ಟೀಮ್ ಇಂಡಿಯಾ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಗಮನದಲ್ಲಿಟ್ಟುಕೊಂಡು ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್
IND Vs ENG T20 Series: ಭಾರತ ತಂಡದ ವಿರುದ್ಧ ಜುಲೈ 1ರಿಂದ ಆರಂಭ ಆಗಲಿರುವ 5 ಪಂದ್ಯಗಳ ರೋಚಕ ಟಿ20 ಸರಣಿಗಾಗಿ ಇಸಿಬಿ 17 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಇತ್ತೀಚೆಗಷ್ಟೇ ಟೀಮ್ ಇಡಿಯಾದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಆಡಿ ಇಡೀ ಕ್ರಿಕೆಟ್ ಜಗತ್ತು ತನ್ನತ್ತ ತಿರುಗಿನೋಡುವಂತೆ ಮಾಡಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡೇ ಇಂಗ್ಲೆಂಡ್ ತಂಡ ಘೋಷಿಸಿದೆ.
ಇಂಗ್ಲೆಂಡ್ ಸ್ಫೋಟಕ ಆಟಗಾರರಿಗೆ ಮಣೆ ಹಾಕಿದ್ದು, ಈ ಸರಣಿಯಲ್ಲಿ ತಂಡವನ್ನು ಹ್ಯಾರಿ ಬ್ರೂಕ್ ಅವರು ಮುನ್ನಡೆಸಲಿದ್ದಾರೆ. ವೈಭವ್ ಸೂರ್ಯವಂಶಿ ಅವರಂತಹ ಯುವ ಪ್ರತಿಭೆಗಳು ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ಇಂಗ್ಲೆಂಡ್ ಕೂಡ 22 ವರ್ಷದ ಆಲ್ ರೌಂಡರ್ ಜೇಮ್ಸ್ ಕೋಲ್ಸ್ ಅವರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಿದೆ. ಸಸೆಕ್ಸ್ ತಂಡದ ಈ ಆಟಗಾರ ಇಂಗ್ಲೆಂಡ್ ಲಯನ್ಸ್ ಪರ ದೇಶಿ ಹಾಗೂ ಅಂತಾರಾಷ್ಟ್ರೀಯ ಟಿ20 ಟೂರ್ನಿಗಳಲ್ಲಿ ತೋರಿದ ಅಮೋಘ ಪ್ರದರ್ಶನದ ಫಲವಾಗಿ ಈ ದೊಡ್ಡ ವೇದಿಕೆಗೆ ಆಯ್ಕೆ ಆಗಿದ್ದಾರೆ.

ಕಮ್‌ಬ್ಯಾಕ್ ಮಾಡಿದ ಆಟಗಾರರು
ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದ ಮೂವರು ಪ್ರಮುಖ ಆಟಗಾರರು ಈ ಸರಣಿಯ ಮೂಲಕ ಇಂಗ್ಲೆಂಡ್ ತಂಡಕ್ಕೆ ಮರಳಿ ಬಂದಿದ್ದಾರೆ. ಜೋರ್ಡನ್ ಕಾಕ್ಸ್, ಸೋನಿ ಬೇಕರ್, ಸಾಕಿಬ್ ಮಹಮೂದ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.
ಆದರೆ, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗದ ಬೌಲರ್ ಬ್ರೈಡನ್ ಕಾರ್ಸ್ ಮತ್ತು ಆಲ್ ರೌಂಡರ್ ಜೇಮಿ ಓವರ್ಟನ್ ಅನಿವಾರ್ಯವಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನೂ ಮತ್ತೊಂದೆಡೆ ಯುವ ನಾಯಕನಿಗೆ ಸಾಥ್ ನೀಡಲು ತಂಡದಲ್ಲಿ ಜೋಸ್ ಬಟ್ಲರ್, ಫಿಲ್ ಸಾಲ್ಟ್, ಜೋಫ್ರಾ ಆರ್ಚರ್ ಮತ್ತು ಆದಿಲ್ ರಶೀದ್ ಅವರಂತಹ ಅನುಭವಿ ಆಟಗಾರರು ಇದ್ದಾರೆ.
ಭಾರತದ ವಿರುದ್ಧ ಇಂಗ್ಲೆಂಡ್ ಟಿ20 ತಂಡ
ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಫಿಲ್ ಸಾಲ್ಟ್, ಜೋರ್ಡನ್ ಕಾಕ್ಸ್ (ವಿಕೆಟ್ ಕೀಪರ್), ಟಾಮ್ ಬ್ಯಾಂಟನ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ವಿಲ್ ಜಾಕ್ಸ್, ಜೇಕಬ್ ಬೆಥೆಲ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್, ಸಾಕಿಬ್ ಮಹಮೂದ್, ಜೋಶ್ ಟಂಗ್, ಲ್ಯೂಕ್ ವುಡ್, ಸೋನಿ ಬೇಕರ್.
ಇಂಗ್ಲೆಂಡ್ ವಿರುದ್ಧ ಭಾರತ ಟಿ20 ತಂಡ
ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ವೈಭವ್ ಸೂರ್ಯವಂಶಿ, ಪ್ರಸಿದ್ಧ್ ಕೃಷ್ಣ. ಇನ್ನೂ ಈ ಐದು ಪಂದ್ಯಗಳ ಟಿ20 ಸರಣಿ ಮುಗಿದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯ ಏಕದಿನ ಸರಣಿ ಆರಂಭವಾಗಲಿದೆ.
ಭಾರತ-ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿ
* 1ನೇ ಪಂದ್ಯ ಜುಲೈ 1ರಂದು ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ರಾತ್ರಿ 10 ಗಂಟೆಗೆ ನಡೆಯಲಿದೆ.
* 2ನೇ ಪಂದ್ಯ ಜುಲೈ 4ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.
* 3ನೇ ಪಂದ್ಯ ಜುಲೈ 7ರಂದು ನಾಟಿಂಗ್ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ರಾತ್ರಿ 10 ಗಂಟೆಗೆ ನಡೆಯಲಿದೆ.
* 4ನೇ ಪಂದ್ಯ ಜುಲೈ 9ರಂದು ಬ್ರಿಸ್ಟಲ್‌ನ ಸೀಟ್ ಯುನಿಕ್ ಸ್ಟೇಡಿಯಂನಲ್ಲಿ ರಾತ್ರಿ 10 ಗಂಟೆಗೆ ನಡೆಯಲಿದೆ.
* 5ನೇ ಪಂದ್ಯ ಜುಲೈ 11ರಂದು ಸೌತಾಂಪ್ಟನ್‌ನ ದಿ ರೋಸ್ ಬೌಲ್‌ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.












Click it and Unblock the Notifications