• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾವು ರಕ್ಷಿಸುವ ಪಾಠ ಹೇಳಿಕೊಟ್ಟ ನಮ್ಮ ಮಾರುತಿ ಮಾಸ್ಟರ್!

By Gururaj
|

'ಮನೆಹತ್ರ ದೊಡ್ಡ ಹಾವು ಮಾರಾಯ ಕೊನೆಗೆ ಮಾರುತಿ ಮಾಷ್ಟ್ರು ಬಂದು ಹಿಡಿದುಕೊಂಡು ಹೋದ್ರು'...ಹೌದು ತೀರ್ಥಹಳ್ಳಿ ಸುತ್ತಮತ್ತಲಿನ ಜನರ ಬಾಯಲ್ಲಿ ಆಗಾಗ ಕೇಳಿಬರುವ ಮಾತಿದು. ಮನೆ ಹತ್ತಿರ ನಾಗರಹಾವು, ಕಾಳಿಂಗ ಸರ್ಪ ಕಂಡರೆ ಮೊದಲು ರಿಂಗ್ ಆಗುವುದು ಮಾರುತಿ ಮಾಸ್ಟರ್ ಮೊಬೈಲ್....

ಮಲೆನಾಡಿನ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮಗೆ ಹಾವುಗಳೆಂದರೆ ಅಷ್ಟಾಗಿ ಭಯವಿರಲಿಲ್ಲ. ಮನೆ ಸುತ್ತಮುತ್ತಲಿನ ಹಸಿರು ಗಿಡದಲ್ಲಿ ಹಸಿರು ಹಾವು ಮಂಡೆ ಅಲ್ಲಾಡಿಸುತ್ತಾ ಇರುತ್ತಿತ್ತು. ತೋಟಕ್ಕೆ ಹೋಗುವಾಗ, ಹಾಡ್ಯದಲ್ಲಿ ತಿರುಗುವಾಗ ಕೆರೆ ಹಾವು ಕಾಣಸಿಗುತ್ತಿತ್ತು.

ನರೇಂದ್ರ ಮೋದಿ ಟ್ವಿಟ್ಟರ್ ನಲ್ಲಿ ರಾರಾಜಿಸುತ್ತಿರುವ ಕನ್ನಡ ಶಿಕ್ಷಕರಿವರು!

ಆಗಾಗ ರಾತ್ರಿ ಕನ್ನಡಿ ಹಾವು ಮನೆಯೊಳಗೆ ಬರುತ್ತಿತ್ತು. ಅದನ್ನು ಕೊಂದು ಹೈಗದ ಮರದ ಕೊನೆಯಲ್ಲಿ ತೂಗು ಹಾಕಿ ಬಂದ ಮೇಲೆ ನೆಮ್ಮದಿ. ಅಡಿಕೆ ಕೊನೆ ಮನೆಗೆ ತಂದಾಗ ಅದರೊಳಗೆ ಹಾವು ಸೇರಿಕೊಂಡು ಹಲವು ಬಾರಿ ತೊಂದರೆ ಕೊಟ್ಟಿದ್ದು ಉಂಟು.

ಆದರೆ, ನಾಗರಹಾವು, ಕಾಳಿಂಗ ಸರ್ಪದ ಬಗ್ಗೆ ಭಯವಿತ್ತು. ನಾಗರಪಂಚಮಿ ದಿನ ನಾಗಬನಕ್ಕೆ ಪೂಜೆ ಮಾಡಲು ಹೋಗುವುದು, ಕುಕ್ಕೆ ಸುಬ್ರಮಣ್ಯಕ್ಕೆ ಕಾಣಿಕೆ ಎತ್ತಿಡುವುದು ನಡೆದುಕೊಂಡು ಬಂದಿತ್ತು. ಇಲಿ ಹಿಡಿಯಲು ಬಂದ ನಾಗರಹಾವನ್ನು ಮನೆಯಿಂದ ಹೊರಹಾಕಲು ಇಡೀ ರಾತ್ರಿ ಕಷ್ಟಪಟ್ಟಿದ್ದನ್ನು ಇನ್ನೂ ಮರೆತಿಲ್ಲ.

ಗುರುವಿಲ್ಲದೆ ಗುರಿಯನ್ನು ತಲುಪುವುದು ಬಹಳ ಕಷ್ಟ

ನಾಗರಹಾವು ಬಿಟ್ಟು ಬೇರೆ ಹಾವು ಕಂಡರೆ ಕೊಲು ಎಲ್ಲಿದೆ? ಎಂದು ಹುಡುಕುವ ಜಾಯಮಾನ ನಮ್ಮದು. ಹಾವು ಕೊಂದರೆ ಅದೇನೊ ಸಾಧನೆ ಮಾಡಿದಂತ ಹೆಮ್ಮೆ ಇತ್ತು ಆಗ. ಆದರೆ, ಹಾವನ್ನು ಕೊಲ್ಲಬಾರದು ಅದನ್ನು ರಕ್ಷಿಸಬೇಕು ಎಂಬ 'ಪಾಠ' ಹೇಳಿಕೊಟ್ಟಿದ್ದು ನಮ್ಮ ಮಾರುತಿ ಮಾಷ್ಟು....

ಕನ್ನಡದ ಮಾಷ್ಟ್ರು

ಕನ್ನಡದ ಮಾಷ್ಟ್ರು

ನಾನು ಓದಿದ್ದು ಸರ್ಕಾರಿ ಪ್ರೌಢ ಶಾಲೆ ಮೇಳಿಗೆಯಲ್ಲಿ. 9ನೇ ತರಗತಿಯಲ್ಲಿ ನಮಗೆ ಕನ್ನಡ ಹೇಳಿಕೊಡಲು ಬಂದವರು ಮಾರುತಿ ಮಾಷ್ಟ್ರು. ಎರಡು ವರ್ಷ ಅವರು ನಮಗೆ ಕನ್ನಡದ ಜೊತೆ ಜೀವನದ ಪಾಠವನ್ನು ಹೇಳಿಕೊಟ್ಟರು.

ಮಾರುತಿ ಮಾಷ್ಟರು ಸೊರಬ ಸಮೀಪದವರು ಎಂದು ಕೇಳಿದ ನೆನಪಿದೆ. ಆದರೆ, ಈಗ ಅವರು ತೀರ್ಥಹಳ್ಳಿಯವರೇ ಆಗಿ ಹೋಗಿದ್ದಾರೆ. ನಮಗೆ ಕನ್ನಡ ಪಾಠ ಹೇಳಲು ಬಂದ ಅವರು ಹಾವುಗಳನ್ನು ರಕ್ಷಣೆ ಮಾಡಬೇಕು ಎಂದ ಹೇಳಿಕೊಟ್ಟರು. ಇಂದಿಗೂ ಅವರು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ.

ಬೆತ್ತದ ಬದಲು ಕೈಯಲ್ಲಿ ಹಾವು

ಬೆತ್ತದ ಬದಲು ಕೈಯಲ್ಲಿ ಹಾವು

ಮೊದಲ ದಿನ ಮಾರುತಿ ಮಾಸ್ಟರ್ ತರಗತಿಯಲ್ಲಿ ತಮ್ಮ ಪರಿಚಯ ಮಾಡಿಕೊಳ್ಳುವಾಗ ಕೆಲವು ಫೋಟೋಗಳನ್ನು ತೋರಿಸಿದರು. ಮಾಸ್ಟರ್ ಕೈಯಲ್ಲಿ ಬೆತ್ತ ನೋಡಿದ್ದ ನಮಗೆ ಹಾವು ನೋಡಿ ಆಶ್ಚರ್ಯವಾಗಿತ್ತು. ಹಾವು ಹಿಡಿಯುವುದು ನನ್ನ ಹವ್ಯಾಸ ಎಂದು ಅವರು ನಮಗೆ ವಿವರಿಸಿ ಹೇಳಿದ್ದರು.

ಪೋಟೋದಲ್ಲಿ ನಾಗರಹಾವನ್ನು ಅರಾಮಾಗಿ ಹಿಡಿದುಕೊಂಡಿದ್ದರು. ಆಗಲೇ ನಾವು ಹಾವು ಕಂಡಾಗ ಮಾರುತಿ ಮಾಷ್ಟ್ರಿಗೆ ಹೇಳಬೇಕು ಎಂದು ನಿರ್ಧರಿಸಿ ಆಗಿತ್ತು. ಅವರು ಹಾವು ಹಿಡಿಯುವುದನ್ನು ಕಣ್ಣಾರೆ ನೋಡುವ ಕುತೂಹಲವೂ ನಮಗೆ ಇತ್ತು.

ಇಡೀ ಕರ್ನಾಟಕಕ್ಕೇ ಮಾದರಿ ಶಿವಮೊಗ್ಗದ ಸಂಕ್ಲಾಪುರ ಸರಕಾರಿ ಶಾಲೆ

ಓಟ ಕಿತ್ತ ಹಾವು

ಓಟ ಕಿತ್ತ ಹಾವು

ನಮ್ಮ ಶಾಲೆಯ ಸುತ್ತಮುತ್ತಲೂ ನಾವೇ ನೆಟ್ಟು ಬೆಳೆಸಿದ ದೊಡ್ಡ ಪ್ಲಾನ್‌ಟೇಶನ್ ಇತ್ತು. ಅಲ್ಲಿ ಗ್ರೂಪ್ ಸ್ಟಡಿ ಮಾಡುವಾಗ ಹಾವು ಬರಲಿ, ಮಾರುತಿ ಮಾಷ್ಟ್ರು ಅದನ್ನು ಹಿಡಿಯುವುದನ್ನು ನೋಡಬೇಕು ಎಂದು ಸ್ನೇಹಿತರ ಜೊತೆ ಚರ್ಚೆ ಮಾಡುತ್ತಿದ್ದೆವು.

ಒಂದು ದಿನ ಮಧ್ಯಾಹ್ನ ಊಟ ಮುಗಿಸಿ ಆಟ ಆಡುತ್ತಿದ್ದೆವು. ಆಗ ಸ್ನೇಹಿತರು ಜೋರಾಗಿ ಕೂಗಿದರು. ಶಾಲೆಯ ಬೇಲಿ ಸಾಲಿನಲ್ಲಿ ಯಾವುದೋ ಹಾವು ಕಾಣಿಸಿತ್ತು. ತಕ್ಷಣ ಸ್ಟಾಫ್‌ ರೂಂಗೆ ಓಡಿ ಅರ್ಧ ಊಟ ಮಾಡಿ ಕುಳಿತಿದ್ದ ಮಾರುತಿ ಮಾಸ್ಟರ್ ಅನ್ನು ಕರೆ ತಂದೆವು. ಎಲ್ಲಾ ವಿದ್ಯಾರ್ಥಿಗಳು ಅಲ್ಲಿ ಸೇರಿದರು. ನಮ್ಮ ಕೂಗಾಟ ಕೇಳಿದ ಹಾವು, ಕ್ಷಣ ಮಾತ್ರದಲ್ಲಿ ಬಿಲದೊಳಗೆ ಹೋಗಿ ಅದರ ಜೀವ ಉಳಿಸಿಕೊಂಡಿತು. ಮಾಸ್ಟರ್ ಹಾವು ಹಿಡಿಯುವುದನ್ನು ನೋಡುವ ನಮ್ಮ ಆಸೆ ಈಡೇರಲಿಲ್ಲ.

ಹಲಸಿನಕಾಯಿ ಚೀಲ ತನ್ರೋ

ಹಲಸಿನಕಾಯಿ ಚೀಲ ತನ್ರೋ

ಅದೊಂದು ದಿನ ಮಾರುತಿ ಮಾಸ್ಟರ್ ಹಾವು ಹಿಡಿಯುವುದನ್ನು ನೋಡುವ ಅದೃಷ್ಟ ಬಯಸದೇ ನಮಗೆ ಬಂತು. ಒಂದು ಮಧ್ಯಾಹ್ನ ಊಟವಾದ ಬಳಿಕ ಮಾಸ್ಟರ್ ಇಬ್ಬರನ್ನು ಕರೆದು ಬೈಕ್‌ನ ಚೀಲದಲ್ಲಿ ಹಲಸಿನ ಹಣ್ಣಿದೆ ಚೀಲ ತನ್ನಿ, ಹುಷಾರು ಎಂದರು. ಎಲ್ಲರನ್ನು ಬಾಲ್ ಬ್ಯಾಡ್ಮಿಂಟನ್ ಕೋರ್ಟ್‌ಗೆ ಕರೀರಿ ಎಂದರು.

ಸ್ನೇಹಿತರಿಬ್ಬರು ಚೀಲವನ್ನು ತಂದು ಮಾಸ್ಟರ್ ಗೆ ಕೊಟ್ಟರು. ಮಾಸ್ಟರ್ ಅದನ್ನು ತಂದು ಬ್ಯಾಂಡ್ಮಿಟನ್ ಕೋರ್ಟ್‌ನಲ್ಲಿ ಚೀಲ ಬಿಚ್ಚಿದ್ದರು. ಆಗ ಕಂಡಿದ್ದು ಹಲಸಿನ ಹಣ್ಣಲ್ಲ ಪಳಪಳ ಹೊಳೆಯುತ್ತಿದ್ದ ಗೋಧಿ ಸರ್ಪ. ಚೀಲ ತಂದ ಸ್ನೇಹಿತರು ಒಂದು ಕ್ಷಣ ಬೆಚ್ಚಿಬಿದಿದ್ದರು. ವಿದ್ಯಾರ್ಥಿನಿಯರು ಕೂಗಿ ಗದ್ದಲ ಮಾಡಿದರು.

ವಿದ್ಯಾರ್ಥಿಗಳಿಗೆ ವಿವರಿಸಿದರು

ವಿದ್ಯಾರ್ಥಿಗಳಿಗೆ ವಿವರಿಸಿದರು

ಮಾರುತಿ ಮಾಸ್ಟರ್ ಎಲ್ಲಿಂದಲೂ ಹಿಡಿದು ತಂದ ಹಾವು ಅದಾಗಿತ್ತು. ಸಂಜೆ ಅದನ್ನು ಆಗುಂಬೆಯಲ್ಲಿ ಬಿಡಲು ತಂದಿದ್ದರು. ಕೊಲಿನ ಸಹಾಯದಿಂದ ಹಾವಿನ ಜೊತೆ ಅವರು ಆಟವಾಡಿದರು. ನಂತರ ಕೈಯಲ್ಲಿ ಹಿಡಿದುಕೊಂಡು ಕಣ್ಣು, ನಾಲಿಗೆ ಎಲ್ಲವನ್ನೂ ತೋರಿಸಿದರು. ಹಸಿರು ಹಾವನ್ನೆಲ್ಲಾ ನಾವು ಮುಟ್ಟಿದ್ದೆವು. ಆದರೆ, ಮೊದಲ ಬಾರಿಗೆ ಗೋಧಿ ಸರ್ಪದ ಮೈ ಸವರಿದ ಸಂತೋಷ ಅಂದು ನಮಗೆ ಸಿಕ್ಕಿತ್ತು.

ಹಾವು ಹಿಡಿಯುವುದು ಸುಲಭದ ಕೆಲಸವಲ್ಲ. ಹಾವು ಕಂಡಾಗ ಹಿಡಿಯಲು ಹೋಗಬೇಡಿ. ಹಾಗೆಯೇ ಕೊಲ್ಲ ಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎಲ್ಲೋ ಸಿಕ್ಕ ಸರ್ಪದಿಂದಾಗಿ ನಮ್ಮ ಮಾಸ್ಟರ್ ಹಾವು ಹಿಡಿಯುವುದನ್ನು ನೋಡಲು ನಮಗೆ ಅವಕಾಶ ಸಿಕ್ಕಿತು.

ತೀರ್ಥಹಳ್ಳಿ ಸುತ್ತ-ಮುತ್ತ ಪ್ರಸಿದ್ಧಿ

ತೀರ್ಥಹಳ್ಳಿ ಸುತ್ತ-ಮುತ್ತ ಪ್ರಸಿದ್ಧಿ

ಈಗ ತೀರ್ಥಹಳ್ಳಿ ಸುತ್ತ-ಮುತ್ತ ನಮ್ಮ ಮಾರುತಿ ಮಾಸ್ಟರ್ ಫೇಮಸ್. ಕಾಳಿಂಗ ಸರ್ಪ, ನಾಗರ ಹಾವು ಕಂಡರೆ ಮೊದಲ ಕರೆ ಹೋಗುವುದು ಮಾಸ್ಟರಿಗೆ. ಇದುವರೆಗೂ ಹಲವಾರು ಹಾವುಗಳನ್ನು ಅವರು ಹಿಡಿದು ಸಂರಕ್ಷಣೆ ಮಾಡಿದ್ದಾರೆ. ಒಮ್ಮೆ ನಾಗರ ಹಾವನ್ನು ಚೀಲಕ್ಕೆ ಹಾಕುವಾಗ ಅದು ಕಚ್ಚಿ ಹಲವು ದಿನಗಳ ಕಾಲ ಚಿಕಿತ್ಸೆಯನ್ನು ಪಡೆದಿದ್ದಾರೆ.

ಮಾರುತಿ ಮಾಸ್ಟರ್ ಅವರು ಹಾವುಗಳನ್ನು ಹಿಡಿದು ಆಗುಂಬೆಯ ಅರಣ್ಯಕ್ಕೆ ಬಿಡುತ್ತಾರೆ. ನ್ಯಾಷನಲ್ ಜಿಯಾಗ್ರಫಿ ಚಾನೆಲ್‌ನಲ್ಲಿ ಆಗುಂಬೆಯ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದ ಸಾಕ್ಷ್ಯಚಿತ್ರ ಮಾಡಿದಾಗ ಮಾರುತಿ ಮಾಸ್ಟರ್ ಬಗ್ಗೆಯೂ ಹೇಳಿದ್ದಾರೆ. ಮಾಸ್ಟರ್ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವು ಸಾಹಸದ ವಿಡಿಯೋ ಕೂಡಾ ಆ ಸಾಕ್ಷ್ಯಚಿತ್ರದಲ್ಲಿ ಸೇರಿದೆ.

English summary
Maruthi or Snnake Maruthi our Kannada teacher in 9th and 10 class in Melige high school, Thirthahalli taluk. Maruthi sir not only Kannada teacher he is also snake enthusiast, wildlife conservationist. Here is a brief article about Snnake Maruthi on the occasion of Teacher's day 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more