Khamenei Funeral: ಮಾ.4ರಂದು ಆಯತೊಲ್ಲಾ ಅಲಿ ಖಮೇನಿಗೆ ಅಂತಿಮ ವಿದಾಯ, ಅಂತ್ಯಕ್ರಿಯೆ ಅಪ್ಡೇಟ್
Ayatollah Ali Khamenei: ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (86) ಮೃತಪಟ್ಟು ನಾಲ್ಕು ದಿನಗಳಾಗಿವೆ. ಶನಿವಾರ ಖಮೇನಿ ಕಚೇರಿ ಇದ್ದ ಟೆಹರಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧ ಆರಂಭಿಸಿದ ಇಸ್ರೇಲ್ ಜತೆ ಕೈ ಜೋಡಿಸಿದ ಯುಎಸ್ ಮಾರ್ಚ್ 1ರಂದು ಖಮೇನಿ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿತು. ವರ್ಷಗಳ ಹಿಂದೆ ಇದೇ ಟೆಹರಾನ್‌ನ ಪ್ರಮುಖ ಇಮಾಮ್ ಖಮೇನಿ ಪ್ರಾರ್ಥನಾ (ಮೊಸಲ್ಲಾ) ಮಂದಿರದಲ್ಲಿ ಇಸ್ರೇಲ್ ವಿರುದ್ಧ ಪ್ರತಿಕಾರದ ಮಾತುಗಳಾಡಿದ್ದ ಖಮೇನಿ ಭಾಷಣ ಕೇಳಲು ಲಕ್ಷಾಂತರ ಜನರು ಸೇರಿದ್ದರು. ಇಂದು ಅದೇ ಮೊಸಲ್ಲಾದಲ್ಲಿ ಮೂರು ದಿನಗಳಿಂದ ಅಪಾರ ಜನ ಖಮೇನಿಯ ಅಂತಿಮ ದರ್ಶನ ಪಡೆದಿದ್ದಾರೆ. ಇಂದು ಮಾ.4ರ ಬುಧವಾರ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ.
ಇರಾನ್ ಜನತೆ ಇಂದು ಮೃತ ಖಮೇನಿಗೆ ಅಂತಿಮ ವಿದಾಯ ಹೇಳಲಿದ್ದಾರೆ. ವಿದಾಯ ಸಮಾರಂಭವು ಮುಂದಿನ ಮೂರು ದಿನಗಳವರೆಗೆ ಮುಂದುವರಿಸಲು ತೀರ್ಮಾನಿಸಲಾಗಿದೆ. ಇರಾನ್‌ನಾದ್ಯಂತ ಸುಮಾರು 40 ದಿನ ಶೋಕಾಚರಣೆ ನಡೆಯಲಿದೆ ಎನ್ನಲಾಗಿದೆ. ಖಮೇನಿ ಅಂತ್ಯಕ್ರಿಯೆ ಮೆರವಣಿಗೆಗೆ ಸಂಬಂಧಿಸಿದಂತೆ ಇನ್ನೂವರೆಗೂ ಯಾವುದೇ ನಿರ್ಧಾರವಾಗಿಲ್ಲ. ಶೀಘ್ರವೇ ಆ ಬಗ್ಗೆಯು ಇರಾನ್ ಸರ್ಕಾರ/ಆಡಳಿತ ಮಂಡಳಿ ಘೋಷಿಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇಂದು ರಾತ್ರಿ 10ಕ್ಕೆ ಖಮೇನಿ ಅಂತ್ಯಕ್ರಿಯೆ
ಟೆಹ್ರಾನ್‌ನ ಇಮಾಮ್ ಖಮೇನಿ ಪ್ರಾರ್ಥನಾ ಮಂದಿರದಲ್ಲಿ ಸ್ಥಳೀಯ ಸಮಯದ ಪ್ರಕಾರ ರಾತ್ರಿ 10 ಗಂಟೆಗೆ (1830 GMT) ಪ್ರಾರಂಭವಾಗುವ ದಿವಂಗತ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ದೇಹಕ್ಕೆ ಸಾರ್ವಜನಿಕರು ಅಂತಿಮ ಗೌರವ ಸಲ್ಲಿಸಲಿದ್ದಾರೆ. ಮುಸ್ಲಿಮ್ ಸಮುದಾಯ ಅನೇಕ ಗಣ್ಯರು, ಮುಖ್ಯಸ್ಥರ ಉಪಸ್ಥಿತಿ ಇರಲಿದೆ. ಇತ್ತ ಇಸ್ರೇಲ್ ಇರಾನ್‌ನ ಮುಂದಿನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದವರು ಇದೇ ರೀತಿ ಕಣ್ಮರೆಯಾಗುತ್ತಾರೆ ಎಂದು ಹೇಳಿದೆ. ಆ ಮೂಲಕ ಯುದ್ಧ ಮುಂದುವರಿಸುವುದಾಗಿ ತಿಳಿಸಿದೆ.
ಇಸ್ರೇಲ್ ವಿರುದ್ಧ ಖಮೇನಿ ಗುಡುಗು
2023ರಲ್ಲಿ ಇಸ್ರೇಲ್ ಮೇಲೆ ಹಮಾಸ್ ಉಗ್ರರ ನಡೆಸಿದ ದಾಳಿಯನ್ನು 'ನ್ಯಾಯಸಮ್ಮತ' ವಾಗಿದೆ ಎಂದು ಇದೇ ಖಮೇನಿ ಪ್ರತಿಪಾದಿಸಿದ್ದರು. ಅಲ್ಲದೇ ಇರಾನ್ ಸಹ ಇಸ್ರೇಲ್ ಮೇಲೆ ಖಂಡಾಂತರ ಕ್ಷಿಪಣಿಗಳನ್ನು ಏಕಕಾಲಕ್ಕೆ ಉಡಾಯಿಸಿತ್ತು. ಶಕ್ತಿ ಪ್ರದರ್ಶನ ಮಾಡಿ, ಇಸ್ರೇಲ್ ಅನ್ನು ಸಂಪೂರ್ಣ ನಿರ್ನಾಮ ಮಾಡಲಾಗುವುದು. ಪ್ರತಿಕಾರ ಕೈಗೊಳ್ಳಲಾಗುವುದು ಎಂದು ಖಮೇನಿ 2024ರಲ್ಲಿ ಇದೇ ಪ್ರಾರ್ಥನಾ ಮಂದಿರದಲ್ಲಿ ಹೇಳಿದ್ದರು. ಆಗ ಅವರ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಅಲ್ಲಿಂದ ಇಸ್ರೇಲ್‌ನ ಸೇಡು ಹೆಚ್ಚಾಗಿತ್ತು. ಇರಾನ್‌ಗೆ ದಾಳಿಯ ಭೀತಿ ಹೆಚ್ಚಾಗಿತ್ತು.
ಅದರಂತೆ 2026ರ ಫೆಬ್ರವರಿ 28ರಂದು ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಸರ್ವೋಚ್ಚ ನಾಯಕ ಖಮೇನಿ ಕೊಂದು ರಣಕೇಕೆ ಹಾಕಿದೆ. ಇದರ ಪ್ರತೀಕಾರವಾಗಿ ಇರಾನ್ ತೀವ್ರ ಪ್ರತಿದಾಳಿ ನಡೆಸುತ್ತಿದೆ. ಯುದ್ಧ ಮುಂದುವರಿದಿದ್ದು, ಯುಎಸ್ ವಾಯುನೆಲೆ, ಯುದ್ಧ ವಿಮಾನವನ್ನು ಈಗಾಗಲೇ ಇರಾನ್ ಹೊಡೆದುರುಳಿಸಿದೆ. ಜಾಗತಿಕವಾಗಿ ಈ ಯುದ್ಧ ಹೆಚ್ಚು ಆತಂಕ ಮೂಡಿಸಿದ್ದು, ಭವಿಷ್ಯದ ದೃಷ್ಟಿಯಿಂದ ಭಾರತ ಸೇರಿದಂತೆ ಇತರ ದೇಶಗಳು ಶಾಂತಿ ಕಾಪಾಡುವುಂತೆ, ಯುದ್ಧ ಕೈ ಬಿಡುವಂತೆ ಮನವಿ ಮಾಡಿವೆ.












Click it and Unblock the Notifications