ಎಜುಕೇಷನ್ ಲೋನ್‌ನ ಗುಟ್ಟುಗಳು: ಎಷ್ಟು ಸಾಲ ಸಿಗುತ್ತೆ, ಯಾವ ದಾಖಲೆ ಬೇಕು, ಕೆಲಸ ಸಿಗದಿದ್ರೆ ಏನು?

ಭಾರತದಲ್ಲಿ ಉನ್ನತ ಶಿಕ್ಷಣದ ವೆಚ್ಚ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇಂಜಿನಿಯರಿಂಗ್, ಮೆಡಿಕಲ್, ಮ್ಯಾನೇಜ್‌ಮೆಂಟ್, ವಿದೇಶಿ ಶಿಕ್ಷಣ ಸೇರಿದಂತೆ ಹಲವು ಕೋರ್ಸ್‌ಗಳಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳ ಕನಸುಗಳಿಗೆ ಆಸರೆಯಾಗುವುದು ʼಎಜುಕೇಷನ್ ಲೋನ್ʼ (Education Loan). ಆದರೆ ಈ ಸಾಲವನ್ನು ಹೇಗೆ ಪಡೆಯಬೇಕು, ಯಾರು ಅರ್ಹರು, ಯಾವ ದಾಖಲೆಗಳು ಬೇಕು, ಹಣವನ್ನು ಹೇಗೆ ಮರುಪಾವತಿಸಬೇಕು ಎಂಬ ಬಗ್ಗೆ ಹಲವರಿಗೆ ಸ್ಪಷ್ಟ ಮಾಹಿತಿ ಇರುವುದಿಲ್ಲ.

ಎಜುಕೇಷನ್ ಲೋನ್ ಎಂದರೇನು?

ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣಕ್ಕಾಗಿ ಪಡೆಯುವ ಸಾಲವನ್ನು ಎಜುಕೇಷನ್ ಲೋನ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಈ ಸಾಲವನ್ನು ನೀಡುತ್ತವೆ. ಕೋರ್ಸ್ ಪೂರ್ಣಗೊಂಡ ನಂತರ ಅಥವಾ ಉದ್ಯೋಗ ಸಿಕ್ಕ ಬಳಿಕ ವಿದ್ಯಾರ್ಥಿ ಸಾಲವನ್ನು ಮರುಪಾವತಿಸಬೇಕು.

Education Loan Explained

ಯಾವ ಕೋರ್ಸ್‌ಗಳಿಗೆ ಎಜುಕೇಷನ್ ಲೋನ್ ಸಿಗುತ್ತದೆ?

ಎಲ್ಲಾ ಶಿಕ್ಷಣ ಕೋರ್ಸ್‌ಗಳಿಗೆ ಸಾಲ ಸಿಗುವುದಿಲ್ಲ. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದರೆ ಮಾತ್ರ ಸಾಮಾನ್ಯವಾಗಿ ಸಾಲ ಮಂಜೂರಾಗುತ್ತದೆ. ಭಾರತದಲ್ಲಿ ಸಾಲ ಸಿಗುವ ಕೋರ್ಸ್‌ಗಳು ಇವು:

* ಇಂಜಿನಿಯರಿಂಗ್ (BE, BTech)
* ಮೆಡಿಕಲ್ (MBBS, BDS, BAMS)
* ನರ್ಸಿಂಗ್
* ಫಾರ್ಮಸಿ
* ಲಾ (LLB)
* MBA, MCA
* Chartered Accountancy (CA)
* Cost Accountancy (CMA)
* Company Secretary (CS)
* Polytechnic Courses
* Diploma Courses
* Professional Certification Courses

ವಿದೇಶದಲ್ಲಿ ಅಧ್ಯಯನಕ್ಕೆ ಸಾಲ ದೊರೆಯುವ ಕೋರ್ಸ್‌ಗಳು ಇವು:

* Undergraduate Courses
* Postgraduate Courses
* MS, MBA
* Medical Courses
* Research Programs
* Professional Training Courses

ಯಾವ ವೆಚ್ಚಗಳಿಗೆ ಸಾಲ ಲಭ್ಯ?

