'ಗೋಲ್ ಗುಂಬಜ್' ಎಕ್ಸ್‌ಪ್ರೆಸ್‌ಗೆ ಹೊಸ ಮಾರ್ಗ: ಹುಬ್ಬಳ್ಳಿ-ಗದಗ ನಿಲ್ದಾಣಗಳಿಗೆ ಗುಡ್‌ಬೈ, ಪ್ರಯಾಣಿಕರ ಆಕ್ರೋಶ
ಬೆಂಗಳೂರು: ವಿಜಯಪುರ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಜನರ ಬಹು ವರ್ಷಗಳ ಬೇಡಿಕೆಯ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಮೈಸೂರು ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ನಗರಗಳ ನಡುವೆ ಸಂಚರಿಸುವ ಕರ್ನಾಟಕದ ಅತ್ಯಂತ ಪ್ರಮುಖ ಹಾಗೂ ಜನಪ್ರಿಯ ರೈಲುಗಳಲ್ಲಿ ಒಂದಾದ 'ಗೋಲ್ ಗುಂಬಜ್ ಎಕ್ಸ್‌ಪ್ರೆಸ್' ರೈಲು (16535/16536) ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯಿಂದ ಈ ಭಾಗದ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಆಗಲಿದೆ ಎಂದು ಆಕ್ರೋಶ ಸಹ ವ್ಯಕ್ತವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಬಗ್ಗೆ ಎಕ್ಸ್ ಮೂಲಕ ಮಾಹಿತಿ ನೀಡಿದ್ದಾರೆ. ಮೈಸೂರು-ಪಂಡರಾಪುರ ಮಾರ್ಗದ ರೈಲು ದಕ್ಷಿಣ ಕರ್ನಾಟಕವನ್ನು ನೇರವಾಗಿ ಉತ್ತರ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರಕ್ಕೆ ಬೆಸೆಯುತ್ತದೆ. ಈ ರೈಲು ಇನ್ಮುಂದೆ ಹುಬ್ಬಳ್ಳಿ ಮತ್ತು ಗದಗ ರೈಲ್ವೆ ಜಂಕ್ಷನ್ ನಿಲ್ದಾಣಗಳಿಗೆ ಭೇಟಿ ನೀಡದೆ, ಸಂಪೂರ್ಣವಾಗಿ ಬೈಪಾಸ್ ರೈಲು ಮಾರ್ಗದ ಮೂಲಕವೇ ಕಾರ್ಯಾಚರಣೆ ಮಾಡಲು ನೈಋತ್ಯ ರೈಲ್ವೆ ತಿಳಿಸಿದೆ ಎಂದು ಹೇಳಿದರು.

ಮಾರ್ಗ ಬದಲಾವಣೆಯಿಂದ 40 ನಿಮಿಷ ಉಳಿತಾಯ
ಈ ಹೊಸ ಕ್ರಮದಿಂದಾಗಿ ಮೈಸೂರು-ಪಂಡರಾಪುರ ಎಕ್ಸ್‌ಪ್ರೆಸ್ ರೈಲಿನ ಒಟ್ಟಾರೆ ಪ್ರಯಾಣದ ಅವಧಿಯಲ್ಲಿ ಕಡಿಮೆ ಎಂದರೂ ಸುಮಾರು 40 ನಿಮಿಷ ಸಮಯ ಉಳಿತಾಯವಾಗಲಿದೆ. ಪ್ರಸ್ತುತ ರೈಲು ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಪ್ರವೇಶಿಸಿದಾಗ ಅಲ್ಲಿ ಇಂಜಿನ್‌ನ ದಿಕ್ಕನ್ನು ಬದಲಾಯಿಸಬೇಕಾಗುತ್ತಿತ್ತು. ಈ ಅತ್ಯಂತ ಕಠಿಣ ತಾಂತ್ರಿಕ ಪ್ರಕ್ರಿಯೆಗೆ ಕನಿಷ್ಠ 30 ನಿಮಿಷಗಳ ಕಾಲಾವಕಾಶ ಹಿಡಿಯುತ್ತಿತ್ತು. ಈಗ ಹೊಸದಾಗಿ ರೈಲ್ವೆ ವಲಯ ಅಭಿವೃದ್ಧಿಪಡಿಸಿರುವ ಅಮರಾವತಿ ಕಾಲೋನಿ ಮತ್ತು ಕುಸುಗಲ್ ಬೈಪಾಸ್ ಮಾರ್ಗ ಬಳಸುವ ಕಾರಣ ಇಂಜಿನ್ ಬದಲಾವಣೆಯ ಸಮಯ ಉಳಿಯಲಿದೆ.
ಗೋಲ್ ಗುಂಬಜ್ ರೈಲು ಸಂಚಾರವನ್ನು ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸುವಂತೆ ಬಿಜಾಪುರದ ಸಂಸದರಾದ ರಮೇಶ್ ಜಿಗಜಿಣಗಿ ಹಾಗೂ ಬಾಗಲಕೋಟೆ ಸಂಸದರಾದ ಪಿಸಿ ಗದ್ದಿಗೌಡರ್ ಅವರು ಒತ್ತಾಯಿಸಿದರು. ಅವರ ಮನವಿ ಮೇರೆಗೆ ಬೇಡಿಕೆಯನ್ನು ಪುರಸ್ಕರಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ನಾವು ವಿನಂತಿಸಿಕೊಂಡಿದ್ದೆವು.
