• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಪುಸ್ತಕೋತ್ಸವವೆಂಬ ಹಬ್ಬ, ಕಲಿಕೆಯ ಮಹಾವಿದ್ಯಾಲಯ

By ಜಯನಗರದ ಹುಡುಗಿ
|

ದಸರೆಯ ಕಡೆಯ ನಾಲ್ಕು ದಿವಸದ ಲಾಂಗ್ ವೀಕೆಂಡ್ ನ ಮಂಪರಿನಲ್ಲಿದ್ದ ಬೆಂಗಳೂರಿನ ಮಂದಿಗೆ ಪುಸ್ತಕೋತ್ಸವ ಒಂದು ಓಯಾಸಿಸ್ ಇದ್ದಂಗಿತ್ತು. ಹಳೇ ಬೆಂಗಳೂರಿಗರಿಗೆ ಪ್ರತಿ ಬಾರಿ ಈ ಲಾಂಗ್ ವೀಕೆಂಡ್ ಬಂದಾಗ ಎಲ್ಲಿ ಹೋಗಲೂ ಗೊತ್ತಾಗುವುದಿಲ್ಲ. ನಮ್ಮದೇನಿದ್ರು ಜಯನಗರ - ಕತ್ತರಿಗುಪ್ಪೆ - ಮಲ್ಲೇಶ್ವರ ಅಬ್ಬಬ್ಬ ಎಂದರೆ ತುಮಕೂರು. ಇಲ್ಲಷ್ಟೆ ಬಂಧುಬಾಂಧವರು ಇರುವ ಕಾರಣ ಲಾಂಗ್ ವೀಕೆಂಡ್ ಗಳಿಗೆ ನಮ್ಮಲ್ಲಿ ಅಷ್ಟು ಮಹತ್ವವಿರುವುದಿಲ್ಲ.

ಅಪ್ಪನಂತ ಅಪ್ಪನೇ ಹೇಗೋ ಸಾಗರಕ್ಕೆ ಹೋಗಿ ಬಂದರೂ ನಾನು ಬೆಂಗಳೂರೆ ಸ್ವರ್ಗ ಎಂದು ಇಲ್ಲಿದ್ದಾಗ ಕಂಡಿದ್ದೇ ಪುಸ್ತಕೋತ್ಸವ ಎಂಬ ಪುಸ್ತಕ ಓದುಗರ ದೊಡ್ಡ ಹಬ್ಬ. 10%, 20% ಡಿಸ್ಕೌಂಟ್ ಅನ್ನುವುದಕ್ಕಿಂತ ಅಷ್ಟೊಂದು ಪುಸ್ತಕಗಳು ಒಂದೇ ಕಡೆಗೆ ಸಿಗುತ್ತವಲ್ಲ ಎಂಬ ಖುಷಿ.

ಸೆ. 30ಕ್ಕೆ 'ಜಯನಗರದ ಹುಡುಗಿ' ಪುಸ್ತಕ ಬಿಡುಗಡೆ; ಮೇಘನಾ ಮನದ ಮಾತು

ಪ್ರತಿ ಬಾರಿ ಹೋದಾಗ ಒಂದು ಪಟ್ಟಿ ಮಾಡಿಕೊಂಡು ಪುಸ್ತಕಗಳನ್ನ ಖರೀದಿ ಮಾಡಬಾರಬೇಕೆಂದು ಹೊರಡುತ್ತಿದ್ದೆ. ಪ್ರತಿ ಬಾರಿಯ ಪುಸ್ತಕೋತ್ಸವದಲ್ಲಿಯೂ ತೇಜಸ್ವಿಯವರ ಪುಸ್ತಕ ಕಡ್ಡಾಯವಾಗಿ ಪಟ್ಟಿಯಲಿರುತ್ತಿತ್ತು. ನಮ್ಮ ಪೀಳೀಗೆಯವರನ್ನ ಇನ್ನೂ ಕನ್ನಡದ ಓದಿಗೆ ಸೆಳೆದಿಟ್ಟುಕೊಂಡವರು ತೇಜಸ್ವಿಯವರೆ. ಸುಮಾರು ಎಲ್ಲಾ ಪುಸ್ತಕ ಮಳಿಗೆಯಲ್ಲೂ ಒಂದಿಬ್ಬರು "ತೇಜಸ್ವಿ ಬುಕ್ಸ್ ಇದೆಯಾ" ಎಂದು ಕೇಳುವವರೆ. ತೇಜಸ್ವಿಯವರ ಪುಸ್ತಕಗಳು ರಿಯಾಯಿತಿ ದರದಲ್ಲಿ ಸಿಕ್ಕರೆ ಪೂರ್ತಿ ಸೆಟ್ ಬೇಕು ಎಂದು ಪುಸ್ತಕ ಓದುಗರ ಗುಂಪಲ್ಲಿ ಎಷ್ಟು ಗಲಾಟೆ ಶುರುವಾಗುತ್ತದೆ ಎಂದರೆ, ಅದನ್ನ ಪುರ್ತಿ ಓದುವರೋ ಬಿಡುವರೋ ಗೊತ್ತಿಲ್ಲ ಆದರೆ ಅದಕ್ಕೊಂದು ಈಗಲೂ ಬೆಲೆ ಇದೆ. ಇದು ಪುಸ್ತಕೋತ್ಸವದಲ್ಲಿಯೂ ಇತ್ತು.

ಈ ಉತ್ಸವಗಳಲ್ಲಿ ಕನ್ನಡದಲ್ಲಿ ಎಷ್ಟು ಪುಸ್ತಕಗಳು ಈ ವರ್ಷ ಎಷ್ಟು ಬಂದಿದೆ, ಯಾವುದು ಪಾಪ್ಯುಲರ್ ಎಂಬ ಸತ್ಯವೂ ಗೊತ್ತಾಗುತ್ತದೆ.

ದಸರಾ ಹಬ್ಬದ ಸಂಭ್ರಮಕ್ಕೆ ಕಥೆ ಹೇಳುವ ಬೊಂಬೆಗಳೇ ಭೂಷಣ

ಅಲ್ಲಲ್ಲಿ ಚಿಕ್ಕಮಕ್ಕಳನ್ನ ಕರೆತಂದು ಕನ್ನಡ ಪುಸ್ತಕಗಳನ್ನ ಅವರಿಗೆ ಪರಿಚಯಿಸುವ ಪರಿ ನನ್ನ ಅಪ್ಪ ಅಮ್ಮನ್ನನ್ನು ನೆನಪಿಸಿತು. ಆಗೆಲ್ಲ ಪುಸ್ತಕ ಮೇಳಗಳಿರುತ್ತಿದ್ದದ್ದು ಕಡಿಮೆ. ಅಮ್ಮ ಮತ್ತು ಅಪ್ಪ ಸಾಹಿತ್ಯ ಪರಿಷತ್ತಿಗೋ ಅಥವಾ ಪುಸ್ತಕದ ಅಂಗಡಿಗೋ ಕರೆದುಕೊಂಡು ಹೋಗಿ ಪುಸ್ತಕಗಳ ಪರಿಚಯ ಮಾಡಿಸುತ್ತಿದ್ದರು. ಅಲ್ಲಿರುವ ಎಲ್ಲಾ ಪುಸ್ತಕಗಳನ್ನ ಇದನ್ನ ಬರೆದವರು, ಯಾವುದರ ಬಗ್ಗೆ ಎಂದು ಸಂಕ್ಷಿಪ್ತವಾಗಿ ತಿಳಿಸುತ್ತಿದ್ದರು. ಇಲ್ಲೂ ಅದೇ ನಡೆಯುತ್ತಿದ್ದದ್ದು ನೋಡಿ ಖುಷಿಯಾಯಿತು. ಚಿಕವೀರರಾಜೇಂದ್ರ ಪುಸ್ತಕವನ್ನ ಚಿಕ್ಕವೀರರಾಜೇಂದ್ರ ಎಂದು ಓದುತ್ತಿದ್ದ ಮಗುವನ್ನ ಸರಿಪಡಿಸಿ ಅದನ್ನ ಬರೆದವರ ಬಗ್ಗೆ ಮಾಹಿತಿ ಕೊಡುತ್ತಿದ್ದ ಅಪ್ಪ ಅಮ್ಮನನ್ನ ಕಂಡು ನನಗೆ ಕಣ್ಣುತುಂಬಿಬಂತು. ಇದು ಪುಸ್ತಕೋತ್ಸವಗಳಲ್ಲಿ ನಡೆಯುವ ಒಂದು ಕಲಿಕೆ.

