Teachers Day: 9 ವರ್ಷದ ಹಿಂದೆ ಪ್ರಧಾನಿ ಮೋದಿ ತಮ್ಮ ಬಾಲ್ಯದ ದಿನದ ರಹಸ್ಯ ಬಿಚ್ಚಿಟ್ಟಿದ್ದು ಹೀಗೆ
ದೇಶದ ಎರಡನೇ ರಾಷ್ಟ್ರಪತಿ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ 136ನೇ ಜನ್ಮದಿನಾಚರಣೆ ಮತ್ತು ಪ್ರತೀ ವರ್ಷ ಈ ದಿನವನ್ನು (ಸೆ 5) ಶಿಕ್ಷಕರ ದಿನಾಚರಣೆಯನ್ನಾಗಿಯೂ ಆಚರಿಸಲಾಗುತ್ತದೆ. ಒಂಬತ್ತು ವರ್ಷದ ಹಿಂದೆ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ತಮ್ಮ ಬಾಲ್ಯದ ನೆನಪು, ತುಂಟಾಟವನ್ನು ನೆನೆಪಿಸಿಕೊಂಡಿದ್ದರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ದೇಶದ ವಿವಿಧೆಡೆ ಇರುವ ಮಕ್ಕಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಭಾಷಣಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳೊಡನೆ ಮೋದಿ ನಡೆಸಿದ್ದ ಸಂವಾದ ಬೃಹತ್ ಮಟ್ಟದಲ್ಲಿ ಎಲ್ಲೆಡೆ ಪ್ರಸಾರವಾಗಿತ್ತು. ಮಕ್ಕಳ ಜೊತೆ ನಡೆದ ಸಂವಾದದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನದ ರಹಸ್ಯಗಳನ್ನು ಮೋದಿ ಬಿಚ್ಚಿಟ್ಟಿದ್ದರು.

ನವದೆಹಲಿಯ ಮಾಣೆಕ್ ಷಾ ಸಭಾಂಗಣದಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಮಾಡಿದ್ದ ಭಾಷಣ ಮತ್ತು ಸಂವಾದ ಏಕಕಾಲಕ್ಕೆ ಟಿವಿ, ರೆಡಿಯೋ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಸೇರಿದಂತೆ ಹಲವಾರು ವೆಬ್‌ಸೈಟ್‌ಗಳಲ್ಲಿ ನೇರ ಪ್ರಸಾರವಾಗಿದ್ದವು.
ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಚಂದನ ಸೇರಿದಂತೆ 15 ಪ್ರಾದೇಶಿಕ ಚಾನೆಲ್‌ಗಳು, 52 ಖಾಸಗಿ ಚಾನೆಲ್‌ಗಳು ಮತ್ತು ಆಕಾಶವಾಣಿಯಲ್ಲಿ ನೇರ ಪ್ರಸಾರವಾಗಿದ್ದ ಮೋದಿ ಭಾಷಣ ಹಾಗೂ ಸಂವಾದದ ಮುಖ್ಯಾಂಶ ಹೀಗಿದೆ:
ಪ್ರಶ್ನೆ: ಚಿಕ್ಕಂದಿನಲ್ಲಿ ಎಂದಾದರೂ ಪ್ರಧಾನಿಯಾಗುವ ಕನಸು ಕಂಡಿದ್ರಾ?
ಮೋದಿ: ಇಲ್ಲ, ಸಾಮಾನ್ಯ ಕುಟುಂಬದ ಮಗುವಾಗಿ ಬೆಳೆದ ನಾನು ಶಾಲೆಯ ವಿದ್ಯಾರ್ಥಿ ಮುಖ್ಯಸ್ಥನಾಗುವ ಬಗ್ಗೆಯೂ ಯೋಚಿಸಿರಲಿಲ್ಲ.
ಪ್ರಶ್ನೆ: ನಾನು ಕೂಡಾ ದೇಶದ ಪ್ರಧಾನಿಯಾಗಬಹುದೇ?
ಮೋದಿ: ಜನ ಸಾಮಾನ್ಯನೊಬ್ಬ ಉನ್ನತ ಪದವಿಗೇರಬಹುದು ಎಂಬುದು ನನ್ನಿಂದ ಸಾಬೀತಾಗಿದೆ. ಧೈರ್ಯವಾಗಿ 2024ರ ಚುನಾವಣೆಗೆ ಸಿದ್ಧವಾಗು.
ಪ್ರಶ್ನೆ: ನಿಜ ಹೇಳಿ ಚಿಕ್ಕಂದಿನಲ್ಲಿ ನೀವು ಯಾವ ರೀತಿ ವಿದ್ಯಾರ್ಥಿಯಾಗಿದ್ರಿ?
