Bidadi Township Row: ಬಿಡದಿ ಯೋಜನೆ ಡಿಕೆಶಿಗೆ ಎಚ್‌ಡಿಕೆ ಸವಾಲು: "ಸಮಸ್ಯೆ ನನ್ನೊಬ್ಬನದ್ದಲ್ಲ"
ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೆ ಇದು ರಾಜಕೀಯ ಸ್ವರೂಪವೂ ಪಡೆದುಕೊಂಡಿದೆ. ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ನಡುವೆ ವಾಕ್ಸಮರ ಮುಂದುವರಿದಿದೆ. 'ಬಿಡದಿ ನೂತನ ಟೌನ್'ಶಿಪ್ ಬಗ್ಗೆ ಚರ್ಚಿಸಲು ಬನ್ನಿ' ಎಂದು ಎಚ್.ಡಿ ಕುಮಾರಸ್ವಾಮಿ ಅವರಿಗೆ ಡಿ.ಕೆ ಶಿವಕುಮಾರ್ ಅವರು ಪಂಥ ಆಹ್ವಾನ ನೀಡಿದ್ದರು. ಅದಕ್ಕೆ ಇದೀಗ ಎಚ್.ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.
ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿರುವ ಎಚ್.ಡಿ ಕುಮಾರಸ್ವಾಮಿ ಅವರು, 'ಬಿಡದಿ ನೂತನ ಟೌನ್'ಶಿಪ್ ಬಗ್ಗೆ ಚರ್ಚಿಸಲು ಬನ್ನಿ' ಎಂದು ಮಾನ್ಯ ಮುಖ್ಯಮಂತ್ರಿಗಳು ನನ್ನನ್ನು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ. ಸಮಸ್ಯೆ ನನ್ನೊಬ್ಬನದ್ದಲ್ಲ, ಇದು ಸಾವಿರಾರು ರೈತರ ಬದುಕಿನ ಪ್ರಶ್ನೆ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ. ನೊಂದ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿರುವ ಬೈರಮಂಗಲದಲ್ಲಿ ಬಹಿರಂಗವಾಗಿ ಚರ್ಚೆ ನಡೆಯುವುದು ನ್ಯಾಯೋಚಿತ. ಇದನ್ನೇ ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ಹೇಳಿದ್ದೇನೆ" ಎಂದಿದ್ದಾರೆ.

ಮುಂದುವರಿದು, ದಿನಾಂಕ 26-06-2026ರ ಬೆಳಗ್ಗೆ 11 ಗಂಟೆಗೆ ನನ್ನನ್ನು ಚರ್ಚೆಗೆ ಕರೆದಿದ್ದಾರೆ. ಅಂದು ಪೂರ್ವನಿಗದಿತ ಕಾರ್ಯಕ್ರಮಗಳಿವೆ. ದಿನಾಂಕ 27-06-2026 ರಂದು ಯಾವುದೇ ಸಮಯಕ್ಕೆ ಬೈರಮಂಗಲದಲ್ಲಿ ನೊಂದ ಅನ್ನದಾತರ ಸಮ್ಮುಖದಲ್ಲಿ ಸಭೆ ಆಯೋಜಿಸಿದರೆ ಬರಲು ಸಿದ್ಧನಿದ್ದೇನೆ. ಮುಖ್ಯಮಂತ್ರಿಗಳು ಆ ದಿನ ಸಮಯ ನಿಗದಿ ಮಾಡಿ ತಿಳಿಸುತ್ತಾರೆಂದು ಆಶಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ ಶಿವಕುಮಾರ್‌ಗೆ ಎಚ್.ಡಿ ಕುಮಾರಸ್ವಾಮಿ ಸುದೀರ್ಘ ಪತ್ರ
ದಿನಾಂಕ: 22-06-2026ರ ತಮ್ಮ ಪತ್ರದಲ್ಲಿ ವಿಧಾನಸೌಧದಲ್ಲಿ ದಿನಾಂಕ: 26-06-2026ರಂದು ಬೆಳಿಗ್ಗೆ 11 ಗಂಟೆಗೆ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಸಭೆಗೆ ನನ್ನನು ಮತ್ತು ನನ್ನ ತಂಡದ ಐವರು ಪ್ರತಿ ನಿಧಿಗಳೊಂದಿಗೆ ಚರ್ಚೆಗೆ ಆಹ್ವಾನಿಸಿರುವ ಪತ್ರ ನನ್ನ ಕೈಸೇರಿದೆ. ತಮ್ಮ ಅಹ್ವಾನಕ್ಕೆ ಧನ್ಯವಾದಗಳು, ಬಿಡದಿ ಸಮಗ್ರ ಉಪ ನಗರ ಯೋಜನೆ ಅನುಷ್ಠಾನದಿಂದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಮತ್ತು ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಮತ್ತು ಪಾಲುದಾರರು ಹಲವಾರು ಸಮಸ್ಯೆ ಮತ್ತು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಈ ಭಾಗದಲ್ಲಿರುವ ಅಪಾರ ಪರಿಸರ ಸಂಪತ್ತಿಗೆ ಹಾನಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಪ್ರಸ್ತಾಪಿಸಿರುವ ಸಭೆಯನ್ನು ರಾಮನಗರ ಜಿಲ್ಲೆಯ ಬಿಡದಿ ಅಥವ ಭಾದಿತ ಪ್ರದೇಶವಾದ ಭೈರಮಂಗಲದ ಯಾವುದಾದರು ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ಸಭೆ ಕರೆಯುವುದು ಸಮಂಜಸವೆನಿಸುತ್ತದೆ.
ಈ ಮೇಲೆ ಸೂಚಿಸಿದ ಸ್ಥಳಗಳಲ್ಲಿ ಬಿಡದಿ ಸಮಗ್ರ ಉಪನಗರ ಯೋಜನೆಯಿಂದ ಭಾದಿತರಾಗಿರುವ ರೈತರು, ಗ್ರಾಮಸ್ಥರು, ಕೃಷಿ ಕಾರ್ಮಿಕರು, ಹೈನುಗಾರಿಕ ಉದ್ಯಮದಲ್ಲಿರುವ ರೈತ ಮಹಿಳೆಯರು, ಸಣ್ಣ ವ್ಯಾಪರಸ್ಥರು, ಉದ್ಯಮಿಗಳು ಹಾಗೂ ಭಾದಿತ ಇತರ ಪಾಲುದಾರರನ್ನು ಭಾಗವಹಿಸಲು ಅವಕಾಶ ನೀಡಿದಲ್ಲಿ ಈ ಸಭೆಯಲ್ಲಿ ಮುಕ್ತ ಮನಸ್ಸಿನ ಚರ್ಚೆ ನಡೆಸಿ, ಭಾದಿತ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶವಾಗುತ್ತದೆ ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯ ಮತ್ತು ನಿಲುವು.
ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ನನಗೆ ಯಾವುದೇ ವ್ಯಯಕ್ತಿಕ ಹಿತಾಸಕ್ತಿ ಇಲ್ಲ ಎನ್ನುವುದನ್ನು ಈ ಪತ್ರದ ಮೂಲಕ ಸ್ಪಷ್ಟ ಪಡಿಸುತ್ತಿದ್ದೇನೆ.
ಮುಂದುವರೆದು, ವಿಧಾನಸೌಧದಲ್ಲಿ ನಡೆಸಲು ಉದ್ದೇಶಿಸಿರುವ ಸಭೆಯಲ್ಲಿ ಭಾದಿತ ರೈತ ವರ್ಗ, ಗ್ರಾಮಸ್ಥರು ಮತ್ತು ಪಾಲುದಾರರನ್ನು ಆಹ್ವಾನಿಸದೆ ಅವರನ್ನು ಹೊರಗೆ ಇಟ್ಟು ಸಭೆ ನಡೆಸುವುದರಿಂದ ಸಭೆ ಫಲಪ್ರದವಾಗುವುದಿಲ್ಲ. ತಾವು ನಿಗದಿಪಡಿಸಿದ ದಿನಾಂಕ:26-06-2026 ರಂದು ನನಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳು ಇರುವುದರಿಂದ, ಈ ಉದ್ದೇಶಿತ ಸಭೆಯನ್ನು ದಿನಾಂಕ:27-06-2026 ರಂದು ಮೇಲೆ ತಿಳಿಸಿದಂತೆ ಬಿಡದಿ ಅಥವ ಭೈರಮಂಗಲದ ಸೂಕ್ತ ಸ್ಥಳದಲ್ಲಿ ಆಯೋಜಿಸಿ ಮೇಲೆ ಕಾಣಿಸಿದ ಭಾದಿತ ವರ್ಗದ ಜನರನ್ನು ಆಹ್ವಾನಿಸಿ ಸಭೆ ನಡೆಸಬೇಕೆಂದು ಈ ಮೂಲಕ ಕೋರುತ್ತೇನೆ ಎಂದು ಎಚ್.ಡಿ ಕುಮಾರಸ್ವಾಮಿ ಅವರು ಪತ್ರದಲ್ಲಿ ವಿವರಿಸಿದ್ದಾರೆ.














Click it and Unblock the Notifications