ಈ 8 ಅಭ್ಯಾಸ ಬಿಡದಿದ್ದರೆ, ತೂಕ ಇಳಿಸಿಕೊಳ್ಳೋದು ಕಷ್ಟ! 72 ಕೆಜಿಯಿಂದ 49 ಕೆಜಿಗೆ ತೂಕ ಇಳಿಸಿಕೊಂಡ ಫಿಟ್‌ನೆಸ್ ಕೋಚ್ ಗೈಡ್‌ಲೈನ್
ಶಿಖಾ ಸುರಾನಾ ಮೂಲತಃ ರಾಜಸ್ತಾನದ ಜೈಪುರದವರು. ಶುರುವಲ್ಲಿ ಹೆಚ್ಚಿನ ಹೆಣ್ಮಕ್ಕಳು ಒದ್ದಾಡುವಂತೆ ಇವರೂ ತೂಕ ಇಳಿಸಿಕೊಳ್ಳಲು ಒದ್ದಾಡಿದ್ದರು. ಏನೇ ಮಾಡಿದರೂ ತೂಕ ಇಳಿಕೆ ಆಗಲಿಲ್ಲ. ಇದಿಷ್ಟೇ, ಈ ಜನ್ಮದಲ್ಲಿ ನಂಗೆ ತೂಕ ಇಳಿಸೋದಕ್ಕಾಗಲ್ಲ ಅಂತ ನಿರಾಸೆಯಲ್ಲಿ ಸುಮ್ಮನೆ ದಿನ ದೂಡುತ್ತಿದ್ದರು. ಒಮ್ಮೆ ಯಾಕೋ ತಾನು ಒಳ್ಳೆಯದು ಅಂದುಕೊಂಡು ಮಾಡುತ್ತಿರುವ ಅಭ್ಯಾಸಗಳೇ ತನ್ನ ವೈಟ್ ಲಾಸ್ ಪ್ರಯತ್ನಕ್ಕೆ ಅಡ್ಡಿ ಆಗುತ್ತಿದೆಯಾ ಅನ್ನೋ ಅನುಮಾನ ಬಂತು. ಆಗ ಇವರ ತೂಕ ಭರ್ತಿ 72 ಕೆಜಿ ಆಗಿತ್ತು. ಎಲ್ಲಿ ಮಧುಮೇಹದಂಥಾ ಸಮಸ್ಯೆ ಬಂದು ಲೈಫ್‌ಲಾಂಗ್ ಒದ್ದಾಡುವ ಹಾಗಾಗುತ್ತೋ ಅಂತ ಬೇಸರ ಆಗ್ತಿತ್ತು. ಕಡೆಗೆ ನೋಡಿದರೆ ಇವರ ಅನುಮಾನವೇ ನಿಜ ಆಯ್ತು. ತಾನು ತೂಕ ಇಳಿಸೋದಕ್ಕೆ ಪೂರಕ ಅಂದುಕೊಂಡು ಮಾಡುತ್ತಿದ್ದ ಕೆಲಸ ಅಭ್ಯಾಸಗಳೇ ಇವರ ತೂಕ ಇಳಿಕೆಗೆ ದೊಡ್ಡ ಅಡ್ಡಿಯಾಗಿದ್ದವು. ಇನ್‌ಸ್ಟಾಗ್ರಾಂ ನಲ್ಲಿ ತಾನು ಕೈ ಬಿಟ್ಟ ಆ ಎಂಟು ಅನಾರೋಗ್ಯಕರ ಅಭ್ಯಾಸಗಳ ಬಗ್ಗೆ ಹೇಳ್ಕೊಂಡಿದ್ದಾರೆ.
ʼ ತೂಕ ಇಳಿಸಿಕೊಳ್ಳುವ ವಿಷಯ ಬಂದಾಗ, ಸಾಮಾನ್ಯವಾಗಿ ನಾವು ಏನು ತಿನ್ನಬೇಕು ಮತ್ತು ಹೇಗೆ ವ್ಯಾಯಾಮ ಮಾಡಬೇಕು ಎಂಬುದರ ಕಡೆಗೇ ಗಮನ ಹರಿಸುತ್ತೇವೆ. ಆದರೆ ಕೆಲವೊಮ್ಮೆ ಆರೋಗ್ಯ ಅಂತ ನಾವಂದುಕೊಂಡಿದ್ದು ಆರೋಗ್ಯಕರ ಆಗಿರೋದಿಲ್ಲ. 72 ಕೆಜಿಯಿಂದ 49 ಕೆಜಿ. ಯಾವುದೇ ಕ್ರಾಶ್ ಡಯಟ್ ಇಲ್ಲ. ಯಾವುದೇ ಡಿಟಾಕ್ಸ್ ಟೀ ಇಲ್ಲ. ಉಪವಾಸ ಇರಲಿಲ್ಲ. ಕೇವಲ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಿದೆ ಅಷ್ಟೆʼ ಅನ್ನುತ್ತಾರೆ ಶಿಖಾ. ಅವರು ಯಾರಿಗೂ ತಿಳಿಸದೆ ನಿಲ್ಲಿಸಿದ ಮತ್ತು ಮತ್ತೆ ತಿರುಗಿ ನೋಡದ 8 ಅಭ್ಯಾಸಗಳು ಇಲ್ಲಿವೆ.