ಎಜುಕೇಷನ್ ಲೋನ್ ಮೂಲಕ ಯಾವ ವೆಚ್ಚಗಳನ್ನು ಭರಿಸಬಹುದು? ಬ್ಯಾಂಕ್ ಕೇವಲ ಕಾಲೇಜು ಫೀಸ್‌ಗೆ ಮಾತ್ರ ಹಣ ಕೊಡುವುದಿಲ್ಲ. ಇವುಗಳಿಗೂ ಸಾಲ ಸಿಗಬಹುದು- ಕಾಲೇಜು ಅಥವಾ ವಿಶ್ವವಿದ್ಯಾಲಯದ ಶುಲ್ಕ, ಹಾಸ್ಟೆಲ್ ಶುಲ್ಕ, ಪರೀಕ್ಷಾ ಶುಲ್ಕ, ಪುಸ್ತಕಗಳು ಮತ್ತು ಸ್ಟಡಿ ಮೆಟೀರಿಯಲ್, ಲ್ಯಾಪ್‌ಟಾಪ್ ಖರೀದಿ, ಲ್ಯಾಬ್ ವೆಚ್ಚ, ಪ್ರಾಜೆಕ್ಟ್ ವೆಚ್ಚ, ವಿದೇಶಿ ಶಿಕ್ಷಣಕ್ಕೆ ವಿಮಾನ ಪ್ರಯಾಣ ವೆಚ್ಚ, ಶಿಕ್ಷಣಕ್ಕೆ ಅಗತ್ಯವಾದ ಇತರೆ ಖರ್ಚುಗಳು

ಐಐಟಿ ಬಿಟ್ಟು ಯೋಗ ಹಿಡಿದ ಯುವಕ; ಇಂದು 169 ದೇಶಗಳಲ್ಲಿ 1.26 ಕೋಟಿ ಜನರಿಗೆ ಗುರು!
ಐಐಟಿ ಬಿಟ್ಟು ಯೋಗ ಹಿಡಿದ ಯುವಕ; ಇಂದು 169 ದೇಶಗಳಲ್ಲಿ 1.26 ಕೋಟಿ ಜನರಿಗೆ ಗುರು!

ಎಜುಕೇಷನ್ ಲೋನ್ ಪಡೆಯಲು ಅರ್ಹತೆ ಏನು?

- ವಿದ್ಯಾರ್ಥಿ ಭಾರತೀಯ ನಾಗರಿಕರಾಗಿರಬೇಕು
- ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿರಬೇಕು
- ಪ್ರವೇಶ ಪತ್ರ (Admission Letter) ಇರಬೇಕು

ಪೋಷಕರು ಅಥವಾ ಸಹ ಅರ್ಜಿದಾರ ಇರಬೇಕು. ಬಹುತೇಕ ಬ್ಯಾಂಕ್‌ಗಳು ವಿದ್ಯಾರ್ಥಿಯ ಜೊತೆಗೆ ಪೋಷಕರನ್ನು Co-applicant ಆಗಿ ಸೇರಿಸುತ್ತವೆ. ಅಂದರೆ ತಂದೆ, ತಾಯಿ ಅಥವಾ ಕಾನೂನುಬದ್ಧ ಪಾಲಕರು ಇವರ ಆದಾಯದ ದಾಖಲೆಗಳನ್ನು ಬ್ಯಾಂಕ್ ಪರಿಶೀಲಿಸುತ್ತದೆ.

ಎಷ್ಟು ಮೊತ್ತದವರೆಗೆ ಸಾಲ ಸಿಗುತ್ತದೆ?

ಇದು ಬ್ಯಾಂಕ್ ಮತ್ತು ಕೋರ್ಸ್ ಮೇಲೆ ಅವಲಂಬಿತ. ಸಾಮಾನ್ಯವಾಗಿ ₹4 ಲಕ್ಷದವರೆಗೆ ಕೆಲವೊಮ್ಮೆ ಭದ್ರತೆ (Collateral) ಬೇಕಾಗಿರುವುದಿಲ್ಲ. ₹4 ಲಕ್ಷದಿಂದ ₹7.5 ಲಕ್ಷದವರೆಗೆ ಪೋಷಕರ ಗ್ಯಾರಂಟಿ ಅಗತ್ಯವಾಗುತ್ತದೆ. ₹7.5 ಲಕ್ಷ ಮೇಲ್ಪಟ್ಟು ಸಾಲ ಇದ್ದರೆ ಆಸ್ತಿ ಅಥವಾ ಇತರೆ ಭದ್ರತೆ ಬೇಕಾಗಬಹುದು. ಕೆಲವು ಬ್ಯಾಂಕ್‌ಗಳು ವಿದೇಶಿ ಶಿಕ್ಷಣಕ್ಕೆ ₹1 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಾಲವನ್ನೂ ನೀಡುತ್ತವೆ.

