IPL 2026 Kannadigas: ಐಪಿಎಲ್ 19ನೇ ಆವೃತ್ತಿಯಲ್ಲಿ ಅಬ್ಬರಿಸಲು ಸಜ್ಜಾದ ಕನ್ನಡದ ಕಲಿಗಳು
IPL 2026 Kannadigas: ಐಪಿಎಲ್ 19ನೇ ಆವೃತ್ತಿಯು ಮಾರ್ಚ್ 28ರಿಂದ ಆರಂಭವಾಗಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೂ ಒಟ್ಟು 10 ತಂಡಗಳ ನಡುವೆ ನಡೆಯಲಿರುವ ಈ ರೋಚಕ ಹಣಾಹಣಿಯಲ್ಲಿ 200ಕ್ಕೂ ಹೆಚ್ಚು ಆಟಗಾರರು ಕಣಕ್ಕಿಳಿಯುತ್ತಿದ್ದು, ಇದರಲ್ಲಿ ನಮ್ಮ ಹೆಮ್ಮೆಯ ಕರ್ನಾಟಕದ ಪ್ರತಿಭೆಗಳ ಪಟ್ಟಿ ಮತ್ತು ಅವರು ಪ್ರತಿನಿಧಿಸುತ್ತಿರುವ ತಂಡಗಳ ಸಂಪೂರ್ಣ ವಿವರವನ್ನಿ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2026ರ ಸೀಸನ್‌ನಲ್ಲಿ ವಿವಿಧ ಫ್ರಾಂಚೈಸಿಗಳ ಪರವಾಗಿ ಕಣಕ್ಕಿಳಿಯಲಿರುವ ಕರ್ನಾಟಕದ ಪ್ರಮುಖ ಆಟಗಾರರ ವಿವರ ಇಲ್ಲಿದೆ. ಈ ಬಾರಿ ಹಲವು ಕನ್ನಡಿಗರು ತಮ್ಮ ಹಳೆಯ ತಂಡಗಳಿಗೆ ಮರಳಿದ್ದರೆ, ಕೆಲವರು ಹೊಸ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ.

ಯಾರು ಯಾವ ತಂಡದ ಪರ ಆಡಲಿದ್ದಾರೆ?
* ಕೆ.ಎಲ್. ರಾಹುಲ್ - ಡೆಲ್ಲಿ ಕ್ಯಾಪಿಟಲ್ಸ್ (ಆರಂಭಿಕ ಬ್ಯಾಟರ್, ವಿಕೆಟ್ ಕೀಪರ್)
* ದೇವದತ್ ಪಡಿಕ್ಕಲ್ - ಆರ್‌ಸಿಬಿ (ಅಗ್ರ ಕ್ರಮಾಂಕದ ಬ್ಯಾಟರ್)
* ಪ್ರಸಿದ್ಧ್ ಕೃಷ್ಣ - ಗುಜರಾತ್ ಟೈಟನ್ಸ್ (ವೇಗದ ಬೌಲರ್)
* ಮನೀಶ್ ಪಾಂಡೆ - ಕೆಕೆಆರ್ (ಮಧ್ಯಮ ಕ್ರಮಾಂಕದ ಬ್ಯಾಟರ್)
* ವೈಶಾಕ್ ವಿಜಯ್‌ಕುಮಾರ್ - ಪಂಜಾಬ್ ಕಿಂಗ್ಸ್ (ವೇಗದ ಬೌಲರ್)
* ಕರುಣ್ ನಾಯರ್ - ಡೆಲ್ಲಿ ಕ್ಯಾಪಿಟಲ್ಸ್ (ಬ್ಯಾಟರ್)
* ಶ್ರೇಯಸ್ ಗೋಪಾಲ್ - ಚೆನ್ನೈ ಸೂಪರ್ ಕಿಂಗ್ಸ್ (ಲೆಗ್ ಸ್ಪಿನ್ನರ್ / ಆಲ್‌ರೌಂಡರ್)
* ಸ್ಮರಣ್ ರವಿಚಂದ್ರನ್ - ಸನ್‌ರೈಸರ್ಸ್ ಹೈದರಾಬಾದ್ (ಬ್ಯಾಟರ್)
* ಪ್ರವೀಣ್ ದುಬೆ - ಪಂಜಾಬ್ ಕಿಂಗ್ಸ್ (ಲೆಗ್ ಸ್ಪಿನ್ನರ್)
* ಕೆ.ಎಲ್. ರಾಹುಲ್: ಕರ್ನಾಟಕದ ಬೆಂಗಳೂರು ಮೂಲದವರಾದ ಸ್ಟಾರ್ ಆಟಗಾರ ಕೆ.ಎಲ್.ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು ಆರಂಭಿಕ ಬ್ಯಾಟರ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಜವಾಬ್ದಾರಿ ನಿಭಾಯಿಸಲಿದ್ದಾರೆ. ತಮ್ಮ ಅಪಾರ ಅನುಭವದಿಂದ ಡೆಲ್ಲಿಗೆ ಶಕ್ತಿ ತುಂಬಲು ಸಜ್ಜಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಪರ ಅಬ್ಬರದ ಬ್ಯಾಟಿಂಗ್ ಆಡಿ ಎದುರಾಳಿ ಬೌಲರ್‌ಗಳಿಗೆ ಬೆವರಳಿಸುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