1. ಬೆಳಗಿನ ಉಪಹಾರವನ್ನು ಬಿಡುವುದು
ನಾನು ಮೊದಲಿಗೆ ಉಪವಾಸ ಇರುತ್ತಿದ್ದೆ, ಇದರಿಂದ ನನ್ನ ಮೆಟಾಬಾಲಿಸಂ ನಿಧಾನವಾಗುತ್ತಿತ್ತು ಮತ್ತು ರಾತ್ರಿ ಸಿಕ್ಕಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ರಿಯಲೈಸೇಶನ್ ಆದಮೇಲೆ ಬೆಳಗಿನ ತಿಂಡಿ ಬಿಡುವುದನ್ನು ನಿಲ್ಲಿಸಿದೆ. ಎದ್ದ ಒಂದು ಗಂಟೆಯೊಳಗೆ ತಿನ್ನುವುದನ್ನು ರೂಢಿಸಿಕೊಂಡೆ.
2. ಜೂಸ್, ಟೀ ಕಾಫಿ ಸೇವನೆ
ಜ್ಯೂಸ್, ಎರಡು ಚಮಚ ಸಕ್ಕರೆ ಹಾಕಿದ ಚಹಾ ಮತ್ತು ಕೋಲ್ಡ್ ಕಾಫಿ ಕುಡಿಯುತ್ತಿದೆ. ಅವು ದ್ರವರೂಪದಲ್ಲಿದ್ದರಿಂದ ಆರೋಗ್ಯಕರ ಎಂದುಕೊಂಡಿದ್ದೆ, ಆದರೆ ಅದು ನಿಜವಾಗಿರಲಿಲ್ಲ. ನಂತರ ನೀರು, ಬ್ಲಾಕ್ ಕಾಫಿ ಮತ್ತು ಸಕ್ಕರೆ ಇಲ್ಲದ ಮಾಮೂಲಿ ಚಹಾ ಕುಡಿಯಲು ಶುರು ಮಾಡಿದೆ.
3. ಆರೋಗ್ಯಕರ ಅಂದುಕೊಂಡಿದ್ದೆಲ್ಲ ತೂಕ ಇಳಿಸೋದಿಲ್ಲ
ಮಖಾನಾ, ಡ್ರೈ ಫ್ರೂಟ್ಸ್ ಮತ್ತು ಪೀನಟ್ ಬಟರ್ ತಿನ್ನುವುದು ಆರೋಗ್ಯಕರ ಆಯ್ಕೆ ಎಂದುಕೊಂಡಿದ್ದೆ. ಅದು ಆರೋಗ್ಯಕರವೇ, ಅದರಲ್ಲಿ ಎರಡು ಮಾತಿಲ್ಲ. ಸಮಸ್ಯೆ ಏನೆಂದರೆ, ಇವುಗಳನ್ನು ಮಾಮೂಲಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ತಿನ್ನುತ್ತಿದ್ದೆ. ಆಹಾರ ಎಷ್ಟು ಪೌಷ್ಟಿಕವಾಗಿದ್ದರೂ, ಕ್ಯಾಲೊರಿ ಮಾತ್ರ ಹಾಗೇ ಇರುತ್ತವೆ, ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ತೂಕವನ್ನು ಬೇಗನೆ ಹೆಚ್ಚಿಸುತ್ತದೆ.
4. ಬರೀ ಕಾರ್ಡಿಯೋ ಮಾಡುವುದು, ತೂಕ ಎತ್ತದಿರುವುದು
ನಾನು ಟ್ರೆಡ್‌ಮಿಲ್ ಮೇಲೆ ಗಂಟೆಗಟ್ಟಲೆ ಕಳೆಯುತ್ತಿದ್ದೆ. ನಾನು ಯಾವಾಗ ತೂಕ ಎತ್ತಲು ಅಂದರೆ ವೇಟ್ ಲಿಫ್ಟಿಂಗ್ ಮಾಡಲು ಶುರು ಮಾಡಿದೆನೋ, ಆಗಲೇ ನನ್ನ ದೇಹದಲ್ಲಿ ನಿಜವಾದ ಬದಲಾವಣೆ ಕಾಣಿಸಿತು.