SSP ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ: ಯಾರೆಲ್ಲಾ ಅರ್ಹರು? ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
SSP ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ: ಯಾರೆಲ್ಲಾ ಅರ್ಹರು? ಅಪ್ಲೈ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಯಾವ ದಾಖಲೆಗಳು ಬೇಕು?

ವಿದ್ಯಾರ್ಥಿಯ ದಾಖಲೆಗಳಾಗಿ ಇವು ಬೇಕು-

* ಆಧಾರ್ ಕಾರ್ಡ್
* ಪ್ಯಾನ್‌ ಕಾರ್ಡ್
* ಪಾಸ್‌ಪೋರ್ಟ್ (ವಿದೇಶಿ ಶಿಕ್ಷಣಕ್ಕೆ)
* ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ
* ಡಿಗ್ರಿ ಅಂಕಪಟ್ಟಿ (ಉನ್ನತ ಶಿಕ್ಷಣಕ್ಕೆ)
* ಅಡ್ಮಿಶನ್‌ ಲೆಟರ್‌
* ಫೀ ಸ್ಟ್ರಕ್ಚರ್‌

ಪೋಷಕರ ದಾಖಲೆಗಳೂ ಬೇಕು. ಅವು ಇಲ್ಲಿವೆ-

* ಆಧಾರ್ ಕಾರ್ಡ್
* ಪ್ಯಾನ್‌ ಕಾರ್ಡ್
* ಆದಾಯ ಪ್ರಮಾಣಪತ್ರ
* ಸ್ಯಾಲರಿ ಸ್ಲಿಪ್‌
* ಫಾರ್ಮ್‌ 16
* ಐಟಿ ರಿಟರ್ನ್‌ (ITR)
* ಬ್ಯಾಂಕ್ ಸ್ಟೇಟ್‌ಮೆಂಟ್

ಆಸ್ತಿ ದಾಖಲೆಗಳು (ಅಗತ್ಯವಿದ್ದರೆ)

* ಜಾಗದ ಖಾತೆ
* ಆರ್‌ಟಿಸಿ
* ಸೇಲ್‌ ಡೀಡ್‌
* ಎನ್‌ಕಂಬರೆನ್ಸ್‌ ಸರ್ಟಿಫಿಕೇಟ್‌

ಎಜುಕೇಷನ್ ಲೋನ್ ಪಡೆಯುವ ವಿಧಾನ

ಹಂತ 1- ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಬೇಕು.
ಹಂತ 2- ಬ್ಯಾಂಕ್ ಆಯ್ಕೆ ಮಾಡಿಕೊಳ್ಳಬೇಕು.
ಹಂತ 3- ಅರ್ಜಿಯನ್ನು ಸಲ್ಲಿಸಬೇಕು.
ಹಂತ 4- ದಾಖಲೆ ಪರಿಶೀಲನೆ ನಡೆಯುತ್ತದೆ.
ಹಂತ 5- ಸಾಲ ಮಂಜೂರಾದ ಬಳಿಕ ಹಣವನ್ನು ನೇರವಾಗಿ ಕಾಲೇಜಿಗೆ ವರ್ಗಾಯಿಸಲಾಗುತ್ತದೆ.

ಸಾಲ ತೀರಿಸುವುದು ಯಾವಾಗ?

ಸಾಮಾನ್ಯವಾಗಿ ಕೋರ್ಸ್ ಅವಧಿ + 6 ತಿಂಗಳಿಂದ 1 ವರ್ಷ ಮೊರಟೋರಿಯಮ್‌ ಪೀರಿಯೆಡ್‌ (Moratorium Period) ಇರುತ್ತೆ. ಅಂದರೆ ಆ ಅವಧಿಯಲ್ಲಿ ಸಾಲ ತೀರಿಸಬೇಕಿಲ್ಲ. ಉದಾಹರಣೆಗೆ, BTech 4 ವರ್ಷ ಇದ್ದರೆ, ನಂತರ 1 ವರ್ಷ ಮೊರಟೋರಿಯಂ. ಒಟ್ಟು 5 ವರ್ಷಗಳ ನಂತರ EMI ಶುರುವಾಗಬಹುದು.