ಸಾವಣ್ಣ ಪ್ರಕಾಶನದ ಜಮೀಲ್ ಸರ್ ಒಂದಷ್ಟು ವರುಷಗಳ ಹಿಂದೆ ಜೆಪಿ ನಗರದಲ್ಲಿ ನಡೆದ ಇದೇ ಥರದ ಪುಸ್ತಕೋತ್ಸವದಲ್ಲಿ ಜೋಗಿ ಸರ್ ಸಿಕ್ಕಿ ಮಾತಾಡಿದ್ದು, ನಂತರ ಆದ ಬದಲಾವಣೆಗಳನ್ನ ನೆನಪಿಸಿಕೊಳ್ಳುತ್ತಿದ್ದರು. ಕೆಲವಾರು ತಿರುವುಗಳು ನಮ್ಮ ಜೀವನದಲ್ಲಿ ಎಲ್ಲೆಲ್ಲಿ ಸಿಗುತ್ತದೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಪುಸ್ತಕೋತ್ಸವದಲ್ಲಿ ವೈವಿಧ್ಯಮಯ ಸ್ಟಾಲುಗಳೂ ಸಿಗುತ್ತದೆ. ಕನ್ನಡ ಪುಸ್ತಕಗಳ ಮಳಿಗೆಗಳಂತೂ ಬಹಳ ಚೆಂದವಾಗಿ ಎಲ್ಲರನ್ನೂ ಆಕರ್ಷಿಸಿ ವ್ಯಾಪಾರದಲ್ಲಿ ತಲ್ಲೀನವಾಗಿದ್ದವು. ಸ್ವತಃ ಪ್ರಕಾಶಕರೇ ನಿಂತು ಎಲ್ಲರನ್ನೂ ಮಾತಾಡಿಸುತ್ತಿದ್ದರು. ಕೆಲವೊಮ್ಮೆ ಲೇಖಕರನ್ನೂ ಕರೆತರುತ್ತಿದ್ದರು.

ಕನಸುಗಳು ನನಸಾಗುತ್ತವೆ, ಕಾಣುವ ಧೈರ್ಯವಿದ್ದರೆ ಮಾತ್ರ!

ಇದು ಒಂದು ಬಹುದೊಡ್ಡ ಬದಲಾವಣೆ. ಇಲ್ಲಿ ಮಳಿಗೆಗಳಲ್ಲಿ ಕೆಲವೊಂದು ಹೊಸ ಲೇಖಕರ ಪುಸ್ತಕಗಳನ್ನ ಹುಡುಕಿಕೊಂಡು ಬಂದಿದ್ದರು. ಎಷ್ಟೋ ವರ್ಷ ನಾನು ಲಿಸ್ಟ್ ಹಾಕಿಕೊಂಡು ಬಂದು, ಲೇಖಕರನ್ನ ಭೇಟಿ ಮಾಡಿ ಸಹಿ ಪಡೆದು ಹೋಗುತ್ತಿದ್ದೆ. ಈಗ ನನ್ನ ಪುಸ್ತಕವೂ ಕೆಲವರ ಲಿಸ್ಟ್ನಲ್ಲಿದ್ದು ಬಂದು ಸಹಿ ಮಾಡಿಸಿಕೊಂಡು ಹೋಗಿದ್ದು ಕನಸು ನನಸಾದ ಕ್ಷಣಗಳೇ.

ಪುಸ್ತಕೋತ್ಸವಗಳಲ್ಲಿ ಹೊಸದಾಗಿ ಕಾಣಿಸುತ್ತಿದ್ದದ್ದು, ಈ ಧಾರ್ಮಿಕ ಪುಸ್ತಕ ಮಳಿಗೆಗಳು. ಒಂದು ಕಡೆ ಕುರಾನ್ ಕಲಿಯಿರಿ, ಬೈಬಲ್ ಬಗ್ಗೆ ತಿಳಿಯಿರಿ, ಭಗವದ್ಗೀತಾ ಬಗ್ಗೆ ತಿಳಿದುಕೊಳ್ಳಿರಿ, ವೇದಾಧ್ಯಯನ ಪಾಠ ಮಾಡಿ, ವಿವೇಕಾನಂದ ನುಡಿಮುತ್ತುಗಳು ಎಲ್ಲವೂ ವಿಪರೀತ ಜಿದ್ದಿಗೆ ಬಿದ್ದಂತೆ ತಮ್ಮನ್ನ ತಾವು ಪ್ರಮೋಟ್ ಮಾಡಿಕೊಳ್ಳುತ್ತಿದ್ದರು. ಬುಲ್ಲಿಷ್ ಅಂದರೂ ತಪ್ಪಲ್ಲ. ಉಚಿತವಾಗಿ ಕೆಲವಾರು ಪುಸ್ತಕಗಳನ್ನು ನೀಡುತ್ತಿದ್ದರು. ಅಲ್ಲಿ ಜನ ಸಂದಣಿ ವಿಪರೀತವಾಗಿತ್ತು. ಒಂದೊಮ್ಮೆ ಪುಸ್ತಕ ಮೇಳದಲ್ಲಿ ಅಲ್ಲಾಹ್, ಜೀಸಸ್, ರಾಮನ ಭಕ್ತರ ಭಕ್ತಿಯ ಪರಕಾಷ್ಠೆ ಲೌಡ್ ಸ್ಪೀಕರಿನ ತನಕ ಮುಟ್ಟಿತ್ತು. ಈ ಬಾರಿ ಸದ್ಯ ಅವೆಲ್ಲಾ ಇರಲ್ಲಿಲ್ಲ.

ನಮ್ಮ ಸುತ್ತಮುತ್ತಲೇ ಇರುತ್ತವೆ ಪಾಸಿಟಿವ್ ಕಥೆಗಳು, ನೋಡಲು ಕಣ್ಣಿರಬೇಕು

ಕನ್ನಡ ಲೇಖಕ ಜೋಗಿಯವರ ಪುಸ್ತಕ ಸುಮಾರು ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಕಾಣುತ್ತಿತ್ತು. ಮುಂದಿನ ಸಲ "ಜೋಗಿ ಸೆಟ್" ಮಾರಾಟಕ್ಕೆ ಬರುತ್ತದೇನೋ ಕಾಣೆ. ಈಗಾಗಲೇ ಕರಣಂ ಸೆಟ್ ಎಂದು ಕಂಡು ಖುಷಿಯಾಯ್ತು. ಲೇಖಕರು ಇಷ್ಟೊಂದು ಪಾಪುಲರ್ ಆಗಿದ್ದನ್ನ ಕಂಡು ಸಂತೋಷವಾಯಿತು. ಈಗಲೂ ತೇಜಸ್ವಿ, ಕಾಯ್ಕಿಣಿ, ಜೋಗಿ, ಪ್ರಕಾಶ್ ರೈ, ಕರಣಂ, ಭೈರಪ್ಪ ಇವಷ್ಟು ಲಾಟುಗಟ್ಟಲೆ ಪುಸ್ತಕ ತೆಗೆದುಕೊಂಡ ಲೇಖಕರ ಪುಸ್ತಕಗಳು, ಹೊಸ ಲೇಖಕರು ಇನ್ನೂ ಕಣ್ಣು ಬಿಡುತ್ತಿದ್ದಾರೆ.

ಇಂಗ್ಲೀಷಿನಲ್ಲಿ ದೊಡ್ಡ ದೊಡ್ಡ ಪಬ್ಲಿಕೇಷನ್ ಕಂಡರೂ ನನಗೆ ಖುಷಿಯಾಗಿದ್ದು ಅಮರ ಚಿತ್ರ ಕಥೆ ಮಳಿಗೆಯನ್ನ ನೋಡಿ ಮಾತ್ರ. ಸುಪ್ಪಾಂಡಿ, ಕರ್ಣ, ಭೀಷ್ಮ ಎಲ್ಲಾ ಸಿಕ್ಕರು ಖುಷಿಯಿಂದ ತೆಗೆದುಕೊಂಡು ಬಂದೆ.

ಊಟದ ಮಳಿಗೆ, ಬಟ್ಟೆಗಳ ಮಳಿಗೆ ಎಂದಿನಂತೆ ತುಂಬಿಕೊಂಡಿದ್ದವು, ಹೊಸದನ್ನ ಕೊಳ್ಳಲಿಕ್ಕಲ್ಲ ಆದರೆ ಉಚಿತ ಸ್ಯಾಂಪಲ್ಲಿಗಾಗಿ. ಮೊದಲ ಬಾರಿ ಅಷ್ಟೊಂದು ರಶ್ಶಿನಲ್ಲಿ ಸೇಫ್ಟಿ ಪಿನ್ ಬಳಸಬೇಕಾಗಿರಲ್ಲಿಲ್ಲ. ಎಲ್ಲಾ ಸಂಯಮದಲ್ಲಿತ್ತು. ಭರ್ತಿ 15 ಪುಸ್ತಕಗಳು ಪುಸ್ತಕೋತ್ಸವದ ನೆನಪಿನಲ್ಲಿ ಕಪಾಟು ಸೇರಿದೆ. ಅಮ್ಮ ಎಂದಿನಂತೆ ಅಷ್ಟೊಂದು ಪುಸ್ತಕಕ್ಕೆ ಜಾಗ ಎಲ್ಲಿ ಮಗಳೇ ಎಂದು ಹೇಳುತ್ತಿದ್ದಾಗಲೇ ಜೋಗಿ ಸರ್ ಫೋನ್ ಮಾಡಿ "ಏನ್ ಗೊತ್ತಾ ರಾಜೇಶ್ವರಿ ತೇಜಸ್ವಿ ಜಯನಗರದ ಹುಡುಗಿ ಓದಿದ್ರಂತೆ, ಚೆನ್ನಾಗಿದೆ ಅಂದ್ರು ನೋಡು" ಅಂತ ಕರೆ ಮಾಡಿ ಹೇಳಿದ್ರು. ಅಂತೂ ಪುಸ್ತಕೋತ್ಸವ ಮರೆಯಲಾರದ ನೆನಪುಗಳನ್ನ ತಂದಿದೆ. ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.

English summary
Bengaluru Book Festival 2018 attracted huge number of readers from all parts of Karnataka. It was showcase to the fact that reading habit has not come down in the era of digital world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X