಿಪಾಪ್ (1) - 200 ರೂಪಾಯಿ
* ಚಿಕನ್ ಲಾಲಿಪಾಪ್ (Half) 120 ರೂಪಾಯಿ
* ವಾಟರ್ ಬಾಟಲ್ (1) - 30 ರೂಪಾಯಿ
* ವೆಜ್ ಸ್ಯಾಂಡ್ವಿಚ್ (1) - 220 ರೂಪಾಯಿ ಸೇರಿಸಿ 1,110 ರೂಪಾಯಿ ಬಿಲ್ ಆಗಿದ್ದರೆ, ಇದರ ಜೊತೆಗೆ ಹೆಚ್ಚುವರಿ ಗ್ಯಾಸ್ ಚಾರ್ಜಸ್ ಹೆಸರಿನಲ್ಲಿ ಬೇರೆ 100 ರೂಪಾಯಿ ಶುಲ್ಕ ವಿಧಸಿಲಾಗಿದೆ.
ಹೋಟೆಲ್‌ಗಳಲ್ಲಿ ಬಿಲ್‌ಗಳಲ್ಲಿ 'ಗ್ಯಾಸ್ ಸರ್‌ಚಾರ್ಜ್' ಹೆಸರಿನಲ್ಲಿ ಶುಲ್ಕ ಸೇರಿಸುತ್ತಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಗಳು ಭುಗಿಲೆದ್ದಿವೆ. ಗ್ರಾಹಕರ ಜೇಬಿಗೆ ನೇರವಾಗಿ ಕತ್ತರಿ ಬೀಳುತ್ತಿದೆ. ಮೆನುವಿನಲ್ಲಿರುವ ಬೆಲೆಗಳಿಗಿಂತ ಹೆಚ್ಚುವರಿಯಾಗಿ ಬಿಲ್‌ನಲ್ಲಿ ಇಂಧನ ಶುಲ್ಕವನ್ನು ಸೇರಿಸುತ್ತಿರುವುದು ಪಾರದರ್ಶಕತೆಯ ಪ್ರಶ್ನೆಯನ್ನು ಎತ್ತಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ, ಹೋಟೆಲ್ ಊಟದ ಮೇಲಿನ ಈ ಅಘೋಷಿತ ಸರ್‌ಚಾರ್ಜ್ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಹೋಟೆಲ್ ಆಡಳಿತ ಮಂಡಳಿ ಮತ್ತು ಗ್ರಾಹಕರ ನಡುವೆ ಬಿಲ್ಲಿಂಗ್ ಸಂಘರ್ಷಗಳು ನಡೆಯುತ್ತಲಿವೆ.












Click it and Unblock the Notifications