ವಿದ್ಯಾರ್ಥಿಗೆ ಉದ್ಯೋಗ ಸಿಕ್ಕ ನಂತರ ಮಾಸಿಕ ಕಂತು (EMI) ಮೂಲಕ ಸಾಲ ತೀರಿಸಬಹುದು. ಸಾಮಾನ್ಯವಾಗಿ 5 ವರ್ಷ, 7 ವರ್ಷ, 10 ವರ್ಷ, 15 ವರ್ಷ ಹೀಗೆ ಅವಧಿಯ ಆಯ್ಕೆ ಇರುತ್ತದೆ.

ಎಜುಕೇಷನ್ ಲೋನ್ ಮೇಲಿನ ತೆರಿಗೆ ಸೌಲಭ್ಯ

ಆದಾಯ ತೆರಿಗೆ ಕಾಯ್ದೆಯ Section 80E ಅಡಿಯಲ್ಲಿ ಶಿಕ್ಷಣ ಸಾಲದ ಬಡ್ಡಿ ಮೊತ್ತಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಸೌಲಭ್ಯ ಗರಿಷ್ಠ 8 ವರ್ಷಗಳವರೆಗೆ ಲಭ್ಯ. ಇದು ಬಡ್ಡಿ ಮೊತ್ತದ ಮೇಲೆ ಮಾತ್ರ ಅನ್ವಯಿಸುತ್ತದೆ

ಸಾಲ ಪಡೆಯುವ ಮುನ್ನ ಗಮನಿಸಬೇಕಾದ ವಿಷಯಗಳು: ಕಾಲೇಜು ಮಾನ್ಯತೆ ಪಡೆದಿದೆಯೇ ಎಂದು ಪರಿಶೀಲಿಸಿ. ಬಡ್ಡಿದರ ಹೋಲಿಕೆ ಮಾಡಿ. ಪ್ರೊಸೆಸಿಂಗ್ ಶುಲ್ಕ ಎಷ್ಟು ಎಂದು ತಿಳಿದುಕೊಳ್ಳಿ. ಮೊರಟೋರಿಯಂ ಅವಧಿ ತಿಳಿದುಕೊಳ್ಳಿ. EMI ಎಷ್ಟು ಬರುತ್ತದೆ ಎಂದು ಲೆಕ್ಕ ಹಾಕಿ. ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯಬೇಡಿ

ಕೆಲಸ ಸಿಗದಿದ್ದರೂ ಸಾಲ ತೀರಿಸಬೇಕೆ?

ಎಜುಕೇಷನ್ ಲೋನ್ ಪಡೆದಿದ್ದರೆ, ಓದು ಮುಗಿದ ನಂತರ ಕೆಲಸ ಸಿಗದಿದ್ದರೂ ಸಾಲವನ್ನು ತೀರಿಸುವ ಜವಾಬ್ದಾರಿ ಉಳಿಯುತ್ತದೆ. ಇದು ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸರಿಯಾಗಿ ತಿಳಿದಿರದ ವಿಷಯ.

ಸಾಲದ ಮೊರಟೋರಿಯಂ ಅವಧಿ ಮುಗಿದ ನಂತರ, ವಿದ್ಯಾರ್ಥಿಗೆ ಕೆಲಸ ಸಿಕ್ಕಿದೆಯೋ ಇಲ್ಲವೋ ಎನ್ನುವುದು ಬ್ಯಾಂಕ್‌ಗೆ ಮುಖ್ಯವಾಗುವುದಿಲ್ಲ. EMI ಪಾವತಿ ಆರಂಭಿಸಬೇಕು. ವಿದ್ಯಾರ್ಥಿ ಅಥವಾ ಸಹ-ಅರ್ಜಿದಾರ (ಪೋಷಕರು) ಸಾಲ ತೀರಿಸಬೇಕಾಗುತ್ತದೆ.

ಕೆಲಸ ಸಿಗದಿದ್ದರೆ, EMI ಕಟ್ಟಲು ಆಗದಿದ್ದರೆ, ಅಂಥ ಸಂದರ್ಭದಲ್ಲಿ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಕೆಲವು ಬ್ಯಾಂಕ್‌ಗಳು EMI ಮರುನಿಗದಿ ಮಾಡಬಹುದು, ಸಾಲದ ಅವಧಿ ಹೆಚ್ಚಿಸಬಹುದು. ತಾತ್ಕಾಲಿಕ ರಿಲೀಫ್ ನೀಡಬಹುದು ಅಥವಾ ಬಡ್ಡಿ ಮಾತ್ರ ಪಾವತಿಸುವ ಅವಕಾಶ ಕೊಡಬಹುದು. ಆದರೆ ಇದು ಬ್ಯಾಂಕ್‌ನ ನೀತಿ ಮತ್ತು ಪ್ರಕರಣದ ಮೇಲೆ ಅವಲಂಬಿತ.

ಬಹುತೇಕ ಶಿಕ್ಷಣ ಸಾಲಗಳಲ್ಲಿ ವಿದ್ಯಾರ್ಥಿ ಮುಖ್ಯ ಸಾಲಗಾರ ಹಾಗೂ ತಂದೆ ಅಥವಾ ತಾಯಿ Co-borrower. ಹೀಗಾಗಿ ವಿದ್ಯಾರ್ಥಿಗೆ ಕೆಲಸ ಸಿಗದಿದ್ದರೆ ಬ್ಯಾಂಕ್ ಪೋಷಕರಿಂದ ಹಣ ವಸೂಲಿ ಮಾಡಬಹುದು.

ಸಾಲ ತೀರಿಸದಿದ್ದರೆ CIBIL Score ಹಾಳಾಗುತ್ತದೆ. ವಿದ್ಯಾರ್ಥಿ ಮತ್ತು ಪೋಷಕರಿಬ್ಬರ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀಳಬಹುದು. ಮುಂದೆ ಮನೆ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಪಡೆಯುವುದು ಕಷ್ಟವಾಗಬಹುದು. ಬ್ಯಾಂಕ್ ನೋಟಿಸ್ ಕಳುಹಿಸಬಹುದು. ದೀರ್ಘಕಾಲ EMI ಕಟ್ಟದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ₹7.5 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಆಸ್ತಿ ಭದ್ರತೆ (Collateral) ಇಟ್ಟಿದ್ದರೆ, ಅಂತಿಮ ಹಂತದಲ್ಲಿ ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಬಹುದು.

ಸರ್ಕಾರದ ರಿಯಾಯಿತಿ ಇದೆಯಾ?

ಕೆಲವು ಸಂದರ್ಭಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬಡ್ಡಿ ಸಬ್ಸಿಡಿ ಸಿಗಬಹುದು. ಆದರೆ ಸಾಲದ ಮೂಲ ಮೊತ್ತ (Principal Amount) ಸಂಪೂರ್ಣ ಮನ್ನಾ ಆಗುತ್ತದೆ ಎಂದು ಭಾವಿಸುವುದು ತಪ್ಪು.

ಗಮನಿಸಬೇಕಾದ ಮುಖ್ಯ ವಿಷಯ

ಬಹಳ ಮಂದಿ "ಕೆಲಸ ಸಿಕ್ಕ ಮೇಲೆ ಕಟ್ಟಬಹುದು" ಎಂದು ಭಾವಿಸಿ ದೊಡ್ಡ ಮೊತ್ತದ ಸಾಲ ಪಡೆಯುತ್ತಾರೆ. ಆದರೆ ಬ್ಯಾಂಕ್ ದೃಷ್ಟಿಯಲ್ಲಿ ಇದು ಒಂದು ಸಾಮಾನ್ಯ ಸಾಲ. ಆದ್ದರಿಂದ ಉದ್ಯೋಗಾವಕಾಶ ಹೆಚ್ಚಿರುವ ಕೋರ್ಸ್ ಆಯ್ಕೆ ಮಾಡಬೇಕು. ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯಬಾರದು. EMI ಎಷ್ಟು ಬರುತ್ತದೆ ಎಂದು ಮೊದಲೇ ಲೆಕ್ಕ ಹಾಕಬೇಕು. ಪೋಷಕರ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಗಮನಿಸಬೇಕು.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+