• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೆ.28ರಂದು ಮಾತ್ರವಲ್ಲ ಅನುದಿನವೂ ವಿಜ್ಞಾನದ ದಿನವೇ

By ಜಯನಗರದ ಹುಡುಗಿ
|

ಇವತ್ತು, ಫೆಬ್ರವರಿ 28 ರಾಷ್ಟ್ರೀಯ ವಿಜ್ಞಾನ ದಿನ. ಹಾಗೆಂದರೆ ಏನು ಅನ್ನುವವರಿಗೆ, 1928ರಲ್ಲಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿವಿ ರಾಮನ್) ಅವರು 'ರಾಮನ್ ಇಫೆಕ್ಟ್' ಅವಿಷ್ಕಾರ ಮಾಡಿದ ಅವಿಸ್ಮರಣೀಯ ದಿನ.

ಭೌತಶಾಸ್ತ್ರ ಓದಿದವರಿಗೆ ಅಥವಾ ಅದರಲ್ಲಿ ಅಪಾರ ಆಸಕ್ತಿ ಇದ್ದವರಿಗೆ ರಾಮನ್ ಇಫೆಕ್ಟ್ ಬಹು ಮುಖ್ಯವಾದ ಆವಿಷ್ಕಾರ. ಇದನ್ನ ಓದದೆ ಭೌತಶಾಸ್ತ್ರ ಕಲಿಕೆ ಮುಂದುವರಿಯುವುದೆ ಇಲ್ಲ.

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

ಇದೆಲ್ಲದರ ತಿಳಿವಳಿಕೆ ಬಂದಿದ್ದು ನನಗೆ ಚಿಕ್ಕವಳಿದ್ದಾಗ. ಅಪ್ಪ ಭಾರತೀಯ ವಿಜ್ಞಾನ ಮಂದಿರಕ್ಕೆ ಕೈಹಿಡಿದು ಕರೆತಂದು ಆ ದಿವಸ ನಡೆಯುವ 'ಓಪನ್ ಡೇ'ಯನ್ನು ತೋರಿಸಿದ್ದರು. ಬಹುಮುಖ್ಯವಾಗಿ ಏರೋಸ್ಪೇಸ್ ಡಿಪಾಟ್ಮೆಂಟ್ ಗೆ ಕರೆತಂದು ಅಲ್ಲಿದ್ದ ವಿಮಾನಗಳನ್ನೆಲ್ಲಾ ತೋರಿಸಿದ್ದರು.

ಎರಡು ವರ್ಷಕ್ಕೊಮ್ಮೆ ನಡೆಯುವ ಏರ್ ಶೋವನ್ನ ತಪ್ಪದೇ ತೊರಿಸುತ್ತಿದ್ದ ಅಪ್ಪ, ಅಪ್ಪನ ಕೆಲಸ ನನಗೆ ವಿಜ್ಞಾನದ ಮೇಲೆ ತುಂಬಾ ಆಸಕ್ತಿ ಬೆಳೆಯಲು ಸಾಧ್ಯವಾಯಿತು. ಇಂಜಿನಿಯರಿಂಗ್ ಓದುವ ಸಮಯದಲ್ಲಿ 8ನೇ ಸೆಮಿಸ್ಟರ್ ನ ಪ್ರಾಜೆಕ್ಟ್ ಮಾಡಲು ಭಾರತೀಯ ವಿಜ್ಞಾನ ಮಂದಿರದ ಅದೇ ಏರೋಸ್ಪೇಸ್ ಡಿಪಾರ್ಟ್ಮೆಂಟಲ್ಲಿ ಅವಕಾಶ ಸಿಕ್ಕಿತ್ತು.

ಮೊದಲ ಬಾರಿ ಅಲ್ಲಿ ಹೋದಾಗ ಅಲ್ಲಿದ್ದ ಪ್ರೊಫೆಸರ್ಗಳ ಹೆಸರಿನ ಬೋರ್ಡಿಗಿಂತ ಅವರ ಓದು, ವಿದ್ಯಾಭ್ಯಾಸದ ಸಾಲುಗಳೆ ದೊಡ್ಡದಾಗಿದ್ದವು. ಅವರುಗಳನ್ನು ಭೇಟಿಯಾಗಲಿಕ್ಕೆ ವಾರಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇರುತ್ತಿತ್ತು. ದೊಡ್ಡ ದೊಡ್ಡ ಯೂನಿವರ್ಸಿಟಿಯಲ್ಲಿ ಎರಡೆರಡು ಪಿ ಹೆಚ್ ಡಿ ಮಾಡಿ ಮುಗಿಸಿ ಬಂದಿದ್ದರ ಪರಿಣಾಮ ಎಲ್ಲರೂ ಅಲ್ಲಿ ಮಿತಭಾಷಿಗಳೇ.

ನಾನು ಮೊದಲ ದಿವಸ ಹೋದಾಗ ನನ್ನಿಬ್ಬರ ಸ್ನೇಹಿತರಿಗೆ ಇದರ ಬಗ್ಗೆ ಜಾಸ್ತಿ ಅರಿವಿತ್ತು. ಅವರ ಪ್ರಶ್ನೆಗಳಿಗೆ ಉತ್ತರಿವುದರಲ್ಲಿ ನನಗೆ ತಲೆತಿರುಗೋದೊಂದು ಬಾಕಿ ಇತ್ತು. ತುಂಬಾ ಸುಲಭವಾದ ವಿಷಯಗಳಲ್ಲಿ ಕ್ಲಿಷ್ಟಕರವಾದ ಪ್ರಶ್ನೆಗಳನ್ನ ಕೇಳಿದ್ದು ನಮ್ಮ ಪ್ರೊಫೆಸರ್ ಓಂಕಾರ್ ಸರ್. ಆ ಡಿಪಾರ್ಟ್ಮೆಂಟಲ್ಲಿ ಎಲ್ಲಾರಿಗಿಂತ ಅವರೊಟ್ಟಿಗೆ ಹೋಗೋದು ಮಾತಾಡೋದು ಸುಲಭ ಎಂದು ಹೇಳಿದ್ದ ಎಲ್ಲರಿಗೂ ಇವರೇ ಬೆವರಿಳಿಸಿ ಕಳಿಸಿದ್ದರು.

ಇನ್ನೂ ಆರು ತಿಂಗಳು ಹೇಗೆ ಕಳೆಯೋದು ಎಂದು ಯೋಚಿಸುತ್ತಾ ಐಐಎಸ್ಸಿ ಆವರಣವನ್ನ ಕಥೆಯನ್ನ ತಿಳಿದುಕೊಂಡು ಬರಲು ಸುತ್ತು ಹಾಕಿ ಬರಲು ತೆರಳಿದೆವು. ಇಡೀ ಬೆಂಗಳೂರಿನ ಮಧ್ಯದಲ್ಲಿ ಇಷ್ಟೊಂದು ಹಸಿರು, ದೊಡ್ಡ ಜಾಗ ಎಂದೆಲ್ಲಾ ಯೋಚಿಸುತ್ತಿದವಳಿಗೆ ಸಿಕ್ಕ ಕಥೆ ಆಶ್ಚರ್ಯಕರವಾಗಿತ್ತು. ನಿಮಗೆ ನೆನಪಿದ್ದರೆ ಐಐಎಸ್ಸಿಯನ್ನ ಟಾಟಾ ಇನ್ಸ್ಟಿಟ್ಯೂಟ್ ಎಂದು ಕರೆಯುತ್ತಾರೆ ಎಂಬ ವಿಷಯ ಗೊತ್ತೇ ಇದೆ.

ಕಥೆ ಆರಂಭವಾಗೋದು ಹೀಗೆ, 1893ರ ಕೊನೆಯಲ್ಲಿ ಯೊಕೊಹಮ ಹಾಗೂ ಶಿಕಾಗೋಗೆ ಹೋಗುವ ಹಡಗಿನಲ್ಲಿ ಎರಡು ದೊಡ್ಡ ಮನುಷ್ಯರ ಭೇಟಿಯಾಗುತ್ತದೆ. ಒಬ್ಬರು ಸ್ವಾಮಿ ವಿವೇಕಾನಂದ ಮತ್ತೊಬ್ಬರು ಜೆ ಎನ್ ಟಾಟಾ. ಸ್ವಾಮಿಗಳು ಶಿಕಾಗೋಗೆ ಧರ್ಮದ ಬಗ್ಗೆ ತೆರಳಲು ಹೋಗುತ್ತಿದ್ದರೆ, ಟಾಟಾರವರು ಭಾರತದ ಹಲವು ಭಾಗಗಳಿಂದ ಕಬ್ಬಿಣದ ಅದಿರನ್ನ ತೆಗೆದುಕೊಂಡು ಜರ್ಮನಿಯಲ್ಲಿ ಪರೀಕ್ಷೆ ಮಾಡಿಸಿ ಎಲ್ಲಿಯದು ಉತ್ತಮ ಅದಿರು ಎಂಬುದನ್ನು ತಿಳಿದು, ಉಕ್ಕಿನ ಕಾರ್ಖಾನೆ ಎಲ್ಲಿ ಸ್ಥಾಪಿಸಬೇಕೆಂಬ ವಿಷಯ ಅರಿಯಲು ತೆರಳುತ್ತಿದ್ದರು.

ಇಬ್ಬರ ಕುಶಲೋಪರಿಯ ನಂತರ ಸ್ವಾಮಿಗಳು ಹೇಳಿದ್ದು, "ನಮ್ಮದನ್ನ ಅವರು ಚೆನ್ನಾಗಿದೆ ಎಂದು ಹೇಗೆ ಒಪ್ಪಿಕೊಳ್ಳುತ್ತಾರೆ? ಚೆನ್ನಾಗಿದ್ದರೂ ಇಲ್ಲಿಗೆ ಬಂದು ಅವರು ಬಂಡವಾಳ ಮಾಡಿಕೊಳ್ಳುತ್ತಾರೆ ಹೊರತು, ನಮ್ಮದೇನು ನಡೆಯುವುದಿಲ್ಲ. ಇದೆಲ್ಲದಕ್ಕೂ ನಮ್ಮದೇ ಆದ ಒಂದು ಸಂಸ್ಥೆ ಇರಬೇಕು ನೋಡಿ" ಎಂದಷ್ಟೆ ತಿಳಿಸಿ ಸುಮ್ಮನಾದರು. ಇದನ್ನೇ ಯೋಚಿಸುತ್ತಿದ್ದ ಟಾಟಾರವರು 1898ರಲ್ಲಿ ಸ್ವಾಮಿಗಳಿಗೆ ಪತ್ರ ಬರೆದು ಈ ವಿಷಯಕ್ಕೆ ಅವರು ದುಡ್ಡು ಕೊಡಲು ಸಿದ್ಧರೆಂದು ತಿಳಿಸಿದರು. ಸ್ವಾಮಿಗಳು ಜಾಗಕ್ಕೆ ಮೈಸೂರಿನ ಮಹಾರಾಜರನ್ನ ಸಂಪರ್ಕಿಸಲೂ ಹೇಳಿದರು. ಅದರೆ ಇವರಿಗೆ ಇದು ಬಾಂಬೆಯಲ್ಲಿಯೇ ಆಗಬೇಕೆಂಬ ಆಸೆ.

ಇನ್ನ್ಯಾರೋ ಆಳುತ್ತಿದ್ದ ಸಂದರ್ಭದಲ್ಲಿ ಬೇರೆಯವರ ಮಾತು ಕೇಳಬೇಕಾದ ಪರಿಸ್ಥಿತಿಯಿದ್ದರಿಂದ ಲಾರ್ಡ್ Curzonನ ಕೇಳಬೇಕಾಯಿತು. ಆ ಮನುಷ್ಯ ನಕ್ಕು ಅಪಹಾಸ್ಯ ಮಾಡಿದ್ದ. ಭಾರತೀಯರಿಗೆ ಇವೆಲ್ಲ ತಿಳಿಯುವಷ್ಟು ಬುದ್ದಿವಂತಿಕೆಯಿಲ್ಲ ಅಥವಾ ತಿಳಿಸಲು ಬರುವುದಿಲ್ಲ ಎಂದೆಲ್ಲಾ ಮಾತಾಡೋವಾಗ ಟಾಟಾರವರು ಹಠ ಬಿಡದೆ ಇದನ್ನ ಮುಂದುವರಿಸುತ್ತಲೇ ಇದ್ದರು.

ಇವರ ನಿಧನಾನಂತರ ಅಂತೂ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಮಹಾರಾಜ ಕೃಷ್ಣರಾಜ ಒಡೆಯರ್ ಹಾಗೂ ಅವರ ತಾಯಿ ವಾಣಿವಿಲಾಸ ಕೆಂಪನಂಜಮ್ಮಣ್ಣಿಯವರ ಸಹಾಯದಿಂದ 371 ಎಕರೆಯಲ್ಲಿ 1909ರಲ್ಲಿ ಈ ಸಂಸ್ಥೆ ಶುರುವಾಯಿತು. ಈ ಕಥೆ ಕೇಳಿ ಅಬ್ಬಾ ಎಂದುಕೊಂಡೆ. ನಮ್ಮ ಸ್ವಾಯತ್ತತ್ತೆಯ ಸಂಕೇತ ಎಂದು ಖುಶಿಯಾಯಿತು. ಇಲ್ಲೇ ಸಿವಿ ರಾಮನ್ ಓಡಾಡಿದ್ದು, ದೊಡ್ಡ ದೊಡ್ಡವರೆಲ್ಲಾ ನಡೆದ ದಾರಿ ಎಂದು ತಿಳಿದು ಖುಷಿಯಾಯಿತು.

ಕೆಲಸ ಶುರುವಾಯ್ತು ನೋಡಿ. ಆಗ ಗೊತ್ತಾಗಿದ್ದು ನಮ್ಮ ಬುದ್ಧಿವಂತಿಕೆಗಳು. ಹೇಳಿದ ಕೆಲಸವನ್ನ ಯಾವ ಭಾಷೆಯಲ್ಲಿ ಕೋಡ್ ಬರೆಯೋದು ಎಂದು ಯೋಚಿಸಿ, ಅದಕ್ಕೆ ಬೇಕಾದ dependencies download ಮಾಡಿಕೊಳ್ಳೋಷ್ಟರಲ್ಲಿ ಪಕ್ಕದಲ್ಲಿಯೇ ಕೂತಿದ್ದ ಪಿ ಎಚ್ ಡಿ ಹುಡುಗ ಕೆಲಸ ಮಾಡಿ ಮುಗಿಸುತ್ತಿದ್ದ.

ಗಂಡಸರೇ ತುಂಬಿದ ಸಾಮ್ರಾಜ್ಯದಲ್ಲಿ ಒಮ್ಮೊಮ್ಮೆ ಕೆಲಸ ಮಾಡೋದು ಕಷ್ಟವಾಗುತ್ತಿತ್ತು. ತಡರಾತ್ರಿಯಲ್ಲಿ ನಡೆಯುವ ಸುಮಾರು ಕೆಲಸಗಳಲ್ಲಿ ನಾ ಭಾಗಿಯಾಗಲು ಸಾಧ್ಯವಾಗುತ್ತಿರಲ್ಲಿಲ್ಲ. ಸಂಜೆ 7 ಘಂಟೆಯ ನಂತರದ ಮೆಜೆಸ್ಟಿಕ್ ಭಯಭೀತಳನ್ನಾಗಿ ಮಾಡಿಸಿತ್ತು ಎಂದರೆ ತಪ್ಪಿಲ್ಲ. ನಮ್ಮ ಪ್ರಾಜೆಕ್ಟ್ ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದ್ದ ಹಸಿರು ತಾಣಗಳನ್ನ ಪತ್ತೆ ಹಚ್ಚೋದು. ಕೃತಕ ಉಪಗ್ರಹಗಳು ಕಳಿಸಿದ ಚಿತ್ರದಿಂದ ನಮ್ಮ image processing ಅಲ್ಗಾರಿಥಂನಿಂದ ಈ ಕೆಲಸ ಮಾಡಬೇಕಿತ್ತು.

ಬೆಂಗಳೂರಿನಲ್ಲಿ 10 ವರ್ಷದಲ್ಲಿ ಸುಮಾರು ಕಡೆ ಹಸಿರು ನಾಶವಾಗಿದೆ ಎಂಬುವ ಕಟುಸತ್ಯ ತಿಳಿಯಿತು. ದಂಗಾಗಿ ಕೂತ್ವಿ. ಈ ಥರಹದ ಜೀವ ಜೀವನಕ್ಕೆ ಉಪಯೋಗಕರವಾದ ಸುಮಾರು ಆವಿಷ್ಕಾರಗಳು ದಿನನಿತ್ಯ ಇಲ್ಲಿ ನಡೆಯುತ್ತದೆ. ಇಲ್ಲಿನ ಎಲ್ಲಾ ಲ್ಯಾಬ್ ಗಳು, ಕ್ಯಾಂಟೀನ್ ಗಳು ಒಂದೊಂದು ಕಥೆ ಹೇಳತ್ತೆ. 'ಭಾರತ ರತ್ನ' ಸಿಎನ್ಆರ್ ರಾವ್ ಅವರನ್ನು. ಯುಆರ್ ರಾವ್ ಅವರನ್ನು, ಕಲಾಮ್ ರನ್ನು ನಮಸ್ಕರಿಸಿ ಮಾತಾಡಿಸೋಕೆ ಸಾಧ್ಯವಾದದ್ದು ಈ ಜಾಗದಲ್ಲಿಯೇ. ರೊದ್ದಂ ನರಸಿಂಹರಂತೂ ಮಕ್ಕಳ ಬಳಿಯೇ ಬಂದು ಏನು ಕೆಲಸ ಮಾಡುತ್ತಿದ್ದೀರ ಎಂದು ಕೇಳುವಷ್ಟು ಹತ್ತಿರವಾಗುತ್ತಿದ್ದರು.

ಅವರೊಮ್ಮೆ ಭಾಷಣದಲ್ಲಿ ಹೇಳಿದ ಮಾತು 'ವಿಜ್ಞಾನದಲ್ಲಿ ಇರುವುದೆಲ್ಲವೂ ಪ್ರಾಚೀನ ಭಾರತೀಯರಿಗೆ ಗೊತ್ತಿತ್ತು ಮತ್ತು ವಿಜ್ಞಾನ ಭಾರತೀಯರಿಗೆ ಗೊತ್ತಿರಲಿಲ್ಲ ಎಂಬ ಅತಿರೇಕದ ಎರಡೂ ವಾದಗಳು ಅಪಾಯಕಾರಿ' ಅನನ್ಯವೇ ಸರಿ.

ಭಾರತೀಯ ವಿಜ್ಞಾನದ ದಿವಸ ಈ ಮಾತನ್ನು ನೆನೆದು ಒಮ್ಮೆಯಾದರೂ ಈ ಪುಣ್ಯ ಸ್ಥಳಕ್ಕೆ ಭೇಟಿ ಕೊಡಿ. ಆ ದಿವಸ ಎಲ್ಲಾ ಲ್ಯಾಬ್ ಗಳನ್ನು ಜನರಿಗೆ ತೆರೆದಿರುತ್ತಾರೆ. ನನ್ನ ಈ ಒಂದು ವರ್ಷದ ಅನುಭವ ದೂರದ ಬಾರ್ಸಿಲೋನಾಕ್ಕೂ ಕರೆದೊಯ್ಯಿತ್ತು. ಕೆಲಸಗಳು ನನ್ನನ್ನ ಮರ್ಯಾದೆಯಾಗಿ ಕಂಡಿತು ಹಾಗು ನಾನು ಮಾಡುವ ಯಾವ ಸಾಧನೆಯೂ ದೊಡ್ಡದಲ್ಲ ಎಂದು ತೋರಿಸಿತು. ವಿಜ್ಞಾನ ಕಲಿಯುವವರು ಕಡ್ಡಾಯವಾಗಿ ಹೋಗಲೇಬೇಕಾದ ಜಾಗ, ಹೋಗುತ್ತೀರಾ ಅಲ್ವಾ?

ನಾನು ಮತ್ತು ಹೇಳಿದ ಹಾಗೆ ಕೆಲಸ ಮಾಡುವ ಅಲೆಕ್ಸಾ!

ಸುಂದರ ಮುಂಜಾವಿನ ಮೌನದಲಿ ಸಿಕ್ಕಿದ್ದು ಬರೀ ಸದ್ದು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On 28th February National Science Day, Don't forget to visit Indian Institute of Science (IISc), Bengaluru with your kids, so that they get to know more about science. On this day Sir CV Raman invented Raman Effect. Meghana Sudhindra recalls the history of IISc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more