Kodagu: ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡ್ತಾರಾ ಕೊಡಗಿನ ‘ಕೈ’ ಶಾಸಕರು?
ಮಡಿಕೇರಿ, ಏಪ್ರಿಲ್ 23: ಮೈಸೂರು ಕೊಡಗು ಲೋಕಸಭಾ ಕ್ಷೇತ್ರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಗೆ ಪ್ರತಿಷ್ಠೆಯಾಗಿದೆಯೋ ಹಾಗೆಯೇ ಕೊಡಗಿನ ಕಾಂಗ್ರೆಸ್ ಶಾಸಕರಿಗೂ ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ತಂದು ಕೊಡುವುದು ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಸವಾಲ್ ಆಗಿ ತೆಗೆದುಕೊಂಡಿರುವ ಅವರು, ಹೆಚ್ಚಿನ ಮತಗಳನ್ನು ಕೈ ಅಭ್ಯರ್ಥಿಗೆ ಹಾಕಿಸಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಮಾಡಿದ್ದೇವೆ ಎಂಬ ಸಂದೇಶ ರವಾನಿಸಲು ತುದಿಗಾಲಲ್ಲಿ ನಿಂತಿದ್ದಾರೆ.
ಸುಮಾರು ಎರಡು ದಶಕಗಳ ಕಾಲ ಇಡೀ ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಗ್ರಾಮ ಪಂಚಾಯಿತಿಯಿಂದ ಆರಂಭವಾಗಿ ಸಂಸದರ ತನಕ ಬಿಜೆಪಿಯ ಹಿಡಿತದಲ್ಲಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾರು ಊಹೆ ಮಾಡದ ಪವಾಡವೊಂದು ನಡೆದು ಹೋಯಿತು. ಎರಡು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳಾದ ಡಾ,ಮಂಥರಗೌಡ ಮತ್ತು ಎ.ಎಸ್.ಪೊನ್ನಣ್ಣ ಗೆಲ್ಲುವ ಮೂಲಕ ಎರಡು ದಶಕಗಳ ಬಳಿಕ ಬಿಜೆಪಿ ಕೋಟೆಯನ್ನು ಛಿದ್ರ ಮಾಡಿದ್ದೇವೆ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆದ್ದು ಬಂದ ನಂತರ ಒಂದಷ್ಟು ಕೆಲಸ ಕಾರ್ಯಗಳು ಶುರುವಾಗಿದೆ. ಶಾಸಕರು ಸಮಯ ಸಿಕ್ಕಾಗಲೆಲ್ಲ ಜನರ ನಡುವೆ ಬೆರೆಯುವ ಮೂಲಕ ಜನರ ಕೈಗೆ ಸಿಗುತ್ತಾರೆ ಎಂಬುದನ್ನು ಗಟ್ಟಿ ಮಾಡಿದ್ದಾರೆ. ಈಗಾಗಲೇ ಜನ ಶಾಸಕರಾದ ಡಾ.ಮಂಥರಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರ ಬಗ್ಗೆ ಒಳ್ಳೆಯ ಮಾತನಾಡಲು ಆರಂಭಿಸಿದ್ದಾರೆ. ಅದರಲ್ಲೂ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಜನರೊಂದಿಗೆ ಬೆರೆಯುತ್ತಿದ್ದಾರೆ. ಎಲ್ಲ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾರೆ.
ಬಿಜೆಪಿ ಕೋಟೆಯಲ್ಲಿ ಕೈ ಕಮಾಲ್
ಜಿಲ್ಲೆಯಲ್ಲಿ ಏನೇ ಘಟನೆ ನಡೆದರೂ ಅಲ್ಲಿ ಶಾಸಕರ ಹಾಜರಿ ಇದ್ದೇ ಇದೆ. ಆ ಬಗ್ಗೆ ಜನ ವಲಯದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಹೀಗಾಗಿ ಅವರ ಜನಪ್ರಿಯತೆ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪರ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತವನ್ನು ತಂದುಕೊಡಬಹುದು ಎಂಬ ವಿಶ್ವಾಸ ಕಾಂಗ್ರೆಸ್ ವಲಯದಲ್ಲಿದೆ. ಆದರೆ ಪ್ರಜ್ಞಾವಂತ ಕೊಡಗಿನವರು ಮಾತ್ರ ವಿಧಾನಸಭಾ ಚುನಾವಣೆ ಮತ್ತು ಲೋಕ ಸಭಾ ಚುನಾವಣೆಯನ್ನು ಪ್ರತ್ಯೇಕವಾಗಿ ನೋಡುತ್ತಾ ಬಂದಿದ್ದಾರೆ. ಹೀಗಾಗಿ ಮೋದಿ ಅಲೆ ಜಿಲ್ಲೆಯಲ್ಲಿ ಕೆಲಸ ಮಾಡಬಹುದು ಎಂಬುದನ್ನು ತಳ್ಳಿಹಾಕಲಾಗದು.

ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾದ ಬಳಿಕ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವ ಕಾರಣ, ಬಿಜೆಪಿ ಭದ್ರಕೋಟೆಯನ್ನು ಛಿದ್ರಮಾಡಲೇ ಬೇಕೆಂದ ಹಠವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ತೊಟ್ಟಿದ್ದರಿಂದ ಕೊಡಗಿನತ್ತ ಸರ್ಕಾರ ಸ್ವಲ್ಪ ಮಟ್ಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಜಿಲ್ಲೆಯ ಜನರ ಕೆಲಸವನ್ನು ಮಾಡಿಸಲು ಜಿಲ್ಲೆಯ ಶಾಸಕರಿಗೆ ಅನುಕೂಲವಾಗಿದೆ.
ಕಾರ್ಯತಂತ್ರ ನಡೆಸುತ್ತಿರುವ ಕಾಂಗ್ರೆಸ್
ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿಯಿಂದ ಹಲವರನ್ನು ಕಾಂಗ್ರೆಸ್ ಗೆ ಸೆಳೆದುಕೊಂಡಿದ್ದಲ್ಲದೆ. ಕೆಲವೊಂದು ಗ್ರಾಪಂ ಆಡಳಿತವನ್ನು ಕಾಂಗ್ರೆಸ್ ವಶಕ್ಕೆ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದರ ಜತೆಗೆ ಈ ಬಾರಿಯ ಲೋಕಸಭಾ ಚುನಾವಣೆ ಇಬ್ಬರು ಶಾಸಕರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕೊಡಗಿನಿಂದ ತಮ್ಮ ವರ್ಚಸ್ಸಿನಿಂದ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ತಂದುಕೊಡಬೇಕಾಗಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬಾರದೆ ಹೋದರೆ ಜನ ಬಿಜೆಪಿ ಸಖ್ಯದಲ್ಲಿಯೇ ಇದ್ದಾರೆ ಎಂಬುದು ಸ್ಪಷ್ಟವಾಗಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ತಿರಸ್ಕರಿಸಲು ಹಲವು ಕಾರಣಗಳಿದ್ದವು. ಆದರೆ ಪಕ್ಷ ನೋಡಿ ಮತ್ತು ಮೋದಿ ನೋಡಿ ಮತ ನೀಡುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕಾಂಗ್ರೆಸ್ ನತ್ತ ಅವರ ಸೆಳೆದು ಅವರ ಮತವನನ್ನು ಕಾಂಗ್ರೆಸ್ ನತ್ತ ತಿರುಗಿಸುವ ಕೆಲಸವನ್ನು ಶಾಸಕರು ಮಾಡಬೇಕಾಗಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗೆದ್ದಿದ್ದೇ ಆದರೆ ಅವರು ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಾಮರ್ಥ್ಯ ತೋರಿಸಲಿರುವ ಶಾಸಕರು
ಬಹಳಷ್ಟು ಮತದಾರರು ಪಕ್ಷವನ್ನು ನೋಡಿ ಮತಹಾಕುವುದರಿಂದ ಅವರ ಮತಗಳು ಪಕ್ಷಗಳಿಗೆ ಖಾಯಂ ಆಗಿರುತ್ತದೆ. ಉಳಿದಂತೆ ಕೆಲವು ಮತದಾರರ ಕೊನೆಯ ಕ್ಷಣದವರೆಗೂ ಗೊಂದಲದಲ್ಲಿದ್ದು, ಯಾರಿಗೋ ಒಬ್ಬರಿಗೆ ಮತಹಾಕಿದರಾಯಿತು ಎಂದು ಆ ಕ್ಷಣಕ್ಕೆ ಯಾರಿಗೆ ಹಾಕಬೇಕೆನಿಸುತ್ತದೆಯೋ ಅವರಿಗೆ ಮತವನ್ನು ಹಾಕಿ ಬರುತ್ತಾರೆ. ಈ ಬಾರಿ ಜಿಲ್ಲೆಯ ಶಾಸಕರಿಗೆ ಸರ್ಕಾರದ ಗ್ಯಾರಂಟಿ ಯೋಜನೆ ಹೆಚ್ಚು ಮತ ತಂದು ಕೊಡುವಲ್ಲಿ ಸಹಕಾರಿಯಾದರೂ ಅಚ್ಚರಿಯಿಲ್ಲ.
ಸದ್ಯಕ್ಕೆ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಕರೆಯಿಸಿ ಸಮಾವೇಶ ಮಾಡಿಸಿ ಮತಬೇಟೆ ನಡೆಸಿರುವ ಶಾಸಕರಾದ ಡಾ.ಮಂಥರಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರು ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಪರ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಜಿಲ್ಲೆಯಿಂದ ಹೆಚ್ಚಿನ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬರುವಂತೆ ಮಾಡಿ ತಮ್ಮ ಶಕ್ತಿ ಸಾಮರ್ಥ್ಯವೇನು ಎಂಬುದನ್ನು ತೋರಿಸುವ ಉತ್ಸಾಹದಲ್ಲಿದ್ದಾರೆ.
ಶಾಸಕರು ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ?
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವುದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮಾಡುವುದು ಕೊಡಗಿನ ಶಾಸಕರಿಗೆ ಬಹುದೊಡ್ಡ ಸವಾಲ್ ಆಗಿದೆ. ಈಗಾಗಲೇ ಗೆಲ್ಲಿಸುವ ಕಾಯಕದಲ್ಲಿ ತೊಡಗಿರುವ ಅವರ ಕೈನ್ನು ಮತದಾರರು ಹಿಡಿಯುತ್ತಾರಾ? ಆ ಮೂಲಕ ಲೋಕ ಅಖಾಡದಲ್ಲೂ ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ? ಎಂಬುದು ಮುಂದೆ ಗೊತ್ತಾಗಲಿದೆ.












Click it and Unblock the Notifications