ಆಲಿಕಲ್ಲು ಮಳೆಗೆ ನೆಲಕಚ್ಚಿದ ಮಾವು, ಹಲಸು, ಕಲ್ಲಂಗಡಿ; ಕೈಗೆ ಬಂದ ತುತ್ತು ಬಾಯಿಗಿಲ್ಲ
ಬೆಂಗಳೂರು: ಯುಗಾದಿಗೂ ಮುನ್ನ ಪೂರ್ವ ಮುಂಗಾರು ಮಳೆ ಸುರಿದು ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದ ಜನರಲ್ಲಿ ಸಂಭ್ರಮ ಮೂಡಿಸಿದೆ. ಹಾಸನ, ಧಾರವಾಡ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆ ದಾಖಲಾಗಿದೆ. ರಸ್ತೆ ತುಂಬೆಲ್ಲ ಆಲಿಕಲ್ಲು ಕಂಡು ಜನರ ಬೇಸಿಗೆಗೆ ತಂಪಾಯಿತು ಎಂದು ಖುಷಿಪಟ್ಟಿದ್ದಾರೆ. ಆದರೆ ಮಾವು, ಹಲಸು, ಕಲ್ಲಂಗಡಿ, ಜೋಳ ಸೇರಿ ಇನ್ನಿತರ ಕೈಗೆ ಬಂದ ಬೆಳೆಗಳಿಗೆ ಮಳೆ ಹಾನಿ ಉಂಟು ಮಾಡಿದೆ. ಇದರಿಂದ ರೈತರಿಗೆ ಅಪಾರ ನಷ್ಟವಾಗಿದೆ.
ತೋಟಗಾರಿಕೆ ಬೆಳೆ ಮಾವು, ಹಲಸು ಹಾಗೂ ಕಲ್ಲಂಗಡಿ ಸೇರಿ ಇನ್ನಿತರ ಕೃಷಿ ಬೆಳೆಗಳು ಅಕಾಲಿಕ ಮಳೆಗೆ ಹಾನಿಗೊಳಗಾಗಿವೆ. ಬೇಸಿಗೆ ವೇಳೆ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ನಿರಾಶೆ ಮೂಡಿಸಿದೆ. ಆದರೆ ದಿಢೀರ್ ಬಂದ ವರ್ಷದ ಮೊದಲ ಮಳೆಯಿಂದ ಬೆಳೆಗೆ ಹಾನಿಯಾಗಿದೆ. ಸಾಮಾನ್ಯ ಮಳೆಗೆ ಅಷ್ಟಾಗಿ ತೊಂದರೆ ಆಗದು, ಆದರೆ ಕಳೆದ ಎರಡು ದಿನಗಳಿಂದ ವಿಪರೀತ ಸುರಿದ ಆಲಿಕಲ್ಲು ಮಳೆ ಪರಿಣಾಮ ಹಾನಿ ಆಗಿದೆ.

ಹಲಸು ಮತ್ತು ಮಾವು ಋತು ಮಾರ್ಚ್ ನಿಂದ ಜೂನ್ ಅಥವಾ ಜುಲೈವರೆಗೆ ಕಂಡು ಬರುತ್ತದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಇಳುವರಿ ಮಾರಾಟಕ್ಕೆ ಬರುವ ಕಲ್ಲಂಗಡಿ (ಫೆಬ್ರವರಿ-ಏಪ್ರಿಲ್) ದಣಿವರಿದ ಬಾಯಿಗೆ ಸಿಹಿ ನೀಡುತ್ತದೆ. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಹಿಂಗಾರು ಬೆಳೆ ಜೋಳ ಸಹ ಬೇಸಿಗೆ ಕಟಾವಿಗೆ ಬರುತ್ತದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಈ ಬೆಳೆಗಳು ಸಿಲುಕಿವೆ. ಮುಂದಿನ ಮೂರು ದಿನವು ಆಲಿಕಲ್ಲು ಮಳೆ ಎಚ್ಚರಿಕೆ ನೀಡಲಾಗಿದ್ದು, ಇದು ಹಲವು ರೈತರ ಆತಂಕಕ್ಕೆ ಕಾರಣವಾಗಿದೆ.
ಮಾವು ಬೆಳೆಗಾರರಿಗೆ ಸಂಕಷ್ಟ
ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ದೇವನಹಳ್ಳಿ, ರಾಮನಗರ, ತುಮಕೂರು, ಧಾರವಾಡ ಭಾಗಗಳಲ್ಲಿ ಮಾವು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಲಸು ಸಹ ಇದೇ ಭಾಗದಲ್ಲಿ ಕಂಡು ಬರುತ್ತಿದೆ. ಮಾವು ಅದಾಗಲೇ ನಿಧಾನವಾಗಿ ಮಾರುಕಟ್ಟೆ ಪ್ರವೇಶಿಸುತ್ತಿತ್ತು. ಬಹುಪಾಲು ಮಾವು ಮರದಲ್ಲಿಯೇ ಇತ್ತು. ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ತರುವ ಮೊಲದೇ ಆಲಿಕಲ್ಲು ಮಳೆಗೆ ಸಿಲುಕಿದೆ. ಆಲಿಕಲ್ಲು ಹೊಡೆತಕ್ಕೆ ಮಾವು ಉದುರಿದೆ. ಕೆಳಗೆ ಬಿದ್ದ ಮಾವಿಗೆ ಉತ್ತಮ ಬೆಲೆ ಸಿಗದು. ಇದೇ ರೀತಿ ಮಾರಕುಟ್ಟೆಗೆ ಬರಬೇಕಿದ್ದ ಹಲಸಿಗೂ ಅಕಾಲಿಕ ಮಳೆಯಿಂದ ತೊಂದರೆ ಆಗಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಕಲ್ಲಂಗಡಿ, ಜೋಳ ಬೆಳದವರಿಗೆ ನಷ್ಟ
ಹಾಸನದಲ್ಲಿ ಸುರಿದ ಮಳೆಗೆ ಬಾಳೆ, ಕಲ್ಲಂಗಡಿ ಬೆಳೆಗೆ ಹಾನಿ ಆಗಿದೆ. ಹೊಲದಲ್ಲಿದ್ದ ಕಲ್ಲಂಗಡಿ ಆಲಿಕಲ್ಲು ಬಿದ್ದ ರಭಸಕ್ಕೆ ಹಾಳಾಗಿವೆ. ಮಾರುಕಟ್ಟೆಗೆ ಹೋಗಬೇಕಿದ್ದ ಹಣ್ಣುಗಳು ತಿಪ್ಪೆ ಸೇರಿವೆ. ಮುಂಗಾರು ಮಳೆಗಾಲದಲ್ಲಿ ಉತ್ತಮ ಆದಾಯ ಕಾಣದ ಅದೆಷ್ಟೋ ರೈತರಿಗೆ ಹಿಂಗಾರು ಫಸಲು, ತೋಟಗಾರಿಕೆ ಬೆಳೆ, ಹಣ್ಣುಗಳ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ.
ಉತ್ತರ ಕರ್ನಾಟಕದ ಹಾವೇರಿ, ರಾಯಚೂರು, ಗದಗ, ಕಲಬುರಗಿ, ಧರವಾಡ, ವಿಜಯಪುರ ದಾವಣಗೆರೆ ಭಾಗದಲ್ಲಿ ಜೋಳ ಹೆಚ್ಚಾಗಿ ಬೆಳೆಯಲಾಗುತ್ತದೆ. ಬಹುತೇಕ ಮಂದಿ ಈ ಜೋಳ ಕಟಾವು ಮಾಡಿ ಒಕ್ಕಲು ಮಾಡಿದ್ದಾರೆ. ದರ ಸಿಗದಿದ್ದಕ್ಕೆ ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಕೆಲವರು ಇನ್ನೇನು ಜೋಳ ಕಟಾವು ಮಾಡಬೇಕು ಅನ್ನುವಷ್ಟರಲ್ಲಿ ಸುರಿದ ಮಳೆಗೆ ಜೋಳದ ತೆನೆ ಹೊಲದಲ್ಲಿ ಬಿದ್ದಿದೆ. ಮಳೆ ನೀರಿಗೆ ಜೋಳ ಕಪ್ಪು ಬಣ್ಣಕ್ಕೆ ತಿರುಗಿದರೆ ನಿರೀಕ್ಷಿತ ಬೆಲೆ ಸಿಗುವುದು ಅನುಮಾನ ಇದರಿಂದ ರೈತರಿಗೆ ಲಾಭವಾಗದೇ ನಷ್ಟ ಉಂಟಾಗುತ್ತದೆ. ಇಂತಹ ಸ್ಥಿತಿಯನ್ನು ಅನೇಕ ರೈತರು ಎದರಿಸುವಂತಾಗಿದೆ.












Click it and Unblock the Notifications