• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್. ಷಡಕ್ಷರಿಯವರ ಕ್ಷಣ ಹೊತ್ತು ಆಣಿ ಮುತ್ತು

By Staff
|
ಹೊತ್ತು ಹಾಗೂ ಮುತ್ತು ಎಂತಹ ಸುಂದರ ಶಬ್ದಗಳು! ಸ್ವಾತಿ ಮಳೆಯ ಹನಿ ಬಾಯಿತೆರೆದ ಸಿಂಪಿನಲ್ಲಿ ಬಿದ್ದಾಗ ಮುತ್ತು ಸಿದ್ಧವಾಗುತ್ತದೆ ಎಂಬುದು ಕವಿಸಮಯ. ಇದೊಂದು ರೂಪಕ ಕೂಡ. ಆಕಾಶದಿಂದ ಬಿದ್ದ ಮಳೆಯ ಹನಿಯೆಲ್ಲ ಸ್ವಾತಿಯ ಹನಿಯಲ್ಲ. ಸಮುದ್ರದ ಸಿಂಪೆಲ್ಲ ಮುತ್ತು ತಂದು ಕೊಡುವದಿಲ್ಲ. 'ಹತ್ತು ಹಡೆಯುವ ಬದಲು ಒಂದು ಮುತ್ತು ಹಡೆ' ಎಂಬ ಗಾದೆ ಕನ್ನಡದಲ್ಲಿದೆ. ಮುತ್ತು ಪಡೆಯಲು ಹೊತ್ತು ಕೂಡಿ ಬರಬೇಕು.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಒಬ್ಬ ಪದವೀಧರ ಇಂಜಿನಿಯರ್ ತನ್ನ ಉದ್ಯಮ ಬಿಟ್ಟು ಹೊಟೆಲ್ ವ್ಯವಸಾಯದ ಕಡೆಗೆ ಒಲಿಯುತ್ತಾನೆ. ಯಶಸ್ಸನ್ನೂ ಧನವನ್ನೂ ಸಂಪಾದಿಸುತ್ತಾನೆ. ಜೊತೆಗೆ ಓದುವ ಹುಚ್ಚು ಬೇರೆ. ಶಾಲೆಯ ಎಳೆಯ ಮಕ್ಕಳನ್ನು ಕೂಡಿಸಿ ವ್ಯಕ್ತಿ ವಿಕಸನದ ಕಮ್ಮಟಗಳನ್ನು ನಡೆಸುತ್ತಾನೆ. ದೇಶವಿದೇಶದ ಕತೆ ಉಪಕತೆಗಳನ್ನು ಹೇಳುತ್ತ ಮಕ್ಕಳನ್ನು ರಂಜಿಸುತ್ತಾನೆ. ಇಂಥದೊಂದು ವ್ಯಕ್ತಿವಿಕಸನ ಶಿಬಿರಕ್ಕೆ ಕನ್ನಡ ದಿನಪತ್ರಿಕೆಯ ಸಂಪಾದಕರೊಬ್ಬರು ಅತಿಥಿಯಾಗಿ ಬಂದಿರುತ್ತಾರೆ. ಅವರು ಈ ಇಂಜಿನಿಯರ್‌ನ ಪ್ರತಿಭೆ ಹಾಗೂ ಪ್ರತಿಬದ್ಧತೆ ಕಂಡು ಪ್ರಭಾವಿತರಾಗುತ್ತಾರೆ. ಒಂದು ದಿನ ಫೊನ್ ಮಾಡುತ್ತಾರೆ. 'ನೀವು ನಮ್ಮ ಪತ್ರಿಕೆಗೆ ಒಂದು ಅಂಕಣವನ್ನು ಏಕೆ ಪ್ರಾರಂಭಿಸಬಾರದು?' ಎನ್ನುತ್ತಾರೆ. ಆಗ ಉತ್ತರ ಬರುತ್ತದೆ, 'ಸರ್, ನೀವು ರಾಂಗ ನಂಬರ್‌ಗೆ ಫೋನ್ ಮಾಡುತ್ತಿರುವಿರಿ. ಯಾವದೋ ಲೇಖಕನಿಗೆ ಹೇಳುವ ಬದಲು ಒಬ್ಬ ಹೊಟೆಲ್ ಉದ್ಯಮಿಗೆ ಅಂಕಣ ಲೇಖನ ಬರೆಯಲು ಕೇಳುತ್ತಿದ್ದೀರಿ. ನಾನು ಒಂದೆರಡು ಲೇಖನ ಬರೆದಿರಬಹುದು, ಮಕ್ಕಳಿಗಾಗಿ ವ್ಯಕ್ತಿವಿಕಸನ ಕಮ್ಮಟ ನಡೆಸಿರಬಹುದು. ಆದರೆ ನಾನು ವೃತ್ತಿಯಿಂದ, ಪ್ರವೃತ್ತಿಯಿಂದ ಲೇಖಕನಲ್ಲ. ಪ್ರತಿದಿನ ಅಂಕಣ ಬರೆವ ಬಂಡವಾಳ, ಓದು, ಅನುಭವ ನನಗಿಲ್ಲ.' ಆಗ ಸಂಪಾದಕರು ನುಡಿಯುತ್ತಾರೆ, 'ನೀವು ವ್ಯಕ್ತಿವಿಕಸನ ಕಾರ್ಯಕ್ರಮಗಳಲ್ಲಿ ಬಳಸಿದ ಕತೆ ಉಪಕತೆಗಳು ರೋಚಕವಾಗಿವೆ. ಮುತ್ತಿನಂತಹ ಮಾತು ನುಡಿದಿದ್ದೀರಿ. ಅವನ್ನೇ ಬಳಸಿ ಅಂಕಣ ಬರೆಯಬಹುದಲ್ಲ.'

ಉದ್ಯಮಿ ಅಂಕಣ ಬರೆವ ಸಾಹಸಕ್ಕಿಳಿಯುತ್ತಾರೆ. ಅವರ ಮಿತ್ರರೊಬ್ಬರು ಅಂಕಣಕ್ಕೆ ಹೆಸರೊಂದನ್ನು ಸೂಚಿಸುತ್ತಾರೆ. ಅವರು ಮಕ್ಕಳಿಗೆ ಹೇಳಿದ ನೀತಿಕತೆಗಳು, ಹಿರಿಯರ ಜೀವನದ ಘಟನೆಗಳು, ಸಣ್ಣವರ ಜೀವನದಲ್ಲಿಯ ದೊಡ್ಡ ಘಟನೆಗಳು, ದೊಡ್ಡವರ ಜೀವನದಲ್ಲಿಯ ಸಣ್ಣ ಘಟನೆಗಳು, ಮಹಾನ್ ಚೇತನಗಳು (ಭಗವಾನ್ ರಮಣ ಮಹರ್ಷಿ, ಸ್ವಾಮಿ ವಿವೇಕಾನಂದ, ಸ್ವಾಮಿ ಚಿನ್ಮಯಾನಂದ, ಸಿದ್ಧೇಶ್ವರಸ್ವಾಮಿಗಳು, ಸ್ವಾಮಿ ಬ್ರಃಮಾನಂದರು, ದಾದಾ ವಾಸ್ವನಿಯವರು, ಹೆಡ್ವಿಗ್ ಲೂಯಿ ಮುಂತಾದವರು) ನುಡಿದ ಮಾತುಗಳು ಅವರ ಅಂಕಣದಲ್ಲಿ ಮಿಂಚುತ್ತವೆ. 140 ಲೇಖನಗಳು ಆದಾಗ ಅಸಂಖ್ಯ ಫೋನ್ ಕಾಲ್‌ಗಳು ಎಸ್‌ಎಂಎಸ್‌ಗಳು ಬರುತ್ತವೆ. 75 ಲೇಖನಗಳ ಮೊದಲ ಪುಸ್ತಕ -ಕ್ಷಣ ಹೊತ್ತು ಆಣಿ ಮುತ್ತು ಪ್ರಕಟವಾಗುತ್ತದೆ. ಖ್ಯಾತ ಕಾದಂಬರಿಕಾರರಾದ ಡಾ|ಎಸ್.ಎಲ್.ಭೈರಪ್ಪ ಮುನ್ನುಡಿ ಬರೆಯುತ್ತಾರೆ. ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಚಿನ್ಮಯ ಮಿಷನ್‌ನ ಸ್ವಾಮಿ ಬ್ರಹ್ಮಾನಂದರು ಆಶೀರ್ವಚನ ಬರೆಯುತ್ತಾರೆ. ಹಲವಾರು ಪ್ರತಿಷ್ಠಿತರು ಮೆಚ್ಚುಗೆಯ ಪತ್ರಗಳನ್ನು ಬರೆಯುತ್ತಾರೆ. (ನಾಡೋಜ ಕವಿ ಚೆನ್ನವೀರ ಕಣವಿ, ಟಿವಿ ಸೀರಿಯಲ್ ದೊರೆ ಟಿ.ಎನ್.ಸೀತಾರಾಮ, ಆಧುನಿಕ ಚುಟುಕುಬ್ರಹ್ಮ ಧುಂಡೀರಾಜ ಮುಂತಾದವರು). ಈ ಪುಸ್ತಕವನ್ನು ಆಶಾವಾದದ ಅಮರಕೋಶ ಎಂದೊಬ್ಬರು ಕರೆಯುತ್ತಾರೆ(ಗೋ.ರು.ಚೆನ್ನಬಸಪ್ಪ).

ಸಿಂಪಿನಲ್ಲಿ ಸ್ವಾತಿಯ ಹನಿಯನ್ನು ಹಾಕಿದವರಾರು ಎಂದರೆ ಅಂಕಣ ಬರೆಯಲು ಸರಿಯಾದ ಹೊತ್ತಿನಲ್ಲ ಆಹ್ವಾನಿಸಿದ ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು. ಅಂಕಣಕ್ಕೆ ಹೆಸರು ಕೊಟ್ಟವರು ಪ್ರೊ.ಎಂ.ಕೃಷ್ಣೇ ಗೌಡರು. ಮುತ್ತನ್ನು ವಾಚಕರಿಗೆ ನೀಡಿದವರು, ನನ್ನೀ ಲೇಖನದ ಉತ್ಸವಮೂರ್ತಿ, ಇಂಜಿನಿಯರ್, ಹೊಟೆಲ್ ಉದ್ಯಮಿ ನನ್ನ ಅಜ್ಞಾತ ಮಿತ್ರ ಎಸ್. ಷಡಕ್ಷರಿಯವರು.

ಪುಸ್ತಕ ಪ್ರಕಟವಾಯ್ತು ಇಲ್ಲಿಗೆ ಈ ಕತೆ ಮುಗಿಯಲಿಲ್ಲ. ಹತ್ತು ತಿಂಗಳಲ್ಲಿ ಹನ್ನೆರಡು ಮುದ್ರಣಗಳು, 75 ಸಾವಿರ ಪ್ರತಿಗಳನ್ನು ಮುದ್ರಿಸಿ ಕನ್ನಡ ಪುಸ್ತಕದ ಪ್ರಕಟನೆಯ ಇತಿಹಾಸದಲ್ಲಿ ಒಂದು ವಿಕ್ರಮವನ್ನು ಸಾಧಿಸಿದವರು ಇದರ ಪ್ರಕಾಶಕರು. (ರಮಣಶೀ ಪ್ರಕಾಶನ, ನಂ.16, ರಾಜಾರಾಂ ಮೋಹನರಾಯ್ ರಸ್ತೆ, ಬೆಂಗಳೂರು-560 025, ದೂರವಾಣಿ 080-41350053). ಹತ್ತು ವರ್ಷಗಳ ಕೆಳಗೆ ಇಂಥದೊಂದು ಪವಾಡ ನಡೆಯಬಹುದು ಎಂದು ಯಾರಾದರೂ ನುಡಿದಿದ್ದರೆ ನಂಬುವದು ಕಷ್ಟಕರವಾಗಿತ್ತು. ಟಿವಿಯಲ್ಲಿ ನೋಡಿ ಭಾರತದ ಕೋಟ್ಯಾವಧಿ ಜನ ಯೋಗಾಸನದಲ್ಲಿ ಆಸಕ್ತಿ ವಹಿಸುತ್ತಾರೆ ಎಂದು ಹತ್ತು ವರ್ಷಗಳ ಹಿಂದೆ ಯಾರಾದರೂ ನುಡಿದಿದ್ದರೆ ಅದನ್ನು ನಂಬುವುದು ಕಷ್ಟಕರವಾಗುತ್ತಿತ್ತು. ಅದನ್ನೀಗ ಸತ್ಯ ಮಾಡಿ ತೋರಿಸಿದವರು ಬಾಬಾ ಸ್ವಾಮಿ ರಾಮದೇವ. ಇದೆಲ್ಲ ಹೊತ್ತು ಹಾಗೂ ಮುತ್ತಿನ ಪ್ರಭಾವ. ಯಾವ ಹೊತ್ತಿನಲ್ಲಿ ಎಲ್ಲಿಂದ ಮುತ್ತು ಹೊರಬರುತ್ತದೆ ಹೇಳುವುದು ಸಾಧ್ಯವಿಲ್ಲ. ಮುತ್ತು ಪಡೆಯಲು ಸರಿಯಾದ ಹೊತ್ತಿಗಾಗಿ ಕಾಯಬೇಕು.

ಮೊದಲನೆಯ ಪುಸ್ತಕದಲ್ಲಿ 75 ಲೇಖನಗಳಿವೆ. ಪ್ರತಿಯೊಂದು ಒಂದು ಕಾಲು ಪುಟಕ್ಕೆ ಮೀರಿಲ್ಲ. ಅವುಗಳಲ್ಲಿ ವಿಷಯ ವೈವಿಧ್ಯವಿದೆ, ದೇಶವಿದೇಶಗಳ ನೀತಿ ಕಥೆಗಳಿವೆ; ಓದಿದ, ಕೇಳಿದ, ಅನುಭವಿಸಿದ ರಸಕವಳವಿದೆ. ಪ್ರತಿಯೊಂದರಲ್ಲೂ ನಾವು ಕಲಿಯಬಹುದಾದ ಒಂದು ಪಾಠವಿದೆ, ನಮ್ಮ ಜೀವನವನ್ನು ಉತ್ತಮಗೊಳಿಸಲು ಸಹಾಯಕವಾಗುವ ಒಂದು ಪಂಚತಂತ್ರಮಾದರಿಯ ನೀತಿಪಾಠವಿದೆ.

ಒಂದು ಉದಾಹರಣೆ ನೋಡಬಹುದು:

ಲೇಖಕರ ಪರಿಚಯದ ಒಬ್ಬ ಹೊಟೆಲ್ ಉದ್ಯಮಿ ದೇಶದಲ್ಲಿರುವ ಹತ್ತಾರು ಹೊಟೆಲ್ ಮ್ಯನೇಜ್‌ಮೆಂಟ್ ಕಾಲೇಜುಗಳಿಗೆ ಹೋಗಿ ನೂರು ವಿದ್ಯಾರ್ಥಿಗಳನ್ನು ಆರು ತಿಂಗಳ ತರಬೇತಿಗಾಗಿ ಆಯ್ಕೆ ಮಾಡುತ್ತರಂತೆ. (ಒಂದು ರೀತಿಯ ಕ್ಯಾಂಪಸ್ ಸೆಲೆಕ್ಷನ್). ಅವರಿಗೆ ಪ್ರತಿ ತಿಂಗಳು ರೂ.2,500 ಸ್ಟೈಫಂಡ್ ಕೊಡುತ್ತಾರೆ. ಅದರಲ್ಲಿ ಸಾಮಾನ್ಯರಾದವರಿಗೆ ಒಂದು ಸರ್ಟಿಫಿಕೇಟ್ ಕೊಟ್ಟು ಮನೆಗೆ ಕಳಿಸುತ್ತಾರೆ. ಅಸಾಮಾನ್ಯರಾದವರಿಗೆ ತಮ್ಮಲ್ಲಿ ಕೆಲಸ ಕೊಡುತ್ತಾರೆ(ಕೈತುಂಬ ಸಂಬಳ). ಅವರು ಎರಡು ಗುಂಪು ಮಾಡುವ ವಿಧಾನ ಬೆಳಕುಚೆಲ್ಲುವಂಥಹದು, ಮಾರ್ಗದರ್ಶಿಯಾದುದು.

ಅಸಾಮಾನ್ಯರು:

1) ಕೊಟ್ಟ ಕೆಲಸ ಮಾಡುವುದಕ್ಕೆ ಹೊಸಹೊಸ ಮಾರ್ಗ ಹುಡುಕುತ್ತಾರೆ.

2) ಯಾವಾಗಲೂ ನಾನು ಈ ಕೆಲಸ ಮಾಡಲು ಸಿದ್ಧ ಎನ್ನುತ್ತಾರೆ.

3) ಪ್ರತಿಯೊಂದು ಸಮಸ್ಯೆಯಲ್ಲೂ ಅವಕಾಶ ಕಾಣುತ್ತಾರೆ.

4) ಯಾವಾಗಲೂ ಆತ್ಮವಿಶ್ವಾಸ ತೋರುತ್ತಾರೆ.

5) ಕೆಲಸ ಮಾಡಿ ಮುಗಿಸುವ ಯೋಚನೆ ಮಾಡುತ್ತಾರೆ.

ಸಾಮಾನ್ಯರು:

1) ಕೊಟ್ಟ ಕೆಲಸ ಮಾಡದೇ ಇರುವುದಕ್ಕೆ ಹೊಸ ಕಾರಣ ಹುಡುಕುತ್ತಾರೆ.

2) ಯಾವಾಗಲೂ ಇದು ನನ್ನ ಕೆಲಸವಲ್ಲ ಎನ್ನುತ್ತಾರೆ.

3) ಪ್ರತಿ ಅವಕಾಶದಲ್ಲೂ ಸಮಸ್ಯೆಯನ್ನೇ ಕಾಣುತ್ತಾರೆ.

4) ಯಾವಾಗಲೂ ಅನುಮಾನವನ್ನೇ ತೋರುತ್ತಾರೆ.

5) ಕೆಲಸದಿಂದ ಓಡಿ ಹೋಗುವ ಯೋಜನೆ ಹಾಕುತ್ತಾರೆ.

91 ವರ್ಷದ ಮುದುಕಿ(ಮೈರ್ಟೆಲ್ ಶಾನನ್) ಬಿ.ಎ.ಡಿಗ್ರಿ (ಅಮೇರಿಕೆಯ ರೂಸವೆಲ್ಟ್ ವಿವಿಯಿಂದ) ಪಡೆದ ಕತೆ ಯಾರಿಗಾದರೂ ರೋಮಾಂಚನ ತರದೆ ಇರದು. 1961ರಲ್ಲೇ ಜಾನ್ ಕೆನೆಡಿ ಅಮೇರಿಕೆಯ ಸೆನೆಟ್‌ನಲ್ಲಿ ಘೋಷಿಸಿದ್ದರು, ಹತ್ತು ವರ್ಷಗಳಲ್ಲಿ ಚಂದ್ರಲೋಕಕ್ಕೆ ಮನುಷ್ಯನನ್ನು ಕಳುಹಿಸಬೇಕು ಮತ್ತು ಸುರಕ್ಷಿತವಾಗಿ ಮರಳಿ ತರಬೇಕು ಎಂದು. 1969ರಲ್ಲಿ ಅದು ಸತ್ಯವಾಗುತ್ತದೆ. ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರಗ್ರಹದ ಮೇಲೆ ಅಡಿ ಇಟ್ಟಾಗ ಹೇಳಿದ ಮಾತು, ಮನುಷ್ಯನಿಗೆ ಇದೊಂದು ಸಣ್ಣ ಹೆಜ್ಜೆ, ಆದರೆ ಮನುಕುಲಕ್ಕೆ ಇದು ದೊಡ್ಡ ಜಿಗಿತ ಎಂದು. ಹೆಂಡತಿ ಮತ್ತು ಮಕ್ಕಳ ಪ್ರೀತಿ ಹೇಗೆ ವಿಜ್ಞಾನದ ಕ್ಷೇತ್ರದಲ್ಲಿ ಹೊಸ ಸಂಶೋಧನೆಗೆ ಕಾರಣವಾದವು ಎಂಬ ಕತೆಗಳು. ಜೆರಾಕ್ಸ್ ಮೆಶೀನ ಕಂಡು ಹಿಡಿದ ಕತೆ, ಬ್ಯಾಂಡ್-ಏಡ್ ಕಂಡು ಹಿಡಿದ ಕತೆ. ಪುಟ್ಟ ಹುಡುಗಿಯೊಬ್ಬಳ ಶಸ್ತ್ರಚಿಕಿತ್ಸೆಯ ಪ್ರಸಂಗ. ನೂರರಲ್ಲಿ ಹತ್ತು ಅಂಶ ಬದುಕಿ ಉಳಿಯುವ ಸಾಧ್ಯತೆ ಇದ್ದಾಗ ಆ ಹುಡುಗಿ ಮಾಡಿದ ದೇವರ ಪ್ರಾರ್ಥನೆ ಕಂಡು ಡಾಕ್ಟರರೂ ತಮ್ಮ ಜೀವನದಲ್ಲಿ ಪ್ರಥಮ ಬಾರಿ ಪ್ರಾರ್ಥನೆ ಮಾಡಲು ಸ್ಫೂರ್ತಿ ಪಡೆದರು. ಸರ್ಜರಿಯ ನಂತರ ಹುಡುಗಿ ಬದುಕಿ ಉಳಿದ ಭಾವಪೂರ್ಣ ಘಟನೆ. ಹಳ್ಳಿಯ ಹುಡುಗ ದಿಳ್ಳಿಯ ರಾಷ್ಟ್ರಪತಿ ಭವನ ಮುಟ್ಟಿದ (ರಾಷ್ಟ್ರಪತಿಯಾದ) ಕತೆ. ಇದು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಕತೆ. ಅವರು ಮೊದಲು ಮೈಸೂರಲ್ಲಿ ಹಲವು ವರ್ಷ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅಲ್ಲಿ ಅವರನ್ನು ನಚ್ಚಿನ ವಿದ್ಯಾರ್ಥಿಗಳು ಬೀಳ್ಕೊಡುವ ಪರಿಯ ಬಗ್ಗೆ ಬರೆಯುತ್ತಾರೆ. ಮೈಸೂರಿನ ಕುದುರೆಯ ಗಾಡಿಯನ್ನು ಸಿಂಗರಿಸಿ, ಅದರಲ್ಲಿ ರಾಧಾಕೃಷ್ಣನ್‌ರನ್ನು ಕೂಡಿಸಿ, ಜಯಕಾರಗಳೊಂದಿಗೆ ರೈಲು ನಿಲ್ದಾಣದ ವರೆಗೂ ವಿದ್ಯಾರ್ಥಿಗಳೇ ಗಾಡಿಯನ್ನು ಎಳೆದುಕೊಂಡು ಬಂದರು. ಇಡೀ ರೈಲು ನಿಲ್ದಾಣವನ್ನು ಸ್ವಚ್ಛಗೊಳಿಸಿ, ಅವರು ಪ್ರಯಾಣ ಮಾಡುವ ಬೋಗಿಗೂ ಹೂವು-ತೋರಣ ಕಟ್ಟಲಾಗಿತ್ತು. ಬೀಳ್ಕೊಡುವಾಗ ರೈಲು ಬೋಗಿಯ ಬಾಗಿಲಲ್ಲಿ ನಿಂತು ಕೈಬೀಸುತ್ತಿದ್ದ ಡಾ| ರಾಧಾಕೃಷ್ಣನ್ ಅವರ ಕಣ್ಣಲ್ಲೂ ನೀರು, ವಿದ್ಯಾರ್ಥಿಗಳ ಕಣ್ಣಲ್ಲೂ ನೀರು!

ಷಡಕ್ಷರಿಯವರ ಲೇಖನಗಳನ್ನು ಓದುವಾಗ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಕವನ ನೆನಪಾಗುತ್ತದೆ: ಒಂದರಂತೊದಿಲ್ಲ, ಒಂದರೊಳು ಕುಂದಿಲ್ಲ... ಇಲ್ಲಿಯ ಹೂವುಗಳು ನಮ್ಮ ಮನವನ್ನು ಅರಳಿಸುತ್ತವೆ, ಮುದವನ್ನು ತರುತ್ತವೆ, ಅಶಾವಾದದ ಸಕಾರಾತ್ಮಕ ಪರಿಣಾಮವನ್ನೂ ಬೀರುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more