5. ಕಡಿಮೆ ನಿದ್ರೆ, ಹೆಚ್ಚು ಒತ್ತಡ
ತಡರಾತ್ರಿಯವರೆಗೆ ಎಚ್ಚರ ಇರುವುದು, ಕಾರ್ಟಿಸೋಲ್ ಮಟ್ಟ ಹೆಚ್ಚಾಗುವುದು ಮತ್ತು ವಿಪರೀತ ಹಸಿವಾಗುವುದು. ಆಗ ಏನಾದರೊಂದು ತಿನ್ನುವುದು. ನನ್ನ ತೂಕ ಇಳಿಕೆ ಆಗದಿರಲು ಇದೂ ಕಾರಣ. ಉತ್ತಮ ಆರೋಗ್ಯಕ್ಕಾಗಿ ಏಳರಿಂದ ಎಂಟು ಗಂಟೆಗಳ ನಿದ್ರೆ ಅತ್ಯಂತ ಅನಿವಾರ್ಯ.
6. ಹೊರಗಡೆ ತಿನ್ನುವುದು ಮತ್ತು ಅಂದಾಜು ಮಾಡುವುದು
ಹೊರಗಿನ ಹೋಟೆಲ್ ಊಟವನ್ನು ನಂಬುವುದು ಮತ್ತು ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ ಏನೂ ಆಗುವುದಿಲ್ಲ ಎಂದುಕೊಳ್ಳುವುದು ಆರೋಗ್ಯದ ಬಗ್ಗೆ ನಮಗಿರುವ ತಪ್ಪು ಕಲ್ಪನೆ. ಕೊನೆಗೆ ನಾನು ಹೆಚ್ಚಾಗಿ ಮನೆಯಲ್ಲೇ ಅಡುಗೆ ಮಾಡಲು ಪ್ರಾರಂಭಿಸಿದೆ. ಮನೆಊಟದಷ್ಟು ಬೆಸ್ಟ್ ಯಾವುದೂ ಇಲ್ಲ
7. ಇದ್ದರೆ ಎಲ್ಲವೂ ಇಲ್ಲದಿದ್ದರೆ ಏನೂ ಇಲ್ಲ ಎಂಬ ಮನಸ್ಥಿತಿ
ಏನಾದರೊಂದು ಜಂಕ್ ಫುಡ್ ತಿಂದ ತಕ್ಷಣ ಇಡೀ ದಿನವೇ ಹಾಳಾಯಿತು ಅಂದುಕೊಳ್ಳುತ್ತಿದ್ದೆ. ಆದರೆ ಒಂದು ತುಂಡು ಪಿಜ್ಜಾ ತಿಂದ ತಕ್ಷಣ ನಿಮ್ಮ ಜರ್ನಿ ನಿಂತುಹೋಗುವುದಿಲ್ಲ. ಪರಿಪೂರ್ಣತೆಗಿಂತ ನಿರಂತರತೆ ಮುಖ್ಯ. ಪದೇ ಪದೇ ತಿನ್ನಬೇಡಿ ಅಷ್ಟೆ.
8. ಪ್ರೇರಣೆ ಸಿಗಲಿ ಎಂದು ಕಾಯುವುದು
ಮೋಟಿವೇಶನ್ ತಾನಾಗಿಯೇ ಬರುವುದಿಲ್ಲ. ನಾನು ಒಂದೊಳ್ಳೆ ಮೋಟಿವೇಶನ್‌ಗಾಗಿ ಕಾಯುತ್ತಿದ್ದೆ. ಆಮೇಲೆ ಗೊತ್ತಾಯ್ತು, ಮೋಟಿವೇಷನ್‌ಗೆ ಕಾಯೋದು ಮುಠಾಳತನ. ಮೊದಲು ಶಿಸ್ತನ್ನು ರೂಢಿಸಿಕೊಳ್ಳಬೇಕು ಅನ್ನೋದು. ಒಂದೊಳ್ಳೆ ದಿನ ಬರಲಿ ಎಂದು ಕಾಯುವುದನ್ನು ನಿಲ್ಲಿಸಿ ಮತ್ತು ಇಂದೇ ಕೆಲಸ ಪ್ರಾರಂಭಿಸಿದರೆ ಒಂದೊಳ್ಳೆ ರಿಸಲ್ಟ್‌ಗೂ ನಿಮಗೆ ಸರ್ಪೈಸ್ ಕೊಡಲು ಕಾಯುತ್ತಿರುತ್ತೆ.
ಸುಸ್ಥಿರವಾದ ತೂಕ ಇಳಿಕೆಯು ಪ್ರತಿದಿನ ನಾವು ಮಾಡುವ ಜಾಗರೂಕತೆಯ ಆಯ್ಕೆಗಳ ಮೇಲೆ ಆಧಾರಿತವಾಗಿದೆ ಎಂಬುದನ್ನು ಅವರ ಕಥೆ ನಮಗೆ ನೆನಪಿಸುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications