ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ
ನವದೆಹಲಿ: ಭಾರತ ಸರ್ಕಾರದ ಅಧೀನದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 4ಜಿ ಚಾಲ್ತಿಯಲ್ಲಿದ್ದು, 5ಜಿ ಸೇವೆ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಮಧ್ಯೆ ಗ್ರಾಹಕರು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ವಿಮುಖರಾಗುತ್ತಿದ್ದಾರೆ. ಹೀಗಾಗಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸುಧಾರಣೆಗೆ ಹಾಗೂ ವೆಚ್ಚ ತಗ್ಗಿಸಲು ಮಹತ್ವದ ಹೆಜ್ಜೆ ಇಟ್ಟಿದೆ.
ವೊಡಾಫೋನ್ ಐಡಿಯಾ ಮತ್ತು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಎರಡು ಸಂಸ್ಥೆಗಳು ಟವರ್‌ಗಳು, ಫೈಬರ್ ಮತ್ತು ಸಮ ಸ್ಪೆಕ್ಟ್ರಮ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಮನ್ವಯದಿಂದ ಕೆಲಸ ಮಾಡಲು, ಪರಿಸ್ಪರ ಸುಧಾರಣೆಗಾಗಿ ಮಾತುಕತೆ ನಡೆಸಿವೆ. ಇದರಿಂದ ಬಿಎಸ್‌ಎನ್‌ಎಲ್ ಮತ್ತುಷ್ಟು ಪರಿಣಾಮಕಾರಿಯಾಗಿ ಜನರಿಗೆ ತಲುಪುವ ಉದ್ದೇಶ ಹೊಂದಿದೆ.

ಸದ್ಯ ವಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಮಾತುಕತೆ ಆರಂಭಿಸಿವೆ. ಇದರಿಂದ ಒಂದೇ ಟೆಲಿಕಾಂ ವ್ಯವಸ್ಥೆಯಲ್ಲಿ ಎರಡು ಸೇವೆ ಸಿಗುವ ಸಾಧ್ಯತೆ ಇದೆ. ಮುಖ್ಯವಾಗಿ ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಮಾಡುತ್ತಿರುವ ವೆಚ್ಚಗಳು ಕಡಿತಗೊಳ್ಳಲಿವೆ. ಟೆಲಿಕಾಂ ಜಾಲ ಸುಧಾರಣೆ ಆಗಿ ಉತ್ತಮ ಸೇವೆ ನೀಡುವುದು ಹಾಗೂ ಬಿಎಸ್‌ಎನ್‌ಎಲ್ 5G ಸೇವೆ ಬಿಡುಗಡೆಗೆ ವೇಗ ನೀಡುವ ಪ್ರಯತ್ನ ಇದಾಗಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ.
ಬಂಡವಾಳ, ನೆಟ್‌ವರ್ಕ್ ಸಮಸ್ಯೆ
ದೂರಸಂಪರ್ಕ ಇಲಾಖೆ (ಡಿಒಟಿ) ಸಂಸದೀಯ ಸಮಿತಿಗೆ ಈ ಬಗ್ಗೆ ದೃಢಪಡಿಸಿದೆ. ಎರಡೂ ಸಂಸ್ಥೆಯ ಆಪರೇಟರ್‌ಗಳು ಪ್ರದೇಶಗಳಲ್ಲಿ ಬಂಡವಾಳ ಹಾಗೂ ಅಸಮಾನ ನೆಟ್‌ವರ್ಕ್ ಬೆಂಬಲದ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿವೆ. ಅಲ್ಲದೇ ಜಿಯೋದಂತಹ ಬಲಿಷ್ಟ ಸಂಸ್ಥೆ ಮುಂದೆ ಸೆಟೆದು ನಿಲ್ಲಲು ಕಷ್ಟ ಪಡುತ್ತಿರುವ ಬಿಎಸ್‌ಎನ್‌ಎಲ್, ವಡಾಫೋನ್‌ನಂತಹ ಸಂಸ್ಥೆಗಳಿಗೆ ಈ ಒಪ್ಪಂದವು ನೀರ್ಣಾಯಕ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಉಭಯ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಮೂಲಸೌಕರ್ಯ ಸುಧಾರಣೆ ಬಗ್ಗೆ ಪುನರ್‌ವಿಮರ್ಶೆ ಮಾಡಿಕೊಳ್ಳಲು ಮುಂದಾಗಿದ್ದರ ಭಾಗವಾಗಿ ಈ ಮಾತುಕತೆ ನಡೆದಿವೆ.
ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಡಿಯಲ್ಲಿ ಬರುವ ದೂರಸಂಪರ್ಕ ಇಲಾಖೆ ಮುಂದಿನ ವರ್ಷದೊಳಗೆ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ದೂರಸಂಪರ್ಕ ಕಾರ್ಯದರ್ಶಿ ಅಮಿತ್ ಅಗರ್‌ವಾಲ್ ಸಂಸದೀಯ ಸಮಿತಿಗೆ ಮಾಹಿತಿ ನೀಡಿದರು. ಈ ಬಗ್ಗೆ ಸಮಿತಿಯು ತನ್ನ ವರದಿಯನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿತು.
ವಾಣಿಜ್ಯ ಉದ್ದೇಶಕ್ಕಾಗಿ ಮಾತ್ರವೇ ಒಪ್ಪಂದ
ಎರಡು ಸಂಸ್ಥೆಗಳ ಮಧ್ಯೆ ಟವರ್‌ಗಳು, ಫೈಬರ್ ಮತ್ತು ಸ್ಪೆಕ್ಟ್ರಮ್‌ಗಳನ್ನು ಹಂಚಿಕೊಳ್ಳುವ ಮುಖೇನ ವೆಚ್ಚವನ್ನು ಕಡಿತಗೊಳಿಸುವ ಮತ್ತು ನೆಟ್‌ವರ್ಕ್ ವ್ಯಾಪ್ತಿಯನ್ನು ಸುಧಾರಿಸುವ ಗುರಿ ಹೊಂದಿದೆ. ಕೇಂದ್ರ ಸರ್ಕಾರವು ಈ ಸಂಬಂಧ ಒಪ್ಪಂದ ಮಾಡಿಕೊಂಡರೆ ಅದು ವಾಣಿಜ್ಯ ಉದ್ದೇಶಕ್ಕಾಗಿ ಮಾತ್ರವೇ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ.
5G ಸೇವೆ ಕಾರ್ಯಾರಂಭ ಕುರಿತು ಮಾತನಾಡಿರುವ ಬಿಎಸ್‌ಎನ್‌ಎಲ್ ಸಂಸ್ಥೆ ಅಧ್ಯಕ್ಷ ಎ ರಾಬರ್ಟ್ ಜೆ.ರವಿ ಅವರು, ವೇಗದ ನೆಟ್‌ವರ್ಕ್ ನಿಯೋಜನೆ ಮತ್ತು ಗಮನಾರ್ಹ ಹೂಡಿಕೆಗಳ ಹೊರತಾಗಿಯೂ ನಿರ್ವಾಹಕರಿಗೆ ಸಾಕಷ್ಟು ಲಾಭವನ್ನು ಇನ್ನೂ ನೀಡಲಾಗಿಲ್ಲ. ಭವಿಷ್ಯದ ಗ್ರಾಹಕರಿಗೆ ನೆಟ್‌ವರ್ಕ್‌ಗಳ ನಿಜವಾದ ಸಾಮರ್ಥ್ಯ ಸೇವೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸೇವಾ ಗುಣಮಟ್ಟ, ವಿಶ್ವಾಸ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸಲು ದೂರಸಂಪರ್ಕ ವಲಯವು ಮೂಲಸೌಕರ್ಯ ವಿಸ್ತರಣೆಗೆ ಮುಂದಾಗಿದೆ 'ETTelecom 5G ಕಾಂಗ್ರೆಸ್ 2026' ಸಮಾರಂಭದಲ್ಲಿ ಅವರು ಹೇಳಿದ್ದಾರೆ.
ಗ್ರಾಹಕರಲ್ಲಿ ಗುಣಮಟ್ಟದ ಸೇವೆ ನಿರೀಕ್ಷೆ
ಲಕ್ಷಗಟ್ಟಲೇ 4ಜಿ ಟವರ್ ಸ್ಥಾಪನೆ ಮಾಡಿದ ಬಿಎಸ್‌ಎನ್‌ಎಲ್ ಶೀಘ್ರವೇ ಅದೇ ಟವರ್‌ಗಳಲ್ಲಿ 5ಜಿ ಅಪ್‌ಗ್ರೇಡ್ ಮಾಡುವುದಾಗಿ ತಿಳಿಸಿತ್ತು. ಆದರೆ ಬಿಎಸ್‌ಎನ್‌ಎಲ್ 3ಜಿಯಿಂದ 4ಜಿಗೆ ಬದಲಾಗುತ್ತಿದ್ದಂತೆ ಒಂದಷ್ಟು ಗ್ರಾಹಕರಿಗೆ ನೆಟ್‌ವರ್ಕ್ ಸಮಸ್ಯೆ ಉಂಟಾಯಿತು. ಭಾರತ ಸರ್ಕಾರಿ ಸಂಸ್ಥೆಯ ಸೇವೆಗೆ ಮನಸೋತು ಬಿಎಸ್‌ಎನ್ಎಲ್‌ಗೆ ಪೋರ್ಟ್ ಆಗಿದ್ದ ಅದೆಷ್ಟೋ ಗ್ರಾಹಕರು ಮತ್ತೆ ಖಾಸಗಿ ಸೇವೆಯತ್ತ ಮುಖ ಮಾಡಿದರು. ಮುಂದಿನ ದಿನಗಳಲ್ಲಿ ಗುಣಮಟ್ಟದ 5ಜಿ ಸೇವೆ ಸಿಕ್ಕಿದ್ದೇ ಆದಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications