ಆರು ದಶಕಗಳಿಂದ ಮಳೆ ದಾಖಲೆ ಬರೆದಿಟ್ಟುಕೊಂಡಿರುವ ಕೊಡಗಿನ ಕುಟುಂಬ:ಕೃಷಿ ನಿರ್ಧಾರಗಳಿಗೆ ಇದೇ ದಿಕ್ಸೂಚಿ

ಕೊಡಗು ಜಿಲ್ಲೆಯಲ್ಲಿ ಮಳೆಯೆಂದರೆ ಕೇವಲ ಹವಾಮಾನದ ಬದಲಾವಣೆಯಲ್ಲ, ಮಳೆ ಇಲ್ಲಿನ ಕಾಫಿ ಬೆಳೆಗಾರರ ದೈನಂದಿನ ಬದುಕು ಮತ್ತು ನಿರ್ಧಾರಗಳನ್ನೇ ರೂಪಿಸುವ ಪ್ರಮುಖ ಅಂಶ. ಬೆಟ್ಟಗುಡ್ಡಗಳ ಈ ನಾಡಿನಲ್ಲಿ ಬೀಳುವ ಪ್ರತಿ ಹನಿಯೂ ವಿಶಿಷ್ಟ ಅರ್ಥವನ್ನು ಹೊಂದಿರುತ್ತದೆ. ಮಳೆಯ ಏರಿಳಿತಗಳು ಇಡೀ ವರ್ಷದ ಕಾಫಿ ಫಸಲನ್ನೇ ಬದಲಾಯಿಸಬಲ್ಲವು. ಇದೇ ಕಾರಣಕ್ಕಾಗಿ, ಕೊಡಗಿನ ಕಾಫಿ ತೋಟಗಳಲ್ಲಿ ದಶಕಗಳಿಂದಲೂ ಮಳೆಯ ಪ್ರಮಾಣವನ್ನು ದಿನಚರಿಯಲ್ಲಿ ದಾಖಲಿಸುವ ಅಪರೂಪದ ಸಂಪ್ರದಾಯವಿದೆ.

ಇಲ್ಲಿನ ಬೆಳೆಗಾರರು ಮಣ್ಣಿನ ಗುಣ, ತೋಟದ ಇಳಿಜಾರು, ತೇವಾಂಶ ಮತ್ತು ಕಾಫಿ ಗಿಡಗಳ ಹೂವರಳುವಿಕೆಯನ್ನು ಗಮನಿಸಿ ಮಳೆಯ ಸ್ವರೂಪವನ್ನು ಅರ್ಥೈಸಿಕೊಳ್ಳುತ್ತಾರೆ. ಈ ವಿವರಗಳು ಎಷ್ಟು ಮುಖ್ಯವೆಂದರೆ, ಒಂದು ಕಾಫಿ ತೋಟ ಮಾರಾಟ ಮಾಡುವಾಗ ಅಥವಾ ಖರೀದಿಸುವಾಗ ಜನರು ಮೊದಲು ಕೇಳುವುದೇ ಆ ತೋಟದ 'ಮಳೆ ದಾಖಲೆಯ ಚಾರ್ಟ್'.

Kodagu

ಪೀಳಿಗೆಯಿಂದ ಪೀಳಿಗೆಗೆ ಮುಂದುವರೆದುಕೊಂಡು ಬಂದ ಹವ್ಯಾಸ:

ಕೊಡಗಿನಾದ್ಯಂತ ಹಲವಾರು ಕಾಫಿ ಬೆಳೆಗಾರರ ಕುಟುಂಬಗಳು ದಶಕಗಳಿಂದ ಮಳೆಯ ವಿವರಗಳನ್ನು ಬರೆದಿಡುತ್ತಾ ಬಂದಿವೆ. ಕೆಲವು ಕುಟುಂಬಗಳ ಬಳಿ 1950 ಮತ್ತು 60ರ ದಶಕದ ದಾಖಲೆಗಳೂ ಇವೆ. ಮೊದ ಮೊದಲು ಕೃಷಿ ಪದ್ಧತಿಯ ಒಂದು ಭಾಗವಾಗಿ ಈ ಅಭ್ಯಾಸ ಆರಂಭವಾಯಿತು. ಕಾಲಕ್ರಮೇಣ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರವಾಗಿ ಈಗ ಇದು ಕೌಟುಂಬಿಕ ಆಚರಣೆಯಾಗಿ ಮಾರ್ಪಟ್ಟಿದೆ.

ಇದರ ಪ್ರಕ್ರಿಯೆ ತೀರಾ ಸರಳ. ಪ್ರತಿದಿನ ತೋಟದಲ್ಲಿರುವ 'ರೇನ್ ಗೇಜ್' ಪರಿಶೀಲಿಸಿ, ಬಂದ ರೀಡಿಂಗ್ ಅನ್ನು ಡೈರಿಯಲ್ಲಿ ಬರೆದಿಡಲಾಗುತ್ತದೆ. ವರ್ಷಗಳು ಉರುಳಿದಂತೆ ಈ ಸಣ್ಣ ಅಂಕಿ-ಅಂಶಗಳು ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಹಲವು ದಶಕಗಳ ಕಾಲದ ಹವಾಮಾನ ಏರುಪೇರುಗಳ ದೊಡ್ಡ ಇತಿಹಾಸವನ್ನೇ ಸೃಷ್ಟಿಸುತ್ತವೆ. ಹಲವು ಕುಟುಂಬಗಳು ತಲೆಮಾರುಗಳಿಂದ ಒಂದು ದಿನವೂ ತಪ್ಪದೇ ಈ ಮಳೆ ವಿವರಗಳನ್ನು ದಾಖಲಿಸುತ್ತಾ ಬಂದಿರುವುದು ವಿಶೇಷ.

Karnataka Weather: ಒಳನಾಡಿಗೆ ಕೈ ಕೊಟ್ಟ ಮುಂಗಾರು, ಕರಾವಳಿಗೆ ಮೇಲೆ ಭಾರೀ ಕರುಣೆ, ಆರೆಂಜ್ ಅಲರ್ಟ್‌
Karnataka Weather: ಒಳನಾಡಿಗೆ ಕೈ ಕೊಟ್ಟ ಮುಂಗಾರು, ಕರಾವಳಿಗೆ ಮೇಲೆ ಭಾರೀ ಕರುಣೆ, ಆರೆಂಜ್ ಅಲರ್ಟ್‌

ಗರ್ವಾಲೆ ಗ್ರಾಮದಲ್ಲಿ 60 ವರ್ಷಗಳ ಮಳೆ ಇತಿಹಾಸ:

ಮಾದಾಪುರ ಸಮೀಪದ ಗರ್ವಾಲೆ ಗ್ರಾಮದ ಪಂದಂಡ ವಿಜಯ್ ದೇವಯ್ಯ ಅವರ ಕುಟುಂಬ ಕಳೆದ 60 ವರ್ಷಗಳಿಗೂ ಹೆಚ್ಚು ಕಾಲದಿಂದ ಮಳೆಯ ದಾಖಲೆಯನ್ನು ಕಾಯ್ದುಕೊಂಡು ಬಂದಿದೆ. ತಂದೆಯವರು 1965 ರಲ್ಲಿ ಮಳೆ ವಿವರಗಳನ್ನು ದಾಖಲಿಸಲು ಪ್ರಾರಂಭಿಸಿದರು, ಈಗ ನಾನು ಅದನ್ನು ಮುಂದುವರಿಸುತ್ತಿದ್ದೇನೆ, ಎಂದು ವಿಜಯ್ ದೇವಯ್ಯ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಈ ಕುಟುಂಬಕ್ಕೆ ಈ ದಾಖಲೆಗಳು ಕೇವಲ ಅಂಕಿ-ಅಂಶಗಳಲ್ಲ, ಬದಲಿಗೆ ದಿನನಿತ್ಯದ ಕೃಷಿ ಯೋಜನೆಗೆ ದಿಕ್ಸೂಚಿ. ಏಪ್ರಿಲ್ ತಿಂಗಳ ಕಾಫಿ ಹೂ ಅರಳಲು ನೆರವಾಗುವ ಮಳೆಯಿಂದ ಹಿಡಿದು ಮುಂಗಾರಿನವರೆಗಿನ ಪ್ರತಿಯೊಂದು ಕೆಲಸಕ್ಕೂ ಇದು ನೆರವಾಗುತ್ತದೆ. ಕಾಫಿ ಕೃಷಿಯಲ್ಲಿ ಔಷಧ ಸಿಂಪಡಣೆ, ಕಟಾವು ಮತ್ತು ಒಣಗಿಸುವ ಪ್ರಕ್ರಿಯೆಗೆ ಮಳೆಯ ನಿಖರ ಮಾಹಿತಿ ಅತ್ಯಗತ್ಯವಾಗಿದೆ.

ಕಕ್ಕಬೆಯಲ್ಲಿ ಮೂರು ತಲೆಮಾರಿನ ಪಯಣ:

ಕಕ್ಕಬೆಯ 'ಪ್ಯಾಲೇಸ್ ಎಸ್ಟೇಟ್'ನ ಅಪರಂಡ ಪ್ರಸಾದ್ ಕುಶಾಲಪ್ಪ ಅವರದ್ದೂ ಇದೇ ಕಥೆ. ಇವರ ತೋಟದಲ್ಲಿ ಮೂರು ತಲೆಮಾರುಗಳಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ. ಮೊದಲು ಇವರ ಅಜ್ಜಿ ಮಳೆ ದಾಖಲಿಸಲು ಆರಂಭಿಸಿದರು. ನಂತರ ಚಿಕ್ಕಪ್ಪ ಮುಂದುವರಿಸಿದರು. ಈಗ ಪ್ರಸಾದ್ ಈ ದಿನಚರಿಯನ್ನು ಪಾಲಿಸುತ್ತಿದ್ದಾರೆ. ಈ ಎಸ್ಟೇಟ್‌ನಲ್ಲಿ 1963 ರಿಂದ ಇಂದಿನವರೆಗಿನ ಮಳೆಯ ಸಂಪೂರ್ಣ ವಿವರ ಲಭ್ಯವಿದೆ.

ಈ ಹಳೇ ಡೈರಿಗಳು ಕೇವಲ ಕಾಗದದ ತುಂಡುಗಳಲ್ಲ, ಇವು ಹಳೆಯ ಹವಾಮಾನವನ್ನು ಇಂದಿನ ಪರಿಸ್ಥಿತಿಗೆ ಹೋಲಿಸಿ ನೋಡಲು ನೆರವಾಗುತ್ತವೆ. ಕೃಷಿಕರಲ್ಲದವರಿಗೆ ಅರ್ಧ ಇಂಚು ಮಳೆಯ ವ್ಯತ್ಯಾಸ ಸಾಮಾನ್ಯ ಎನಿಸಬಹುದು. ಆದರೆ ಕೊಡಗಿನ ಕೃಷಿಕರಿಗೆ ಅದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ.

ಪೊನ್ನಂಪೇಟೆಯ ಕೃಷಿಕ ದಿನೇಶ್ ಅವರ ಪ್ರಕಾರ, "ನಾಲ್ಕು ಇಂಚು ಮಳೆ ಬೀಳುವುದಕ್ಕೂ ಮತ್ತು ಮೂರೂವರೆ ಇಂಚು ಮಳೆ ಬೀಳುವುದಕ್ಕೂ ಕಾಫಿ ತೋಟದಲ್ಲಿ ಸಾಕಷ್ಟು ವ್ಯತ್ಯಾಸವಿರುತ್ತದೆ. ಈ ಸಣ್ಣ ವ್ಯತ್ಯಾಸವೂ ಮಣ್ಣಿನ ತೇವಾಂಶ, ಕೀಟ ನಿಯಂತ್ರಣ ಮತ್ತು ತೋಟದ ಕಾರ್ಮಿಕರ ಕೆಲಸದ ಸಮಯವನ್ನು ನಿರ್ಧರಿಸುತ್ತದೆ.

Bengaluru Rain: ಬೆಂಗಳೂರಲ್ಲಿ ಮಳೆ ನೀರಿನಿಂದ ಸಮಸ್ಯೆ: ಎರಡು ಪಾಲಿಕೆಗಳ ನಡುವೆ ಫೈಟ್!
Bengaluru Rain: ಬೆಂಗಳೂರಲ್ಲಿ ಮಳೆ ನೀರಿನಿಂದ ಸಮಸ್ಯೆ: ಎರಡು ಪಾಲಿಕೆಗಳ ನಡುವೆ ಫೈಟ್!

ಕಾಫಿ ಮಂಡಳಿಗೂ ಆಸರೆಯಾದ ಹಸ್ತಪ್ರತಿಗಳು:

ವಿಶೇಷವೆಂದರೆ, ಹವಾಮಾನದ ಮುನ್ಸೂಚನೆಗಳು ಅಷ್ಟಾಗಿ ಇಲ್ಲದ ಕಾಲದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಭಾರತೀಯ ಕಾಫಿ ಮಂಡಳಿಯು ಕೊಡಗಿನ ಕುಟುಂಬಗಳು ಬರೆದಿಟ್ಟ ಮಳೆ ದಾಖಲೆಗಳನ್ನು ಉಲ್ಲೇಖಿಸಿದೆ. ಇಂದು ಎಲ್ಲೆಡೆ ಡಿಜಿಟಲ್ ಸ್ಕ್ರೀನ್ ಹಾಗೂ ಉಪಗ್ರಹ ಆಧಾರಿತ ಹವಾಮಾನ ವರದಿಗಳು ಲಭ್ಯವಿದ್ದರೂ, ಕೊಡಗಿನ ಬೆಳೆಗಾರರು ತಮ್ಮದೇ ಕೈಬರಹದ ಡೈರಿಗಳನ್ನು ಹೆಚ್ಚು ನಂಬುತ್ತಾರೆ.

ಪ್ರತಿದಿನ ಬರೆಯುವ ಈ ಅಂಕೆಯ ಹಿಂದೆ ಇಡೀ ಕೊಡಗಿನ ಕಾಫಿ ತೋಟಗಳ ಇತಿಹಾಸ ಅಡಗಿದೆ. ಹವಾಮಾನ ವೈಪರೀತ್ಯದ ಈ ಕಾಲದಲ್ಲಿ, ಕೊಡಗಿನ ಮಣ್ಣಿನ ಕಥೆಯನ್ನು, ತಲೆಮಾರುಗಳ ಶ್ರಮವನ್ನು ಈ ಮಳೆ ಡೈರಿಗಳು ಜೀವಂತವಾಗಿಟ್ಟಿವೆ. ಕೊಡಗಿನಲ್ಲಿ ಮಳೆಯೆಂದರೆ ಕೇವಲ ನೀರಲ್ಲ, ಅದು ಶಾಯಿಯಿಂದ ಬರೆದಿಟ್ಟ ಇತಿಹಾಸ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+