ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ
ಬೆಂಗಳೂರು: ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿರುವ, ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವೈರಲ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವೊಂದು ಎದುರಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ವಿಡಿಯೋಗಳು ಸಂಪೂರ್ಣವಾಗಿ ನಿಜವಾಗಿದ್ದು, ಅವು ಯಾವುದೇ ರೀತಿಯ ಡೀಪ್‌ಫೇಕ್, ಕೃತಕ ಬುದ್ಧಿಮತ್ತೆ (AI) ನಿರ್ಮಿತ ಅಥವಾ ಎಡಿಟ್ ಮಾಡಲಾದ ದೃಶ್ಯಗಳಲ್ಲ ಎಂಬುದು ಇದೀಗ ಅಧಿಕೃತವಾಗಿ ದೃಢಪಟ್ಟಿದೆ. ಈ ಮೂಲಕ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗೆ ತೀವ್ರ ಕಾನೂನಿನ ಸಂಕಷ್ಟ ಎದುರಾಗಿದೆ.
ರಾಜ್ಯ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ನಾಲ್ವರು ಐಪಿಎಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಇದೀಗ ಈ ಉನ್ನತ ಮಟ್ಟದ ಸಮಿತಿಯು ಸರ್ಕಾರಕ್ಕೆ ಬರೋಬ್ಬರಿ 100 ಪುಟಗಳ ಸಮಗ್ರ ವರದಿಯನ್ನು ಸಲ್ಲಿಸಿದ್ದು, ವಿಡಿಯೋ ಅಸಲಿಯತ್ತನ್ನು ಸಂಪೂರ್ಣವಾಗಿ ಬಯಲು ಮಾಡಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಈ ವಿಡಿಯೋ ಅಸಲಿ ಎಂದು ಸಾಬೀತಾಗಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಎಫ್‌ಎಸ್‌ಎಲ್ ವರದಿಯಲ್ಲಿ ಏನಿದೆ?
ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಈ ವಿವಾದಿತ ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ದೃಶ್ಯಗಳಲ್ಲಿ ಯಾವುದೇ ರೀತಿಯ ತಾಂತ್ರಿಕ ಮಾರ್ಪಾಡುಗಳು ಅಥವಾ ಎಡಿಟಿಂಗ್ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕಚೇರಿಯೊಳಗೆ ನಡೆದಿರುವ ಈ ಘಟನೆ ಸಂಪೂರ್ಣ ಸತ್ಯವಾಗಿದೆ. ಕೆ. ರಾಮಚಂದ್ರ ರಾವ್ ಅವರು 2016-17ರ ಅವಧಿಯಲ್ಲಿ ಬೆಳಗಾವಿ ವಲಯದ ಐಜಿಪಿಯಾಗಿ (IGP) ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಅವರದೇ ಕಚೇರಿಯಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ
ವರದಿಯ ಪ್ರಕಾರ, ರಾವ್ ಅವರ ಬೆಳಗಾವಿ ಕಚೇರಿಯಲ್ಲಿ ಆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರು ಮತ್ತು ಕಚೇರಿ ಸಿಬ್ಬಂದಿ ವಿಡಿಯೋದಲ್ಲಿರುವ ಮಹಿಳೆಯರನ್ನು ಗುರುತಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಇಬ್ಬರು ಮಹಿಳೆಯರು ಆಗಾಗ್ಗೆ ರಾವ್ ಅವರ ಖಾಸಗಿ ಕಚೇರಿಗೆ ಭೇಟಿ ನೀಡುತ್ತಿದ್ದರು ಎಂಬ ಅಂಶವನ್ನೂ ಸಹ ಸಿಬ್ಬಂದಿ ತನಿಖಾ ತಂಡದ ಮುಂದೆ ದೃಢಪಡಿಸಿದ್ದಾರೆ.
ನಾಪತ್ತೆಯಾಗಿರುವ ಮಹಿಳೆಯರು
ಮೂಲಗಳ ಪ್ರಕಾರ, ಕಚೇರಿಗೆ ಬರುತ್ತಿದ್ದ ಇಬ್ಬರು ಮಹಿಳೆಯರಲ್ಲಿ ಒಬ್ಬರು ತಮಗರಿವಿಲ್ಲದಂತೆ ಅಥವಾ ಉದ್ದೇಶಪೂರ್ವಕವಾಗಿ ತಮ್ಮದೇ ಮೊಬೈಲ್ ಫೋನ್ ಬಳಸಿ ಈ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಡಿಯೋ ಬಹಿರಂಗವಾಗಿ ವಿವಾದ ಭುಗಿಲೇಳುತ್ತಿದ್ದಂತೆ ವಿಡಿಯೋದಲ್ಲಿರುವ ಆ ಇಬ್ಬರೂ ಮಹಿಳೆಯರು ದಿಢೀರ್ ನಾಪತ್ತೆಯಾಗಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳಿಗೆ ಈ ಮಹಿಳೆಯರ ಹೇಳಿಕೆ ಅತ್ಯಂತ ನಿರ್ಣಾಯಕವಾಗಿದೆ. ಹೀಗಾಗಿ, ಅವರು ತನಿಖಾ ತಂಡದ ಮುಂದೆ ಖುದ್ದಾಗಿ ಹಾಜರಾಗಬೇಕಾದ ಅನಿವಾರ್ಯತೆ ಇದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ.
ಪಿಂಚಣಿಗೆ ಕುತ್ತು, ನಿವೃತ್ತಿಗೆ ಮುನ್ನವೇ ನೋಟಿಸ್
ವಿಡಿಯೋದ ಅಸಲಿಯತ್ತು ದೃಢಪಡುತ್ತಿದ್ದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಕೆ. ರಾಮಚಂದ್ರ ರಾವ್ ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದ್ದು, ಇಲಾಖಾ ಮಟ್ಟದ ತನಿಖೆಯನ್ನು ಪ್ರಾರಂಭಿಸಿದೆ. ಗಮನಾರ್ಹ ಸಂಗತಿಯೆಂದರೆ, ರಾವ್ ಅವರು ಇದೇ ಬರುವ ಮೇ 31ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಆದರೆ, ಪ್ರಕರಣದ ಅಧಿಕೃತ ತನಿಖೆ ಮುಂದುವರಿದಿರುವ ಕಾರಣ, ಅವರ ಪಿಂಚಣಿ (Pension) ಮತ್ತು ಇತರ ನಿವೃತ್ತಿ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಸಾಧ್ಯತೆ ದಟ್ಟವಾಗಿದೆ ಎಂದು ಉನ್ನತ ಮೂಲಗಳು ವರದಿ ಮಾಡಿವೆ.
ವಿಡಿಯೋಗಳು ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆದಾಗ, ಕೆ. ರಾಮಚಂದ್ರ ರಾವ್ ಅವರು ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. "ನನ್ನ ತೇಜೋವಧೆ ಮಾಡಲು ಕಿಡಿಗೇಡಿಗಳು ಎಐ ತಂತ್ರಜ್ಞಾನ ಬಳಸಿ ವಿಡಿಯೋವನ್ನು ಮಾರ್ಫ್ ಮಾಡಿದ್ದಾರೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗಿದೆ. ಇದರ ಹಿಂದೆ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಗುಡುಗಿದ್ದರು. ಆದರೆ ಇದೀಗ ಎಫ್‌ಎಸ್‌ಎಲ್ ವರದಿಯು ಅವರ ಈ ಎಲ್ಲಾ ವಾದಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದೆ.












Click it and Unblock the Notifications