ಮೋದಿ: ತುಂಟತನವಿರದ ವಿದ್ಯಾರ್ಥಿಗಳಿಲ್ಲ. ತುಂಟನಾಗಿರದಿದ್ದರೆ ಮಗುವಿನ ದೋಷವಲ್ಲ, ಅದು ವ್ಯವಸ್ಥೆಯ ದೋಷವಾಗಿರುತ್ತದೆ. ನಿಜ ಹೇಳಬೇಕೆಂದರೆ ನಾನು ತುಂಬಾ ತುಂಟನಾಗಿದ್ದೆ. ಮದುವೆ ಸಮಾರಂಭಕ್ಕೆ ಹೋದಾಗ ಗಂಡು ಹೆಣ್ಣಿನ ಉಡುಗೆಗಳಿಗೆ ಸ್ಟೆಪ್ಲರ್ ಬಳಸಿ ಬೆಸುಗೆ ಹಾಕುತ್ತಿದ್ದೆವು. ಪೀಪೀ ಊದುವವರ ಮುಂದೆ ಹುಣಸೆ ಹಣ್ಣು ಇಟ್ಟುಕೊಂಡು ಸತಾಯಿಸುತ್ತಿದ್ದೆವು. ನಮ್ಮೊಳಗಿನ ತುಂಟತನದ ಮಗುವಿನಂಥ ಮನಸ್ಸು ನನ್ನನ್ನು ಸದಾ ಜಾಗೃತಗೊಳಿಸುತ್ತದೆ.
ವಿದ್ಯಾರ್ಥಿಗಳಿಗೆ ಮೋದಿ ನೀಡಿದ್ದ ಸಂದೇಶ
> ಗೂಗಲ್ ಗುರುವಿನಿಂದ ನಿಮಗೆ ಮಾಹಿತಿಯಷ್ಟೆ ಸಿಗುತ್ತದೆ. ಅದರೆ, ಜ್ಞಾನ ಸಿಗುವುದಿಲ್ಲ. ಸರಿ ತಪ್ಪಿನ ಅರಿವು ಪಡೆಯಲು ಸಾಧ್ಯವಿಲ್ಲ.
> ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ಸಾಧಕರ ಆತ್ಮಕಥೆಗಳನ್ನು ತಪ್ಪದೇ ಓದಬೇಕು. ಇದರಿಂದ ಸತ್ಯದ ದರ್ಶನವಾಗಲಿದೆ.
> ತಂತ್ರಜ್ಞಾನದ ಮಹತ್ವ ದಿನೇದಿನೇ ಹೆಚ್ಚಾಗುತ್ತಿದೆ. ಮಕ್ಕಳು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಲು ಉತ್ತೇಜಿಸಬೇಕು. ಇಲ್ಲದಿದ್ದರೆ ಇದು ಸಾಮಾಜಿಕ ದುರಂತವಾಗಲಿದೆ.
> ವಿದ್ಯಾರ್ಥಿ ಜೀವನದಲ್ಲಿ ನೂರಾರು ಕನಸುಗಳನ್ನು ಕಾಣಬೇಕು. ಒಳ್ಳೆ ಸಂಕಲ್ಪ, ಶ್ರದ್ಧೆಯಿದ್ದರೆ ನಿಮ್ಮ ಕನಸು ಖಂಡಿತಾ ಈಡೇರುವುದು. ನನ್ನ ಜಪಾನ್ ಪ್ರವಾಸದ ವೇಳೆ ಶಾಲಾ ಮಕ್ಕಳು ತಮ್ಮಮ್ಮ ಕೊಠಡಿ ಸ್ವಚ್ಛತೆ ಬಗ್ಗೆ ನೀಡಿದ ಮಹತ್ವವನ್ನು ನೋಡಿ ನಾನು ಸ್ತಂಭೀಭೂತನಾಗಿದ್ದೆ.
> ಅನೇಕ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿಯರಿಗೆ ಬೇಕಾದ ಅಗತ್ಯ ಸೌಲಭ್ಯ ನೀಡಲು ಶಾಲೆಗಳ ನೆರವು ಬೇಕಿದೆ.
> ದೇಶದ ಭವಿಷ್ಯದ ಬೆಳಕುಗಳಾದ ನಿಮ್ಮೊಂದಿಗೆ ಸಂವಾದ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ ಎಂದು ಪ್ರಧಾನಿ ಮೋದಿ ಹೇಳಿದರು.












Click it and Unblock the Notifications