Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ಗಂಟೆಗಳಲ್ಲಿ ಹವಾಮಾನದಲ್ಲಿ ಏರುಪೇರಾಗಲಿದ್ದು, ಹಲವೆಡೆ ಮಾರ್ಚ್ 20 ಹಾಗೂ 21ರವರೆಗೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ, ಕೋಲಾರ, ಮೈಸೂರು, ಹಾಸನ, ಕೊಡಗು, ರಾಮನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಗಳ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಮಳೆಯ ಸಂದರ್ಭದಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗಬಹುದು. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆ ಮುಂದುವರಿಯಲಿದೆ. ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಜೊತೆಗೆ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನ ಇರಲಿದ್ದು, ಮಳೆಯ ಮುನ್ಸೂಚನೆ ಇರುವುದಿಲ್ಲ ಎಂದು ಹೇಳಿದೆ.

ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ ದಾಖಲಾಗಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ತೀವ್ರ ಚಳಿ ಅಥವಾ ತಂಪಾದ ವಾತಾವರಣ ಕಂಡುಬರುತ್ತಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಇದು ಈ ಭಾಗಗಳಲ್ಲಿ ತೀವ್ರವಾದ ಚಳಿಯ ಅನುಭವ ನೀಡುತ್ತಿದೆ. ರಾಜ್ಯದ ಒಳನಾಡಿನ ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕುಸಿದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲೂ ತಂಪಾದ ಹವೆ ಮುಂದುವರಿದಿದೆ. ಕರಾವಳಿ ಕರ್ನಾಟಕದ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಳ ಕಂಡಿದ್ದು, ಮಧ್ಯಾಹ್ನದ ವೇಳೆ ತುಸು ಸೆಕೆ ಇರಲಿದೆ.
ಮಳೆಗೆ ಕಾರಣವೇನು?
ಪ್ರಸ್ತುತ ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಮೇಲೆ ಏಕಕಾಲಕ್ಕೆ ನಾಲ್ಕು ಪ್ರಮುಖ ಹವಾಮಾನ ಬದಲಾವಣೆಗಳು ಕಂಡುಬಂದಿದ್ದು, ಇವು ರಾಜ್ಯದ ಮಳೆಯ ಮೇಲೆ ನೇರ ಪರಿಣಾಮ ಬೀರಲಿವೆ. ಉತ್ತರ ಮಧ್ಯಪ್ರದೇಶದ ಕೇಂದ್ರ ಭಾಗದಿಂದ ಮರಾಠವಾಡ ಮತ್ತು ವಿದರ್ಭದ ಮೂಲಕ ಹಾದುಹೋಗುವ ಒಂದು ಪ್ರಬಲ ವಾಯುಭಾರ ಕುಸಿತದ ಸುಳಿಯು ಸಮುದ್ರ ಮಟ್ಟದಿಂದ ಎತ್ತರದಲ್ಲಿ ಸಕ್ರಿಯವಾಗಿದೆ. ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ ಭಾಗದ ವಾಯುಮಂಡಲದ ಮೇಲ್ಭಾಗದಲ್ಲಿ ಮತ್ತೊಂದು ಸೈಕ್ಲೋನಿಕ್ ಚಲನೆ ಕಂಡುಬಂದಿದೆ.
ಮನ್ನಾರ್ ಕೊಲ್ಲಿಯಿಂದ ತಮಿಳುನಾಡಿನ ಮೂಲಕ ಹಾದು ಬಂದು ದಕ್ಷಿಣ ಒಳನಾಡು ಕರ್ನಾಟಕದವರೆಗೆ ವ್ಯಾಪಿಸಿರುವ ವಾಯುಭಾರ ಕುಸಿತದ ಸುಳಿಯು ಇನ್ನೂ ಸ್ಥಿರವಾಗಿದೆ. ಇದು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣಕ್ಕೆ ಮುಖ್ಯ ಕಾರಣವಾಗಿದೆ. ತಮಿಳುನಾಡಿನ ಒಳನಾಡು ಮತ್ತು ಕೇರಳದ ಗಡಿ ಭಾಗದಲ್ಲಿ ಸಮುದ್ರ ಮಟ್ಟದಿಂದ ಎತ್ತರದಲ್ಲಿ ಗಾಳಿಯ ಸುಳಿಯೊಂದು ನಿರ್ಮಾಣವಾಗಿದೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಿಂದ ತೇವಾಂಶಭರಿತ ಗಾಳಿಯು ರಾಜ್ಯದತ್ತ ಬೀಸುತ್ತಿದ್ದು, ಬೆಂಗಳೂರು ಸೇರಿದಂತೆ ದಕ್ಷಿಣದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮತ್ತು ಬಿರುಗಾಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ.
ತಾಪಮಾನದಲ್ಲಿ ಇಳಿಕೆ
ಮುಂದಿನ ಕೆಲವು ದಿನಗಳ ಕಾಲ ಬಿಸಿಲಿನ ಬೇಗೆಯಿಂದ ಜನರಿಗೆ ತುಸು ಮುಕ್ತಿ ಸಿಗುವ ಲಕ್ಷಣಗಳಿವೆ. ರಾಜ್ಯದ ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗುವ ಮುನ್ಸೂಚನೆ ಇದೆ. ಮುಂದಿನ 3 ದಿನಗಳ ಕಾಲ ರಾಜ್ಯದಾದ್ಯಂತ ಗರಿಷ್ಠ ತಾಪಮಾನದಲ್ಲಿ ಇಳಿಕೆಯ ಪ್ರವೃತ್ತಿ ಕಂಡುಬರಲಿದ್ದು, ಆ ನಂತರ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ. ಮುಂದಿನ 5 ದಿನಗಳವರೆಗೆ ಕನಿಷ್ಠ ತಾಪಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇರುವುದಿಲ್ಲ. ಅಂದರೆ ರಾತ್ರಿ ಮತ್ತು ಮುಂಜಾನೆಯ ತಂಪು ವಾತಾವರಣ ಮುಂದುವರಿಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಳಿಗ್ಗೆ ಭಾಗಶಃ ಮೋಡಕವಿದ ವಾತಾವರಣವಿದ್ದರೆ, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ಸಂಪೂರ್ಣ ಮೋಡಕವಿದ ಆಕಾಶ ಕಂಡುಬರಲಿದೆ. ನಗರದ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯೊಂದಿಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದೆ.












Click it and Unblock the Notifications