IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ
India Rain Alert: ಕರ್ನಾಟಕ, ತಮಿಳುನಾಡು ಸೇರಿದಂತೆ ಭಾರತದಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಮುಂದಿನ ಕೆಲ ದಿನಗಳ ಕಾಲ ದೇಶದ ವಿವಿಧ ರಾಜ್ಯಗಳಲ್ಲಿ ಆಲಿಕಲ್ಲು ಹಾಗೂ ಬಿರುಗಾಳಿ ಸಹಿತ ಜೋರು ಮಳೆ ನಿರೀಕ್ಷೆ ಇದೆ. ಅಲ್ಲಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ವಾಯುವ್ಯ ಭಾರತದ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ವ್ಯಾಪಕ ಮಳೆ ಹಾಗೂ ಹಿಮಪಾತವಾಗುವ ಸಾಧ್ಯತೆಯಿದೆ. ಉತ್ತರಾಖಂಡದಲ್ಲಿ ಗಂಟೆಗೆ 70 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಮಾರ್ಚ್ 21ರವರೆಗೆ ಪಂಜಾಬ್, ಹರಿಯಾಣ, ದೆಹಲಿ ಮತ್ತು ರಾಜಸ್ಥಾನದ ಹಲವೆಡೆ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆ ಅಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.

ಈ ರಾಜ್ಯಗಳಲ್ಲೂ ಬಿರುಗಾಳಿ ಮಳೆ
ಪೂರ್ವ ಮತ್ತು ಮಧ್ಯ ಭಾರತದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಮಾರ್ಚ್ 22 ರವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ವಿಶೇಷವಾಗಿ ಮಾರ್ಚ್ 20 ಮತ್ತು 21 ರಂದು ಭಾರಿ ವರುಣಾರ್ಭಟಕ ಕಂಡು ಬರಲಿದೆ. ಇಲ್ಲಿನ ಜಾರ್ಖಂಡ್ ಮತ್ತು ಗಂಗಾನದಿಯ ಪಶ್ಚಿಮ ಬಂಗಾಳದ ಭಾಗಗಳಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಒಡಿಶಾದ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆ ಸಂಭವವಿದೆ.
ಇನ್ನೂ ದಕ್ಷಿಣ ಭಾರತದ ಕರ್ನಾಟಕ ಸೇರಿ ಕೇರಳದಲ್ಲಿ ಮುಂದಿನ ಮೂರು ದಿನ ಮಾರ್ಚ್ 22ರವರೆಗೆ ಬಿರುಗಾಳಿ ಸಹಿತ ಉತ್ತಮ ಮಳೆ ನಿರೀಕ್ಷೆ ಇದೆ. ಸಾಧಾರಣದಿಂದ ಜೋರು ಮಳೆಯು ಕರ್ನಾಟಕದ ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಹಾಗೂ ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸುರಿಯಲಿದೆ. ಈ ಮಳೆಗೂ ಮುನ್ನ ವ್ಯಾಪಕ ಸೆಕೆ, ಒಣಹವೆ ಮುಂದುವರಿಯಲಿದೆ.
ಮಳೆ ಜೊತೆಗೆ ಗರಿಷ್ಠ ತಾಪಮಾನ ದಾಖಲು
ಪಶ್ಚಿಮ ಹಾಗೂ ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರದಲ್ಲಿ ಇಂದು ಮಾರ್ಚ್ 19ರಿಂದ ಹಗುರ ಮಳೆ ಬರಲಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ನಿರಂತರವಾಗಿ ಚದುರಿದಂತೆ ವರುಣನ ಅಬ್ಬರ ಕಂಡು ಬರಲಿದೆ. ಮಳೆ ನಿರೀಕ್ಷಿತ ಸಮಯದಲ್ಲಿ ಮೋಡಕವಿದ ವಾತಾವರಣ, ಬೇಸಿಗೆಯಲ್ಲೂ ಮಳೆಗಾಲದಂತೆ ಭಾಸವಾಗಲಿದೆ. ಆದರೆ ಹಗಲು ಎಂದಿನಂತೆ ಗರಿಷ್ಠ ತಾಪಮಾನ, ಉರಿಬಿಸಿಲು ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications