Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ
ಬೆಂಗಳೂರು: ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಮುಂದುವರಿಯುವ ಮುನ್ಸೂಚನೆ ಇದೆ. ಆದರೆ ಕಳೆದ ಒಂದು ವಾರದಲ್ಲಿ ಸುರಿದ ಅತ್ಯಧಿಕ ಆಲಿಕಲ್ಲು ಮಳೆಯಷ್ಟು ಆಗುವ ಲಕ್ಷಣಗಳು ತೀರಾ ಕಡಿಮೆ ಎನ್ನಲಾಗಿದ್ದು, ಹಗುರದಿಂದ ಸಾಧಾರಣ ಮಳೆ (Karnataka Rains) ಆಗಲಿದೆ. ಕರಾವಳಿ ಜಿಲ್ಲೆಗಳಿಗೆ ಮಳೆ ಜೊತೆಗೆ ಉಷ್ಣ ಅಲೆಯ (Heat Wave) ಎಚ್ಚರಿಕೆ ನೀಡಲಾಗಿದೆ. ಒಳನಾಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಮಾನ್ಯ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದಿನಿಂದ ಮಾರ್ಚ್ 27ರವರೆಗೆ ಉತ್ತಮ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಾರ್ಚ್ 23 ಮತ್ತು 24ರಂದು ಎರಡು ದಿನ ಗರಿಷ್ಠ ತಾಪಮಾನ ಪ್ರಮಾಣ ವ್ಯಾಪಕವಾಗಿ ಹೆಚ್ಚಾಗಲಿದೆ. ಐಎಂಡಿ ಈ ಭಾಗಕ್ಕೆ ಎರಡು ದಿನ ಉಷ್ಣಅಲೆ ಎಚ್ಚರಿಕೆ ನೀಡಿ 'ಯೆಲ್ಲೋ ಅಲರ್ಟ್' ಘೋಷಿಸಿದೆ. ಬಳಿಕ ಮಾರ್ಚ್ 27ರವರೆಗೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ.

ಒಳನಾಡು ಜಿಲ್ಲೆಗಳಲ್ಲೂ ಮಳೆ ಮುಂದುವರಿಕೆ
ಇಂದಿನಿಂದ (ಮಾರ್ಚ್ 21) ಎರಡು ದಿನ ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ಯದಗಿರಿ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಂತರ ಎರಡು ದಿನ ಮಾರ್ಚ್ 23, 24ರಂದು ಮಳೆ ಸಂಪೂರ್ಣ ತಗ್ಗಲಿದೆ. ಬಳಿಕ ಮಾರ್ಚ್ 25ರಿಂದ ಮಾರ್ಚ್ 27ರವರೆಗೆ ಮತ್ತೆ ಒಳನಾಡು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ ಆರ್ಭಟ ಕಂಡು ಬರಲಿದೆ. ಕೆಲವೆಡೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ನಿರೀಕ್ಷೆ ಇದೆ. ಇದರೊಂದಿಗೆ ಗರಿಷ್ಠ ತಾಪಮಾನದಲ್ಲಿ ಅಷ್ಟಾಗಿ ಇಳಿಕೆ ಕಂಡು ಬಾರದೇ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಹೆಚ್ಚಿನ ತಾಪಮಾನ ಕಂಡು ಬರಲಿದೆ ಎಂದು ಐಎಂಡಿ ವರದಿ ತಿಳಿಸಿದೆ.
ರಾಜ್ಯದ ಗರಿಷ್ಠ ತಾಪಮಾನ ವಿವರ
ಪೂರ್ವ ಮುಂಗಾರು ಮಳೆ ಸುರಿಸುವ ಮಾರುತಗಳ ಸಕ್ರಿಯಗೊಂಡ ಪರಿಣಾಮದಿಂದಾಗಿ ರಾಜ್ಯದಲ್ಲಿ 40ರ ಗಡಿಯಲ್ಲಿದ್ದ ಗರಿಷ್ಠ ಉಷ್ಣಾಂಶ ಪ್ರಮಾಣ ಇದೀಗ ತಗ್ಗಿದೆ. ಸುಮಾರು 3-6 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ಉಷ್ಣಾಂಶದಲ್ಲಿ ಇಳಿಕೆ ಆಗಿದೆ.
ಕಲಬುರಗಿಯಲ್ಲಿ ಗರಿಷ್ಠ 35.7 ಡಿಗ್ರಿ ಸೆಲ್ಸಿಯಸ್, ಕಾರವಾರದಲ್ಲಿ 35.2 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆ 35 ಡಿಗ್ರಿ ಸೆಲ್ಸಿಯಸ್, ರಾಯಚೂರು 34.2 ಡಿಗ್ರಿ ಸೆಲ್ಸಿಯಸ್, ಹಾಸನ 33.6 ಡಿಗ್ರಿ ಸೆಲ್ಸಿಯಸ್, ವಿಜಯಪುರ 33.6 ಡಿಗ್ರಿ ಸೆಲ್ಸಿಯಸ್, ಬೀದರ್ 33.2 ಡಿಗ್ರಿ ಸೆಲ್ಸಿಯಸ್, ಮೈಸೂರು 33 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 33 ಡಿಗ್ರಿ ಸೆಲ್ಸಿಯಸ್, ಮಂಡ್ಯ 32.9 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ 32.8 ಡಿಗ್ರಿ ಸೆಲ್ಸಿಯಸ್, ಗದಗ 32.8 ಡಿಗ್ರಿ ಸೆಲ್ಸಿಯಸ್, ಮಂಗಳೂರು 32.8 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 32.6 ಡಿಗ್ರಿ ಸೆಲ್ಸಿಯಸ್, ಆಗುಂಬೆ 32.5 ಡಿಗ್ರಿ ಸೆಲ್ಸಿಯಸ್, ಬೆಂಗಳೂರು 32 ಡಿಗ್ರಿ ಸೆಲ್ಸಿಯಸ್, ಧಾರವಾಡ 32 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಎಚ್ಎಎಲ್ 31.9 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಕೆಐಎಎಲ್ 31.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳು ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31 ಮತ್ತು 19 ಡಿಗ್ರಿ ಸೆಲ್ಸಿಯಸ್ ಕಂಡು ಬರಬಹುದೆಂದು ತಿಳಿಸಲಾಗಿದೆ.












Click it and Unblock the Notifications