ರೈಲ್ವೆ ನಿರ್ಧಾರದಿಂದ ಅನೇಕರಿಗೆ ತೊಂದರೆ
ನಮ್ಮ ಮನವಿಗೆ ಸ್ಪಂದಿಸಿ ರೈಲ್ವೆ ಸಚಿವರು ಮೈಸೂರು- ಬೆಂಗಳೂರು- ಪಂಡರಾಪುರ (ಮಹಾರಾಷ್ಟ್ರ) ಗೋಲ್ ಗುಂಬಜ್ ರೈಲು ಗದಗ ಹಾಗೂ ಹುಬ್ಬಳ್ಳಿ ನಿಲ್ದಾಣದ ಬದಲಾಗಿ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಮುಂಗಡ ರೈಲ್ವೆ ಕಾಯ್ದಿರಿಸಿದ ದಿನಾಂಕಗಳ ಬಳಿಕ ಹೊಸ ರೈಲು ಮಾರ್ಗದ ಮೂಲಕ ಸಂಚಾರ ಸೇವೆ ಒದಗಿಸಲಿದೆ ಎಂದು ತಿಳಿಸಿದರು. ಈ ಮೂಲಕ ಹುಬ್ಬಳ್ಳಿ ಜಂಕ್ಷನ್‌ಗೆ ಇಳಿಯುವ ಪ್ರಯಾಣಿಕರು ಗಮನಿಸಿ ರೈಲು ನಿಲ್ದಾಣ, ಮಾರ್ಗ ನೋಡಿಕೊಂಡು ಟಿಕೆಟ್ ಬುಕ್ ಮಾಡಿಕೊಳ್ಳಬೇಕು. ಇಲ್ಲವಾದರೆ ಹುಬ್ಬಳ್ಳಿಗೆ ಇಳಿಯಬೇಕಾದವರು ಬೇರೆ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ.
ಹುಬ್ಬಳ್ಳಿ ಮತ್ತು ಗದಗ ಜಂಕ್ಷನ್ ಬಿಟ್ಟಿದ್ದಕ್ಕೆ ಅಸಮಾಧಾನ
ಹುಬ್ಬಳ್ಳಿ ಮತ್ತು ಗದಗ ಜಂಕ್ಷನ್ ಪ್ರಮುಖ ರೈಲು ನಿಲ್ದಾಣಗಳಾಗಿವೆ. ಈ ನಿಲ್ದಾಣಗಳಿಗೆ ಬಾರದೇ ಬೈಪಾಸ್ ಮೂಲಕ ರೈಲು ಸಾಗುವುದರಿಂದ ತೊಂದರೆ ಆಗುತ್ತದೆ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈಲ್ವೆಯ ತಾಂತ್ರಿಕ ಮತ್ತು ಕಾರ್ಯಾಚರಣೆಯ ಹಿತದೃಷ್ಟಿಯಿಂದ ಬೈಪಾಸ್ ಮಾರ್ಗವಾಗಿ ಸಂಚಾರಕ್ಕೆ ಕ್ರಮ ಕೈಗೊಳ್ಳಳಾಗಿದೆ.
ಆದರೆ ಹುಬ್ಬಳ್ಳಿ ಮತ್ತು ಗದಗಗೆ ಸಂಚಾರ ಮಾಡುವ ಲಕ್ಷಾಂತರ ಉದ್ಯೋಗಸ್ಥರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗರಂ ಆಗಿದ್ದಾರೆ. ಈ ಎರಡು ಪ್ರಮುಖ ಸ್ಥಳಗಳಿಂದ ಧಾರ್ಮಿಕ, ಪ್ರವಾಸಿ ಸ್ಥಳಗಳಿಗೆ ತೆರಳುತ್ತಾರೆ. ನಿತ್ಯ ಸಾವಿರಾರು ಮಂದಿ ಈ ರೈಲನ್ನೇ ಆಶ್ರಯಿಸಿದ್ದರು. ದಿಢೀರನೆ ಕೈಗೊಂಡ ಈ ಮಾರ್ಗ ಬದಲಾವಣೆಯು ಅವರ ದಿನನಿತ್ಯದ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸ್ಥಳೀಯರು ರೈಲ್ವೆ ಅಧಿಕಾರಿಗಳ ನಿರ್ಧಾರಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ, ಕೈಗಾರಿಕಾ ಕೇಂದ್ರವಾದ ನಗರ ಹುಬ್ಬಳ್ಳಿಯಲ್ಲಿ ನೈಋತ್ಯ ರೈಲ್ವೆ ಪ್ರಧಾನ ಕಚೇರಿ ಇದೆ. ಇಂತಹ ನಿಲ್ದಾಣವನ್ನೇ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ಜನಪ್ರಿಯ ರೈಲು ನಿಲುಗಡೆ ಕೈ ಬಿಟ್ಟಿರುವುದು ಪ್ರಯಾಣಿಕರಿಗೆ ನಿರಾಶೆ ಉಂಟು ಮಾಡಿದಂತಾಗಿದೆ. ಸ್ಥಳೀಯ ಸಂಘಟನೆಗಳು ಹಾಗೂ ಸಾರಿಗೆ ಹೋರಾಟಗಾರರು ರೈಲ್ವೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಈ ಕುರಿತು ಅವರು ಜನಪ್ರತಿನಿಧಿಗಳು, ರೈಲ್ವೆ ಅಧಿಕಾರಿಗಳಿಗೆ ಪತ್ರ ಮುಖೇನ ಈ ಮೊದಲಿನಂತೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸಂಚರಿಸುವಂತೆ ಮನವಿ ಮಾಡಿದ್ದಾರೆ.














Click it and Unblock the Notifications