* ದೇವದತ್ ಪಡಿಕ್ಕಲ್: ಆರ್‌ಸಿಬಿ ಅಭಿಮಾನಿಗಳ ನೆಚ್ಚಿನ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತೊಮ್ಮೆ ತವರು ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. 2 ಕೋಟಿ ರೂಪಾಯಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಇವರು, ಕಳೆದ ಬಾರಿ ಗಾಯದ ಸಮಸ್ಯೆಯಿಂದ ಹೊರಬಿದ್ದಿದ್ದರು. ಆದರೆ, ಈ ಬಾರಿ ಮೂರನೇ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ.
* ಪ್ರಸಿದ್ಧ್ ಕೃಷ್ಣ: ವೇಗದ ಬೌಲಿಂಗ್ ವಿಭಾಗದಲ್ಲಿ ಸಂಚಲನ ಮೂಡಿಸಿರುವ ಪ್ರಸಿದ್ಧ್ ಕೃಷ್ಣ ಗುಜರಾತ್ ಟೈಟನ್ಸ್ ತಂಡದ ಭರವಸೆಯ ಆಟಗಾರ. 9.5 ಕೋಟಿ ರೂಪಾಯಿಗಳ ಭಾರಿ ಮೊತ್ತಕ್ಕೆ ತಂಡ ಸೇರಿರುವ ಇವರು, ಡೆತ್ ಓವರ್‌ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಲು ಸಜ್ಜಾಗಿದ್ದಾರೆ.
* ಮನೀಶ್ ಪಾಂಡೆ: ಐಪಿಎಲ್ ಇತಿಹಾಸದಲ್ಲಿ ಮೊದಲ ಶತಕ ಬಾರಿಸಿದ ಭಾರತೀಯ ಎಂಬ ಖ್ಯಾತಿಯ ಮನೀಶ್ ಪಾಂಡೆ, ಈ ಬಾರಿ ಕೆಕೆಆರ್ ಪರ ಕಣಕ್ಕಿಳಿಯಲಿದ್ದಾರೆ. 75 ಲಕ್ಷ ರೂಪಾಯಿಗೆ ತಂಡ ಸೇರಿರುವ ಇವರು ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
* ಕರುಣ್ ನಾಯರ್: ರಾಹುಲ್ ಜೊತೆಗೆ ಡೆಲ್ಲಿ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್. ಕಳೆದ ಆವೃತ್ತಿಯ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಇವರನ್ನು ತಂಡ ಉಳಿಸಿಕೊಂಡಿದೆ. ಈ ಸೀಸನ್‌ನಲ್ಲಿ ಇವರಿಗೆ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
* ವೈಶಾಕ್ ವಿಜಯ್‌ಕುಮಾರ್: ಪಂಜಾಬ್ ಕಿಂಗ್ಸ್ ತಂಡದಲ್ಲಿ ಈ ಬಾರಿ ಇಬ್ಬರು ಕನ್ನಡಿಗರಿದ್ದಾರೆ. ವೇಗಿ ವೈಶಾಕ್ ವಿಜಯ್‌ಕುಮಾರ್ ಮತ್ತು ಲೆಗ್ ಸ್ಪಿನ್ನರ್ ಪ್ರವೀಣ್ ದುಬೆ ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
* ಸ್ಮರಣ್ ರವಿಚಂದ್ರನ್: ಯುವ ಪ್ರತಿಭೆ ಸ್ಮರಣ್ ರವಿಚಂದ್ರನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಅಬ್ಬರಿಸಲು ಸಿದ್ಧರಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಇವರು, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಸಾರ್ಮರ್ಥ್ಯ ಹೊಂದಿದ್ಧಾರೆ.
* ಅನುಭವಿ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ಈ ಬಾರಿ ಸಿಎಸ್‌ಕೆ 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಸ್ಪಿನ್ ಬೌಲಿಂಗ್ ಜೊತೆಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಇವರ ಸಾಮರ್ಥ್ಯ ಧೋನಿ ಪಡೆಯ ತಂಡಕ್ಕೆ ಆಸರೆಯಾಗಲಿದೆ.
ಯಾರನ್ನ ಯಾವ ತಂಡ ಎಷ್ಟಕ್ಕೆ ಖರೀದಿ ಮಾಡಿದೆ?
* ಕೆ.ಎಲ್. ರಾಹುಲ್ - ಡೆಲ್ಲಿ ಕ್ಯಾಪಿಟಲ್ಸ್ (₹14 ಕೋಟಿ)
* ದೇವದತ್ ಪಡಿಕ್ಕಲ್ - ಆರ್‌ಸಿಬಿ (₹2 ಕೋಟಿ)
* ಪ್ರಸಿದ್ಧ್ ಕೃಷ್ಣ - ಗುಜರಾತ್ ಟೈಟನ್ಸ್ (₹9.5 ಕೋಟಿ)
* ಮನೀಶ್ ಪಾಂಡೆ - ಕೆಕೆಆರ್ (₹75 ಲಕ್ಷ)
* ವೈಶಾಕ್ ವಿಜಯ್‌ಕುಮಾರ್ - ಪಂಜಾಬ್ ಕಿಂಗ್ಸ್ (₹1.5 ಕೋಟಿ)
* ಕರುಣ್ ನಾಯರ್ - ಡೆಲ್ಲಿ ಕ್ಯಾಪಿಟಲ್ಸ್ (₹50 ಲಕ್ಷ)
* ಶ್ರೇಯಸ್ ಗೋಪಾಲ್ - ಚೆನ್ನೈ ಸೂಪರ್ ಕಿಂಗ್ಸ್ (₹30 ಲಕ್ಷ)
* ಸ್ಮರಣ್ ರವಿಚಂದ್ರನ್ - ಸನ್‌ರೈಸರ್ಸ್ ಹೈದರಾಬಾದ್ (₹30 ಲಕ್ಷ)
* ಪ್ರವೀಣ್ ದುಬೆ - ಪಂಜಾಬ್ ಕಿಂಗ್ಸ್ (₹30 ಲಕ್ಷ)
ಒಟ್ಟಿನಲ್ಲಿ ಹೇಳುವುದಾದರೆ, ಈ ಬಾರಿ ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರು ವಿವಿಧ ತಂಡಗಳ ಪರ ಆಡಲಿದ್ದು, ಯಾರು ಎಷ್ಟರ ಮಟ್ಟಿಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದುನೋಡಬೇಕಿದೆ.












Click it and Unblock the Notifications